“ಬ್ಯಾಕ್ ಬೆಂಚರ್ಸ್” ಬಂದ್ರು..ಚಿತ್ರಮಂದಿರಕ್ಕೆ ಬನ್ನಿ
ಒಂದು ಸಿನಿಮಾ ಮಾಡುವುದಕ್ಕೆ ಎಷ್ಟು ಆಸಕ್ತಿ ಜೋಶ್ ನಿಂದ ಕೆಲಸ ಮಾಡುತ್ತಾರೋ , ಅದನ್ನು ಬಿಡುಗಡೆ ಮಾಡುವ ಹಂತದಲ್ಲೂ ಕೂಡ ಅಷ್ಟೇ ಪ್ರಾಮಾಣಿಕವಾಗಿ ಪ್ರಚಾರ ಮಾಡುವ ಮೂಲಕ ಪ್ರೇಕ್ಷಕರ ಗಮನವನ್ನು ಸೆಳೆಯುವುದು ಅತ್ಯಗತ್ಯ. ಅಂತಹದ್ದೇ ಪ್ರಯತ್ನದಲ್ಲಿ ಕಾಲೇಜ್ ಯೂತ್ ಕಂಟೆಂಟ್ ಅನ್ನು ಬೆಸೆದುಕೊಂಡು ಪಿಪಿ ಪ್ರೊಡಕ್ಷನ್ಸ್ ಲಾಂಛನದಲ್ಲಿ ರಾಜಶೇಖರ್ ಚಿತ್ರವನ್ನು ನಿರ್ಮಿಸಿ ಹಾಗೂ ನಿರ್ದೇಶನ ಮಾಡಿದ್ದು , ಈ ವಾರ ಬಿಡುಗಡೆಯಾಗುತ್ತಿರುವ ಈ ಚಿತ್ರದ ಕುರಿತು ಒಂದಷ್ಟು ಮಾಹಿತಿಯನ್ನು ಹಂಚಿಕೊಳ್ಳಲು ಪತ್ರಿಕಾಗೋಷ್ಠಿಯನ್ನು ಆಯೋಜನೆ ಮಾಡಿದ್ದರು.
ಈ ಚಿತ್ರದ ನಿರ್ದೇಶಕ ರಾಜಶೇಖರ್ ಮಾತನಾಡುತ್ತಾ ನಾನು ಈಗಾಗಲೇ ಒಂದಷ್ಟು ಚಿತ್ರಗಳನ್ನು ನಿರ್ಮಿಸಿ , ನಿರ್ದೇಶನ ಮಾಡಿ ಸಾಕಷ್ಟು ಸೋಲು ನೋಡಿದ್ದೇನೆ. ನನಗೆ ಸೋಲು ಹೊಸತಲ್ಲ. ನಾನು ಈ ಬಾರಿ ಒಂದು ಕಾಲೇಜು ಯೂತ್ ಕಂಟೆಂಟ್ ಮೂಲಕ ಯುವ ಪ್ರತಿಭೆಗಳಿಗೆ ಅವಕಾಶವನ್ನು ನೀಡಿದ್ದೇನೆ. ಹಾಗಾಗಿ ಈ ಚಿತ್ರದಲ್ಲಿ ನಟಿಸಿರುವ ಹುಡುಗ ಹುಡುಗಿಯರು ಗೆಲ್ಲಲೇ ಬೇಕು. ಏಕೆಂದರೆ, ಈ ಹುಡುಗರು ಕಳೆದ ಮೂರು ವರ್ಷಗಳನ್ನು ಈ ಚಿತ್ರಕ್ಕಾಗಿ ನನ್ನ ಜೊತೆ ಮೀಸಲಿಟ್ಟಿದ್ದಾರೆ. ಬರೀ ನಟನೆ ಅಷ್ಟೇ ಅಲ್ಲ, ಎಲ್ಲಾ ಕೆಲಸಗಳನ್ನು ಮಾಡಿದ್ದಾರೆ. ಈಗ ಅವರು ಸ್ವತಂತ್ರವಾಗಿ ನಿರ್ದೇಶನ ಮಾಡುವಷ್ಟು ಅನುಭವ ಪಡೆದಿದ್ದಾರೆ. ನೀವೆಲ್ಲರೂ ಬಂದು ಈ ಚಿತ್ರವನ್ನು ನೋಡಿ ಪ್ರೋತ್ಸಾಹಿಸಿ ಎಂದು ಕೇಳಿಕೊಂಡರು.
