ಪ್ರೀತಿ ನಂಬಿಕೆಯ ಫನ್ ಕಹಾನಿ… ಫಾರ್ ರಿಜಿಸ್ಟ್ರೇಶನ್ (ರೇಟಿಂಗ್ : 4/5)
ಪ್ರೀತಿ ನಂಬಿಕೆಯ ಫನ್ ಕಹಾನಿ…
ರೇಟಿಂಗ್ : 4/5
ಚಿತ್ರ : ಫಾರ್ ರಿಜಿಸ್ಟ್ರೇಶನ್
ನಿರ್ದೇಶಕ : ನವೀನ್ ದ್ವಾರಕನಾಥ್
ನಿರ್ಮಾಪಕ : ನವೀನ್ ರಾವ್
ಸಂಗೀತ : ಹರೀಶ್
ಛಾಯಾಗ್ರಹಕ : ಅಭಿಷೇಕ್, ಅಭಿಲಾಷ್
ತಾರಾಗಣ : ಪೃಥ್ವಿ ಅಂಬಾರ್ , ಮಿಲನ ನಾಗರಾಜ್, ರವಿ ಶಂಕರ್, ರಘು ರಾಮಪ್ಪ, ಸುಧಾ ಬೆಳವಾಡಿ , ಬಾಬು ಹಿರಣ್ಣಯ್ಯ, ತಬ್ಲ ನಾಣಿ , ರಮೇಶ್ ಭಟ್, ಸ್ವಾತಿ, ಸುಧಾ ರಾಣಿ, ಅರವಿಂದ್ ಬೋಳಾರ್ ಹಾಗೂ ಮುಂತಾದವರು…
ಜೀವನದಲ್ಲಿ ನಂಬಿಕೆ, ವಿಶ್ವಾಸ, ಪ್ರೀತಿ ಬಹಳ ಮುಖ್ಯ. ಎಲ್ಲಿಯವರೆಗೂ ನಮ್ಮ ಆಲೋಚನೆ , ದೃಷ್ಟಿ ಸರಿ ಇರುತ್ತೋ ಅಲ್ಲಿಯವರೆಗೂ ಎಲ್ಲವೂ ಸುಂದರ, ಸುಮಧುರ. ಆದರೆ ನಮ್ಮ ಸುತ್ತಮುತ್ತ ಆಗುವ ಒಂದಷ್ಟು ಎಡವಟ್ಟುಗಳು ಬದುಕಿನ ದಿಕ್ಕನ್ನೇ ಬದಲಿಸುವ ಹಾದಿಯತ್ತ ಸಾಗುತ್ತದೆ. ಅಂತಹದ್ದೇ ಎರಡು ಫ್ಯಾಮಿಲಿಗಳ ನಡುವೆ ನಡೆಯುವ ಜಟಾಪಟಿ, ಪ್ರೀತಿಸಿದ ಹೃದಯಗಳಿಗೆ ಮದುವೆಯ ವಿಚಾರವಾಗಿ ಎದುರಾಗುವ ನೋವು ನಲಿವಿನ ಸುತ್ತ ಹಾಸ್ಯದ ಲೇಪನದೊಂದಿಗೆ ಈ ವಾರ ತೆರೆಯ ಮೇಲೆ ಬಂದಿರುವಂತಹ ಚಿತ್ರ “ಫಾರ್ ರಿಜಿಸ್ಟ್ರೇಷನ್”. ಶಕ್ತಿಮಾನ್ ಲೇಹ ಕಂಪನಿಯಲ್ಲಿ ಮಾರ್ಕೆಂಟಿಂಗ್ ಮ್ಯಾನೇಜರ್ ಅಕ್ಷಯ್(ಪೃಥ್ವಿ ಅಂಬರ್) ಅದೇ ಬಿಲ್ಡಿಂಗ್ ನಲ್ಲಿ ಟ್ರಾವೆಲ್ಸ್ ಕಂಪನಿಯಲ್ಲಿ ಕೆಲಸ ಮಾಡುವ ಅನ್ವಿತಾ (ಮಿಲನಾ ನಾಗರಾಜ್)
