ದುಷ್ಟರ ಜಾಲದಲ್ಲಿ ‘ಬಘೀರ’ನ ಬೇಟೆ.(ಚಿತ್ರ ವಿಮರ್ಶೆ -ರೇಟಿಂಗ್ : 4 /5)
ರೇಟಿಂಗ್ : 4 /5
ಚಿತ್ರ : ಬಘೀರ
ನಿರ್ದೇಶಕ : ಡಾ. ಸೂರಿ
ನಿರ್ಮಾಪಕ : ವಿಜಯ್ ಕಿರಗಂದೂರು
ಸಂಗೀತ: ಬಿ. ಅಜನೀಶ್ ಲೋಕನಾಥ್
ಛಾಯಾಗ್ರಹಕ : ಎ.ಜೆ. ಶೆಟ್ಟಿ
ತಾರಾಗಣ : ಶ್ರೀಮುರಳಿ , ರುಕ್ಮಿಣಿ ವಸಂತ್ , ಅಚ್ಚುತ್ ಕುಮಾರ್ , ಪ್ರಕಾಶ್ ರಾಜ್ , ರಾಮಚಂದ್ರ ರಾಜು , ರಂಗಾಯಣ ರಘು , ಪ್ರಮೋದ್ ಶೆಟ್ಟಿ , ಸುಧಾರಾಣಿ ಅವಿನಾಶ್ ಹಾಗೂ ಮುಂತಾದವರು…
ಸಮಾಜದಲ್ಲಿ ದುಷ್ಟ ಕೂಟಗಳ ಶಕ್ತಿಯ ಆರ್ಭಟಗಳು ನಿರಂತರವಾಗಿ ನಡೆಯುತ್ತಲೇ ಇರುತ್ತದೆ. ರಾಜಕೀಯ , ಅಧಿಕಾರಿಗಳು , ಪ್ರಭಾವಿಗಳ ಕರಿ ನೆರಳು ಅವರನ್ನ ಕಾಪಾಡುತ್ತಲೇ ಇರುತ್ತದೆ. ಇದಕ್ಕೆಲ್ಲಾ ಸೆಡ್ಡು ಹೊಡೆದು , ದುಷ್ಟರನ್ನ ಮಟ್ಟ ಹಾಕಲು ರೂಪಿಸುವ ರಣತಂತ್ರದ ರೋಚಕ ಸಾಹಸ ಕಥಾನಕವಾಗಿ ಈ ವಾರ ಬೆಳ್ಳಿ ಪರದೆ ಮೇಲೆ ಬಂದಿರುವಂತಹ ಚಿತ್ರ ಬಘೀರ. ಬಾಲ್ಯದಿಂದಲೇ ಸೂಪರ್ ಮ್ಯಾನ್ ಕನಸು ಕಾಣುವ ಮಗು ತಾಯಿಯ ಮಾರ್ಗದರ್ಶನದಂತೆ ದೇಶವನ್ನು ರಕ್ಷಿಸಿದ ಮಹಾನ್ ನಾಯಕರ ವಿಚಾರವನ್ನು ಅರಿತು , ತಂದೆಯಂತೆ ತಾನು ಪೊಲೀಸ್ ಇಲಾಖೆಗೆ ಸೇರಿ ದಕ್ಷ ಅಧಿಕಾರಿ ಆಗುವ ನಿಟ್ಟಿನಲ್ಲಿ ಐಪಿಎಸ್ ಅಧಿಕಾರಿ ಆಗುವ ವೇದಾಂತ್ (ಶ್ರೀ ಮುರಳಿ). ತನ್ನ ಕರ್ತವ್ಯವನ್ನು ಕರಾವಳಿಯ ಪೊಲೀಸ್ ಸ್ಟೇಷನ್ ನಲ್ಲಿ ಪ್ರಾರಂಭಿಸುವ ವೇದಾಂತ್ , ತನ್ನ ಸಿಬ್ಬಂದಿ ವರ್ಗದವರ ವರ್ತನೆಗಳನ್ನ ಗಮನಿಸುತ್ತಲೇ ಕರಾವಳಿಯಲ್ಲಿ ನಡೆಯುವ ಒಂದಷ್ಟು ದಂದೆ ಕೋರರ ಹಾವಳಿಯನ್ನ ಮಟ್ಟ ಹಾಕಲು ಪ್ರಾಮಾಣಿಕವಾಗಿ ಮುಂದಾಗುತ್ತಾನೆ. ಇದರ ನಡುವೆ ಮುದ್ದಾದ ಬೆಡಗಿ ಸ್ನೇಹ (ರುಕ್ಮಿಣಿ ವಸಂತ್) ಧೈರ್ಯಕ್ಕೆ ಮನಸಲ್ಲುತ್ತಾನೆ.
