ಮಹಿಳಾ ಪ್ರಧಾನ ಕಥಾನಕ “ಅಂಶು” ಚಿತ್ರದ ಟ್ರೈಲರ್ ಸದ್ದು
ಕುತೂಹಲ ಮೂಡಿಸುವ ವಿಭಿನ್ನ ಕಥಾನಕ ಚಿತ್ರಗಳು ಪ್ರೇಕ್ಷಕರನ್ನ ಗಮನ ಸೆಳೆಯುವುದು ಸರ್ವೇ ಸಾಮಾನ್ಯ. ಆ ನಿಟ್ಟಿನಲ್ಲಿ ಸೈಕ್ಯಾಡೆಲಿಕ್ ಥ್ರಿಲ್ಲರ್ ರೂಪದಲ್ಲಿ , ವಿಭಿನ್ನ ಜಾನರ್ ನ ಪಕ್ಕಾ ಕಮರ್ಶಿಯಲ್ ಹಾದಿಯಲ್ಲಿ ಸಿದ್ಧವಾಗಿರುವಂತಹ ಈ “ಅಂಶು” ಚಿತ್ರದ ಟ್ರೈಲರ್ ಬಿಡುಗಡೆಗೊಂಡು ನೋಡುಗರ ನಿರೀಕ್ಷೆಯನ್ನು ಹಿಮ್ಮಡಿ ಗೊಳಿಸಿದೆ. ಈ “ಅಂಶು” ಮಹಿಳಾ ಪ್ರಧಾನ ಕಥಾನಕವನ್ನು ಒಳಗೊಂಡಿರುವ ಚಿತ್ರ. ಅದರ ಒಟ್ಟಾರೆ ಸಾರದತ್ತ ಕುತೂಹಲ ಕೇಂದ್ರೀಕರಿಸುವಂತೆ ಮಾಡುವಲ್ಲಿ ಈ ಟ್ರೈಲರ್ ಯಶಸ್ಸನ್ನ ಕಂಡಿದೆ.
ಈ ಚಿತ್ರದಲ್ಲಿ ನಿಶಾ ರವಿಕೃಷ್ಣನ್ ನಾಯಕಿಯಾಗಿ ನಟಿಸಿದ್ದಾರೆ. ಗಟ್ಟಿಮೇಳ ಸೀರಿಯಲ್ಲಿನ ಅಮೂಲ್ಯ ಪಾತ್ರದ ಮೂಲಕ ಮಿಂಚಿದ್ದ ನಿಶಾ ಈ ಟ್ರೈಲರ್‌ನಲ್ಲಿ ಸೀರಿಯಲ್ ಇಮೇಜನ್ನು ಮೀರಿದ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ.ಎಂ.ಸಿ ಚನ್ನಕೇಶವ ನಿರ್ದೇಶನದ ಚೊಚ್ಚಲ ಚಿತ್ರ ಅಂಶು. `ನಾವು ನಂಬೋದೆಲ್ಲ ನಿಜ ಅಲ್ಲ, ಸಹಿಸೋಕ್ ಆಗ್ದೆ ಇರೋದೆಲ್ಲ ಸುಳ್ಳಲ್ಲ’ ಅಂತ ಶುರುವಾಗುವ ಈ ಟ್ರೈಲರ್ ನೋಡಿದ ಮಂದಿಯಲ್ಲಿ ಒಂದಷ್ಟು ಪ್ರಶ್ನೆಗಳು ಮೂಡಿಕೊಂಡಿವೆ. ಅದಕ್ಕುತ್ತರವೆಂಬಂಥಾ, ಬೆರಗಿನ ಸಂಗತಿಗಳನ್ನು ಚಿತ್ರತಂಡ ತೆರೆದಿಟ್ಟಿದೆ.
ಅದರ ಪ್ರಕಾರ ಹೇಳೋದಾದರೆ, ಇದೊಂದು ಸೈಕ್ಯಾಡೆಲಿಕ್ ಥ್ರಿಲ್ಲರ್ ಜಾನರಿನ ಚಿತ್ರ. ಈ ಸಮಾಜದಲ್ಲಿ ಇಂದಿನ ದಿನಮಾನದಲ್ಲಿ ಘಟಿಸುತ್ತಿರುವ ವಿಚಾರಗಳನ್ನಿಲ್ಲಿ ಅತ್ಯಂತ ಪರಿಣಾಮಕಾರಿಯಾಗಿ ದೃಷ್ಯೀಕರಿಸಲಾಗಿದೆಯಂತೆ. ಅದರ ಆವೇಗ ಎಂಥಾದ್ದಿದೆ ಎಂಬುದಕ್ಕೆ ಸಾಕ್ಷಿ ಎಂಬಂತೆ ಈ ಟ್ರೈಲರ್ ಮೂಡಿ ಬಂದಿದೆ.ಗ್ರಹಣ ಎಲ್ ಎಲ್ ಪಿ ಬ್ಯಾನರಿನಡಿಯಲ್ಲಿ ಈ ಸಿನಿಮಾ ನಿರ್ಮಾಣಗೊಂಡಿದೆ. ರತನ್ ಗಂಗಾಧರ್,ಸಂಪತ್ ಶಿವಶಂಕರ್, ಕೃತಿ ನಾಣಯ್ಯ ನಿರ್ಮಾಣ ಕಾರ್ಯದ ಮುಂಚೂಣಿಯಲ್ಲಿ ಕಾರ್ಯ ನಿರ್ವಹಿಸಿದ್ದಾರೆ.
