ಚೇತನ್ ಕುಮಾರ್ ನಿರ್ದೇಶನದ ರಕ್ಷ್ ರಾಮ್ ನಟಿಸುತ್ತಿರುವ ‘ಬರ್ಮ’ ಚಿತ್ರ ಆರಂಭ
ಬಹದ್ದೂರ್, ಭರ್ಜರಿ, ಭರಾಟೆ, ಜೇಮ್ಸ್ ಚಿತ್ರಗಳ ನಿರ್ದೇಶಕ ಹಾಗೂ ಖ್ಯಾತ ಗೀತರಚನೆಕಾರ ಚೇತನ್ ಕುಮಾರ್ ನಿರ್ದೇಶನದ ಹಾಗೂ “ಗಟ್ಟಿಮೇಳ” ಧಾರಾವಾಹಿ ಖ್ಯಾತಿಯ ರಕ್ಷ್ ರಾಮ್ ನಾಯಕನಾಗಿ ನಟಿಸುತ್ತಿರುವ “ಬರ್ಮ” ಚಿತ್ರದ ಮುಹೂರ್ತ ಸಮಾರಂಭ ದೊಡ್ಡ ಗಣಪತಿ ದೇವಸ್ಥಾನದಲ್ಲಿ ಅದ್ದೂರಿಯಾಗಿ ನೆರವೇರಿತು. ಚಿತ್ರದ ಮೊದಲ ಸನ್ನಿವೇಶಕ್ಕೆ ಅಶ್ವಿನಿ ಪುನೀತ್ ರಾಜಕುಮಾರ್ ಆರಂಭ ಫಲಕ ತೋರಿದರು.
ರಾಘವೇಂದ್ರ ರಾಜಕುಮಾರ್ ಕ್ಯಾಮೆರಾ ಚಾಲನೆ ಮಾಡಿದರು ಹಾಗೂ ನಟ ಧ್ರುವ ಸರ್ಜಾ ಮೊದಲ ದೃಶ್ಯಕ್ಕೆ ಆಕ್ಷನ್ ಕಟ್ ಹೇಳಿದರು. ನಿರ್ಮಾಪಕ ಕೆ.ಪಿ.ಶ್ರೀಕಾಂತ್, ನಿರ್ದೇಶಕ ಎ.ಪಿ.ಅರ್ಜುನ್, ನಟ ಧೀರನ್ ರಾಮಕುಮಾರ್ ಸೇರಿದಂತೆ ಅನೇಕ ಗಣ್ಯರು ಮುಹೂರ್ತ ಸಮಾರಂಭಕ್ಕೆ ಆಗಮಿಸಿ ಚಿತ್ರತಂಡಕ್ಕೆ ಶುಭ ಕೋರಿದರು. ಮುಹೂರ್ತ ಸಮಾರಂಭದ ನಂತರ ಚಿತ್ರತಂಡದ ಸದಸ್ಯರು ಪತ್ರಿಕಾಗೋಷ್ಠಿಯಲ್ಲಿ ಹೆಚ್ಚಿನ ಮಾಹಿತಿ ನೀಡಿದರು.
ಚೇತನ್ ಕುಮಾರ್ ಅವರು ಒಳ್ಳೆಯ ಕಥೆ ಸಿದ್ದ ಮಾಡಿಕೊಂಡಿರುತ್ತಾರೆ. ರಕ್ಷ್ ಈ ಸಿನಿಮಾ ಮೂಲಕ ನಾಯಕನಾಗುತ್ತಿದ್ದಾರೆ. ಇಡೀ “ಬರ್ಮ” ಚಿತ್ರತಂಡಕ್ಕೆ ಒಳ್ಳೆಯದಾಗಲಿ ಎಂದು ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಹಾರೈಸಿದರು.
‘TRP ರಾಮ’ ಟ್ರೇಲರ್ ರಿಲೀಸ್..ಮಹಾಲಕ್ಷ್ಮೀ ಕಂಬ್ಯಾಕ್ ಸಿನಿಮಾ
“ಬರ್ಮ” ನನ್ನ ನಿರ್ದೇಶನದ ಐದನೇ ಚಿತ್ರ ಎಂದು ಮಾತು ಪ್ರಾರಂಭಿಸಿದ ನಿರ್ದೇಶಕ ಚೇತನ್ ಕುಮಾರ್, “ಬರ್ಮ” ಎಂದರೆ ಬ್ರಹ್ಮ ವಾಸಿಸುವ ಜಾಗ ಹಾಗೂ ಒಂದು ಕಂಟ್ರಿಯ ಹೆಸರು ಕೂಡ. ಈ ಹೆಸರು ಚಿತ್ರದ ಕಥೆಗೆ ಪೂರಕವಾಗಿದೆ. ಹಾಗಾಗಿ “ಬರ್ಮ” ಎಂದು ಹೆಸರಿಟ್ಟಿದ್ದೇವೆ. ಚಿತ್ರದ ನಾಯಕ ರಕ್ಷ್ ಈಗಾಗಲೇ ಜನಪ್ರಿಯ ಧಾರಾವಾಹಿಗಳ ಮೂಲಕ ಮನೆಮಾತಾಗಿದ್ದಾರೆ. ಅವರೆ ಈ ಚಿತ್ರದ ನಿರ್ಮಾಪಕರು ಕೂಡ. ಕನ್ನಡ ಸೇರಿದಂತೆ ಐದು ಭಾಷೆಗಳಲ್ಲಿ ಈ ಚಿತ್ರ ಬರಲಿದೆ.
