ಆಟದ ಮೈದಾನಕ್ಕಾಗಿ ಹೋರಾಡುವ ಗೆಳೆಯರು : ಬೇಗೂರು ಕಾಲೋನಿ ಚಿತ್ರವಿಮರ್ಶೆ (ರೇಟಿಂಗ್ : 3.5/ 5)
ರೇಟಿಂಗ್ : 3.5/ 5
ಚಿತ್ರ : ಬೇಗೂರು ಕಾಲೋನಿ
ನಿರ್ದೇಶಕ : ಫ್ಲೈಯಿಂಗ್ ಕಿಂಗ್ ಮಂಜು
ನಿರ್ಮಾಪಕ : ಶ್ರೀನಿವಾಸ್ ಬಾಬು
ಸಂಗೀತ : ಅಭಿನಂದನ್
ಛಾಯಾಗ್ರಹಣ : ಕಾರ್ತಿಕ್
ತಾರಾಗಣ : ರಾಜೀವ್ ಹನು , ಫ್ಲೈಯಿಂಗ್ ಕಿಂಗ್ ಮಂಜು , ಪೊಸಾನಿ ಕೃಷ್ಣ ಮುರುಳಿ , ಪಲ್ಲವಿ ಪರ್ವ , ಕೀರ್ತಿ ಭಂಡಾರಿ , ಬಾಲ ರಾಜವಾಡಿ ಹಾಗೂ ಮುಂತಾದವರು…
ಬದುಕಿನಲ್ಲಿ ಜೀವಕ್ಕೆ ಜೀವ ಕೊಡುವ ಒಬ್ಬ ಗೆಳೆಯ ಇರಬೇಕು ಹಾಗೇ ಜೊತೆಯಾಗಿ ಗೆಳೆಯರೊಟ್ಟಿಗೆ ಆಟವಾಡೋದಕ್ಕೆ ಒಂದು ಮೈದಾನವು ಬೇಕು. ನೆಮ್ಮದಿಯ ಬದುಕು , ಆರೋಗ್ಯಕರ ವಾತಾವರಣ ಕಾಪಾಡಿಕೊಳ್ಳುವುದು ಅಷ್ಟೇ ಮುಖ್ಯ. ಅಂತದ್ದೇ ಒಂದು ಕಥಾನಕ ಮೂಲಕ ಇಬ್ಬರು ಗೆಳೆಯರು ಮಕ್ಕಳ ಆಟದ ಮೈದಾನ ಉಳಿಸಿಕೊಳ್ಳಲು ಹೋರಾಡುವ ಕಥಾನಕದೊಂದಿಗೆ ಸ್ನೇಹ , ಪ್ರೀತಿ , ಸಂಬಂಧ , ದ್ವೇಷ ರಾಜಕೀಯ ಸುತ್ತ ಬೆಸೆದುಕೊಂಡು ಈ ವಾರ ತೆರೆಯ ಮೇಲೆ ಬಂದಿರುವಂತಹ ಚಿತ್ರ “ಬೇಗೂರು ಕಾಲೋನಿ”.
ತನ್ನ ಸೌಮ್ಯ ಸ್ವಭಾವದಿಂದಲೇ ಕಾಲೋನಿಯಲ್ಲಿ ಪ್ರೀತಿ ಗಳಿಸಿಕೊಂಡಿರುವ ರಾಘವ (ರಾಜೀವ್ ಅನು). ಜನರ ಕಷ್ಟಕ್ಕೆ ಸ್ಪಂದಿಸುತ್ತಾನೆ. ಅದಕ್ಕೆ ತದ್ವಿರುದ್ಧವಾಗಿ ಗುಳ್ಳಿ ಶಿವ (ಫ್ಲೈಯಿಂಗ್ ಕಿಂಗ್ ಮಂಜು) ತನ್ನ ಆರ್ಭಟದ ಮೂಲಕವೇ ಇಡೀ ಕಾಲೋನಿಯಲ್ಲಿ ಗುರುತಿಸಿಕೊಂಡಿರುತ್ತಾನೆ. ಆದರೆ ಇವರಿಬ್ರು ಜೀವದ ಗೆಳೆಯರು.
ಇದರ ನಡುವೆ ರಾಜಕೀಯ ಪುಡಾರಿಗಳ ಲೆಕ್ಕಾಚಾರದ ನಡುವೆ ಆಟದ ಮೈದಾನ ಉಳಿಸಿಕೊಳ್ಳಲು ಇಬ್ಬರು ಗೆಳೆಯರು ಬೇಡಿಕೆ ಇಡುತ್ತಾರೆ. ಇದು ಕಗ್ಗಂಟಿನ ವಿಚಾರವಾಗಿ ವೈಶಮ್ಯ, ದ್ವೇಷ , ಹೊಡೆದಾಟ ದಾರಿಯಾಗಿ ಒಂದಷ್ಟು ಗ್ಯಾಂಗ್ ಗಳು ಇಬ್ಬರು ಗೆಳೆಯರನ್ನ ಮಟ್ಟ ಹಾಕಲು ಮುಂದಾಗುತ್ತಾರೆ.