ತಂದೆಯ ಆಸೆಯಂತೆ ಇಷ್ಟವಿಲ್ಲದಿದ್ದರೂ ಮದುವೆಗೆ ಒಪ್ಪುವ ವೇದಾಂತಗೆ ಡಾಕ್ಟರ್ ವೃತ್ತಿಯ ಸ್ನೇಹ ಸಿಗುತ್ತಾಳೆ. ಇನ್ನೂ ತನ್ನ ಕರ್ತವ್ಯ ನಿಷ್ಠೆಯಲ್ಲಿ ರೋಡ್ಗಳನ್ನ ಮಟ್ಟ ಹಾಕುತ್ತಿರುವಾಗಲೇ ಹಿರಿಯ ಅಧಿಕಾರಿಗಳ ಒತ್ತಡ ಅವನ ಕೈ ಕಟ್ಟಿ ಹಾಕುತ್ತದೆ. ಕತ್ತಲೂ ಸಾಮ್ರಾಜ್ಯದ ದೊರೆ ರಾಣಾ (ರಾಮಚಂದ್ರ ರಾಜು) ದೇಶಾದ್ಯಂತ ತನ್ನ ಕದಂಬ ಬಾಹುವನ್ನು ಚಾಚಿಕೊಂಡು ಅಮಾಯಕರನ್ನು ಅಪರಿಸಿ ಅವರ ಅಂಗಾಂಗವನ್ನು ತೆಗೆದು ವಿದೇಶಗಳಿಗೆ ರವಾನಿಸುವುದೇ ಅವನ ಕ್ರೂರ ಕೃತ್ಯ. ಇವನ ಹಿಂಬಾಲಕರ ಆರ್ಭಟ ಜೋರಾಗಿದ್ದು, ಕಾಮುಕರ ಅಟ್ಟಹಾಸಕ್ಕೆ ಹುಡುಗಿ ಒಬ್ಬಳು ಬೆಂಕಿ ಹಚ್ಚಿಕೊಂಡು ಸಾಯುವ ಘಟನೆ ಎದುರಾಗುತ್ತದೆ. ಅಸಹಾಯಕನ ಪರಿಸ್ಥಿತಿಯಲ್ಲಿ ಕಂಡು ಕಾಣದಂತೆ ಇರುವ ವೇದಾಂತ. ಮಾಮೂಲಿ ಅಧಿಕಾರಿಯಂತೆ ಸುಮ್ಮನಾಗುತ್ತಾನೆ.
ಆದರೆ ಕಾಣದ ಒಬ್ಬ ಸೂಪರ್ ಹೀರೋ ಬಘೀರ ಎಂಟ್ರಿ ಆಗಿ ಕ್ರೂರಿಗಳಿಗೆ ಶಿಕ್ಷೆ ನೀಡುತ್ತಾ ಹೋಗುತ್ತಾನೆ. ಇದು ಪೊಲೀಸ್ ಇಲಾಖೆಗೂ ತಲೆ ನೋವಾಗಿ ಸಿಬಿಐ ಅಧಿಕಾರಿಗಳು ಎಂಟ್ರಿ ಕೊಡುತ್ತಾರೆ. ಇದರ ನಡುವೆ ರಾಣಾ ನ ಬೇಟೆಗೆ ಬಘೀರ ಪ್ಲಾನ್ ಮಾಡುತ್ತಾನೆ. ಮುಂದೆ ಎದುರಾಗುವ ರೋಚಕ ತಿರುವುಗಳ ಬಗ್ಗೆ ತಿಳಿದುಕೊಳ್ಳಕ್ಕೆ ಎಲ್ಲರೂ ಈ ಚಿತ್ರವನ್ನು ಒಮ್ಮೆ ನೋಡಬೇಕು.
ಇಡೀ ಚಿತ್ರವನ್ನ ಆವರಿಸಿಕೊಂಡಿದ್ದಾರೆ ನಟ ಶ್ರೀ ಮುರಳಿ. ಪೋಲಿಸ್ ಅಧಿಕಾರಿಯ ಪಾತ್ರಕ್ಕೆ ಖಡಕ್ಕಾಗಿ ಜೀವ ತುಂಬಿದ್ದು , ಒಬ್ಬ ಪ್ರೇಮಿಯಾಗಿಯೂ ಗಮನ ಸೆಳೆಯುವುದರ ಜೊತೆಗೆ ಬಘೀರನಾಗಿ ಆಕ್ಷನ್ ದೃಶ್ಯಗಳಲ್ಲಿ ಹಾಲಿವುಡ್ ಸ್ಟೈಲ್ ನಲ್ಲಿ ಆರ್ಭಟಿಸಿದ್ದಾರೆ. ಈ ಚಿತ್ರ ಶ್ರೀ ಮುರಳಿ ಜರ್ನಿಗೆ ಮತ್ತೊಂದು ಮೈಲಿಗಲಾಗಲಿದೆ.
