ಮುಖವಾಡದ ರಹಸ್ಯ..’ಅಪಾಯವಿದೆ ಎಚ್ಚರಿಕೆ’ (ಚಿತ್ರವಿಮರ್ಶೆ-ರೇಟಿಂಗ್ : 3.5 /5)
ರೇಟಿಂಗ್ : 3.5 /5
ಚಿತ್ರ : ಅಪಾಯವಿದೆ ಎಚ್ಚರಿಕೆ
ನಿರ್ದೇಶಕ : ಅಭಿಜಿತ್ ತೀರ್ಥಹಳ್ಳಿ
ನಿರ್ಮಾಪಕರು : ವಿ.ಜಿ. ಮಂಜುನಾಥ್ , ಪೂರ್ಣಿಮ. ಎಂ. ಗೌಡ
ಸಂಗೀತ : ಸುನಾದ್ ಗೌತಮ್
ಛಾಯಾಗ್ರಹಣ : ಸುನಾದ್
ತಾರಾಗಣ : ವಿಕಾಶ್ ಉತ್ತಯ್ಯ , ರಾಧಾ ಭಗವತಿ, ರಾಘವ್ ಕೊಡಚಾದ್ರಿ, ಮಿಥುನ್ ತೀರ್ಥಹಳ್ಳಿ , ಅಶ್ವಿನ್ ಹಾಸನ್ , ಹರಿಣಿ ಶ್ರೀಕಾಂತ್, ಲಂಕೇಶ್ ರಾವಣ, ಕುಮಾರ್ ಶಿವಮೊಗ್ಗ ಹಾಗೂ ಮುಂತಾದವರು…
ಬಹುತೇಕ ಸಸ್ಪೆನ್ಸ್ , ಥ್ರಿಲ್ಲರ್ , ಹಾರರ್ ಚಿತ್ರಗಳು ಪ್ರೇಕ್ಷಕರನ್ನ ಸೆಳೆಯುವುದರಲ್ಲಿ ಮುಂಚೂಣಿಯಲ್ಲಿ ಇರುತ್ತದೆ. ಅಂತದ್ದೇ ಒಂದು ನಿಗೂಢ ಕಥಾನಕದೊಳಗೆ ಕೆಲಸವಿಲ್ಲದೆ ಪರದಾಡುವ ಮೂರು ಗೆಳೆಯರು ಬದುಕಿಗಾಗಿ ಹಣ ಸಂಪಾದನೆ ಮಾಡಲು ಹುಡುಕುವ ದಾರಿಯಲ್ಲಿ ಎದುರಾಗುವ ಅಗೋರಿ ಗುಡ್ಡದ ರೋಚಕ ತಿರುವುಗಳ ಸುತ್ತ ಬೆಸೆದುಕೊಂಡುದು ಈ ವಾರ ಪ್ರೇಕ್ಷಕರ ಮುಂದೆ ಬಂದಿರುವಂತಹ ಚಿತ್ರ “ಅಪಾಯವಿದೆ ಎಚ್ಚರಿಕೆ”.
ಸೂರಿ (ವಿಕಾಸ ಉತ್ತಯ್ಯ) , ಗಾಬರಿ (ಮಿಥುನ್ ತೀರ್ಥಹಳ್ಳಿ ) ಹಾಗೂ ಪೆಟ್ಟಿಗೆ (ರಾಘವ್ ಕೊಡಚಾದ್ರಿ) ಈ ಮೂವರ ಗೆಳೆಯರಿಗೂ ಕೆಲಸವಿಲ್ಲ , ಆದರೆ ಕುಡಿಯೋಕೆ ಹಣ ಹೊಂದಿಸುವುದರಲ್ಲಿ ಸಮರ್ಥರು. ಈ ಮೂವರು ಪೂಜಾರಿ ಮನೆಯಲ್ಲಿ ಬಾಡಿಗೆಗೆ ಇದ್ದುಕೊಂಡೆ ಕದ್ದು ಮುಚ್ಚಿ ಓಡಾಡುತ್ತಾರೆ.
