ಆಫೀಸ್ ಬಾಯ್ ಆಗಿದ್ದವ ಇಂದು ಚಿತ್ರೋದ್ಯಮದಲ್ಲಿ ಯಶಸ್ವಿ ನಿರ್ಮಾಪಕ
ಜೀವನದಲ್ಲಿ ಶ್ರದ್ಧೆ , ನಿಷ್ಠೆ , ಪ್ರಾಮಾಣಿಕತೆ , ಆಸಕ್ತಿ ಇದ್ದರೆ ಖಂಡಿತ ತಾವು ಕಂಡ ಕನಸನ್ನ ನನಸು ಮಾಡಿಕೊಳ್ಳಬಹುದು ಎಂಬುದಕ್ಕೆ ಪ್ರತ್ಯಕ್ಷ ನಿದರ್ಶನವಾಗಿ ಬೆಳೆದಿರುವಂತಹ ವ್ಯಕ್ತಿ ಆನಂದ ಬಾಬು. ಹಾಸನ ಜಿಲ್ಲೆಯ ಅರಸೀಕೆರೆ ಮೂಲದ ಆನಂದ್ ಬಹಳಷ್ಟು ಕನಸನ್ನ ಹೊತ್ತುಕೊಂಡಿದ್ದ ಹುಡುಗ. ಸಿನಿಮಾ ಅಂದರೆ ಅಪಾರ ಪ್ರೀತಿ. ಆದರೂ ಮನೆಯವರ ಆಸೆಯಂತೆ ಉತ್ತಮವಾಗಿ ಓದಿ ಡಿಗ್ರಿಯನ್ನು ಮುಗಿಸಿದ ನಂತರ ತನ್ನ ಕನಸಿನ ಭವಿಷ್ಯದ ಗುರಿಯತ್ತ ಗವನಹರಿಸಲು ಬೆಂಗಳೂರಿಗೆ ಬಂದವರು.
ಆನಂದ್ ಒಬ್ಬ ಸಿನಿಮಾ ಪ್ರೇಮಿಯೂ ಆಗಿದ್ದು , ಚಿತ್ರರಂಗದಲ್ಲಿ ತನ್ನನ್ನು ತೊಡಗಿಸಿಕೊಳ್ಳಬೇಕು ಎಂಬ ಉದ್ದೇಶದಿಂದ ಒಂದು ಪ್ರೊಡಕ್ಷನ್ ಹೌಸ್ ನಲ್ಲಿ ಆಫೀಸ್ ಬಾಯ್ ಆಗಿ ಕೆಲಸಕ್ಕೆ ಸೇರಿಕೊಳ್ಳುತ್ತಾರೆ. ಕ್ರಮೇಣ ಅಲ್ಲಿನ ಚಟುವಟಿಕೆಗಳನ್ನು ನೋಡುತ್ತಾ ನಿರ್ದೇಶಕನಾಗಬೇಕೆಂಬ ಮಹದಾಸೆಯನ್ನು ಕೂಡ ಹೊಂದಿದಿದ್ರು , ಸಿಕ್ಕರುವ ಲೈಟ್ ಬಾಯ್ ಕೆಲಸವನ್ನು ಅಚ್ಚುಕಟ್ಟಾಗಿ ಮಾಡುತ್ತಾ ಜೀವನ ಸಾಗಿಸುತ್ತಿರುತ್ತಾರೆ.
ಮಾತು ಕಮ್ಮಿ… ಕೆಲಸ ಹೆಚ್ಚು… ಎಂಬಂತೆ ತನ್ನ ಪಾಡಿಗೆ ಖ್ಯಾತ ನಿರ್ದೇಶಕ ಶಿವಮಣಿಯವರ “ಅಕ್ಕ” ಧಾರಾವಾಹಿಯ ಚಿತ್ರೀಕರಣದಲ್ಲಿ ಲೈಟ್ ಹಿಡಿಯುತ್ತಿದ್ದ ಆನಂದ್ ಕಾರ್ಯವೈಖರಿ , ಸೆಟ್ ನಲ್ಲಿ ತೋರಿಸುತ್ತಿದ್ದ ಆಸಕ್ತಿಯನ್ನು ಗಮನಿಸಿದ ನಿರ್ದೇಶಕ ಶಿವಮಣಿ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಕೆಲಸ ಮಾಡುವಂತೆ ಆನಂದ್ ಗೆ ಮಾರ್ಗದರ್ಶನ ನೀಡುತ್ತಾರೆ.
