ಅನೈತಿಕತೆಗೆ ಪ್ರತ್ಯುತ್ತರ… ಆಪಲ್ ಕಟ್ (ಚಿತ್ರವಿಮರ್ಶೆ-ರೇಟಿಂಗ್ : 3/5)
ರೇಟಿಂಗ್ : 3/5
ಚಿತ್ರ : ಆಪಲ್ ಕಟ್
ನಿರ್ದೇಶಕಿ : ಸಿಂಧುಗೌಡ
ನಿರ್ಮಾಪಕಿ : ಶಿಲ್ಪ ಪ್ರಸನ್ನ
ಸಂಗೀತ : ವೀರ ಸಮರ್ಥ್
ಛಾಯಾಗ್ರಹಣ : ರಾಜೇಶ್
ತಾರಾಗಣ : ಸೂರ್ಯ ಗೌಡ , ಅಶ್ವಿನಿ ಪೋಲಿಫಲಿ , ಬಾಲ ರಾಜವಾಡಿ , ಸಂತೋಷ್ , ಅಮೃತ ಪವರ್ , ಮೀನಾಕ್ಷಿ , ಅಪ್ಪಣ್ಣ ಹಾಗೂ ಮುಂತಾದವರು…
ಸಾಮಾನ್ಯವಾಗಿ ಸಸ್ಪೆನ್ಸ್ , ಥ್ರಿಲ್ಲರ್ ಚಿತ್ರಗಳು ಪ್ರೇಕ್ಷಕರನ್ನ ಸೆಳೆಯುವುದರಲ್ಲಿ ಮುಂದೆ ಎನ್ನಬಹುದು. ಅಂತದ್ದೇ ಒಂದು ಸಸ್ಪೆನ್ಸ್ ಹಿನ್ನಲೆಯಲ್ಲಿ ನಿಗೂಢ ರೀತಿಯಲ್ಲಿ ಮಹಿಳೆಯರ ಸಾವಿನ ಹಿಂದಿರುವ ಒಂದು ಕರಾಳ ಸತ್ಯದ ರಹಸ್ಯ ಅಡಗಿದ್ದು, ಒಂದು ವಿಷಕಾರಿ ವಸ್ತು ಬಳಕೆಯ ರೂಪದಲ್ಲಿ ಏನೆಲ್ಲ ಮಾಡುತ್ತೆ ಎಂಬುದನ್ನು ಬಹಳ ಕುತೂಹಲಕಾರಿಯಾಗಿ ತೆರೆಯ ಮೇಲೆ ತೋರುವ ಪ್ರಯತ್ನವಾಗಿ ಈ ವಾರ ಬಂದಿರುವಂತಹ ಚಿತ್ರ “ಆಪಲ್ ಕಟ್”.
ನಾಲ್ವರು ಗೆಳೆಯ ಗೆಳತಿಯರಾದ ಸತ್ಯ (ಸೂರ್ಯ ಗೌಡ) , ಆರಾಧ್ಯ (ಅಶ್ವಿನಿ), ಜಾನ್ವಿ (ಅಮೃತಾ) ಹಾಗೂ ರಾಹುಲ್ (ಅಪ್ಪಣ್ಣ). ಒಂದು ಭವ್ಯ ಬಂಗಲೆಯಲ್ಲಿ ವಾಸ ಮಾಡುವ ಇವರು ಅಂತ್ರೋಪೋಲಜಿ ವಿದ್ಯಾರ್ಥಿಯಾಗಿದ್ದು , ಫಾರೆನ್ಸಿಕ್ ಟೀಮ್ ನಲ್ಲಿ ಸತ್ತ ವ್ಯಕ್ತಿಗಳ ಅಂಗಾಂಗಗಳ ಬಗ್ಗೆ ಬಗ್ಗೆ ರಿಸರ್ಚ್ ಮಾಡುತ್ತಿರುತ್ತಾರೆ. ಇನ್ನು ಈ ತಂಡದ ಪ್ರೊಫೆಸರ್ ಆಗಿ ಸತ್ಯ ಗೈಡ್ ಮಾಡುತ್ತಿರುತ್ತಾನೆ.