ಬಾಡಿಗೆ ಕೊಡಲಾಗದಿದ್ದರು ಪೂಜಾರಿ ಮಗಳ ರಾಧಾ (ರಾಧಾ ಭಗವತಿ) ಯನ್ನು ಪ್ರೀತಿಸುವ ಸೂರಿ. ತೀರ್ಥಳ್ಳಿಯ ಸುಂದರ ಪರಿಸರದ ನಡುವೆ ವಾಸವಿರುವ ಈ ಗೆಳೆಯರು ಹಣದ ಅವಶ್ಯಕತೆಗಾಗಿ ನಾನಾ ರೀತಿಯ ಕೆಲಸಕ್ಕೆ ಕೈ ಹಾಕುತ್ತಾರೆ. ಊರಿನ ಸಮಾಜ ಸೇವಕ ಶ್ರೀಪಾದ (ಅಶ್ವಿನ್ ಹಾಸನ್) ಮೂಲಕ ಕೆಲಸಕ್ಕಾಗಿ ಸಹಾಯ ಪಡೆಯುತ್ತಾರೆ.
ನಂತರ ಯಾವುದು ಬೇಡ ಎನ್ನುತ್ತಾ ಡಾನ್ ಆಂಟೊನಿ ಜೊತೆ ಕೈಜೋಡಿಸಲು ನಿರ್ಧರಿಸಿ ಎರಡು ತಲೆ ಹಾವು , ಗಂಧದ ಮರ , ರೈಸ್ ಪುಲ್ಲರ್ ಗಾಗಿ ಕಳ್ಳತನದ ಕೆಲಸಕ್ಕೆ ಮುಂದಾಗುತ್ತಾರೆ. ಕೋಟೆ ಬೆಟ್ಟದೊಳಗೆ ನಗುವ ಈ ಮೂವರು ಅಗೋರಿ ಗುಡ್ಡದ ರಣ ಪ್ರೇತ ಸ್ಥಳಕ್ಕೆ ಬರುತ್ತಾರೆ. ಅಲ್ಲಿಂದ ಒಂದೊಂದೇ ಚಿತ್ರ- ವಿಚಿತ್ರ ಅನುಭವಗಳು ಕಾಡುತ್ತಾ ಹೋಗುತ್ತದೆ.
ಈ ಪಯಣದ ಹಿಂದೆ ಒಂದು ರೋಚಕ ಫ್ಲಾಶ್ ಬ್ಯಾಕ್ ಕಥೆ ತೆರೆದುಕೊಳ್ಳುತ್ತದೆ. ಈ ರಣ ಪ್ರೇತ ಸ್ಥಳದ ಹಿಂದಿರುವ ಸತ್ಯಗಳನ್ನು ತಿಳಿದುಕೊಳ್ಳಲು ಮುಂದಾಗುವದಾಗುವ ಗೆಳೆಯರಿಗೆ ಒಂದು ರೋಚಕ ಸತ್ಯ ತಿಳಿಯುತ್ತದೆ. ಅದು ಏನು… ಪ್ರೇತ ಇದಿಯಾ… ಪವಾಡ ನಡೆಯುತ್ತಾ…
ಮೂವರ ಸ್ಥಿತಿಗತಿ ಏನು…
ರಮೇಶ್ ಉತ್ತರ… ಇದೆಲ್ಲದರ ಸಂಪೂರ್ಣ ಮಾಹಿತಿಗಾಗಿ ಒಮ್ಮೆ ಈ ಚಿತ್ರವನ್ನು ನೋಡಬೇಕು.
ಜೀವನದಲ್ಲಿ ಬಡತನ , ಕಷ್ಟ , ನೋವು ಮನುಷ್ಯನ ಮನಸ್ಥಿತಿ , ಆಲೋಚನೆಯನ್ನು ಬಹುಬೇಗ ಬದಲಿಸುತ್ತದೆ ಎಂಬ ವಿಚಾರವನ್ನು ಅಚ್ಚುಗಟ್ಟಾಗಿ ತೆರೆ ಮೇಲೆ ತರುವ ಪ್ರಯತ್ನ ಮಾಡಿದ್ದಾರೆ ನಿರ್ದೇಶಕ. ನಿಗೂಢತೆಯ ಜೊತೆಗೆ ಮೈ ಜುಮ್ ಎನ್ನುವಂತಹ ಸನ್ನಿವೇಶಗಳನ್ನು ಕಟ್ಟಿಕೊಡುವುದರ ಜೊತೆಗೆ ಪ್ರೀತಿಯ ಸೆಳೆತವನ್ನು ತುಂಬಿದ್ದು, ಚಿತ್ರಕಥೆ ಇನ್ನಷ್ಟು ವೇಗ ಮಾಡಬೇಕಿತ್ತು, ಮೊದಲ ಭಾಗಕ್ಕಿಂತ ದ್ವಿತೀಯ ಭಾಗ ಗಮನ ಸೆಳೆಯುತ್ತದೆ.
