ಗೆಲುವಿನ ಸಂಭ್ರಮದಲ್ಲಿ “ಬಘೀರ” ಚಿತ್ರತಂಡ
ಇಡೀ ವಿಶ್ವವೇ ಕನ್ನಡ ಚಿತ್ರರಂಗದ ಕಡೆ ತಿರುಗಿ ನೋಡುವಂತಹ “ಕೆ.ಜಿ.ಎಫ್”, ” ಕಾಂತಾರ” ದಂತಹ ಯಶಸ್ವಿ ಚಿತ್ರಗಳನ್ನು ನಿರ್ಮಾಣ ಮಾಡಿರುವ ಹೊಂಬಾಳೆ ಫಿಲಂಸ್ ನ ಮತ್ತೊಂದು ಯಶಸ್ವಿ ಚಿತ್ರ “ಬಘೀರ”. ವಿಜಯ್ ಕಿರಗಂದೂರು ನಿರ್ಮಾಣದ, ಡಾ||ಸೂರಿ ನಿರ್ದೇಶನದ ಹಾಗೂ ಶ್ರೀಮುರಳಿ ನಾಯಕರಾಗಿ ನಟಿಸಿರುವ ” ಬಘೀರ ” ಚಿತ್ರ ಕಳೆದವಾರ ದೀಪಾವಳಿ ಹಬ್ಬದ ಶುಭ ಸಂದರ್ಭದಲ್ಲಿ ಬಿಡುಗಡೆಯಾಗಿತ್ತು.
ಚಿತ್ರ ತೆರೆ ಕಂಡ ದಿನದಿಂದ ಈವರೆಗೂ ರಾಜ್ಯಾದ್ಯಂತ ಚಿತ್ರ ಯಶಸ್ವಿಯಾಗಿ ಪ್ರದರ್ಶನವಾಗುತ್ತಿದೆ. ಜೊತೆಗೆ ಪ್ರೇಕ್ಷಕರ ಮನಸ್ಸಿಗೆ ಚಿತ್ರ ಹತ್ತಿರವಾಗಿದೆ. ಕುಟುಂಬ ಸಮೇತ ಬಂದು ಜನರು ಚಿತ್ರವನ್ನು ನೋಡುತ್ತಿರುವುದು ಚಿತ್ರತಂಡದವರಲ್ಲಿ ಸಂತಸ ಮೂಡಿಸಿದೆ. ಈ ಕುರಿತು ಹೆಚ್ಚಿನ ಮಾಹಿತಿ ನೀಡಲು ಆಯೋಜಿಸಲಾಗಿದ್ದ ಸಕ್ಸಸ್ ಮೀಟ್ ನಲ್ಲಿ ಚಿತ್ರತಂಡದ ಸದಸ್ಯರು ತಮ್ಮ ಸಂತಸವನ್ನು ಮಾತುಗಳ ಮೂಲಕ ಹಂಚಿಕೊಂಡರು.
ನನ್ನ ಮೂರು ವರ್ಷಗಳ ಶ್ರಮಕ್ಕೆ ಪ್ರತಿಫಲ ಸಿಕ್ಕಿದೆ ಎಂದು ಮಾತು ಆರಂಭಿಸಿದ ನಾಯಕ ಶ್ರೀಮುರಳಿ, ಈ ಗೆಲುವನ್ನು ಅಭಿಮಾನಿಗಳಿಗೆ ಅರ್ಪಿಸುತ್ತೇನೆ. ಅವರಿಂದಲೇ ಈ ಗೆಲುವು ಸಾಧ್ಯವಾಗಿರುವುದು. ಚಿತ್ರ ಬಿಡುಗಡೆಯಾದ ದಿನದಿಂದ ಅವರು ತೋರುತ್ತಿರುವ ಒಲವು. ಈ ಚಿತ್ರದ ಗೆಲುವು. ಇನ್ನೂ ಈ ಯಶಸ್ಸಿಗೆ ನಾನೊಬ್ಬ ಮಾತ್ರ ಕಾರಣನಲ್ಲ.