ನಡೆ , ವ್ಯಕ್ತಿತ್ವ , ಸಂಪ್ರದಾಯದ ಬಗ್ಗೆ ಹೆಚ್ಚು ಗಮನ ಕೊಡುವ ಸತ್ಯನನ್ನ ಪ್ರೀತಿಸುವ ಗೆಳತಿ ಗೆಳತಿ ಆರಾಧ್ಯ. ಹಾಗೆಯೇ ಸ್ನೇಹಿತ ರಾಹುಲ್ ಕೂಡ ಗೆಳೆಯನಿಗೆ ಸಾತ್ . ಆದರೆ ರಾಹುಲ್ ಪ್ರೇಯಸಿ ಜಾನವಿ ಮಾತ್ರ ತದ್ವಿರುದ್ಧ. ಇದ್ದಷ್ಟು ದಿನ ಜೀವನವನ್ನು ಎಂಜಾಯ್ ಮಾಡುವುದೇ ಅವಳ ಆಸೆ. ಇದರ ನಡುವೆ ಮಣ್ಣಲ್ಲಿ ಹೂತ್ತಿರುವ ಕಾವ್ಯ ಮೃತ ದೇಹ ಪರೀಕ್ಷೆಗೆ ಮುಂದಾಗುವ ಇನ್ಸ್ಪೆಕ್ಟರ್ ಸಂಪತ್ (ಬಾಲ ರಾಜವಾಡಿ) ಹಾಗೂ ತಂಡ ಈ ಸಾವಿನ ಕಾರ್ಯಾಚರಣೆಗೆ ಮುಂದಾಗುತ್ತಾರೆ. ಮುಂದೆ ಗೆಳೆಯರ ಪಾರ್ಟಿ ಸಮಯದಲ್ಲಿ ಜಾನವಿ ಬಾಯಿಂದ ರಕ್ತ ಕಾರಿ ಸತ್ತಿರುತ್ತಾಳೆ.
ಹೀಗೆ ಸತ್ತ ವ್ಯಕ್ತಿಗಳ ಬಾಯಿಗೆ ಲಿಪ್ಸ್ಟಿಕ್ ಇರುವುದೇ ಒಂದು ಸಂಶಯಕ್ಕೆ ಕಾರಣವಾಗುತ್ತದೆ. ಒಂದು ಕಡೆ ತನಿಖೆ ಆದರೆ… ಮತ್ತೊಂದ ಕಡೆ ಸಾವಿನ ಸರಮಾಲೆ… ಇದರ ಹಿಂದೆ ತಿನ್ನುವ ಆಪಲ್ ಅದರ ಬೀಜ ಹಾಗೂ ಲಿಪ್ಸ್ಟಿಕ್ ಕೂಡ ಪ್ರಮುಖ ಪಾತ್ರವನ್ನು ನಿರ್ವಹಿಸಿದೆ. ಇದೆಲ್ಲದಕ್ಕೂ ಅನೈತಿಕ ಸಂಬಂಧದ ಗುಟ್ಟು ಪ್ರಮುಖ ಕಾರಣವಾಗಿ ರೋಚಕ ತಿರುವಿನತ್ತ ಸಾಗುತ್ತದೆ. ಏನು ಇದರ ಗುಟ್ಟು… ಆಪಲ್ ಕಟ್ ಯಾಕೆ… ಲಿಪ್ಸ್ಟಿಕ್ ಹಾಗೂ ಕೊಲೆಗೆ ಏನು ಸಂಬಂಧ… ಇದಕ್ಕೆಲ್ಲ ಉತ್ತರ ಈ ಚಿತ್ರವನ್ನು ನೋಡಬೇಕು.
ಮಹಿಳಾ ನಿರ್ದೇಶಕಿ ಸಿಂಧು ಗೌಡ ಆಯ್ಕೆ ಮಾಡಿಕೊಂಡಿರುವ ಕಥಾವಸ್ತು ಕುತೂಹಲಕಾರಿಯಾಗಿದ್ದು, ಈ ರೀತಿಯ ವಿಷಕಾರಿಯನ್ನ ಉಪಯೋಗಿಸುವ ವಸ್ತುವಿನೊಂದಿಗೆ ಮೆಡಿಕಲ್ ಟರ್ಮ್ಸ್ ಮೂಲಕ ಬಳಸುವ ರೀತಿ ಗಮನ ಸೆಳೆಯುತ್ತದೆ.
