ಸಾವಿನ ರಹಸ್ಯದಲ್ಲಿ “ಪ್ರೇತ” ಕಾಟ. (ರೇಟಿಂಗ್ : 3.5/5)
ಚಿತ್ರ : ಪ್ರೇತ
ನಿರ್ದೇಶಕ, ನಿರ್ಮಾಪಕ : ಹರೀಶ್ ರಾಜ್
ಸಂಗೀತ : ಪ್ರವೀಣ್ ಶ್ರೀನಿವಾಸ್ ಮೂರ್ತಿ
ಛಾಯಾಗ್ರಾಹಕ : ರಾಜ ಶಿವಶಂಕರ್
ತಾರಾಗಣ : ಹರೀಶ್ ರಾಜ್, ಅಹಿರಾ ಶೆಟ್ಟಿ , ಅಮೂಲ್ಯ ಭಾರದ್ವಾಜ್, ಅಮಿತ್ ,ಬಿ.ಎಂ. ವೆಂಕಟೇಶ್ ಹಾಗೂ ಮುಂತಾದವರು…
ಜೀವನದಲ್ಲಿ ನೆಮ್ಮದಿ , ಸುಖ , ಶಾಂತಿ, ಬಯಸುವುದು ಸರ್ವೇ ಸಾಮಾನ್ಯ. ಆದರೆ ವಿಧಿಯ ಆಟಕ್ಕೆ ಕೆಲವೊಮ್ಮೆ ನೋವು , ಸಂಕಟ , ಕಾಣದ ಶಕ್ತಿಯ ಆಟ, ಸತ್ಯ , ಸುಳ್ಳುಗಳ ಜೊತೆ ಬದುಕು ನಡೆಸುವ ಅನಿವಾರ್ಯವು ಎದುರಾಗುತ್ತದೆ. ಇಂತಹ ಒಂದಷ್ಟು ಬೆಚ್ಚಿಬಿಳಿಸುವಂತಹ ವಿಷಯಗಳೊಂದಿಗೆ ಪ್ರೇಕ್ಷಕರ ಮುಂದೆ ಬಂದಿರುವಂತಹ ಚಿತ್ರ ಪ್ರೇತ. ಸರ್ಕಾರಿ ಡಾಕ್ಟರ್ ಸೂರ್ಯ (ಹರೀಶ್ ರಾಜ್) ಹಾಗೂ ಅವನ ಪತ್ನಿ ಲೇಖ (ಆಹಿರಾ ಶೆಟ್ಟಿ) ಮುದ್ದಾದ ಮಗುವನ್ನು ಕಳೆದುಕೊಂಡ ಮಡದಿಯ ಮನಸ್ಥಿತಿಯನ್ನು ಸುಧಾರಿಸಲು ಬೆಂಗಳೂರಿಂದ ಸುಂದರ ಪರಿಸರದ ಊರಿನ ಸ್ಥಳಕ್ಕೆ ವರ್ಗಾವಣೆ ಮಾಡಿಸಿಕೊಳ್ಳುತ್ತಾನೆ. ಸುಮಾರು 200 ವರ್ಷಗಳ ಹಳೆಯ ಕಟ್ಟಡದ ಮುಖ್ಯಸ್ಥ ಪುರುಷೋತ್ತಮನ ಮನೆ ಪ್ರವೇಶ ಮಾಡುತ್ತಾರೆ. ಅಲ್ಲಿರುವ ಸರ್ಕಾರಿ ಆಸ್ಪತ್ರೆ ಯಲ್ಲಿ ಜನರ ಸೇವೆಗೆ ಮುಂದಾಗುವ ಸೂರ್ಯ ನಿಗೆ ಕಾಂಪೌಂಡರ್ (ಅಮಿತ್) ತನ್ನ ತರಲೆ ಮಾತುಗಳಿಂದಲೇ ಡಾಕ್ಟರ್ ಗೆ ಸಾಥ್ ನೀಡುತ್ತಾನೆ.
