ಲವ್ , ಕಾಮಿಡಿ , ಫ್ಯಾಮಿಲಿ ಎಂಟರ್ಟೈನರ್ : ‘ಆರಾಮ್ ಅರವಿಂದ ಸ್ವಾಮಿ’ ಚಿತ್ರವಿಮರ್ಶೆ (ರೇಟಿಂಗ್ : 3.5/5)
ರೇಟಿಂಗ್ : 3.5/5
ಚಿತ್ರ : ಆರಾಮ್ ಅರವಿಂದ ಸ್ವಾಮಿ
ನಿರ್ದೇಶಕ : ಅಭಿಷೇಕ್ ಶೆಟ್ಟಿ
ನಿರ್ಮಾಪಕರು : ಶ್ರೀಕಾಂತ್ ಪ್ರಸನ್ನ , ಪ್ರಶಾಂತ್ ರೆಡ್ಡಿ
ಸಂಗೀತ: ಅರ್ಜುನ್ ಜನ್ಯ
ಛಾಯಾಗ್ರಹಣ : ಶಿವ ಸಾಗರ್
ತಾರಾಗಣ : ಅನೀಶ್ ತೇಜೇಶ್ವರ್, ಮಿಲನಾ ನಾಗರಾಜ್, ಹೃತಿಕಾ
ಶ್ರೀನಿವಾಸ್ , ಅಚ್ಚುತ್ ಕುಮಾರ್ , ಮಂಜುನಾಥ್ ಹೆಗಡೆ , ಗೌರವ್ ಶೆಟ್ಟಿ , ಆರ್ ಜೆ ವಿಕ್ಕಿ ಹಾಗೂ ಮುಂತಾದವರು…
ಪ್ರೀತಿ , ಬದುಕು , ಸಂಬಂಧ ಎಲ್ಲವೂ ಒಂದಕ್ಕೊಂದು ಕೊಂಡಿಯಂತೆ ಸಾಗಿದರು, ನಾವು ಬಯಸಿದ್ದೆ ನಡೆಯುತ್ತೆ ಎಂಬ ನಿರ್ಧಾರ ಯಾರು ಮಾಡುವುದಕ್ಕೆ ಆಗುವುದಿಲ್ಲ.
ಅಂತಹ ಹಲವು ಅಂಶಗಳನ್ನು ಬೆಸೆದುಕೊಂಡು ಗೆಳೆಯ , ಗೆಳತಿ , ತುಂಟಾಟ , ತರಲೇ , ಹಾಸ್ಯ , ಪ್ರೀತಿ , ಸಂಬಂಧದ ಸುತ್ತ ಬದುಕು ತೋರುವ ದಾರಿ ಏನು ಎಂಬುದನ್ನು ಈ ವಾರ ತೆರೆಯ ಮೇಲೆ ತಂದಿರುವಂತಹ ಚಿತ್ರ “ಆರಾಮ್ ಅರವಿಂದ ಸ್ವಾಮಿ”.
ಸಿಟಿಯಲ್ಲಿ ಬೈಕ್ ಸೀಸಿಂಗ್ ಕೆಲಸ ಮಾಡುತ್ತಾ ಗೆಳೆಯರೊಟ್ಟಿಗೆ ತರ್ಲೆ , ಪಾರ್ಟಿ ಮಾಡಿಕೊಂದಿರುವ ಅರವಿಂದ ಸ್ವಾಮಿ (ಅನೀಶ್ ತೇಜೇಶ್ವರ್) ತನ್ನ ಪ್ರೀತಿಯ ಗೆಳತಿ ಸ್ಕೂಲ್ ಟೀಚರ್ ಗೀತಾ (ಮಿಲನ ನಾಗರಾಜ್) ಜೊತೆ ನಾನು ಶ್ರೀಮಂತ ಎಂದು ಸುಳ್ಳು ಹೇಳಿಕೊಂಡು ಸುಮಾರು ಆರು ವರ್ಷಗಳಿಂದ ಸುತ್ತಾಟ ಮಾಡಿಕೊಂಡಿರುತ್ತಾನೆ.