ಇಲ್ಲಿಂದ ಅವರ ಭವಿಷ್ಯ ದಿಕ್ಕು ಮತ್ತೊಂದು ಹಂತಕ್ಕೆ ಬೆಳೆಯುತ್ತಾ ಹೋಗುತ್ತದೆ. ಈ ಸೀರಿಯಲ್ ನಂತರ ಎಸ್. ನಾರಾಯಣ್ ಅವರ ಸೇವಂತಿ ಸೇವಂತಿ , ಚೆಲುವಿನ ಚಿತ್ತಾರ, ಚಂಡ, ಸಿನಿಮಾಗಳಲ್ಲಿ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡುತ್ತಾರೆ. ನಂತರ ಝೀ ಕನ್ನಡ ವಾಹಿನಿಯ “ಯಾರಿಗುಂಟು ಯಾರಿಗಿಲ್ಲಾ” ಕುಣಿಯೋಣು ಬಾರ, ಸೈ , ಬಾಳೇ ಬಂಗಾರ ಕಾರ್ಯಕ್ರಮಗಳಿಗೆ ಸ್ಕ್ರಿಪ್ಟ್ ಮಾಡುವ ಮೂಲಕ ತಮ್ಮ ಸಾಮರ್ಥ್ಯವನ್ನು ತೋರಿಸುತ್ತಾರೆ.
ಇದೆಲ್ಲವನ್ನು ಗಮನಿಸಿದ “ಶ್ರೀ ಶಂಕರ” ವಾಹಿನಿಯ ಮಾಲೀಕರು ಜಿ.ಶ್ರೀನಿವಾಸ್ ಹಾಗೂ ಹರಿಕೃಷ್ಣ ರವರು ವಾಹಿನಿಯಲ್ಲಿ ಬರುವ ಕಾರ್ಯಕ್ರಮದ ನಿರ್ಮಾಪಕನಾಗಿ ಬಡ್ತಿ ನೀಡುತ್ತಾರೆ. ಮುಂದೆ ಮುಂದೆ ಇನ್ನೊಂದು ಹೆಜ್ಜೆ ಎನ್ನುವಂತೆ ಕೆಲಸದ ಜೊತೆಗೆ ಸಮಯ ಮಾಡಿಕೊಂಡು ಅಭಿನಯ ತರಂಗದ ರಂಗಭೂಮಿಗೆ ಸೇರಿ ಒಂದು ವರ್ಷದ ಕೋರ್ಸ್ ಮಾಡಿ , ನೂರಾರು ಬೀದಿ ನಾಟಕ, ಬೇರೆ ಬೇರೆ ನಾಟಕ ಪ್ರದರ್ಶನಗಳಲ್ಲಿ ಭಾಗಿಯಾಗಿ ರಂಗಭೂಮಿಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಾರೆ.
