“ಅರ್ದಂಬರ್ಧ ಪ್ರೇಮಕಥೆ”ಯ ‘ಆರಂಭ’ ಹಾಡು ಅಪ್ಪುಗೆ ಅರ್ಪಣೆ
ಅದು ಸಾವಿರಾರು ಜನ ಬೈಕರ್ಸ್ ಒಂದು ಕಡೆ ಸೇರಿದ್ದ ಸಂದರ್ಭ. ಕೆಂಗೇರಿ ಬಳಿ ಅಕ್ಟೋಬರ್ ಫೆಸ್ಟ್ ಎನ್ನುವ ಕಾರ್ಯಕ್ರಮ ಆಯೋಜಿಸಲಾಗಿತ್ತು. ರಾಜ್ಯದ ವಿವಿಧ ಜಿಲ್ಲೆಯ ಬೈಕ್ ರೇಸರ್ಗಳು ಅಲ್ಲಿ ಜಮಾಯಿಸಿದ್ದರು. ಪುನೀತ್ ರಾಜ್ ಕುಮಾರ್ ಅವರ ಎರಡನೇ ಪುಣ್ಯ ಸ್ಮರಣೆಯ ಸಂದರ್ಭದಲ್ಲಿ ಎಲ್ಲ ಬೈಕರ್ಗಳು ಅಪ್ಪು ಅವರನ್ನು ಸ್ಮರಿಸಿಕೊಂಡು ಬೊಂಬೆ ಹೇಳುತೈತೆ ಹಾಡನ್ನು ಆಲಿಸಿದರು.
ಇದೇ ಸಂದರ್ಭದಲ್ಲಿ ಅರವಿಂದ್ ಕೌಶಿಕ್ ನಿರ್ದೇಶನದ ಅರ್ದಂಬರ್ಧ ಪ್ರೇಮಕಥೆ ಸಿನಿಮಾದ ʻಆರಂಭ…ʼ ಎನ್ನುವ ಹಾಡನ್ನು ಬಿಡುಗಡೆಗೊಳಿಸಲಾಯಿತು. ʻʻಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಸದಾ ಹೊಸತನಕ್ಕೆ ತೆರೆದುಕೊಳ್ಳುತ್ತಿದ್ದರು. ಸಿನಿಮಾ ನಟನೆಯ ಜೊತೆಗೆ ಅಡ್ವೆಂಚರ್ ಅನ್ನು ತುಂಬಾನೇ ಇಷ್ಟ ಪಡುತ್ತಿದ್ದವರು. ಅಪ್ಪು ಅವರ ಪುಣ್ಯ ಸ್ಮರಣೆಯ ಈ ಘಳಿಗೆಯಲ್ಲಿ ಬಿಡುಗಡೆ ಮಾಡುತ್ತಿರುವ ʼಆರಂಭʼ ಹಾಡನ್ನು ಅವರಿಗೇ ಅರ್ಪಿಸುತ್ತಿದ್ದೇವೆ ಎಂದು ನಿರ್ದೇಶಕ ಅರವಿಂದ್ ಕೌಶಿಕ್ ಹೇಳಿದರು.
ಅರ್ದಂಬರ್ಧ ಪ್ರೇಮಕಥೆ ಚಿತ್ರದ ಮೂಲಕ ಹೀರೋ ಆಗಿ ಲಾಂಚ್ ಆಗುತ್ತಿರುವವರು ಕೆ.ಪಿ. ಅರವಿಂದ್. ಬಿಗ್ ಬಾಸ್ ಶೋ ಮೂಲಕ ಹೆಸರು ಮಾಡಿದ ಅರವಿಂದ್ ಮೂಲತಃ ಬೈಕರ್. ಅರ್ದಂಬರ್ಧ ಪ್ರೇಮಕಥೆ ಸಿನಿಮಾದಲ್ಲಿ ಕೂಡಾ ಅರವಿಂದ್ ಬೈಕರ್ ಆಗಿಯೇ ಕಾಣಿಸಿಕೊಳ್ಳುತ್ತಿರೋದು ವಿಶೇಷ. ಜೊತೆಗೆ ಬೈಕರ್ಸ್ ಸಮುದಾಯದ ನಡುವೆಯೇ ಈ ಹಾಡು ಅನಾವರಣಗೊಂಡಿರುವುದು ನಿಜಕ್ಕೂ ಸ್ಪೆಷಲ್ ಅನ್ನಿಸುವ ವಿಚಾರ.