ಭಜರಂಗಿ2 , ವೇದ ಚಿತ್ರಗಳಲ್ಲಿ ವಿಲನ್ ಆಗಿ ನಟಿಸಿದ , ಈಗ ಬಾಲಿವುಡ್ ನಲ್ಲೂ ಸಕ್ರಿಯರಾಗಿರುವ ಚಲುವರಾಜ್ ನಿರ್ಮಾಣದಲ್ಲಿ ಸಾಥ್ ಕೊಟ್ಟಿದ್ದಾರೆ. ಜೈಚಂದ್ರ, ಪ್ರಮೋದ್ ಡಾ.ಮಧುರಾಜ್, ಮತ್ತು ವೀರನ್ ಗೌಡ ಕೂಡಾ ಅಂಶು ನಿರ್ಮಾಣದಲ್ಲಿ ಸಹಭಾಗಿಗಳಾಗಿದ್ದಾರೆ. ಈ ಹಿಂದೆ ಅಂಶು ಚಿತ್ರದ ಫಸ್ಟ್ ಲುಕ್ ಟೀಸರ್ ಬಿಡುಗಡೆಗೊಂಡಿತ್ತು.
ಲಂಡನ್ನಿನಲ್ಲಿ ಡಾಕ್ಟರ್ ಆಗಿರುವ ಮಧುರಾಜ್ ಅದನ್ನು ನೋಡಿ ಥ್ರಿಲ್ ಆಗಿ ನಿರ್ಮಾಣ ತಂಡಕ್ಕೆ ಸೇರಿಕೊಂಡಿದ್ದರಂತೆ.ಇನ್ನುಳಿದಂತೆ ನಿರ್ದೇಶಕ ಚನ್ನಕೇಶವ ಸೇಂಟ್ ಜೋಸೆಫ್ಸ್ ಯೂನಿವರ್ಸಿಟಿಯಲ್ಲಿ ಫಿಲಂ ಮೇಕಿಂಗ್ ಕೋರ್ಸ್ ಮುಗಿಸಿಕೊಂಡಿರುವವರು. ಅವರಿಲ್ಲಿ ಸಮಾಜಮುಖಿ ಕಥನವೊಂದಕ್ಕೆ ಕಮರ್ಶಿಯಲ್ ಧಾಟಿಯಲ್ಲಿ ದೃಷ್ಯ ರೂಪ ನೀಡಿದ್ದಾರೆ.
ಇನ್ನುಳಿದಂತೆ ದೂಡಿ ಎಂಬ ತಮಿಳು ಚಿತ್ರ, ಕನ್ನಡದ ಗರುಡ ಪುರಾಣ ಮುಂತಾದ ಸಿನಿಮಾಗಳಿಗೆ ಕೆಲಸ ಮಾಡಿದ್ದ ಸುನೀಲ್ ನರಸಿಂಹಮೂರ್ತಿ ಛಾಯಾಗ್ರಾಹಕರಾಗಿ ಈ ಚಿತ್ರ ಭಾಗವಾಗಿದ್ದಾರೆ. ಜಿ.ವಿ ಪ್ರಕಾಶ್, ವಿದ್ಯಾಸಾಗರ್ ಜೊತೆ ಪ್ರೋಗ್ರಾಮರ್ ಆಗಿದ್ದ ಕೆ.ಸಿ ಬಾಲಸಾರಂಗನ್ ಸಂಗೀತ ನಿರ್ದೇಶನ ಮಾಡಿದ್ದಾರೆ.
ನವ ಪ್ರತಿಭೆ ವಿಘ್ನೇಶ್ ಹಿನ್ನೆಲೆ ಸಂಗೀತ ನೀಡಿದ್ದಾರೆ. ಮಹೇಂದ್ರ ಗೌಡ ಸಂಭಾಷಣೆ ಮತ್ತು, ಸಾಹಿತ್ಯದ ಜವಾಬ್ದಾರಿ ನಿಭಾಯಿಸಿದ್ದಾರೆ. ಇವರು ಬರೆದಿರುವ ಎರಡು ಹಾಡುಗಳು ಈಗಾಗಲೇ ಬಿಡುಗಡೆಗೊಂಡು ಕೇಳುಗರ ಮೆಚ್ಚುಗೆ ಪಡೆದುಕೊಂಡಿವೆ. ಇನ್ನುಳಿದ ಮತ್ತೊಂದು ಹಾಡು ಇಷ್ಟರಲ್ಲಿಯೇ ಬಿಡುಗಡೆಗೊಳ್ಳಲಿದೆ. ಅದರ ಬೆನ್ನಲ್ಲಿಯೇ ಅಂಶು ಚಿತ್ರ ಪ್ರೇಕ್ಷಕರ ಮುಂದೆ ಬರಲಿದೆ.