ಸ್ನೇಹ , ಪ್ರೀತಿ , ವಿಶ್ವಾಸ ಸಂಬಂಧಕ್ಕಿರುವ ವ್ಯತ್ಯಾಸಗಳ ಬಗ್ಗೆ ಜಾಗೃತಿ ಮೂಡಿಸುವ ಜೊತೆಗೆ ಅನೈತಿಕ ಸಂಬಂಧ ಎಷ್ಟು ಅಪಾಯ ಹಾಗೂ ಹೆಣ್ಣು ಹೇಗೆ ಸೂಕ್ಷ್ಮವಾಗಿ ಬದುಕನ್ನ ನಡೆಸಬೇಕು ಎಂದು ತೋರಿಸಿದ್ದಾರೆ. ಮೊದಲ ಪ್ರಯತ್ನದಲ್ಲಿ ಉತ್ತಮ ಶ್ರಮ ಪಟ್ಟಿದ್ದು , ಇನ್ನಷ್ಟು ಹೋಂವರ್ಕ್ ಅಗತ್ಯ ಎನಿಸುತ್ತದೆ. ಇವರಿಗೆ ಸಾತ್ ಕೊಟ್ಟಿರುವ ಮಹಿಳಾ ನಿರ್ಮಾಪಕಿ ಶಿಲ್ಪ ಪ್ರಸನ್ನ ಧೈರ್ಯವನ್ನು ಕೂಡ ಮೆಚ್ಚಲೇಬೇಕು.
ಇನ್ನು ಛಾಯಾಗ್ರಹಣ , ಸಂಗೀತ , ಸಂಕಲನ ತಕ್ಕಮಟ್ಟಿಗೆದೆ. ಇನ್ನು ನಟ ಸೂರ್ಯ ಗೌಡ ಸಿಖ್ ಅವಕಾಶಕ್ಕೆ ನ್ಯಾಯ ಒದಗಿಸುವ ಪ್ರಯತ್ನ ಮಾಡಿದ್ದಾರೆ. ನಟಿಯರಾದ ಅಶ್ವಿನಿ , ಅಮೃತಾ ತಮ್ಮ ಪಾತ್ರಕ್ಕೆ ಜೀವ ತುಂಬಿದ್ದು , ಅಪ್ಪಣ್ಣ ಪಾತ್ರವನ್ನು ಸಮರ್ಥವಾಗಿ ನಿರ್ವಹಿಸಿದ್ದಾರೆ. ಪೊಲೀಸ್ ಇನ್ಸ್ಪೆಕ್ಟರ್ ಪಾತ್ರದಲ್ಲಿ ಬಾಲ ರಾಜವಾಡಿ ಗಮನ ಸೆಳೆದಿದ್ದು , ಪೊಲೀಸ್ ಅಧಿಕಾರಿಗಳ ನಡುವಳಿಕೆಯನ್ನ ಹಾಸ್ಯಸ್ಪದವಾಗಿ ತೋರಿಸುವ ಅಗತ್ಯ ಇಲ್ಲ ಅನಿಸುತ್ತದೆ. ಉಳಿದಂತೆ ಅಭಿನಯಿಸಿರುವ ಸಂತೋಷ , ಮೀನಾಕ್ಷಿ ಹಾಗೂ ಎಲ್ಲಾ ಪಾತ್ರದಾರಿಗಳು ಚಿತ್ರದ ಓಟಕ್ಕೆ ಸಾತ್ ನೀಡಿದ್ದಾರೆ. ಸಸ್ಪೆನ್ಸ್ , ಥ್ರಿಲ್ಲರ್ ಪ್ರಿಯರಿಗೆ ಇಷ್ಟವಾಗುವ ಈ ಚಿತ್ರ ಒಮ್ಮೆ ನೋಡಬಹುದು.