ಆ ಊರಿನಲ್ಲಿ ಅಮ್ಮನವರ ಶ್ರೀರಕ್ಷೆ ಭಕ್ತರಿಗೆ ಇದ್ಧರೆ , ಮತ್ತೊಂದೆಡೆ ಭೂತ , ಪ್ರೇತ ಕಾಟಕ್ಕೆ ಕಡಿವಾಣ ಹಾಕುವವನು ಹಂಪಯ್ಯ. ಇದರ ನಡುವೆ ಪುರುಷೋತ್ತಮನ ಮನೆಯ ಒಂದು ಭಾಗದಲ್ಲಿ ವಾಸವಿರುವ ಸೂರ್ಯ ತನ್ನ ವೃತ್ತಿಯೇ ದೇವರು ಎನ್ನುವವನು, ಆದರೆ ಲೇಖ ಮನೆಯಲ್ಲಿ ಆಗಾಗ ಕೇಳಿಸುವ ಸದ್ದು , ಯಾರೋ ಓಡಾಡಿದಂತೆ ಭಾಸವಾಗಿದ್ದನ್ನು ಗಮನಿಸಿ ಮಗನ ಜೊತೆ ಮಾತನಾಡುವ ಆಸೆಯೊಂದಿಗೆ ಪ್ರೇತ, ಆತ್ಮಗಳ ವಿಚಾರವನ್ನು ನಂಬುತ್ತಿರುತ್ತಾಳೆ. ಆಗಾಗ ಲೇಖ ಏನೋ ನೋಡುತ್ತಾ ಗಾಬರಿಯಿಂದ ಕಿರುಚುತ್ತಾಳೆ. ಇದು ಪುರುಷೋತ್ತಮ ಅವನ ಮಡದಿ ಹಾಗೂ ಮನೆಯ ಹಿರಿಯ ದೇವಿ ಶರ್ಮಾ ರಿಗೂ ಗಾಬರಿಯಾಗುತ್ತಿರುತ್ತದೆ. ಡಾಕ್ಟರ್ ಸೂರ್ಯ ಕೂಡ ಮಗನ ನೋವಿನಿಂದ ಹೀಗೆ ಆಡುತ್ತಿದ್ದಾಳೆ ಎಂದು ಟ್ರೀಟ್ಮೆಂಟ್ ನೀಡುತ್ತಾನೆ.
ಇದರ ನಡುವೆ ಪುರುಷೋತ್ತಮನ ಒಬ್ಬಳೇ ಮಗಳು ವಿಜಿ ಯಕ್ಷಗಾನ ತರಬೇತಿ ಪಡೆಯಲು ಗುಣ ಬಳಿ ಸೇರಿಕೊಂಡು ಪರಿಚಯ ಸ್ನೇಹ , ಪ್ರೀತಿಯ ಕಡೆಗೆ ತಿರುಗುತ್ತದೆ. ಈ ವಿಚಾರ ವಿಜಿ ತಂದೆ ತಿಳಿದು ಇಬ್ಬರನ್ನು ದೂರ ಮಾಡುತ್ತಾರೆ. ಮನೆ ಬಿಟ್ಟು ಹೋಗುವ ವಿಜಿ ಹಿಂತಿರುಗಿ ಬರುವುದಿಲ್ಲ. ಮಗಳ ನಾಪತ್ತೆ ಪೊಲೀಸ್ ಕಂಪ್ಲೇಂಟು ಆಗಿರುವ ಮಾಹಿತಿ ಸೂರ್ಯ ಗೆ ತಿಳಿಯುತ್ತದೆ. ಇನ್ನು ಲೇಖ ದೇಹದೊಳಗೆ ಆತ್ಮ ಪ್ರವೇಶ ಆಗಿರುವ ವಿಚಾರ ಮಹಾ ಮಾಂತ್ರಿಕ (ಬಿ.ಎಂ. ವೆಂಕಟೇಶ್) ನಿಂದ ತಿಳಿಯುತ್ತದೆ. ಇಲ್ಲಿಂದ ರೋಚಕ ತಿರುವ ಪಡೆಯುತ್ತಾ ಸಾಗುತ್ತದೆ.
ಪ್ರೇತ ಆಗಿದ್ದು ಯಾರು…
ಲೇಖ ದೇಹದಲ್ಲಿರೋದು ಯಾರು…
ಸೂರ್ಯ ನ ಪ್ಲಾನ್ ಏನು…
ವಿಜಿ ಬರ್ತಾಳಾ…
ಮಂತ್ರ ತಂತ್ರ ಗೆಲ್ಲುತ್ತಾ…
ಕ್ಲೈಮಾಕ್ಸ್ ಉತ್ತರಕ್ಕೆ “ಪ್ರೇತ” ಚಿತ್ರ ನೋಡಬೇಕು.