ಐದು ಭಾಷೆಗಳ ಆಡಿಯೋ ಹಕ್ಕನ್ನು ಡಿ ಬಿಟ್ಸ್ ಸಂಸ್ಥೆ ಪಡೆದುಕೊಂಡಿದೆ. ವಿ.ಹರಿಕೃಷ್ಣ ಈ ಚಿತ್ರಕ್ಕೆ ಸಂಗೀತ ನೀಡುತ್ತಿದ್ದಾರೆ. ಸಂಕೇತ್ ಛಾಯಾಗ್ರಹಣ, ಮಹೇಶ್ ರೆಡ್ಡಿ ಸಂಕಲನ ಹಾಗೂ ರವಿವರ್ಮ ಅವರ ಸಾಹಸ ನಿರ್ದೇಶನ, ಹೀಗೆ ಅನೇಕ ನುರಿತ ತಂತ್ರಜ್ಞರು ನಮ್ಮ ಚಿತ್ರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಆಕ್ಷನ್ ಎಂಟರ್ ಟೈನರ್ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ಅಕ್ಟೋಬರ್ 3 ರಿಂದ ಮಂಗಳೂರಿನಲ್ಲಿ ಮೊದಲ ಹಂತದ ಚಿತ್ರೀಕರಣ ನಡೆಯಲಿದೆ. ಆದಿತ್ಯ ಮೆನನ್ ಅವರು ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇಲ್ಲಿನ ಹಾಗೂ ಬೇರೆ ಭಾಷೆಗಳ ಹೆಸರಾಂತ ಕಲಾವಿದರು ನಮ್ಮ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ನಾಯಕಿ ಸೇರಿದಂತೆ ಉಳಿದ ಕಲಾವಿದರ ಬಗ್ಗೆ ಮುಂದಿನ ದಿನಗಳಲ್ಲಿ ತಿಳಿಸುವುದಾಗಿ ಹೇಳಿದರು.
“ಪುಟ್ಟಗೌರಿ ಮದುವೆ”ಯಿಂದ ” ಗಟ್ಟಿಮೇಳ ” ಧಾರಾವಾಹಿ ತನಕ ಸುಮಾರು ಮೂರು ಸಾವಿರ ಎಪಿಸೋಡ್ ಗಳಲ್ಲಿ ನಟಿಸಿದ್ದೇನೆ. ಕನ್ನಡಿಗರು ನನ್ನ ಪಾತ್ರವನ್ನು ಮೆಚ್ಚಿ ತೋರಿರುವ ಪ್ರೀತಿಗೆ ನಾನು ಚಿರ ಋಣಿ. ನಾನು ಚೇತನ್ ಅವರನ್ನು ಬಹಳ ವರ್ಷಗಳಿಂದ ನನ್ನ ಜೊತೆ ಸಿನಿಮಾ ಮಾಡಿ ಎಂದು ಕೇಳಿದ್ದೆ. ಅದು ಈಗ ಕೂಡಿ ಬಂದಿದೆ.
ಇಡೀ ಕುಟುಂದವರೆಲ್ಲಾ ಒಟ್ಟಾಗಿ ಕುಳಿತು ನೋಡುವಂತಹ ಒಳ್ಳೆಯ ಕಥೆಯನ್ನು ನಿರ್ದೇಶಕರು ಸಿದ್ದ ಮಾಡಿಕೊಂಡಿದ್ದಾರೆ. ನಮ್ಮ ಸಂಸ್ಥೆಯ ಮೂಲಕ ನಾನು ಹಾಗೂ ನನ್ನ ಪತ್ನಿ ಅನುಶಾ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದೇವೆ. ನಿಮ್ಮೆಲ್ಲರ ಪ್ರೋತ್ಸಾಹ ನಮಗಿರಲಿ ಎಂದರು ನಾಯಕ ರಕ್ಷ್ ರಾಮ್.
“ಗಟ್ಟಿಮೇಳ” ಧಾರಾವಾಹಿ ನಿರ್ಮಾಣ ಮಾಡಿರುವ ನಮ್ಮ ಶ್ರೀ ಸಾಯಿ ಆಂಜನೇಯ ಕಂಪನಿ ಮೂಲಕ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದೇವೆ. ನನ್ನ ಪತಿ ರಕ್ಷ್ ಅವರೆ ಈ ಚಿತ್ರದ ನಾಯಕನಾಗಿರುವುದು ಖುಷಿಯ ವಿಷಯ ಎನ್ನುತ್ತಾರೆ ನಿರ್ಮಾಪಕಿ ಅನುಶಾ. ಹಾಡುಗಳ ಬಗ್ಗೆ ಹರಿಕೃಷ್ಣ ಮಾಹಿತಿ ನೀಡಿದರು. ಡಿ ಬಿಟ್ಸ್ ಸಂಸ್ಥೆಯ ಶೈಲಜಾ ನಾಗ್ ಈ ಚಿತ್ರದ ಐದು ಭಾಷೆಗಳ ಆಡಿಯೋ ಹಕ್ಕನ್ನು ಪಡೆದಿರುವುದಾಗಿ ಹೇಳಿದರು.