ಹಾಡಿನ ಮೂಲಕ ಬ್ಯಾಡ್ ಕಾಮೆಂಟ್ ಮಾಡೋರ “ಅಸಲಿ ಬಣ್ಣ” ಕಳಚಿದ ಇಶಾನಿ.
ಬಿಗ್ ಬಾಸ್ ಖ್ಯಾತಿಯ ಇಶಾನಿ ಅಭಿನಯದ ಅಸಲಿ ಬಣ್ಣ ಆಲ್ಬಂ ಸಾಂಗ್ ಬಿಡುಗಡೆ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು. ಕನ್ನಡದಲ್ಲಿ ಮಹಿಳೆಯರ ಹಿಪಾಪ್ ಸಾಂಗ್ ಎಂದರೆ ನೆನಪಿಗೆ ಬರೋದು ಇಶಾನಿ. ಸೋಷಿಯಲ್ ಮೀಡಿಯಾದಲ್ಲಿ ಸದಾ ಆಕ್ಟಿವ್ ಆಗಿರುವ ಇವರ ಪೋಸ್ಟ್ ಗಳಿಗೆ ಕೆಲವರು ಕೆಟ್ಟದಾಗಿ ಕಮೆಂಟ್ ಮಾಡುತ್ತಾರೆ.
ಯುವತಿಯರು ಮಾಡ್ರನ್ ಡ್ರೆಸ್ ಹಾಕೋದು, ಬೋಲ್ಡ್ ಆಗಿರುವುದು ತಪ್ಪೇ, ನನ್ನ ಇಷ್ಟದಂತೆ ನಾನಿರೋದನ್ನು ಯಾಕೆ ಸಹಿಸಲ್ಲ ಎನ್ನುವುದು ಇವರ ಪ್ರಶ್ನೆ. ಅಂಥವರಿಗೆ ಅಸಲಿ ಬಣ್ಣ ಎಂಬ ಈ ಹಿಪಪ್ ಸಾಂಗ್ ಮೂಲಕ ಇಶಾನಿ ತಿರುಗೇಟು ಕೊಟ್ಟಿದ್ದಾರೆ.
ಈಶಾನಿ ಅವರ ಹುಟ್ಟುಹಬ್ಬದಂದು ಅವರ ಯೂಟ್ಯೂಬ್ ಚಾನೆಲ್ ನಲ್ಲಿ ‘ಅಸಲಿ ಬಣ್ಣ’ ಹಿಪ್ ಹಾಪ್ ಹಾಡು ರಿಲೀಸಾಗಿದೆ. ಈ ಗೀತೆಯನ್ನು ಈಶಾನಿ ಹಾಡುವ ಜೊತೆಗೆ ಅದರಲ್ಲಿ ಅವರೇ ಅಭಿನಯಿಸಿದ್ದಾರೆ. ಅವರ ಒಂದಷ್ಟು ಸ್ನೇಹಿತರೇ ಸೇರಿ ಈ ಹಾಡನ್ನು ಮಾಡಿದ್ದಾರೆ.
ವೆಂಕಟ್ ಅವರು ಈ ಹಾಡನ್ನು ನಿರ್ಮಿಸಿದ್ದು, ಗಿರಿಗೌಡ ಅವರ ನಿರ್ದೇಶನ, ಮಾರ್ಟಿನ್ ಅವರ ಸಾಹಿತ್ಯ, ಕೀರ್ತನ್ ಪೂಜಾರಿ ಅವರ ಕ್ಯಾಮೆರಾ ವರ್ಕ್, ಡಿಜೆ ಲೆಥಲ್ ಅವರ ಸಂಗೀತ ಸಂಯೋಜನೆ ಈ ಹಾಡಿಗಿದೆ.
ಈ ಬಗ್ಗೆ ಮಾತನಾಡಿದ ಇಶಾನಿ ‘ಇದರ ಮೂಲಕ ಮಹಿಳೆಯರಿಗೆ ಬ್ಯಾಡ್ ಕಾಮೆಂಟ್ ಮಾಡುವವರಿಗೆ ಟಾಂಗ್ ಕೊಟ್ಟಿದ್ದೇನೆ. ಅಂಥವರಿಗೆ ನಮ್ಮ ಫಿಲಿಂಗ್ಸ್ ಅರ್ಥ ಆಗಬೇಕು.ನನ್ನ ಬಗ್ಗೆ ಯಾರೆಲ್ಲ ಪದಗಳನ್ನು ಬಳಸಿದ್ದರೋ ಅದೇ ಪದಗಳನ್ನು ಅವರಿಗೆ ವಾಪಸ್ ಕೊಟ್ಟಿದ್ದೇನೆ. ಬಿಗ್ ಬಾಸ್ ನಡೀತಿರುವಾಗಲೇ ಈ ಹಾಡನ್ನು ಬರೆದಿದ್ದೆ.
ನನಗನಿಸಿದ್ದನ್ನು ಹೇಳಿಕೊಳ್ಳಲು ಇದು ಪರ್ಫೆಕ್ಟ್ ವೇ ಅನಿಸಿತು. ಮಾರ್ಟಿನ್ ಇದಕ್ಕೆ ಪೈನಲ್ ಟಚ್ ಕೊಟ್ಟಿದ್ದಾರೆ. ಈ ಹಾಡಿನ ಉದ್ದೇಶ ಶೋಷಣೆಗೆ ಒಳಗಾದ ಹೆಣ್ಣು ಮಕ್ಕಳನ್ನು ಸ್ಟ್ರಾಂಗ್ ಮಾಡುವುದು’ ಎಂದರು.
ನಿರ್ದೇಶಕ ಗಿರಿ ಗೌಡ ಮಾತನಾಡಿ ‘ಈಶಾನಿ ಅವರನ್ನು ಇಷ್ಟಪಡುವವರಾಗಿ ನಾವು ಅವರಿಗೆ ಸಹಕಾರ ನೀಡುವ ದೃಷ್ಟಿಯಿಂದ ಈ ಗೀತೆ ಮಾಡಿದ್ದೇವೆ. ಇನ್ನು ಒಂದಿಷ್ಟು ಗೀತೆಗಳನ್ನು ಅವರ ಜೊತೆ ಮಾಡುತ್ತೇನೆ. ಬೆಂಗಳೂರಿನ ಏರ್ಪೋರ್ಟ್ ರಸ್ತೆಯಲ್ಲಿ ಒಂದೇ ದಿನದಲ್ಲಿ ಇದನ್ನು ಚಿತ್ರೀಕರಿಸಿದ್ದೇವೆ’ ಎಂದರು.
ಈ ಸಾಂಗನ್ನು ವಿಭಿನ್ನ ಬ್ಯುಸಿನೆಸ್ ಗಳಲ್ಲಿ ತೊಡಗಿಸಿಕೊಂಡಿರುವ ಉದ್ಯಮಿಗಳಾದ ಸುರೇಶ್ , ಮಂಜೇಶ್ ಹಾಗೂ ಮನೀಶ್ ಬಿಡುಗಡೆ ಮಾಡಿದರು. ಬಿಗ್ ಬಾಸ್ ಸ್ನೇಹಿತೆಯರಾದ ತನಿಷಾ, ಸಿರಿ ಹಾಗೂ ಐಶ್ವರ್ಯ ಶುಭ ಹಾರೈಸಿದರು. ನಮಗೂ ಇಂತಹ ಸಾಕಷ್ಟು ಕೆಟ್ಟ ಅನುಭವ ಆಗಿದೆ ಎಂದು ತನಿಷಾ ಕೂಡ ಹೇಳಿಕೊಂಡರು.