“ಸಾರಾಂಶ” ಚಿತ್ರದ ಟ್ರೈಲರ್ ಬಿಡುಗಡೆ
ಬೆಳ್ಳಿ ಪರದೆ ಮೇಲೆ ವಿಭಿನ್ನ ಪ್ರಯತ್ನದ ಹೊಸತನ ಕಥಾಹಂದರದ ಚಿತ್ರಗಳು ಪ್ರೇಕ್ಷಕರ ಗಮನವನ್ನು ಸೆಳೆಯುತ್ತಿದೆ. ಆ ನಿಟ್ಟಿನಲ್ಲಿ ಸೂರ್ಯ ವಸಿಷ್ಠ ನಿರ್ದೇಶನದ “ಸಾರಾಂಶ” ಚಿತ್ರದ ಹಾಡುಗಳು ಈಗಾಗಲೇ ಪ್ರೇಕ್ಷಕರನ್ನ ಸೆಳೆದುಕೊಂಡಿತ್ತು. ಆ ಮೂಲಕ ಸಿನಿಮಾ ಮೇಲೆ ಮೂಡಿಕೊಂಡಿದ್ದ ಕುತೂಹಲ ತಣಿಸುವಂತೆ ಇದೀಗ ಟ್ರೈಲರ್ ಬಿಡುಗಡೆಗೊಂಡಿದೆ.
ಮೊನ್ನೆ ಮಲ್ಲೇಶ್ವರಂ ರೇಣುಕಾಂಬ ಸ್ಟುಡಿಯೋದಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಸಪ್ತಸಾಗರದಾಚೆ ಎಲ್ಲೋ ಖ್ಯಾತಿಯ ನಿರ್ದೇಶಕ ಹೇಮಂತ್ ರಾವ್ “ಸಾರಾಂಶ” ಚಿತ್ರದ ಟ್ರೈಲರ್ ಬಿಡುಗಡೆ ಗೊಳಿಸಿ ಮಾತನಾಡುತ್ತಾ ಇಡೀ ತಂಡ ಬಹಳ ಶ್ರಮ ಪಟ್ಟಿರುವುದು ತಿಳಿಯುತ್ತದೆ. ನನಗೆ ಶೃತಿ ಹರಿಹರನ್ ಈ ಕಾರ್ಯಕ್ರಮಕ್ಕೆ ಬರಲು ಆಹ್ವಾನಿಸಿದರು , ಈ ಟ್ರೈಲರ್ ನೋಡಿದ ಮೇಲೆ ಒಬ್ಬ ನಿರ್ದೇಶಕ ಕಥೆಗಾರನಾದರೆ ಅವನ ಆಲೋಚನೆ ಹಾಗೂ ದೃಷ್ಟಿಕೋನ ಎಷ್ಟು ವಿಭಿನ್ನ ಅನ್ನೋದು ಇದರಲ್ಲಿ ತಿಳಿಯುತ್ತದೆ. ನಾನು ಒಂದು ಕಥೆಯನ್ನು ಬರುವಾಗ ಅಷ್ಟೇ ಚಳಪಡಿಸುವಿಕೆ , ದೀರ್ಘ ಆಲೋಚನೆ ಮನಸಲ್ಲಿ ಕವಿದು ಕೊಂಡಿರುತ್ತದೆ. ಅದೇ ರೀತಿ ಈ ಚಿತ್ರದ ನಿರ್ದೇಶಕರು ಒಂದು ವಿಭಿನ್ನ ಪ್ರಯತ್ನದ ಚಿತ್ರವನ್ನು ಪ್ರೇಕ್ಷಕರಿಗೆ ನೀಡುತ್ತಿದ್ದಾರೆ. ಇಡೀ ತಂಡಕ್ಕೆ ಶುಭವಾಗಲಿ ಎಂದು ಹಾರೈಸಿದರು.