ಇಡೀ ತಂಡದ ಶ್ರಮದಿಂದ ಈ ಯಶಸ್ಸು ದೊರಕಿದೆ. ಅದರಲ್ಲಿ ಮುಖ್ಯವಾದವರು, ಯಾವುದೇ ಕೊರತೆ ಬಾರದ ಹಾಗೆ ಚಿತ್ರವನ್ನು ನಿರ್ಮಿಸಿರುವ ನಿರ್ಮಾಪಕ ವಿಜಯ್ ಕಿರಗಂದೂರು ಹಾಗೂ ಪ್ರಶಾಂತ್ ನೀಲ್ ಅವರ ಕಥೆಯನ್ನು ಮನಮುಟ್ಟುವಂತೆ ನಿರ್ದೇಶಿಸಿರುವ ಡಾ||ಸೂರಿ. ಈ ಚಿತ್ರದ ಛಾಯಾಗ್ರಹಣ ಹಾಗೂ ಸಂಗೀತದ ಬಗ್ಗೆ ಕೂಡ ಉತ್ತಮ ಮಾತುಗಳು ಕೇಳಿ ಬರುತ್ತಿದೆ.
ಛಾಯಾಗ್ರಾಹಕ ಎ.ಜೆ.ಶೆಟ್ಟಿ, ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಸೇರಿದಂತೆ ಎಲ್ಲಾ ತಂತ್ರಜ್ಞರಿಗೆ ಹಾಗೂ ಸಹ ಕಲಾವಿದರಿಗೆ ಧನ್ಯವಾದ ಹೇಳುತ್ತೇನೆ. ಹತ್ತು ವರ್ಷಗಳ ಹಿಂದೆ ಡಾ||ಸೂರಿ ಅವರ ಜೊತೆಗೆ ಒಂದು ಚಿತ್ರದ ಕುರಿತು ಮಾತನಾಡಿದ್ದೆ. ಆ ಚಿತ್ರವನ್ನು ಸೂರಿ ಅವರು ಬೇಗ ಆರಂಭಿಸಲಿ ಎಂದರು.
ಇದು ನಮ್ಮ ನಿರೀಕ್ಷೆಗೂ ಮೀರಿದ ಗೆಲುವು. ಹಬ್ಬದ ಸಮಯದಲ್ಲಿ ಇಷ್ಟು ಜನರು ಬಂದು ನಮ್ಮ ಸಿನಿಮಾ ನೋಡಿ ಪ್ರೋತ್ಸಾಹಿಸಿರುವುದು ನಿಜಕ್ಕೂ ಸಂತೋಷವಾಗಿದೆ. ಅವರೆಲ್ಲರಿಗೂ ನಾನು, ನನ್ನ ತಂಡ ಚಿರ ಋಣಿ. ನನ್ನ ಮೇಲೆ ನಂಬಿಕೆಯಿಟ್ಟು ಬಿಗ್ ಬಜೆಟ್ ನ ಚಿತ್ರ ನಿರ್ದೇಶಿಸಲು ಅವಕಾಶ ನೀಡಿದ ನಿರ್ಮಾಪಕ ವಿಜಯ್ ಕಿರಗಂದೂರು ಅವರಿಗೆ, ಒಳ್ಳೆಯ ಕಥೆ ಕೊಟ್ಟ ಪ್ರಶಾಂತ್ ನೀಲ್ ಅವರಿಗೆ, “ಬಘೀರ”ನ ಪಾತ್ರಕ್ಕೆ ಜೀವ ತುಂಬಿದ ಶ್ರೀಮುರಳಿ ಅವರಿಗೆ ಹಾಗೂ ಇಡೀ ತಂಡಕ್ಕೆ ನನ್ನ ಧನ್ಯವಾದ ಎಂದರು ನಿರ್ದೇಶಕ ಡಾ||ಸೂರಿ.
ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್, ಛಾಯಾಗ್ರಾಹಕ ಎ.ಜೆ.ಶೆಟ್ಟಿ, ಸಂಕಲನಕಾರ ಪ್ರಣವ್ ಶ್ರೀ ಪ್ರಸಾದ್, ಕಲಾ ನಿರ್ದೇಶಕ ರವಿ ಸಂತೆಹೆಕ್ಲು ಸೇರಿದಂತೆ ಅನೇಕ ತಂತ್ರಜ್ಞರು ಹಾಗೂ ಅಚ್ಯುತ ಕುಮಾರ್, ಗರುಡರಾಮ್, ರಘು ರಾಮನಕೊಪ್ಪ ಮುಂತಾದ ಕಲಾವಿದರು ” ಬಘೀರ” ನ ಗೆಲುವನ್ನು ತಮ್ಮ ಮಾತುಗಳ ಮೂಲಕ ಹಂಚಿಕೊಂಡರು.