ಇಂತಹ ಕುತೂಹಲಭರಿತ ಚಿತ್ರವನ್ನು ನಿರ್ಮಾಣ ಮಾಡಿರುವ ನಿರ್ಮಾಪಕರ ಸಾಹಸವು ಕೂಡ ಮೆಚ್ಚಲೇಬೇಕು. ಇನ್ನು ಹೈಲೈಟ್ ಎಂದರೆ ಛಾಯಾಗ್ರಾಹಕರ ಕೈಚಳಕ ಹಾಗೂ ಹಿನ್ನೆಲೆ ಸಂಗೀತದ ಅಬ್ಬರ. ತಾಂತ್ರಿಕವಾಗಿ ತಂಡ ಬಹಳಷ್ಟು ಶ್ರಮ ಪಟ್ಟಿದೆ. ಪ್ರಮುಖ ಪಾತ್ರದಲ್ಲಿ ಅಭಿನಯಿಸಿರುವ ವಿಕಾಶ್ ಉತ್ತಯ್ಯ , ರಾಘವ್ ಕೊಡಚಾದ್ರಿ, ಮಿಥುನ್ ತೀರ್ಥಹಳ್ಳಿ ತಮ್ಮ ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದು, ಮುಂದೆ ಉತ್ತಮ ಕಲಾವಿದರಾಗಿ ಮಿಂಚುವ ಎಲ್ಲಾ ಲಕ್ಷಣಗಳು ಕಾಣುತ್ತಿದೆ. ಇನ್ನು ನಾಯಕಿಯಾಗಿ ಅಭಿನಯಿಸಿರುವ ರಾಧಾ ಭಗವತಿ ಸಿಕ್ಕ ಅವಕಾಶವನ್ನ ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ.
ಇನ್ನು ನಿರ್ದೇಶಕ ಅಭಿಜಿತ್ ತೀರ್ಥಹಳ್ಳಿ ತಮ್ಮ ಆಕ್ಟಿಂಗ್ ಟ್ಯಾಲೆಂಟ್ ಏನು ಅನ್ನೋದನ್ನ ಹೇಳುವುದರ ಜೊತೆಗೆ ಕುಡುಕನಾಗಿ ಡೈಲಾಗ್ ಡೆಲಿವರಿ ಮೂಲಕ ಪಾತ್ರಕ್ಕೆ ಜೀವ ತುಂಬಿದ್ದಾರೆ. ಇನ್ನು ಇಡೀ ಚಿತ್ರದ ಹೈಲೈಟ್ ಪಾತ್ರದಲ್ಲಿ ಅಶ್ವಿನ್ ಹಾಸನ್ ಮಿಂಚಿದ್ದು , ತಮ್ಮ ಸಾಮರ್ಥ್ಯದ ಶಕ್ತಿಯನ್ನು ಪ್ರದರ್ಶಿಸಿದ್ದಾರೆ. ಖಡಕ್ ಲುಕ್ ನಲ್ಲಿ ಲಂಕೇಶ್ ರಾವಣ ಕಾಣಿಸಿಕೊಂಡಿದ್ದು , ಉಳಿದಂತೆ ಅಭಿನಯಿಸಿರುವ ಎಲ್ಲಾ ಪಾತ್ರಗಳು ಚಿತ್ರದ ಓಟಕ್ಕೆ ಉತ್ತಮ ಸಾಥ್ ನೀಡಿದೆ. ಸಸ್ಪೆನ್ಸ್ , ಥ್ರಿಲ್ಲರ್ ಸಿನಿಮಾ ಪ್ರಿಯರಿಗೆ ಇಷ್ಟವಾಗುವ ಈ ಚಿತ್ರದಲ್ಲಿ ಹಾರರ್ ಟಚ್ ಇದ್ದು , ಧೈರ್ವಂತರು ಸೇರಿದಂತೆ ಎಲ್ಲರೂ ಒಮ್ಮೆ ಈ ಚಿತ್ರವನ್ನು ನೋಡಬಹುದು.