ಇದೇ ಫೆಬ್ರವರಿ 15ರಂದು `ಸಾರಾಂಶ’ದ ಚಿತ್ರ ಬಿಡುಗಡೆ ಆಗುತ್ತಿದ್ದು , ಇದೀಗ ಒಂದಿಡೀ ಸಿನಿಮಾದ ಆಂತರ್ಯವನ್ನು ತೆರೆದಿಡುವಂಥಾ ಟ್ರೈಲರ್ ಲಾಂಚ್ ಆಗಿ ಬಹಳಷ್ಟು ಕೂತುಹಲವನ್ನು ಮೂಡಿಸಿದೆ. ಈ ಹಿಂದೆ ಲೂಸಿಯಾ ಎಂಬ ಚಿತ್ರ ಮಾಡಿದ ಚಿತ್ರತಂಡದ ಸದಸ್ಯರು ಈ ಪತ್ರಿಕಾಗೋಷ್ಠಿ ಯಲ್ಲಿ ಪ್ರಮುಖ ಆಕರ್ಷಣೆ ಯಾಗಿದ್ದರು.
ಶ್ರುತಿ ಹರಿಹರನ್, ಹೇಮಂತ್ ರಾವ್ ಮಾತ್ರವಲ್ಲದೇ ಈ ಚಿತ್ರದ ನಿರ್ದೇಶಕರಾದ ಸೂರ್ಯ ವಸಿಷ್ಠ ಕೂಡಾ ಲೂಸಿಯಾ ಭಾಗವಾಗಿದ್ದವರೆ. ಇವರೆಲ್ಲರ ಸಮ್ಮುಖದಲ್ಲಿ “ಸಾರಾಂಶ” ಟ್ರೈಲರ್ ಬಿಡುಗಡೆಗೊಂಡಿದೆ. ಈ ಪತ್ರಿಕಾ ಗೋಷ್ಠಿಯಲ್ಲಿ ಶ್ರುತಿ ಹರಿಹರನ್, ದೀಪಕ್ ಸುಬ್ಮಣ್ಯ, ಸೂರ್ಯ ವಸಿಷ್ಠ, ಸಂಗೀತ ನಿರ್ದೇಶಕ ಉದಿತ್ ಹರಿತಾಸ್, ರವಿ ಭಟ್, ಶ್ವೇತಾ ಗುಪ್ತ ಮುಂತಾದವರು ಹಾಜರಿದ್ದರು.
ಅಂದಹಾಗೆ, ಇದು ಈ ದಿನಮಾನಕ್ಕೆ ಅತ್ಯಂತ ಅಪರೂಪವೆಂಬಂಥಾ ಗುಣ ಲಕ್ಷಣಗಳನ್ನು ಒಳಗೊಂಡಿರುವ ಚಿತ್ರ. ನಿರ್ದೇಶಕ ಸೂರ್ಯ ವಸಿಷ್ಠ ಅವರೇ ಪ್ರಧಾನ ಪಾತ್ರಗಳಲ್ಲೊಂದಕ್ಕೆ ಜೀವ ತುಂಬಿದ್ದಾರೆ. ದೀಪಕ್ ಸುಬ್ರಮಣ್ಯ ವಿಶಿಷ್ಟ ಪಾತ್ರದ ಮೂಲಕ ಪ್ರೇಕ್ಷಕರನ್ನು ಮುಖಾಮುಖಿಯಾಗಲಿದ್ದಾರೆ. ಶ್ರುತಿ ಹರಿಹರನ್ ಮಾಯಾ ಎಂಬ ಪಾತ್ರವನ್ನು ಒಳಗಿಳಿಸಿಕೊಂಡಿದ್ದಾರೆ.
