Cini NewsMovie Review

ಯುವ ಮನಸ್ಸುಗಳ ‘ಅರ್ದಂಬರ್ಧ ಪ್ರೇಮಕಥೆ ‘ (ಚಿತ್ರ ವಿಮರ್ಶೆ-ರೇಟಿಂಗ್ : 3.5 /5)

ರೇಟಿಂಗ್ : 3.5 /5
ಚಿತ್ರ: ಅರ್ದಂಬರ್ಧ ಪ್ರೇಮಕಥೆ
ನಿರ್ದೇಶಕ: ಅರವಿಂದ್ ಕೌಶಿಕ್
ನಿರ್ಮಾಪಕ : ಕಾರ್ತಿಕ್ ಗೌಡ
ಸಂಗೀತ : ಅರ್ಜುನ್ ಜನ್ಯ
ಛಾಯಾಗ್ರಹಕ : ಸೂರ್ಯ
ತಾರಾಗಣ : ಅರವಿಂದ್ .ಕೆ.ಪಿ. ,
ದಿವ್ಯಾ ಉರಡುಗ , ರ‍್ಯಾಪರ್ ಅಲೋಕ್, ಶ್ರೇಯಾಬಾಬು, ವೆಂಕಟಶಾಸ್ತ್ರಿ, ಪ್ರದೀಪ್ ರೋಷನ್, ಸೂರಜ್ ಹೂಗಾರ್, ಸುಜಿಶ್ ಶೆಟ್ಟಿ , ಅಭಿಲಾಷ್ ದ್ವಾರಕೀಶ್ ಹಾಗೂ ಮುಂತಾದವರು…

ಸಾಮಾನ್ಯವಾಗಿ ಯುವ ಮನಸುಗಳ ತಳಮಳಗಳನ್ನು ಅರ್ಥ ಮಾಡಿಕೊಳ್ಳುವುದೇ ಬಹಳ ಕಷ್ಟ ಎನ್ನಬಹುದು. ಯಾಕೆಂದರೆ ಅವರ ಆಲೋಚನೆ , ಮಾತು , ಬದುಕುವ ಶೈಲಿ ಎಲ್ಲವೂ ವಿಭಿನ್ನವಾಗಿ ಕಾಣುತ್ತಿರುತ್ತದೆ. ಅದೇ ರೀತಿ ಒಂದು ಮುದ್ದಾದ ಹುಡುಗ ಹಾಗೂ ಸುಂದರವಾದ ಹುಡುಗಿಯ ಮನಸ್ಥಿತಿ , ಅವರ ನೋಟ , ಭೇಟಿ , ಸ್ನೇಹ , ಪಯಣ , ಪ್ರೀತಿ , ನೋವು , ನಲಿವು ಹೀಗೆ ಹಲವು ವಿಚಾರಗಳ ಬೆಸುಗೆಯೊಂದಿಗೆ ಪ್ರೀತಿಸುವ ವ್ಯಕ್ತಿ , ವ್ಯಕ್ತಿತ್ವ ಅದರ ಮಹತ್ವದ ರೂಪವನ್ನು ಮಾತುಕತೆ , ತರ್ಲೆಯ, ತುಂಟಾಟದ ಹಾದಿಯಲ್ಲಿ ತೆರೆಯ ಮೇಲೆ ಈ ವಾರ ತಂದಿರುವಂತಹ ಚಿತ್ರ “ಅರ್ದಂಬರ್ಧ ಪ್ರೇಮಕಥೆ”.