ಇನ್ನು ನಟಿ ರುಕ್ಮಿಣಿ ವಸಂತ ಬಹಳ ನೈಜ್ಯವಾಗಿ ತಮ್ಮ ಪಾತ್ರಕ್ಕೆ ನ್ಯಾಯವನ್ನು ಒದಗಿಸಿ ಮಿಂಚಿದ್ದಾರೆ. ವಿಲನ್ ಪಾತ್ರಧಾರಿ ರಾಮಚಂದ್ರ ರಾಜು ಮುಖ ಚಹರೆ ಭಯ ಹುಟ್ಟಿಸುವಂತಿದೆ. ಮೇಕಪ್ ಮ್ಯಾನ್ ಕೆಲಸ ಅಚ್ಕಟ್ಟಾಗಿದೆ.
ಕ್ರೂರ ನರಕ ದರ್ಶನವಾಗಿಸುವ ಕೆಲವು ಸನ್ನಿವೇಶಗಳು ಅತಿ ಎನಿಸುವಂತಿದೆ. ಆದರೂ ತಮ್ಮ ಪಾತ್ರವನ್ನು ಸಮರ್ಥವಾಗಿ ನಿರ್ವಹಿಸಿದ್ದಾರೆ. ಉಳಿದಂತೆ ಬರುವ ರೌಡಿ ಗ್ಯಾಂಗ್ ಗಳ ವರ್ತನೆ ಓಟಕ್ಕೆ ಪೂರಕವಾಗಿದೆ. ತಂದೆಯಾಗಿ ಅಚ್ಯುತ್ ಕುಮಾರ್ , ತಾಯಿಯಾಗಿ ಸುಧಾರಾಣಿ , ಪೊಲೀಸ್ ಕಾನ್ಸ್ಟೇಬಲ್ ಆಗಿ ರಂಗಾಯಣ ರಘು, ಪ್ರಮೋದ್ ಶೆಟ್ಟಿ ಸೇರಿದಂತೆ ಬಹುತೇಕರು ತಮ್ಮ ತಮ್ಮ ಪಾತ್ರಕ್ಕೆ ಜೀವ ತುಂಬಿದ್ದಾರೆ.
ವಿಶೇಷವಾಗಿ ಪ್ರಕಾಶ್ ರಾಜ್ ನಟನೆ ಎಂದಿನಂತೆ ಅದ್ಭುತವಾಗಿ ನಿರ್ವಹಿಸಿದ್ದಾರೆ. ಇನ್ನು ನಿರ್ದೇಶಕರು ಆಯ್ಕೆ ಮಾಡಿಕೊಂಡಿರುವ ಕಥೆಯಲ್ಲಿ ಹೊಸತನವಿಲ್ಲದಿದ್ದರೂ ಚಿತ್ರಕಥೆ ಶೈಲಿ ಗಮನ ಸೆಳೆಯುವಂತಿದೆ. ದೇಶಾಭಿಮಾನ, ಪ್ರಾಮಾಣಿಕತೆ , ನಿಷ್ಠೆಯ ನಡುವೆ ದುಷ್ಟರ ಅಟ್ಟಹಾಸಕ್ಕೆ ಕಡಿವಾಣ ಅಗತ್ಯ ಎಂಬುದನ್ನು ತೆರೆದಿಟ್ಟಿದ್ದಾರೆ. ಕೆಲವೊಂದಷ್ಟು ಸಂಭಾಷಣೆಗಳು ಅರ್ಥಪೂರ್ಣವಾಗಿದೆ. ನಿರ್ಮಾಣದಲ್ಲಿ ಅದ್ದೂರಿತನಕ್ಕೆ ಎಲ್ಲೋ ಕೊರತೆ ಆಗದಂತೆ ಚಿತ್ರ ಮೂಡಿ ಬಂದಿದೆ.
ಕತ್ತಲು ಛಾಯೆಯೇ ಹೆಚ್ಚು ಅವರಿಸಿಕೊಂಡಿದ್ದು , ಕೆಲವು ದೃಶ್ಯಗಳು ಫ್ಯಾಂಟಸಿ ಫೀಲ್ ನೀಡಿದಂತಿದೆ. ಛಾಯಾಗ್ರಾಹಕರ ಕೈಚಳಕ ಉತ್ತಮವಾಗಿದೆ. ಅದೇ ರೀತಿ ಹಾಡುಗಳು ಪೂರಕವಾಗಿದ್ದು , ಹಿನ್ನೆಲೆ ಸಂಗೀತ ಅಚ್ಚುಕಟ್ಟಾಗಿದೆ. ಸಾಹಸ ದೃಶ್ಯಗಳು ಅದ್ಭುತವಾಗಿ ಮೂಡಿ ಬಂದಿದೆ. ತಾಂತ್ರಿಕವಾಗಿ ಚಿತ್ರ ಗಮನ ಸೆಳೆಯುವಂತೆ ಮೂಡಿಬಂದಿದ್ದು , ಎಲ್ಲರೂ ಒಮ್ಮೆ ನೋಡುವಂತ ಚಿತ್ರ ಇದಾಗಿದೆ.