Cini NewsSandalwood

“ಸೂತ್ರಧಾರಿ” ಚಿತ್ರದ ಟ್ರೇಲರ್ ಅನಾವರಣ ಮಾಡಿದ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ

Spread the love

ಈಗಲ್ ಮೀಡಿಯಾ ಕ್ರಿಯೇಷನ್ಸ್ ಮೂಲಕ ನವರಸನ್‌ ನಿರ್ಮಾಣ‌ ಮಾಡಿರುವ,‌ ಕಿರಣ್ ಕುಮಾರ್ ನಿರ್ದೇಶನದಲ್ಲಿ ಚಂದನ್ ಶೆಟ್ಟಿ ಮೊದಲ ಬಾರಿಗೆ ನಾಯಕನಾಗಿ ನಟಿಸಿರುವ “ಸೂತ್ರಧಾರಿ” ಚಿತ್ರದ ಟ್ರೇಲರ್ ಅನ್ನು ಇತ್ತೀಚೆಗೆ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಬಿಡುಗಡೆ ಮಾಡಿದರು.

ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಚಿತ್ರದ ಟ್ರೇಲರ್ ಕುತೂಹಲ ಮೂಡಿಸಿದೆ‌. ಬಹು ನಿರೀಕ್ಷಿತ ಈ ಚಿತ್ರ ಮೇ 9 ರಂದು ಬಿಡುಗಡೆಯಾಗಲಿದೆ. ಟ್ರೇಲರ್ ಬಿಡುಗಡೆ ನಂತರ ಮುಖ್ಯ ಆತಿಥಿಗಳಾಗಿ ಆಗಮಿಸಿದ್ದ ಧ್ರುವ ಸರ್ಜಾ ಹಾಗೂ ಚಿತ್ರತಂಡದ ಸದಸ್ಯರು ಮಾತನಾಡಿದರು.

ಟ್ರೇಲರ್ ಚೆನ್ನಾಗಿದೆ. ತಂತ್ರಜ್ಞರ ಕೆಲಸ ಹಾಗೂ ಕಲಾವಿದರ ಅಭಿನಯ ಸೊಗಸಾಗಿದೆ. ನಾನು ಇಲ್ಲಿಗೆ ಬರಲು ಎರಡು ಕಾರಣ. ಒಂದು ನಮ್ಮ “ಪೊಗರು” ಚಿತ್ರದ ಇವೆಂಟ್ ಆಯೋಜನೆ ಮಾಡಿದ್ದು ನವರಸನ್ ಅವರು. ಮತ್ತೊಂದು ನನ್ನ ಬಾಲ್ಯದ ಗೆಳೆಯ ಚಂದನ್ ಶೆಟ್ಟಿ ನಾಯಕನಾಗಿ ನಟಿಸಿರುವ ಮೊದಲ ಚಿತ್ರವಿದು ಎಂದು ತಿಳಿಸಿದ ನಟ ಧ್ರುವ ಸರ್ಜಾ ಚಿತ್ರಕ್ಕೆ ಶುಭ ಹಾರೈಸಿದರು ಹಾಗೂ ಮೇ 9 ರಂದು ಕುಟುಂಬ ಸಮೇತ ಚಿತ್ರ ನೋಡುವುದಾಗಿ ಹೇಳಿದರು.

ಟ್ರೇಲರ್ ಬಿಡುಗಡೆ ಮಾಡಿಕೊಟ್ಟ ಧ್ರುವ ಸರ್ಜಾ ಅವರಿಗೆ ಧನ್ಯವಾದ. ನಾವು ಇಲ್ಲಿಯವರೆಗೂ ಸಾಕಷ್ಟು ಇವೆಂಟ್ ಗಳನ್ನು ಮಾಡಿದ್ದೇವೆ. ಅದಕ್ಕೆ ಓಂಕಾರ ಹಾಕಿದ್ದು ಧ್ರುವ ಸರ್ಜಾ ಅವರು. “ಪೊಗರು” ಚಿತ್ರದ ಮೂಲಕ ನಮ್ಮ ಇವೆಂಟ್ ಶುರುವಾಗಿದ್ದು. ಇನ್ನೂ ಮೇ 9 ರಂದು ಬಿಡುಗಡೆಯಾಗಲಿರುವ ನಮ್ಮ “ಸೂತ್ರಧಾರಿ” ಚಿತ್ರದ ಮೂಲಕ ನಾಯಕ‌ನಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ‌. ನಮ್ಮ ಚಿತ್ರಕ್ಕೆ ತಂತ್ರಜ್ಞರ ಸಹಕಾರವೂ ಅಪಾರ ಎಂದರು ನವರಸನ್.