ತನ್ನದೇ ಏನೋ ಆಲೋಚನೆಯೊಂದಿಗಿರುವ ನಾಯಕ(ಅರವಿಂದ್. ಕೆ.ಪಿ). ಜೀವನದಲ್ಲಿ ಖುಷ್ ಖುಷಿಯಾಗಿ ಬದುಕಬೇಕೆಂದು ಆಸೆ ಪಡುತ್ತಾ ಯಾಡ್ ಏಜೆನ್ಸಿಯಲ್ಲಿ ಪ್ರಾಜೆಕ್ಟ್ ವರ್ಕ್ ಕೆಲಸ ಮಾಡುವ ನಾಯಕಿ (ದಿವ್ಯ ಊರುಡುಗ). ಅಚಾನಕ್ಕಾಗಿ ನಾಯಕನನ್ನ ಭೇಟಿಯಾಗುವ ನಾಯಕಿ ತನ್ನ ಕೆಲಸಕ್ಕಾಗಿ ಡ್ರಾಪನ್ನು ಕೇಳುತ್ತಾಳೆ. ಬೈಕಿನ ಮೂಲಕ ನಾಯಕಿ ಹೇಳಿದ ಸ್ಥಳಕ್ಕೆ ಡ್ರಾಪ್ ಮಾಡುವ ನಾಯಕನಿಗೆ ಆಕೆ ಪ್ರೀತಿಸಿದ ಹುಡುಗನಿಂದ ಬ್ರೇಕ್ ಅಪ್ ಆದ ವಿಚಾರ ತಿಳಿಯುತ್ತದೆ. ಮುಂದೆ ಆಕೆಯನ್ನು ಡ್ರಾಪ್ ಮಾಡಲು ಕರೆದುಕೊಂಡು ಹೋಗುವ ಮಾರ್ಗ ಮಧ್ಯ ಇಬ್ಬರಲ್ಲೂ ಸ್ನೇಹ , ವಿಶ್ವಾಸ ಬೆಳೆಯುತ್ತಾ ಕೆಲ ಸಮಯ ಕಾಲ ಕಳೆಯಲು ನಿರ್ಧರಿಸುತ್ತಾರೆ.

ಮುಂದೆ ನಡೆಯುವ ಒಂದಷ್ಟು ಘಟನೆಗಳು ಅವರ ನಡುವಳಿಕೆ , ಮಾತುಕತೆ , ಪ್ರೀತಿಯ ಬಗ್ಗೆ ಅವರಿಗಿರುವ ಅಭಿಪ್ರಾಯಗಳು , ಗೊಂದಲದ ನಡುವೆ ಸಾಗಿದರು ಅವರ ವೈಯಕ್ತಿಕ ಬದುಕಿನ ಬಗ್ಗೆ ಹೇಳಿಕೊಳ್ಳದೆ ನಾಯಕ ಒಂದು ಆಲೋಚನೆ ಮಾಡಿ ನಾಯಕಿಯಿಂದ ದೂರ ಉಳಿಯುತ್ತಾನೆ. ಏನಾಗುತ್ತಿದೆ ಬದುಕಿನಲ್ಲಿ ಎಂದುಕೊಳ್ಳುವ ನಾಯಕಿಯ ಮನಸ್ಸು , ಆಕೆಯ ಕೆಲಸದ ಒತ್ತಡ , ಗೆಳತಿಯ ಸಹಕಾರ, ಪ್ರೇಮಿಯ ಕಾಟ , ಗೆಳೆಯನ ಕಣ್ಮರೆ ಎಲ್ಲವೂ ಅಯೋಮಯ. ನಾವು ಒಂದು ಬಯಸಿದರೆ… ವಿಧಿಯ ಆಟವೇ ಬೇರೆ… ಎನ್ನುವಷ್ಟರಲ್ಲಿ ಬದುಕು ಹಲವು ತಿರುವುಗಳಿಗೆ ನಾಂದಿ ಹಾಡುತ್ತಾ ಹೋಗುತ್ತದೆ. ಅದೇನು ಎಂದು ತಿಳಿಯಬೇಕಾದರೆ ನೀವು ಈ ಅರ್ದಂಬರ್ಧ ಪ್ರೇಮಕಥೆ ಚಿತ್ರ ನೋಡಬೇಕು.