ಅದರಲ್ಲೊಂದು ವಿಷೇಶ ಪಾತ್ರವನ್ನು ಶ್ವೇತಾ ಗುಪ್ತ ನಿರ್ವಹಿಸಿದ್ದಾರೆ. ಈ ಎಲ್ಲಾ ಪಾತ್ರಗಳ ಝಲಕ್ಕುಗಳು ಸದರಿ ಟ್ರೈಲರ್ ನಲ್ಲಿ ಕಾಣಿಸಿಕೊಂಡಿವೆ. ಹಾಗೆಯೇ ಕನ್ನಡತನದ ಬಗ್ಗೆ ಅತೀವ ಪ್ರೀತಿ ಆಸಕ್ತಿ ಇಟ್ಟುಕೊಂಡಿರೋ ಕನ್ನಡೇತರ ಬುಕ್ ಪಬ್ಲಿಷರ್ ಪಾತ್ರವಿದ್ದು , ಆ ಪಾತ್ರದ ಬಗ್ಗೆ ನಿರ್ದೇಶಕರು ಈ ಪತ್ರಿಕಾ ಗೋಷ್ಠಿಯಲ್ಲಿ ಒಂದಷ್ಟು ವಿವರಗಳನ್ನು ಬಿಚ್ಚಿಟ್ಟಿದ್ದಾರೆ.
ಸದರಿ ಟ್ರೈಲರ್‍ನಲ್ಲಿ ಪ್ರಧಾನವಾಗಿ ಎರಡು ಬೊಂಬೆ ಪಾತ್ರಗಳು ನೋಡುಗರನ್ನು ಸೆಳೆದುಕೊಂಡಿವೆ. ಅದನ್ನು ರಾಮ್ ಪ್ರಸಾದ್ ಬಾಣಾವರ ಮತ್ತು ಸತೀಶ್ ಕುಮಾರ್ ನಿರ್ವಹಿಸಿದ್ದಾರೆ. ಅದು ಟ್ರೈಲರ್ ನ ಪ್ರಮುಖ ಆಕರ್ಷಣೆಯಾಗಿಯೂ ಗಮನ ಸೆಳೆಯುವಂತಿದೆ. ರವಿ ಕಶ್ಯಪ್ ಮತ್ತು ಆರ್.ಕೆ .ನಲ್ಲಮ್ ವಿಭಾ ಕಶ್ಯಪ್ ಪ್ರೊಡಕ್ಷನ್ಸ್ ಮತ್ತು ಕ್ಲಾಪ್ ಬೋರ್ಡ್ ಪ್ರೊಡಕ್ಷನ್ ಮೂಲಕ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ.
ಆಸಿಫ್ ಕ್ಷತ್ರಿಯಾ, ರವಿ ಭಟ್, ರಾಮ್ ಮಂಜುನಾಥ್, ಸತೀಶ್ ಕುಮಾರ್, ಪೃಥ್ವಿ ಬನವಾಸಿ ಮುಂತಾದವರ ತಾರಾಗಣ, ಉದಿತ್ ಹರಿತಾಸ್ ಸಂಗೀತ ನಿರ್ದೇಶನ, ಅಪರಾಜಿತ್ ಹಿನ್ನೆಲೆ ಸಂಗೀತ ಮತ್ತು ಪ್ರದೀಪ್ ನಾಯಕ್ ಸಂಕಲನ ಈ ಚಿತ್ರಕ್ಕಿದೆ. “ಸಾರಾಂಶ” ದ ಮೂಲಕ ಅನಂತ್ ಭಾರದ್ವಾಜ್ ಎಂಬ ಪ್ರತಿಭಾನ್ವಿತ ಛಾಯಾಗ್ರಾಹಕ ಪರಿಚಯವಾಗುತ್ತಿದ್ದಾರೆ. ಹೀಗೆ ಒಂದಷ್ಟು ಯುವ ಹಾಗೂ ಅನುಭವಿ ಕಲಾವಿದರು , ತಂತ್ರಜ್ಞರು ಒಗ್ಗೂಡಿಕೊಂಡು ನಿರ್ಮಾಣ ಮಾಡಿರುವ “ಸಾರಾಂಶ” ಚಿತ್ರ ಇದೆ ಫೆಬ್ರವರಿ 15ರಂದು ರಾಜ್ಯಾದ್ಯಂತ ಬಿಡುಗಡೆಯಾಗಲು ಸಜ್ಜಾಗಿದೆ.