ಅಕ್ಷಯ್ ತಂದೆ ತಾಯಿಗೆ ಮಗನ ಮದುವೆ ನೋಡುವ ಆಸೆ. ಅದೇ ರೀತಿ ಅನ್ವಿತಾ ತಾಯಿ ಲವ್ ಮ್ಯಾರೇಜ್ ದ್ವೇಷಿ ಹಾಗೂ ಬಹಳ ಸ್ಟ್ರಿಟ್. ಆದರೆ ಇದೆಲ್ಲದರ ಹೊರತಾಗಿ ಮನೆಯಲ್ಲಿ ಹೇಳದೇ, ಇವರಿಬ್ಬರೂ ಗುಟ್ಟಾಗಿ ರಿಜಿಸ್ಟರ್ ಮದುವೆ ಆಗಿರುತ್ತಾರೆ. ಈ ವಿಷಯ ಎರಡು ಕುಟುಂಬದವರಿಗೆ ತಿಳಿಯುತ್ತದೆ. ನಂತರ ಕುಟುಂಬದವರೆಲ್ಲ ಸೇರಿ ಇವರಿಬ್ಬರಿಗೂ ಮತ್ತೊಮ್ಮೆ ಶಾಸ್ತ್ರೋತ್ರವಾಗಿ ಸಂಬಂಧಿಕರ ನಡುವೆ ಮದುವೆ ಮಾಡಿಸುತ್ತಾರೆ. ಈ ಜೋಡಿಗಳಿಗೆ ಇಷ್ಟವಿಲ್ಲದಿದ್ದರೂ ಮನೆಯವರ ಒತ್ತಡಕ್ಕೆ ಮಣಿಯುತ್ತಾರೆ. ನಂತರದ ಇಬ್ಬರ ಜೀವನದಲ್ಲೂ ದೊಡ್ಡ ಬಿರುಗಾಳಿ ಬೀಸುತ್ತದೆ. ಅಕ್ಷಯ್ ಮನೆಯಲ್ಲಿ ಅನುಮಾನಾಸ್ಪದವಾಗುವ ಹಾಗೆ ನಡೆದುಕೊಳ್ಳುತ್ತಾನೆ. ಒಂದು ಕಾಲ್ ಬಂದಕೂಡಲೆ ಇದ್ದಕ್ಕಿದ್ದ ಹಾಗೆ ಹೋಗುವ ಈತನ ನಡವಳಿಕೆ ಪತ್ನಿಗೆ ಸಹಿಸದಾಗುತ್ತದೆ. ಪತಿಯ ವಿಚಿತ್ರ ನಡವಳಿಕೆಗಳಿಂದ ಬೇಸರಗೊಂಡ ಅನ್ವಿತಾ ಬೇಸರಗೊಂಡು ತವರುಮನೆಗೆ ಹೋಗುತ್ತಾಳೆ. ಒಂದು ಹಂತದಲ್ಲಿ ಅನ್ವಿತಾ ಡೈವರ್ಸ ತೆಗೆದುಕೊಳ್ಳುವ ಹಂತಕ್ಕೂ ಬಂದು ಬಿಡುತ್ತಾಳೆ. ಮುಂದೆ ಏನು ಎಂಬುವಷ್ಟರಲ್ಲಿ ಕ್ಲೈಮ್ಯಾಕ್ಸ್ ಅಂತಕ್ಕೆ ಬಂದುಬಿಡುತ್ತದೆ.
ಅಕ್ಷಯ್ ಈ ಬದಲಾವಣೆಗೆ ಕಾರಣ ಏನು…
ಅನ್ವಿತಾಗೆ ಸಿಕ್ಕ ಸುಳಿವು ಏನು…
ಇಬ್ಬರಿಗೂ ಡೈವರ್ಸ್ ಸಿಗುತ್ತಾ..
ನಡೆದಿರುವ ಸತ್ಯ ಏನು…
ಎಲ್ಲಾ ವಿಚಾರ ತಿಳಿಯಬೇಕಾದರೆ ನೀವು ಫಾರ್ ರಿಜಿಸ್ಟ್ರೇಷನ್ ಚಿತ್ರ ನೋಡಬೇಕು.
