“ಚೌಕಿದಾರ್” ತಂಡ ಸೇರಿದ ಹಿರಿಯ ನಟಿ ಶ್ವೇತಾ.
ಚೈತ್ರದ ಪ್ರೇಮಾಂಜಲಿ, ಕರ್ಪೂರದ ಗೊಂಬೆ, ಲಕ್ಷ್ಮಿ ಮಹಾಲಕ್ಷ್ಮಿ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿ ಮನ ಗೆದ್ದಿದ್ದ ನಟಿ ಶ್ವೇತಾ ಬರೋಬ್ಬರಿ 20 ವರ್ಷಗಳ ನಂತರ ಕನ್ನಡ ಚಿತ್ರರಂಗದತ್ತ ಮುಖ ಮಾಡಿದ್ದಾರೆ.
ತಮಿಳು ಮತ್ತು ಮಲಯಾಳಂ ಚಿತ್ರರಂಗದಲ್ಲಿ ವಿನೋದಿನಿ ಎಂದೂ ಕರೆಯಲ್ಪಡುವ ಅವರು ಕನ್ನಡದಲ್ಲಿ ಶ್ವೇತಾ ಎಂದೇ ಜನಪ್ರಿಯತೆ ಪಡೆದಿದ್ದಾರೆ. ಸದ್ಯ ‘ಲಕ್ಷ್ಮಿ ನಿವಾಸ’ ಎಂಬ ಧಾರಾವಾಹಿ ಮೂಲಕ ನಟನೆಗೆ ಮರಳಿರುವ ಅವರೀಗ ಹೊಸ ಸಿನಿಮಾ ಒಪ್ಪಿಕೊಂಡಿದ್ದಾರೆ. ಟೈಟಲ್ ಹಾಗೂ ಪೋಸ್ಟರ್ ಮೂಲಕ ಕುತೂಹಲ ಹೆಚ್ಚಿಸಿರುವ ಚೌಕಿದಾರ್ ಸಿನಿಮಾಗೆ ಶ್ವೇತಾ ಎಂಟ್ರಿ ಕೊಟ್ಟಿದ್ದಾರೆ.
ವಿವಿಧ ಭಾಷೆಗಳಲ್ಲಿ ಸುಮಾರು 75 ಚಲನಚಿತ್ರಗಳಲ್ಲಿ ನಟಿಸಿದ್ದ ಶ್ವೇತಾ 2003 ರಲ್ಲಿ ತೆರೆಕಂಡ ‘ಕುಟುಂಬ’ ಸಿನಿಮಾದಲ್ಲಿ ಕೊನೆಯ ಬಾರಿಗೆ ಅಭಿನಯಿಸಿದ್ದರು. 20 ವರ್ಷಗಳ ವಿರಾಮದ ನಂತರ ನಟನೆಗೆ ಮರಳಿದ್ದಾರೆ. ತಮ್ಮ ವೃತ್ತಿಜೀವನದಲ್ಲಿ ಹೊಸ ಅಧ್ಯಾಯವನ್ನು ಸಣ್ಣ ಪರದೆಯ ಮೂಲಕ ಮತ್ತೆ ಆರಂಭಿಸಿದ್ದು, ಇದೀಗ ಬಹಳ ಇಷ್ಟಪಟ್ಟು ಚೌಕಿದಾರ್ ಸಿನಿಮಾ ಒಪ್ಪಿಕೊಂಡಿದ್ದಾರೆ. ಸೀರಿಯಲ್ ನಲ್ಲಿ ಬ್ಯುಸಿಯಾಗಿರುವ ಶ್ವೇತಾ ಈಗ ಲಾಂಗ್ ಗ್ಯಾಪ್ ಬಳಿಕ ಸಿನಿಮಾ ಒಪ್ಪಿಕೊಂಡಿರುವುದು ಸಹಜವಾಗಿ ನಿರೀಕ್ಷೆ ಹೆಚ್ಚಿಸಿದೆ.
ಪ್ರೀತಿ-ಪ್ರೇಮದಂತಹ ಕಥೆಯಲ್ಲಿ ಅಭಿನಯಿಸಿದ್ದ ಪೃಥ್ವಿ ಅಂಬಾರ್ ಚೌಕಿದಾರ್ ಮೂಲಕ ರಗಡ್ ಅವತಾರ ತಾಳಿದ್ದಾರೆ. ಪ್ರತಿ ಬಾರಿಯೂ ಹೊಸ ಕಥೆಯನ್ನು ಹೆಕ್ಕಿ ತರುವ ಚಂದ್ರಶೇಖರ್ ಬಂಡಿಯಪ್ಪ ಈ ಬಾರಿ ಕೂಡ ಫ್ರೆಶ್ ಕಥೆಯೊಂದಿಗೆ ಹಾಜರಾಗಿದ್ದಾರೆ. ಧನ್ಯರಾಮ್ ಕುಮಾರ್ ನಾಯಕಿಯಾಗಿ ಸಾಥ್ ಕೊಟ್ಟಿದ್ದಾರೆ.
ತುಂಬಾ ದಿನಗಳ ಬಳಿಕ ಹಿರಿಯ ನಟ ಸಾಯಿ ಕುಮಾರ್ ವಿಶೇಷ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಚಿತ್ರಕ್ಕೆ ಸಚಿನ್ ಬಸ್ರೂರು ಸಂಗೀತ ಕೊಡುತ್ತಿದ್ದಾರೆ. ಸಿದ್ದು ಕಂಚನಹಳ್ಳಿ ಕ್ಯಾಮೆರಾ, ಪ್ರಮೋದ್ ಮರವಂತೆ, ಸಂತೋಷ್ ನಾಯಕ್, ವಿ.ನಾಗೇಂದ್ರ ಪ್ರಸಾದ್ ಗೀತರಚನೆ ಮಾಡುತ್ತಿದ್ದಾರೆ. ಬಹು ಭಾಷೆಯಲ್ಲಿಯೇ ಈ ಸಿನಿಮಾ ಮೂಡಿ ಬರುತ್ತಿದೆ. ಶಿಕ್ಷಣತಜ್ಞರಾದ ಕಲ್ಲಹಳ್ಳಿ ಚಂದ್ರಶೇಖರ್ ತಮ್ಮದೇ VS ಎಂಟರ್ ಟೈನ್ಮೆಂಟ್ ಮೂಲಕ ನಿರ್ಮಾಣ ಮಾಡುತ್ತಿದ್ದಾರೆ.