ನನ್ನ ಪ್ರತಿಭೆಯನ್ನು ಮೊದಲು ಗುರುತಿಸಿದ್ದು ಸರ್ಜಾ‌ ಕುಟುಂಬದವರು. ನಾನು ನಾಯಕನಾಗಿ ನಟಿಸಿರುವ ಮೊದಲ ಚಿತ್ರದ ಟ್ರೇಲರ್ ಬಿಡುಗಡೆಗೆ ಧ್ರುವ ಸರ್ಜಾ ಬಂದಿದ್ದಾರೆ. ಈ ಸಮಯದಲ್ಲಿ ನನಗೆ ಅವರ ಮೊದಲ ಚಿತ್ರ “ಅದ್ದೂರಿ”ಯ ಬಿಡುಗಡೆ ದಿನದ ನೆನಪಾಗುತ್ತಿದೆ.

ಬಿಡುಗಡೆಯ ಹಿಂದಿನ ದಿನ ಬೆಳಗ್ಗಿನ ಜಾವದವರೆಗೂ ಅವರು ಹಾಗೂ ನಾನು ಚಿತ್ರಮಂದಿರಗಳಿಗೆ ಭೇಟಿ ನೀಡಿದ್ದು, ಮಾರ್ನಿಂಗ್ ಶೋ ಮುಗಿದ ಕೂಡಲೆ‌ ಜನ ಧ್ರುವ ಅವರ ಅಭಿನಯ ನೋಡಿ ಸಂಭ್ರಮಿಸಿದ್ದು ಇಂದು ನೆನಪಿಗೆ ಬರುತ್ತಿದೆ. ಅವರಿಗೆ ಧನ್ಯವಾದ ಹೇಳುತ್ತಾ, ಇನ್ನೂ ” ಸೂತ್ರಧಾರಿ ” ನಾನು ನಾಯಕನಾಗಿ ನಟಿಸಿರುವ ಮೊದಲ ಚಿತ್ರ. ಪೊಲೀಸ್ ಅಧಿಕಾರಿಯಾಗಿ ಅಭಿನಯಿಸಿದ್ದೇನೆ. ನಾನು ನಾಯಕನಾಗಲೂ ನವರಸನ್ ಅವರೆ ಪ್ರಮುಖ ಕಾರಣ ಎಂದರು ಚಂದನ್ ಶೆಟ್ಟಿ.

ನಿರ್ದೇಶಕ ಕಿರಣ್ ಕುಮಾರ್, ನಾಯಕಿ ಅಪೂರ್ವ, ನಟರಾದ ಸಂಜಯ್ ಗೌಡ, “ನಟನ” ಪ್ರಶಾಂತ್, ಲೋಹಿತ್, ರಮೇಶ್ ಮಾಸ್ಟರ್, ಗಣೇಶ್ ನಾರಾಯಣ್, ಹಾಡು ಬರೆದಿರುವ ಕಿನ್ನಾಳ್ ರಾಜ್ ಮುಂತಾದವರು ಚಿತ್ರದ ಕುರಿತು ಮಾತನಾಡಿದರು. ನಿರ್ಮಾಪಕರಾದ ಚೇತನ್ ಗೌಡ ಹಾಗೂ ರಾಜೇಶ್ ಸಮಾರಂಭದಲ್ಲಿ ಉಪಸ್ಥಿತರಿದ್ದರು.

Visited 1 times, 1 visit(s) today
error: Content is protected !!