ʼಅಜ್ಞಾತವಾಸಿʼಯಿಂದ ಮತ್ತೊಂದು ಹಾಡು ಬಿಡುಗಡೆ.
ಏಪ್ರಿಲ್ 11ರಂದು ತೆರೆಗೆ ಬರ್ತಿರುವ ಬಹುನಿರೀಕ್ಷಿತ ಕನ್ನಡ ಸಿನಿಮಾ “ಅಜ್ಞಾತವಾಸಿ”. ಗುಲ್ಟು ಸೂತ್ರಧಾರ ಜನಾರ್ಧನ್ ಚಿಕ್ಕಣ್ಣ ನಿರ್ದೇಶನದ ಈ ಚಿತ್ರ ಈಗಾಗಲೇ ನಾನಾ ಆಂಗಲ್ ನಲ್ಲಿ ಪ್ರೇಕ್ಷಕರನ್ನು ಸೆಳೆಯುತ್ತಿದೆ. ಟೀಸರ್, ಕಲರ್ ಫುಲ್ ಹಾಡುಗಳ ಮೂಲಕ ಚಿತ್ರತಂಡ ಸಿನಿಮಾಪ್ರೇಮಿಗಳಿಗೆ ಆಹ್ವಾನ ಕೊಟ್ಟಿದೆ.
ಇದೀಗ ಅಜ್ಞಾತವಾಸಿ ಅಂಗಳದಿಂದ ಮತ್ತೊಂದು ಸೊಗಸಾದ ಗೀತೆ ಬಿಡುಗಡೆಯಾಗಿದೆ. ನೂರು ಕನಸು ಕಾಣಲು ಎಂಬ ಹಾಡು ಸರಿಗಮ ಕನ್ನಡ ಯೂಟ್ಯೂಬ್ ನಲ್ಲಿ ರಿಲೀಸ್ ಆಗಿದೆ. ಧನಂಜಯ್ ರಂಜನ್ ಸಾಹಿತ್ಯ ಬರೆದಿದ್ದು, ರಜತ್ ಹೆಗ್ಡೆ ಧ್ವನಿಯಾಗಿದ್ದು, ಚರಣ್ ರಾಜ್ ಟ್ಯೂನ್ ಹಾಕಿರುವ ನೂರು ಕನಸನು ಕಾಣಲು ಹಾಡಿಗೆ ಸಿದ್ದು ಮೂಲಿಮನಿ ಹೆಜ್ಜೆ ಹಾಕಿದ್ದಾರೆ.
ರಂಗಾಯಣ ರಘು ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿರುವ ಅಜ್ಞಾತವಾಸಿಯಲ್ಲಿ ಪಾವನಾ ಗೌಡ ಹಾಗೂ ಸಿದ್ದು ಮೂಲಿಮನಿ, ಶರತ್ ಲೋಹಿತಾಶ್ವ, ರವಿಶಂಕರ್ ಗೌಡ ಸೇರಿದಂತೆ ಹಲವರು ನಟಿಸಿದ್ದಾರೆ. ಜನಾರ್ಧನ್ ಚಿಕ್ಕಣ್ಣ ಗುರುಗಳಾದ ಕೃಷ್ಣರಾಜ್ ಅವರು ಅಜ್ಞಾತವಾಸಿ ಚಿತ್ರಕ್ಕೆ ಕಥೆ ಬರೆದ್ದಾರೆ. 1997ರಲ್ಲಿ ಮಲೆನಾಡಿನಲ್ಲಿ ನಡೆದ ಕೊಲೆಯೊಂದರ ಸುತ್ತ ಈ ಕಥೆ ಹೆಣೆಯಲಾಗಿದೆ. ಕನ್ನಡದಲ್ಲಿ ಈವರೆಗೂ ಬಂದಿರದ ಮರ್ಡರ್ ಮಿಸ್ಟರಿ ಕಥಾಹಂದರ ಚಿತ್ರದಲ್ಲಿದೆ.
ಅದ್ವೈತ ಛಾಯಾಗ್ರಾಹಕರಾಗಿ ಹಾಗೂ ಚರಣ್ ರಾಜ್ ಸಂಗೀತ ನಿರ್ದೇಶಕರಾಗಿ, ಭರತ್ ಎಂ.ಸಿ ಸಂಕಲನಕಾರರಾಗಿ, ಉಲ್ಲಾಸ್ ಹೈದೂರು ಕಲಾ ನಿರ್ದೇಶಕರಾಗಿ ಅಜ್ಞಾತವಾಸಿ ಚಿತ್ರದಲ್ಲಿ ಕಾರ್ಯನಿರ್ವಾಹಿಸಿದ್ದಾರೆ. ಎನ್ ಹರಿಕೃಷ್ಣ ಸಹ ನಿರ್ದೇಶಕರಾಗಿ ದುಡಿದಿದ್ದು, ಜಿ.ಬಿ.ಭರತ್ ಕಾರ್ಯಕಾರಿ ನಿರ್ಮಾಪಕರಾಗಿ ಸಾಥ್ ಕೊಟ್ಟಿದ್ದಾರೆ. ಈ ಚಿತ್ರದ ಬಗ್ಗೆ ಸ್ಯಾಂಡಲ್ವುಡ್ ಅಂಗಳದಲ್ಲಿ ನಿರೀಕ್ಷೆ ಮನೆಮಾಡಿದೆ. ‘ಗೋಧಿಬಣ್ಣ ಸಾಧಾರಣ ಮೈಕಟ್ಟು’, ಸಪ್ತ ಸಾಗರದಾಚೆ ಎಲ್ಲೋ ಸರಣಿ ಚಿತ್ರಗಳ ಸಾರಥಿ ಹೇಮಂತ್ ಎಂ ರಾವ್ ತಾಯಿ ನೆನಪಿನಲ್ಲಿ ಪ್ರಾರಂಭಿಸಿರುವ ದಾಕ್ಷಾಯಿಣಿ ಟಾಕೀಸ್ ಪ್ರೊಡಕ್ಷನ್ ಹೌಸ್ ನಡಿ ಅಜ್ಞಾತವಾಸಿ ಚಿತ್ರ ನಿರ್ಮಾಣವಾಗಿದೆ.