ಇನ್ನು ಈ ತಂಡದ ಬೆನ್ನೆಲುಬಾಗಿ ಸಹಕಾರಿಯಾಗಿ ನಿಂತ ನಟ ಸುಚೇಂದ್ರ ಪ್ರಸಾದ್ ಮಾತನಾಡುತ್ತಾ ಇದು ನನ್ನ ಗೆಳೆಯನ ಚಿತ್ರ , ನಾನು ನಿರ್ದೇಶಕರು ಒಟ್ಟಿಗೆ ಓದಿ ಬೆಳೆದಿದ್ದು, ಚಿತ್ರರಂಗದಿಂದ ಬಹಳಷ್ಟು ಅನುಭವ ಪಡೆದಿದ್ದಾರೆ. ಈ ಚಿತ್ರಕ್ಕಾಗಿ ನಾನು ಆರಂಭಿಕ ಹಂತದಿಂದ ಪ್ರತಿಭೆಗಳನ್ನ ಆಯ್ಕೆ ಮಾಡುವ ಕೆಲಸದಿಂದ ಹಿಡ್ದು ಎಲ್ಲಿವರೆಗೂ ನನ್ನ ಅಗತ್ಯವಿದ್ಯೋ ನಾನು ಅವರಿಗೆ ಸಹಕಾರ ಮಾಡುತ್ತಾ ಬಂದಿದ್ದೇನೆ. ಈ ಚಿತ್ರದಲ್ಲಿ ಒಂದು ವಿಭಿನ್ನ ಪಾತ್ರವನ್ನು ನೀಡಿದ್ದಾರೆ.
ಅದು ನನ್ನ ಗೆಳೆಯನ ಪಾತ್ರವೇ ಎನ್ನುವಂತಿದೆ. ಅದನ್ನು ಅವರೇ ಒಪ್ಪಿಕೊಂಡಿದ್ದಾರೆ. ಈ ಚಿತ್ರ ರಂಜನೆ ಮತ್ತು ವಿನೋದಕ್ಕಾಗಿಯಷ್ಟೇ ಅಲ್ಲ. ಇದರಲ್ಲಿ ಹದಿಹರೆಯದವರ ತವಕ ಮತ್ತು ತಾಕಲಾಟಗಳನ್ನು ಕಟ್ಟಿಕೊಡಲಾಗಿದೆ. ಇವತ್ತಿನ ವಿದ್ಯಾರ್ಥಿಗಳು, ಪೋಷಕರು, ಶಿಕ್ಷಣ ವ್ಯವಸ್ಥೆ ಇದೆಲ್ಲದರ ಕುರಿತಾದ ಒಂದು ಕಥೆ ಇದು. ಎಲ್ಲರ ಶ್ರಮ ಆಡಗಿದೆ , ಖಂಡಿತವಾಗಿಯೂ ಈ ಚಿತ್ರ ಪ್ರತಿಯೊಬ್ಬರಿಗೂ ಇಷ್ಟವಾಗುತ್ತದೆ. ಎಲ್ಲರೂ ಈ ಚಿತ್ರವನ್ನು ನೋಡಿ ಎಂದು ಕೇಳಿಕೊಂಡರು.
ಈ ಚಿತ್ರದಲ್ಲಿ ಅಭಿನಯಿಸಿದಂತ ಕಲಾವಿದರಾದ ರಂಜನ್, ಜತಿನ್ ಆರ್ಯನ್, ಆಕಾಶ್ ಎಂ.ಪಿ, ಶಶಾಂಕ್ ಸಿಂಹ, ಅರವಿಂದ್ ಕುಪ್ಳೀಕರ್, ಮಾನ್ಯ ಗೌಡ, ಕುಂಕುಮ್ ಹೆಚ್, ಅನುಷಾ ಸುರೇಶ್, ವಿಯೋಮಿ ವನಿತಾ, ಮನೋಜ್ ಶೆಟ್ಟಿ, ನಮಿತಾ ಗೌಡ, ವಿಕಾಸ್, ರನ್ನ, ವಿಜಯ್ ಪ್ರಸಾದ್, ಚತುರ್ಥಿ ರಾಜ್, ಗೌರವ್ ಮುಂತಾದವರ ಕಾರ್ಯಕ್ರಮದಲ್ಲಿ ಹಾಜರಿದ್ದು , ಒಂದಷ್ಟು ಕಲಾವಿದರು ಮಾತ್ರ ತಮ್ಮ ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಹಾಗೂ ಚಿತ್ರದ ಪ್ರಚಾರದ ಕೆಲಸವನ್ನು ಹಂಚಿಕೊಂಡರು. ಈ ಚಿತ್ರಕ್ಕೆ ನಕುಲ್ ಅಭಯಂಕರ್ ಸಂಗೀತ ನಿರ್ದೇಶನ, ಮನೋಹರ್ ಜೋಶಿ ಛಾಯಾಗ್ರಹಣ, ರಂಜನ್ ಮತ್ತು ಅಮರ್ ಗೌಡ ಸಂಕಲನ ವಿದೆ. ಎಲ್ಲಾ ಅಂದುಕೊಂಡಂತೆ ಒಂದು ವಿಭಿನ್ನ ಕಂಟೆಂಟ್ ಮೂಲಕ ಕ್ರೇಜ್ ಹುಟ್ಟು ಹಾಕಿರುವ `ಬ್ಯಾಕ್ ಬೆಂಚರ್ಸ್’. ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.