ಇಡೀ ಚಿತ್ರದ ರುವಾರಿಯಾಗಿ ಕಥೆ , ಚಿತ್ರಕಥೆ, ನಿರ್ದೇಶನದ ಜೊತೆ ನಾಯಕ ನಟನಾಗಿ ಅಭಿನಯಿಸಿರುವ ಹರೀಶ್ ರಾಜ್ ಬಹಳ ಕುತೂಹಲಕಾರಿ ಯಾಗಿ ಒಂದು ಪ್ರೇತದ ನೋವಿನ ಕಠೋರ ಸತ್ಯದ ಸುತ್ತ ಕಥೆಯನ್ನು ರೋಚಕವಾಗಿ ತೆರೆಯ ಮೇಲೆ ತಂದಿದ್ದಾರೆ. ಚಿತ್ರದ ಮೊದಲ ಭಾಗಕ್ಕಿಂತ ದ್ವಿತೀಯ ಭಾಗ ಕುತೂಹಲಕಾರಿಯಾಗಿ ಬೆಚ್ಚಿ ಬೀಳಿಸುವಂತೆ ಮಾಡಿದೆ. ಚಿತ್ರಕಥೆ ಹಾಗೂ ತಾಂತ್ರಿಕವಾಗಿ ಗಮನ ಸೆಳೆಯುತ್ತದೆ. ಇನ್ನು ಸಂಗೀತಕ್ಕಿಂತ ಹಿನ್ನಲೆ ಸಂಗೀತ ಹೆಚ್ಚು ಹೈಲೈಟ್ ಆಗಿದ್ದು , ಭಯ ಮೂಡಿಸುವಂತಿದೆ. ಕ್ಯಾಮೆರಾ ಕೆಲಸವು ಕೂಡ ಅದ್ಭುತವಾಗಿ ಮೂಡಿ ಬಂದಿದೆ. ಇನ್ನು ಚಿತ್ರದ ಸಂಭಾಷಣೆ ಹಾಗೂ ಯಕ್ಷಗಾನದ ಹಾಡು ಗಮನ ಸೆಳೆಯುತ್ತದೆ.
ಈ ಚಿತ್ರವನ್ನು ನಿರ್ಮಿಸುವುದರ ಜೊತೆಗೆ ನಾಯಕ ನಟನಾಗಿ ಅಭಿನಯಿಸಿರುವ ಹರೀಶ್ ರಾಜ್ ತಮ್ಮ ನಟನಾ ಸಾಮರ್ಥ್ಯವನ್ನು ಉತ್ತಮವಾಗಿ ಪ್ರದರ್ಶಿಸಿದ್ದಾರೆ. ಡಾಕ್ಟರ್ ಪಾತ್ರದಲ್ಲಿ ಕಾಣಿಸಿಕೊಂಡರು ಪ್ರೀತಿಯ ಮಡದಿಯ ಗಂಡನಾಗಿ , ಕಾಣದ ಶಕ್ತಿಗೆ ಸವಾಲಾಗಿ ನಿಲ್ಲುವ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಅದೇ ರೀತಿ ನಾಯಕಿ ಅಹಿರಾ ಶೆಟ್ಟಿ ಕೂಡ ಮೊದಲ ಚಿತ್ರದಲ್ಲಿ ಗಮನ ಸೆಳೆಯುವಂತೆ ಎರಡು ಶೇಡ್ ಗಳಲ್ಲಿ ನಟಿಸಿದ್ದಾರೆ. ಮುಂದೆ ಉತ್ತಮ ಭವಿಷ್ಯವಿರುವ ನಟಿಯಾಗುವ ಲಕ್ಷಣವಿದೆ. ಮತ್ತೊಬ್ಬ ಪ್ರತಿಭೆ ಅಮಿತ್ ಕೂಡ ತಮ್ಮ ಪಾತ್ರಕ್ಕೆ ಜೀವ ತುಂಬಿದ್ದಾರೆ. ಹಿರಿಯ ಮಂತ್ರವಾದಿ ಪಾತ್ರಧಾರಿ ಬಿ.ಎಂ. ವೆಂಕಟೇಶ್ ಸೇರಿದಂತೆ ಅಮೂಲ್ಯ ಭಾರದ್ವಾಜ್ ಹಾಗೂ ರಂಗಭೂಮಿ ಪ್ರತಿಭೆಗಳು ಇಡೀ ಚಿತ್ರದ ಓಟಕ್ಕೆ ಉತ್ತಮ ಸಾತ್ ನೀಡಿದ್ದಾರೆ. ಸಸ್ಪೆನ್ಸ್ , ಥ್ರಿಲ್ಲರ್, ಹಾರರ್ ಚಿತ್ರಗಳನ್ನು ಇಷ್ಟಪಡುವವರು ಸೇರಿದಂತೆ ಎಲ್ಲರೂ ಒಮ್ಮೆ ನೋಡುವಂತ ಚಿತ್ರ ಇದಾಗಿದೆ.