ರಾಜ್ಯ ಪ್ರಶಸ್ತಿ ವಿಜೇತ ರಘು ಕೋವಿ ಚಿತ್ರದಲ್ಲಿ ಬಹುಭಾಷಾ ನಟ ಬಾಬಿ ಸಿಂಹ
ದಕ್ಷಿಣ ಭಾರತೀಯ ಸಿನಿಮಾರಂಗದ ಖ್ಯಾತ ನಟ ಬಾಬಿ ಸಿಂಹ ಮತ್ತೊಂದು ಕನ್ನಡ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ‘ಜಿಗರ್‌ಥಂಡ’ ಸಿನಿಮಾದ ನಟನೆಗಾಗಿ ರಾಷ್ಟ್ರ ಪ್ರಶಸ್ತಿ ಪಡೆದ ಈ ಪ್ರತಿಭಾವಂತ ಸ್ಟಾರ್ 777 ಚಾರ್ಲಿ ಮೂಲಕ ಸ್ಯಾಂಡಲ್ ವುಡ್ ಪ್ರವೇಶಿಸಿದ್ದರು. ಇದೀಗ ಬಾಬಿ ಸಿಂಹ ರಘು ಕೋವಿ ನಿರ್ದೇಶನದಲ್ಲಿ ತಯಾರಾಗುತ್ತಿದೆ ಚಿತ್ರದಲ್ಲಿ ಪ್ರಮುಖ ಪಾತ್ರವೊಂದರಲ್ಲಿ ನಟಿಸುತ್ತಿದ್ದಾರೆ.
ಬರಹಗಾರರಾಗಿ ಖ್ಯಾತಿ ಪಡೆದಿರುವ ರಾಜ್ಯ ಪ್ರಶಸ್ತಿ ವಿಜೇತ ರಘು ಕೋವಿ ನಿರ್ದೇಶಕರಾಗಿ ಮೊದಲ ಹೆಜ್ಜೆ ಇಡುತ್ತಿದ್ದಾರೆ. ‘ದಿಲ್ ಮಾರ್’ ಸಿನಿಮಾ ಮೂಲಕ ಹೀರೋ ಆಗಿ ಅದೃಷ್ಟ ಪರೀಕ್ಷೆಗಿಳಿದಿರುವ ರಾಮ್ ಗೆ ರಘು ಆಕ್ಷನ್ ಕಟ್ ಹೇಳುತ್ತಿದ್ದಾರೆ. ಮೊದಲ ಚಿತ್ರ ಬಿಡುಗಡೆಗೂ ಮುನ್ನವೇ ರಾಮ್, ರಘು ಕೋವಿ ನಿರ್ದೇಶನದಲ್ಲಿ ನಟಿಸುತ್ತಿದ್ದು, ಸಹಜವಾಗಿ ನಿರೀಕ್ಷೆ ಹೆಚ್ಚಿಸಿದೆ.
ಹಂಸಲೇಖ ಕಥಾ ಕಣಜದಿಂದ ಸ್ಯಾಂಡಲ್ ವುಡ್ ಪರಿಚಿತರಾದ ರಘು ಕೋವಿ, ಕೃಷ್ಣಲೀಲಾ ಅತ್ಯುತ್ತಮ ಬರವಣಿಗೆಗೆ ರಾಜ್ಯ ಪ್ರಶಸ್ತಿ ಪಡೆದುಕೊಂಡಿದ್ದಾರೆ. ರಾಜೇಂದ್ರ ಸಿಂಗ್ ಬಾಬು, ಎಸ್.ಎಸ್. ರಾಜಶೇಖರ್ , ಕೆ.ವಿ.ರಾಜ್, ಶಶಾಂಕ್, ಉಪೇಂದ್ರ ಸಿನಿಮಾಗಳಲ್ಲಿ ಕೋ ಡೈರೆಕ್ಟರ್ ಆಗಿ ರಘು ಕೋವಿ ದುಡಿದಿದ್ದಾರೆ. ಇದೀಗ ಅವರು ಡೈರೆಕ್ಟರ್ ಕ್ಯಾಪ್ ತೊಟ್ಟು ನಿರ್ದೇಶನದ ಅಖಾಡಕ್ಕಿಳಿದಿದ್ದಾರೆ.
ಕನ್ನಡ, ತೆಲುಗು, ತಮಿಳು ಹಾಗೂ ಹಿಂದಿ ಭಾಷೆಯಲ್ಲಿ ಮೂಡಿ ಬರ್ತಿರುವ ಈ ಸಿನಿಮಾದಲ್ಲಿ ರಾಮ್ ಹೀರೋ ಆಗಿ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ಬಾಬಿ ಸಿಂಹ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಅವರ ಪಾತ್ರ ಏನೂ ಅನ್ನೋದನ್ನು ಚಿತ್ರತಂಡ ಸಸ್ಪೆನ್ಸ್ ಆಗಿ ಇಟ್ಟಿದೆ. ಶೂಟಿಂಗ್ ಹಂತದಲ್ಲಿರುವ ಈ ಸಿನಿಮಾಗೆ ಓ ಮೈ ಗಾಡ್-2 ನಿರ್ಮಾಪಕ ನಿಕುಲ್ ದೇಸಾಯಿ ಕನ್ನಡ ನಿರ್ಮಾಣ ಸಂಸ್ಥೆ ಜೊತೆ ಕೈ ಜೋಡಿಸಿ ಹಣ ಹಾಕುತ್ತಿದ್ದಾರೆ.
ನೈಜ ಘಟನೆಯಾಧಾರಿತ ಕಥಾಹಂದರ ಹೊಂದಿರುವ ಸಿನಿಮಾಗೆ ಯುವರತ್ನ, ರಾಜಕುಮಾರ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಖ್ಯಾತಿಯ ಎ.ವೆಂಕಟೇಶ್ ಅಂಗುರಾಜ್ ಛಾಯಾಗ್ರಹಣ ಚಿತ್ರಕ್ಕಿರಲಿದೆ. ಸದ್ಯ ಶೂಟಿಂಗ್ ನಲ್ಲಿ ನಿರತರಾಗಿರುವ ಚಿತ್ರತಂಡ ಶೀಘ್ರದಲ್ಲಿಯೇ ಟೈಟಲ್ ರಿವೀಲ್ ಮಾಡಲಿದೆ