ಇದರ ನಡುವೆ ಆರಾಮಾಗಿ ಸಮಯ ಕಳೆಯಲು ತನ್ನ ಊರಿಗೆ ಬರುವ ಅರವಿಂದ್ ಗೆ ತಂದೆ ಆಣೆ ಅಣ್ಣಪ್ಪ (ಮಂಜುನಾಥ ಹೆಗಡೆ) ಹಾಗೂ ಹೆಂಡತಿ , ತಾಯಿ ಆಸೆಯಂತೆ ಮಗನ ಮದುವೆಗೆ ನಿರ್ಧಾರ ಮಾಡಿ ಅದರಂತೆ ತಾನು ಕಾರ್ ಡ್ರೈವರ್ ಆಗಿ ಕೆಲಸ ಮಾಡುವ ಪ್ರಕಾಶಣ್ಣ (ಅಚ್ಯುತ್ ಕುಮಾರ್) ಮಗಳು ಅಂಗವಿಕಲೆ ಲಕ್ಷ್ಮಿ (ಹೃತಿಕಾ ಶ್ರೀನಿವಾಸ್) ಜೊತೆ ವಿವಾಹ ಮಾಡಿಸಲು ಮಾತು ಕೊಟ್ಟಿರುತ್ತಾನೆ.
ಇದಕ್ಕೊಂದು ದೊಡ್ಡ ಪ್ಲಾನ್ ನಡೆಯುತ್ತದೆ. ಅದು ಹಲವು ಎಡವಟ್ಟುಗಳಿಗೆ ದಾರಿ ಮಾಡಿ ಕುತೂಹಲ ಹಂತಕ್ಕೆ ಬಂದು ನಿಲ್ಲುತ್ತದೆ.
ಆರಾಮ್ ಅರವಿಂದ ಸ್ವಾಮಿ ಮದುವೆ ಆಗೋದು ಯಾರನ್ನ… ಪ್ರೀತಿ ಏನಾಗುತ್ತದೆ… ಪ್ಲಾನ್ ಮಾಡಿದವರು ಯಾರು… ಕ್ಲೈಮಾಕ್ಸ್ ನಿಲುವು ಏನು… ಎಂಬುದನ್ನು ತಿಳಿಯಬೇಕಾದರೆ ಒಮ್ಮೆ ನೀವೆಲ್ಲರೂ ಈ ಚಿತ್ರವನ್ನು ನೋಡಬೇಕು.
ನಿರ್ದೇಶಕ ಅಭಿಷೇಕ್ ಶೆಟ್ಟಿ ಮನೋರಂಜನಾತ್ಮಕ ಅಂಶಗಳ ಮೂಲಕ ಜನರನ್ನ ಸೆಳೆಯುವ ಪ್ರಯತ್ನವನ್ನು ಅಚ್ಚುಕಟ್ಟಾಗಿ ಮಾಡಿದ್ದಾರೆ. ಪ್ರೀತಿ , ಹಾಸ್ಯ , ಗೆಳೆತನ , ಸಂಬಂಧದ ಬೆಸುಗೆ ಜೊತೆ ಕೌಟುಂಬಿಕ ಹಿನ್ನೆಲೆಯನ್ನು ಸಮರ್ಥವಾಗಿ ನಿರ್ವಹಿಸಿದ್ದು, ಚಿತ್ರಕಥೆ ಇನ್ನಷ್ಟು ವೇಗ ಮಾಡಬಹುದಿತ್ತು.