ಇನ್ನು ಈ ಚಿತ್ರವನ್ನು ನಿರ್ದೇಶನ ಮಾಡಿರುವ ಅರವಿಂದ್ ಕೌಶಿಕ್ ಯುವ ಮನಸುಗಳ ಆಲೋಚನೆ , ಪ್ರೀತಿಗೆ ಕೊಡುವ ವ್ಯಾಖ್ಯಾನ , ಮಾತಿನ ಭರಾಟೆ , ಕನ್ಫ್ಯೂಷನ್ ,ಮುನಿಸು, ತರ್ಲೆ, ಉದ್ವೇಗ, ಸ್ವಚ್ಛ ಪ್ರೀತಿಗೆ ಕೊಡುವ ಬೆಲೆಯನ್ನು ವಿಭಿನ್ನ ರೂಪದಲ್ಲಿ ತೆರೆಯ ಮೇಲೆ ತರುವ ಪ್ರಯತ್ನ ಮಾಡಿದ್ದಾರೆ. ಹೊಸತನದ ಕಥೆ ಏನು ಇಲ್ಲದಿದ್ದರೂ, ಚಿತ್ರಕಥೆ ಶೈಲಿ ಗೊಂದಲವೆನಿಸುತ್ತದೆ. ಕಥೆ ಇದ್ದಲ್ಲೇ ಗಿರಿಕಿ ಹೊಡೆದಂತಿದೆ. ಅದರೆ ಜಿಂಗಲಕ… ಜಿಂಗಲಕ… ಹೂ.. ಹಾ..ಹೂ… ಹಾ… ಮಂತ್ರ ವೀಕ್ಷಕರನ್ನು ಸೆಳೆಯಬೇಕಿದೆ. ಇನ್ನು ಅರ್ಜುನ್ ಜನ್ಯ ಸಂಗೀತದ ಒಂದು ಹಾಡು ಗುನುಗುವಂತಿದೆ.

ಇನ್ನು ವಿಶೇಷವಾಗಿ ಛಾಯಾಗ್ರಹಕ ಸೂರ್ಯ ಕ್ಯಾಮೆರಾ ಕೈಚಳಕ ಅದ್ಭುತವಾಗಿದೆ. ತಾಂತ್ರಿಕವಾಗಿ ತಂಡ ಶ್ರಮಪಟ್ಟಿರೋದು ಕಾಣುತ್ತದೆ.ಇನ್ನು ನಾಯಕನಾಗಿ ಅರವಿಂದ್. ಕೆ.ಪಿ. ತಮ್ಮ ಪ್ರಥಮ ಚಿತ್ರದಲ್ಲಿ ಬಹಳ ಶ್ರಮಪಟ್ಟು ಅಭಿನಯಿಸಿದ್ದು , ಅನುಭವಿ ಕಲಾವಿದನಂತೆ ಪಾತ್ರಕ್ಕೆ ನ್ಯಾಯ ಕೊಡುವುದರಲ್ಲಿ ಯಶಸ್ವಿಯಾಗಿದ್ದಾರೆ. ಒಬ್ಬ ಬೈಕ್ ರೈಡರ್ ಆಗಿದ್ದರು, ನಟನೆಯ ಬಗ್ಗೆ ಇರುವ ಆಸಕ್ತಿ ಕಾಣುತ್ತದೆ.

ಅದೇ ರೀತಿ ನಾಯಕಿಯಾಗಿ ಅಭಿನಯಿಸಿರುವ ದಿವ್ಯ ಊರುಡುಗ ಕೂಡ ತನ್ನ ಮಾತಿನ ಅಬ್ಬರದ ನಡುವೆ ಅಳುತ್ತಾ , ನಗುತ್ತಾ ತಮ್ಮ ಪಾತ್ರಕ್ಕೆ ಜೀವ ತುಂಬಿದ್ದಾರೆ. ಇವರಿಬ್ಬರ ಸತ್ತ ನಡೆಯುವ ಕಥೆಯಲ್ಲಿ ಬರುವ ಉಳಿದ ಪಾತ್ರಗಳು ಕೂಡ ಚಿತ್ರದ ಓಟಕ್ಕೆ ಉತ್ತಮ ಸಹಕಾರಿಯಾಗಿ ಅಭಿನಯಿಸಿದ್ದಾರೆ. ಯುವಕ ಯುವತಿಯರ ಮನಸ್ಸನ್ನು ಸೆಳೆಯುವ ಜೊತೆಗೆ ಮನರಂಜನೆಯ ದೃಷ್ಟಿಯಿಂದ ಒಮ್ಮೆ ನೋಡುವಂತಹ ಚಿತ್ರವಾಗಿ ಅರ್ಧಂಬರ್ಧ ಪ್ರೇಮಕಥೆ ಹೊರ ಬಂದಿದೆ

error: Content is protected !!