ಭವಿಷ್ಯದಲ್ಲಿ ಒಂದಾಗಿ ಬಾಳಲಿದ್ದಾರೆ ಅಂತಲೇ ಫೇಮಸ್ ಆಗಿರುವ ದಿವ್ಯಾ ಉರುಡುಗ ಮತ್ತು ಅರವಿಂದ್ ಅರ್ದಂಬರ್ಧ ಪ್ರೇಮಕಥೆ ಚಿತ್ರದಲ್ಲಿ ಜೋಡಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.
ಇತ್ತೀಚೆಗಷ್ಟೇ ‘ಹುಚ್ಚುಮನಸಿನ ಹುಡುಗಿ’ ಎನ್ನುವ ಹಾಡು ಬಿಡುಗಡೆಗೊಂಡಿತ್ತು. ಅರ್ಜುನ್ ಜನ್ಯಾ ಸಂಗೀತ ನಿರ್ದೇಶನದ ಹಾಡಿಗೆ ವಾಸುಕಿ ವೈಭವ್ ದನಿಯಾಗಿದ್ದರು.
ಈ ಹಾಡು ಎ ಟು ಮ್ಯೂಸಿಕ್ ಚಾನೆಲ್ಲಿನಲ್ಲಿ ಅತಿ ಹೆಚ್ಚು ವೀಕ್ಷಣೆ ಪಡೆದು, ಹಿಟ್ ಅನ್ನಿಸಿಕೊಂಡಿದೆ. ಈಗ ಆರಂಭ ಕೂಡಾ ಮೋಟಿವೇಷನಲ್ ಸಾಂಗ್ ಆಗಿ ಹೊರಹೊಮ್ಮಿದೆ. ಈ ಹಾಡು ಕೂಡಾ ಎಲ್ಲರ ಮೆಚ್ಚುಗೆಗೆ ಪಾತ್ರವಾಗಲಿದೆ ಅನ್ನೋದು ನಾಯಕ ನಟಿ ದಿವ್ಯಾ ಉರುಡುಗ ಅಭಿಪ್ರಾಯ.
ಬಕ್ಸಸ್ ಮೀಡಿಯಾ, ಆರ್ಎಸಿ ವಿಷುವಲ್ಸ್ ಮತ್ತು ಲೈಟ್ಹೌಸ್ ಮೀಡಿಯಾದ ಸಹಕಾರದೊಂದಿಗೆ ಈ ಚಿತ್ರವನ್ನು ನಿರ್ಮಿಸಿದೆ. ರ‍್ಯಾಪರ್ ಅಲೋಕ್, ಶ್ರೇಯಾ ಬಾಬು, ವೆಂಕಟಶಾಸ್ತ್ರಿ, ಪ್ರದೀಪ್ ರೋಷನ್, ಸೂರಜ್ ಹೂಗಾರ್, ಸುಜಿಶ್ ಶೆಟ್ಟಿ ಚಿತ್ರದ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಹಿರಿಯನಟ ದ್ವಾರಕೀಶ್ ಪುತ್ರ ಅಭಿಲಾಷ್ ವಿಶೇಷ ಪಾತ್ರದ ಮೂಲಕ 25 ವರ್ಷಗಳ ನಂತರ ತೆರೆ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ. ಸೂರ್ಯ ಅವರ ಛಾಯಾಗ್ರಹಣ, ಶಿವರಾಜ್ ಮೇಹು ಅವರ ಸಂಕಲನ, ಸತೀಶ್ ಬ್ರಹ್ಮಾವರ್ ಅವರ ನಿರ್ಮಾಣ ನಿರ್ವಹಣೆ ಈ ಚಿತ್ರಕ್ಕಿದೆ.