ದ್ವಿತೀಯ ಭಾಗ ಹೆಚ್ಚು ಆಕರ್ಷಕವಾಗಿದೆ. ಮೇಲ್ನೋಟಕ್ಕೆ ಇದೊಂದು ಪ್ರೇಮಕಥೆಯೆಂದು ಎನಿಸಿದರೂ , ಹೊಟ್ಟೆ ಹುಣ್ಣಾಗಿಸುವ ಕಾಮಿಡಿ, ಪಂಚ್ ಡೈಲಾಗ್ , ಎನರ್ಜಿ ಕೊಡೋ ಡಾನ್ಸ್, ಫೈಟ್ಸ್ , ಬದುಕು, ಬವಣೆಯ ಜೊತೆಗೆ ಇಡೀ ಕಥೆಯನ್ನು ನಿರೂಪಿಸಿಕೊಂಡು ಹೋಗಿರುವ ಶೈಲಿ ಕುತೂಹಲ ಕೆರಳಿಸುತ್ತದೆ. ಇನ್ನು ಸಂಗೀತ ಉತ್ತಮವಾಗಿದ್ದು , ಛಾಯಾಗ್ರಾಹಕರ ಕೈಚಳಕ ಸೊಗಸಾಗಿ ಮೂಡಿಬಂದಿದೆ. ತಾಂತ್ರಿಕವಾಗಿ ತಂಡವು ಶ್ರಮ ಪಟ್ಟಿರುವುದು ಕಾಣುತ್ತದೆ.
ನಾಯಕನಾಗಿ ಅಭಿನಯಿಸಿರುವ ಅನೀಶ್ ತೇಜೇಶ್ವರ್ ಚಿತ್ರದ ಕೇಂದ್ರ ಬಿಂದುವಾಗಿ ಪಾತ್ರಕ್ಕೆ ಜೀವ ತುಂಬಿ ಅಭಿನಯಿಸಿದ್ದಾರೆ. ಒಬ್ಬ ಲವರ್ ಬಾಯ್ ಆಗಿ ಪರದಾಡುವ ಸ್ಥಿತಿ , ತಂದೆ ತಾಯಿ ಜೊತೆ ನಡೆದುಕೊಳ್ಳುವ ಪರಿ, ಹಾಸ್ಯದ ಟೈಮಿಂಗ್ , ಮಾತಿನ ಶೈಲಿ , ಚಾಲೆಂಜ್ ಎದುರಿಸುವ ರೀತಿ ಎಲ್ಲವೂ ಸೊಗಸಾಗಿದ್ದು , ಇದೊಂದು ಯೂಥ್ ಕ್ರೇಜ್, ಹೆಚ್ಚೇ ಆಟಿಟ್ಯೂಡ್ ಹೊಂದಿರುವ ಯುವಕನಾಗಿ ಮಿಂಚಿದ್ದಾರೆ.
ನಾಯಕಿ ಮಿಲನಾ ನಾಗರಾಜ್ ಶಿಕ್ಷಕಿ ಪಾತ್ರದ ಜೊತೆ ಪ್ರೇಯಸಿಯಾಗಿ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಇನ್ನು ಮತ್ತೊಬ್ಬ ನಟಿ ಹೃತಿಕಾ ಶ್ರೀನಿವಾಸ್ ಮಾತು ಬಾರದ ಅಂಗವಿಕಲೆಯಾಗಿ ಬಹಳ ಮುದ್ದಾಗಿ ತನ್ನ ಪಾತ್ರವನ್ನು ನಿರ್ವಹಿಸಿದ್ದಾರೆ. ಉಳಿದಂತೆ ಎಲ್ಲಾ ಪಾತ್ರಧಾರಿಗಳು ಅಚ್ಚುಕಟ್ಟಾಗಿ ಅಭಿನಯಿಸಿದ್ದಾರೆ. ಒಟ್ಟಾರೆ ಮನೋರಂಜನೆಯ ದೃಷ್ಟಿಯಿಂದ ಈ ಚಿತ್ರವನ್ನು ಎಲ್ಲರೂ ಒಮ್ಮೆ ನೋಡುವಂತಿದೆ.