ತಮ್ಮ ಬದುಕಿನ ಬಹುದೊಡ್ಡ ಕನಸು ಒಂದು ಚಿತ್ರ ನಿರ್ದೇಶಕನಾಗಬೇಕಿದ್ದ ಆನಂದ್ ಬಾಬು ಅನಿವಾರ್ಯ ಕಾರಣದಿಂದ ನಿರ್ಮಾಪಕನಾಗುವ ಹಂತಕ್ಕೆ ಬರುತ್ತಾರೆ. 2016 ರಲ್ಲಿ ಚಿತ್ರ ನಿರ್ಮಾಣ ಮಾಡಿ ಬಹಳಷ್ಟು ಸಮಸ್ಯೆಗಳನ್ನು ಎದುರಿಸಿ ಸೋಲನ್ನು ಅನುಭವಿಸುತ್ತಾರೆ. ಆದರೆ ಧೈರ್ಯ ಮಾಡಿ ಯಾವುದಕ್ಕೂ ಜಗ್ಗದ ಆನಂದ್ ಬಾಬು ಎಲ್ಲಿ ಕಳೆದುಕೊಂಡೆವೋ…ಅಲ್ಲೇ ಗಳಿಸಬೇಕು… ಎಂಬ ಉದ್ದೇಶದಿಂದ 2018 ರಲ್ಲಿ “ಕಮರೊಟ್ಟು ಚೆಕ್ ಪೋಸ್ಟ್” ಎಂಬ ಚಿತ್ರವನ್ನು ನಿರ್ಮಿಸುವುದರ ಮೂಲಕ ಒಂದು ವಿಭಿನ್ನ ಚಿತ್ರವನ್ನ ಪ್ರೇಕ್ಷಕರಿಗೆ ನೀಡಿ ಯಶಸ್ವಿ ನಿರ್ಮಾಪಕರಾಗಿ ಗುರುತಿಸಿಕೊಳ್ಳುತ್ತಾರೆ.
ತದನಂತರ 2020 ರಲ್ಲಿ ಹೆಣ್ಣು ಭ್ರೂಣ ಹತ್ಯೆಯ ವಿಷಯಾಧಾರಿತ “ಗುಬ್ಬಿಮರಿ” ಎಂಬ ಚಿತ್ರವನ್ನು ಮಾಡಿ ಸಮಾಜಕ್ಕೆ ಒಂದು ಅರ್ಥಪೂರ್ಣ ಚಿತ್ರವನ್ನು ನೀಡಿದ ನಿರ್ಮಾಪಕ ಎಂಬ ಮೆಚ್ಚುಗೆಯನ್ನು ಚಿತ್ರರಂಗದ ಗಣ್ಯರಿಂದ ಪಡೆಯುತ್ತಾರೆ. ಈಗ 2022 ರಲ್ಲಿ “ಧೈರ್ಯಂ ಸರ್ವತ್ರ ಸಾಧನಂ” ಎಂಬ ಕುತೂಹಲ ಭರಿತ ದೊಡ್ಡ ಮಟ್ಟದ ಚಿತ್ರವೊಂದನ್ನು ನಿರ್ಮಿಸಿದ್ದು , ಈ ಚಿತ್ರದಲ್ಲಿ ಒಂದು ಪ್ರಮುಖ ಪಾತ್ರವನ್ನು ಮಾಡಿದಾರಂತೆ.
ಈಗ ಚಿತ್ರವನ್ನ ತೆರೆಗೆ ತರಲು ಸಿದ್ಧರಾಗಿದ್ದು, ಈ “ಧೈರ್ಯಂ ಸರ್ವತ್ರ ಸಾಧನಂ” ಇದೇ ಪೆಬ್ರವರಿ 23ಕ್ಕೆ ರಾಜ್ಯಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾಗುತ್ತಿದೆ. ಒಟ್ಟಾರೆ ಹೇಳೋದಾದ್ರೆ ಆನಂದ್ ಗೆ ಇರುವ ಸಿನಿಮಾ ಪ್ರೇಮ , ಶ್ರದ್ದೆ ಗೌರವ , ಎಲ್ಲಾಕಿಂತ ಹೆಚ್ಚಾಗಿ ಗೆದ್ದೆ ಗೆಲ್ಲುವೆ ಎಂಬ ಕಿಚ್ಚು ಅವರನ್ನ ಈ ದೊಡ್ಡ ಮಟ್ಟಕ್ಕೆ ತಂದಿದ್ದು “ಧೈರ್ಯಂ ಸರ್ವತ್ರ ಸಾಧನಂ” ಎಂಬುವುದಕ್ಕೆ ಆನಂದ್ ರವರ ಈ ಜರ್ನಿಯ ಒಂದು ಉದಾಹರಣೆ ಎನ್ನುವಂತಿದೆ