ಅನೀಶ್ ಮೀಟ್ ಚಿರು : ”ಆರಾಮ್ ಅರವಿಂದ ಸ್ವಾಮಿ” ಸಿನಿಮಾ ಕಂಟೆಂಟ್ ನೋಡಿ ಏನಂದ್ರು ಮೆಗಾಸ್ಟಾರ್..?
ಸ್ಯಾಂಡಲ್ವುಡ್ ಭರವಸೆಯ ನಟ ಕಂ ನಿರ್ದೇಶಕ ಅನೀಶ್ ತೇಜೇಶ್ವರ್. ಕಮರ್ಶಿಯಲ್ ಸಿನಿಮಾ ಹೀರೋ ಆಗಿ ಮಿಂಚಿರುವ ಅನೀಶ್ ರೋಮ್ಯಾಂಟಿಕ್ ಹೀರೋ ಆಗಿ ತೆರೆ ಮೇಲೆ ಮಿಂಚಲು ಸಜ್ಜಾಗಿದ್ದಾರೆ. ಸದ್ಯ ‘ಆರಾಮ್ ಅರವಿಂದ್ ಸ್ವಾಮಿ’ಆಗಿ ತೆರೆ ಮೇಲೆ ನಯಾ ಅವತಾರದಲ್ಲಿ ಬರಲು ರೆಡಿಯಾಗಿರುವ ಅವರು, ಧಿಡೀರನೇ ಟಾಲಿವುಡ್ ಮೆಗಾ ಸ್ಟಾರ್ ಚಿರಜೀವಿ ಜೊತೆ ಪ್ರತ್ಯಕ್ಷರಾಗಿದ್ದಾರೆ.
ಭಾರತದ ಎರಡನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮವಿಭೂಷಣ ಪ್ರಶಸ್ತಿಗೆ ಭಜನರಾಗಿರುವ ಮೆಗಾಸ್ಟಾರ್ ಚಿರಂಜೀವಿ ಅವರನ್ನು ನಟ ಅನೀಶ್ ಭೇಟಿಯಾಗಿದ್ದಾರೆ, ಇಂದು ಚಿರು ಹೈದ್ರಾಬಾದ್ ನಿವಾಸದಲ್ಲಿ ಭೇಟಿಯಾಗಿರುವ ಅವರು, ಮೆಗಾಸ್ಟಾರ್ ಗೆ ಶುಭಾಶಯ ತಿಳಿಸಿದ್ದಾರೆ. ಇದೇ ವೇಳೆ ತಮ್ಮ ಬಹುನಿರೀಕ್ಷಿತ ಆರಾಮ್ ಅರವಿಂದ ಸ್ವಾಮಿ ಚಿತ್ರದ ಕಂಟೆಂಟ್ ತೋರಿಸಿದ್ದಾರೆ. ಸಿನಿಮಾದ ಕಂಟೆಂಟ್ ನೋಡಿ ಮೆಚ್ಚಿಕೊಂಡ ಚಿರಂಜೀವಿ ಅನೀಶ್ ಚಿತ್ರಕ್ಕೆ ಬೆಸ್ಟ್ ವಿಷಸ್ ತಿಳಿಸಿದ್ದಾರೆ.
ಅನೀಶ್ ಹುಟ್ಟುಹಬ್ಬದ ಅಂಗವಾಗಿ ಬಿಡುಗಡೆಯಾಗಿದ್ದ ಆರಾಮ್ ಅರವಿಂದ ಸ್ವಾಮಿ ಟೈಟಲ್ ಟ್ರ್ಯಾಕ್ ಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಅರ್ಜುನ್ ಜನ್ಯ ಮ್ಯೂಸಿಕ್, ನಾಗಾರ್ಜುನ್ ಶರ್ಮಾ ಸಾಹಿತ್ಯದ ಹಾಡಿಗೆ ಬೊಂಬಾಟ್ ಆಗಿ ಅನೀಶ್ ಕುಣಿದು ಕುಪ್ಪಳಿಸಿದ್ದರು. ಬಾಬಾ ಭಾಸ್ಕರ್ ಮಾಸ್ಟರ್ ಕೊರಿಯೋಗ್ರಾಫಿಯಲ್ಲಿ ಮೂಡಿಬಂದಿದ್ದ ಟೈಟಲ್ ಟ್ರ್ಯಾಕ್ 1 ಕೋಟಿಗೂ ಅಧಿಕ ವೀವ್ಸ್ ಪಡೆದುಕೊಂಡಿದೆ.
ತನ್ನ ಪ್ರಮೋಷನ್ ಕಂಟೆಂಟ್ ನಿಂದಲೇ ಈಗಾಗಲೇ ಸದ್ದು ಮಾಡುತ್ತಿರುವ ’ಆರಾಮ ಅರವಿಂದ ಸ್ವಾಮಿ’ ಸಿನಿಮಾಗೆ ಅಭಿಷೇಕ್ ಶೆಟ್ಟಿ ಆಕ್ಷನ್ ಕಟ್ ಹೇಳಿದ್ದಾರೆ. ನಮ್ ಗಣಿ ಬಿಕಾಂ ಪಾಸ್, ಗಜಾನನ ಅಂಡ್ ಗ್ಯಾಂಗ್ ಸಿನಿಮಾಗಳ ಮೂಲಕ ಭರವಸೆ ಮೂಡಿಸಿರುವ ಅಭಿಷೇಕ್ ಶೆಟ್ಟಿ ನಿರ್ದೇಶನದಲ್ಲಿ ಮೂಡಿ ಬರ್ತಿರುವ ಮೂರನೇ ಸಿನಿಮಾವಿದು. ರೊಮ್ಯಾಂಟಿಕ್ ಕಾಮಿಡಿ ಸಬ್ಜೆಕ್ಟ್ ಒಳಗೊಂಡ ’ಆರಾಮ ಅರವಿಂದ ಸ್ವಾಮಿ’ ಶೂಟಿಂಗ್ ಮುಗಿಸಿ ಬಿಡುಗಡೆಗೆ ಸಜ್ಜಾಗಿದ್ದಾನೆ.
ಅಕಿರ ಸಿನಿಮಾ ಖ್ಯಾತಿಯ ಶ್ರೀಕಾಂತ್ ಪ್ರಸನ್ನ, ‘ಗುಳ್ಟು’ ಸಿನಿಮಾ ಖ್ಯಾತಿಯ ಪ್ರಶಾಂತ್ ರೆಡ್ಡಿ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಮ್ಯೂಸಿಕ್ ಮಾಂತ್ರಿಕ ಅರ್ಜುನ್ ಜನ್ಯ ಸಂಗೀತ ನಿರ್ದೇಶನ, ವೈವಿಬಿ ಶಿವಸಾಗರ್ ಛಾಯಾಗ್ರಹಣ, ಉಮೇಶ್ ಆರ್ ಬಿ ಸಂಕಲನ ಚಿತ್ರಕ್ಕಿದೆ.