ನಿರ್ದೇಶಕ ನವೀನ್ ದ್ವಾರಕನಾಥ್ ತಮ್ಮ ಪ್ರಥಮ ಪ್ರಯತ್ನವಾಗಿ ಕುಟುಂಬದಲ್ಲಿ ಪತಿ, ಪತ್ನಿ ನಡುವಿನ ಸಂಬಂಧ ಗಟ್ಟಿಯಾಗಿರಬೇಕು, ಇಬ್ಬರಲ್ಲೂ ಪರಸ್ಪರ ನಂಬಿಕೆಯಿರಬೇಕು, ಆ ಸಂಬಂಧ ರಿಜಿಸ್ಟರ್ ಆಗಿರಬೇಕು ಎಂಬುದನ್ನು ಪರದೆಯ ಮೇಲೆ ತುಂಬಾ ಚೆನ್ನಾಗಿ ನಿರೂಪಿಸಿದ್ದಾರೆ. ಫ್ಯಾಮಿಲಿ ಆಡಿಯನ್ಸ್ ಬಗ್ಗೆ ಹೆಚ್ಚಿನ ಗಮನ ಹರಿಸಿ ಕಥೆ ಮಾಡಿದ್ದಾರೆ. ಚಿತ್ರದಲ್ಲಿ ಸಂಬಧಗಳನ್ನು ಹೇಗೆ ಕಾಪಾಡಿಕೊಳ್ಳಬೇಕು ಎಂಬ ಬಗ್ಗೆ ಹೆಚ್ಚು ಒತ್ತು ನೀಡಲಾಗಿದೆ. ಸಂಸಾರದಲ್ಲಿ ಮೂರನೇ ವ್ಯಕ್ತಿ ತಲೆಹಾಕಿದರೆ ಏನಾಗುತ್ತದೆ ಎಂಬುದನ್ನು ಈ ಸಿನಿಮಾದಲ್ಲಿ ಹೇಳಲಾಗಿದೆ. ಚಿತ್ರದ ಓಟ ಇನ್ನಷ್ಟು ವೇಗ ಮಾಡಬಹುದಿತ್ತು. ಇಂತಹ ಚಿತ್ರವನ್ನ ನಿರ್ಮಿಸಿರುವ ನಿರ್ಮಾಪಕರ ಸಾಹಸವನ್ನು ಕೂಡ ಮೆಚ್ಚಲೇಬೇಕು.
ಇನ್ನು ಈ ಚಿತ್ರದ ಸಂಗೀತ ಸುಂದರವಾಗಿ ಮೂಡಿ ಬಂದಿದ್ದು , ಅಷ್ಟೇ ಅಚ್ಚುಕಟ್ಟಾಗಿ ಛಾಯಾಗ್ರಾಹಕರ ಕೈಚಳಕ ಅದ್ಭುತವಾಗಿದೆ. ಸಂಭಾಷಣೆ ಕೂಡ ಉತ್ತಮವಾಗಿದೆ. ಕಥೆ ಹಾಗೂ ತಾಂತ್ರಿಕವಾಗಿ ಗಮನ ಸೆಳೆಯುತ್ತದೆ. ಇನ್ನು ನಾಯಕನಾಗಿ ಅಭಿನಯಿಸಿರುವ ಪೃಥ್ವಿ ಅಂಬಾರ್ ತಮ್ಮ ಪಾತ್ರವನ್ನು ಲೀಲಾಜಾಲವಾಗಿ ಅಭಿನಯಿಸಿ ಗಮನ ಸೆಳೆದಿದ್ದಾರೆ. ಅದೇ ರೀತಿ ನಟಿ ಮಿಲನಾ ನಾಗರಾಜ್ ಕೂಡ ಸಿಕ್ಕ ಅವಕಾಶವನ್ನು ಸಮರ್ಥವಾಗಿ ನಿರ್ವಹಿಸಿ ಪಾತ್ರಕ್ಕೆ ಜೀವ ತುಂಬಿದ್ದಾರೆ. ತಬಲಾನಾಣಿ ತಮ್ಮ ಪಂಚಿಂಗ್ ಡೈಲಾಗ್ ಗಳ ಮೂಲಕವೇ ನಗಿಸುತ್ತಾರೆ. ಕಂಪನಿ ಮಾಲೀಕನಾಗಿ ರಮೇಶ್ ಭಟ್, ಪೋಷಕರಾಗಿ ಬಾಬು ಹಿರಣ್ಯಯ್ಯ, ಸುಧಾ ಬೆಳವಾಡಿ ತಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ನಾಯಕಿಯ ತಾಯಿಯ ಪಾತ್ರದಲ್ಲಿ ಸ್ವಾತಿ ಕೂಡ ಗಮನ ಸೆಳೆಯುತ್ತಾರೆ.
ಲಾಯರ್ ಪಾತ್ರದಲ್ಲಿ ರವಿಶಂಕರ್ ವಿಭಿನ್ನವಾಗಿ ಕಾಣಿಸಿಕೊಂಡಿದ್ದಾರೆ. ಚಿತ್ರದ ಓಟಕೆ ಎಲ್ಲಾ ಪಾತ್ರಗಳು ಉತ್ತಮ ಸಾತ್ ನೀಡಿದ್ದು, ಒಟ್ಟಾರೆ ಯಾವುದೇ ಮುಜುಗರವಿಲ್ಲದೆ ಇಡೀ ಫ್ಯಾಮಿಲಿ ಕುಂತು ನೋಡುಬಹುದಾದಂತಹ ಚಿತ್ರ ಇದಾಗಿದೆ.