ಇದರ ನಡುವೆ ಆಕಸ್ಮಿಕವಾಗಿ ಒಂದು ಘಟನೆ ಇಬ್ಬರು ಗೆಳೆಯರೂ ದ್ವೇಷಿಸುವ ಹಂತಕ್ಕೆ ಬರುತ್ತದೆ. ಹಾಗೆಯೇ ಒಂದಷ್ಟು ಫ್ಲಾಶ್ ಬ್ಯಾಕ್ ಕಥೆಯ ನಡುವೆ ಬಾಲ್ಯದ ಗೆಳೆಯರ ಸ್ನೇಹ ಜೊತೆಗೆ ಸಾಕಿ ಸಲಗಿದವನ ಸುತ್ತ ಇರುವ ಸೇಡಿನ ಕಿಚ್ಚು ತೆರೆದುಕೊಳ್ಳುತ್ತದೆ. ಬದುಕಿನ ನಾನಾ ತಿರುವುಗಳ ನಡುವೆ ಸಾಗುವ ಈ ಗೆಳೆಯರ ಬದುಕಿನಲ್ಲಿ ಎದುರಾಗುವ ರೋಚಕ ಘಟನೆಗಳು ಮನಮುಟ್ಟುವಂತಿದೆ.
ಗೆಳೆಯರ ಗುರಿ ಏನಾಗುತ್ತೆ…
ಆಟದ ಮೈದಾನ ಸಿಗುತ್ತಾ…
ರಾಜಕೀಯ ಕೈವಾಡ ನಡೆಯುತ್ತಾ…
ಕ್ಲೈಮಾಕ್ಸ್ ಏನು… ಇದೆಲ್ಲದಕ್ಕೂ ಉತ್ತರ ತಿಳಿಯಬೇಕಾದರೆ ಈ ಚಿತ್ರವನ್ನು ನೋಡಬೇಕು.
ಇದು ಪ್ರಸ್ತುತ ನಡೆಯುತ್ತಿರುವ ಹಲವು ಘಟನೆಗಳಿಗೆ ಕನ್ನಡಿಯಂತೆ ಕಂಡುಬರುವಂತಹ ಕಥನಕವಾಗಿದ್ದು , ನಿರ್ದೇಶಕರು ನೈಜಕ್ಕೆ ಪೂರಕವಾಗಿ ನಮ್ಮ ಸೊಗಡಿನ ಕಥೆಯನ್ನ ಬೆಸೆದುಕೊಂಡು ಕುತೂಹಲಕರವಾಗಿ , ಕಮರ್ಷಿಯಲ್ ಮೂಲಕ ಹೇಳು ಹೊರಟಿರುವ ವಿಚಾರ ಮೆಚ್ಚುವಂಥದ್ದು. ಇದು ಒಂದು ಮೈದಾನಕ್ಕಾಗಿ ನಡೆಯೋ ಹೋರಾಟವಲ್ಲ , ಮಕ್ಕಳ ಒಳಿತಿಗಾಗಿ , ಆರೋಗ್ಯಕರ ಜೀವನ ಶೈಲಿಗಾಗಿ ನಡೆಸುವ ಯುದ್ದವೇ ಎನ್ನುವಂತಿದೆ.
ಪ್ರಭಾವಶಾಲಿಗಳ ಪ್ರವೇಶ, ಮಾಲ್, ಅಪಾರ್ಟ್ಮೆಂಟ್‌ಗಾಗಿ ದಿನದಿಂದ ದಿನಕ್ಕೆ ಮೈದಾನದ ಜಾಗಗಳು ಕೆಲವು ಅಧಿಕಾರಿ , ಮಂತ್ರಿಗಳ ಕೃಪೆಯಿಂದ ಕಣ್ಮರೆಯಾಗುತ್ತಿದ್ದು, ಮಧ್ಯಮ ವರ್ಗದ ಕುಟುಂಬದ ಮಕ್ಕಳಿಗೆ ಆಟವಾಡಲು ಸೂಕ್ತ ಮೈದಾನಗಳೇ ಇಲ್ಲದಂತಾಗುತ್ತಿವೆ. ಇಂತಹ ಸೂಕ್ಷ್ಮ ವಿಚಾರಗಳನ್ನ ಹೇಳುವುದರ ಜೊತೆಗೆ ಗೆಳೆತನ , ಸಂಬಂಧಕ್ಕೆ ಎಷ್ಟು ಮಹತ್ವ ಎಂಬುದನ್ನು ತೆರೆದಿಟ್ಟಿದ್ದಾರೆ. ಚಿತ್ರಕಥೆಯಲ್ಲಿ ಇನ್ನಷ್ಟು ಹಿಡಿತ ಮಾಡಬಹುದಿತ್ತು.
ಇಡೀ ಚಿತ್ರದ ಹೈಲೈಟ್ ಎಂದರೆ ಕಾರ್ತಿಕ್ ಕ್ಯಾಮೆರಾ ಕೈಚಳಕ ಹಾಗೂ ಅಭಿನಂದನ್ ಕಶ್ಯಪ್ ಸಂಗೀತ ಹಾಗೂ ಹಿನ್ನೆಲೆ ಸಂಗೀತ. ತಾಂತ್ರಿಕವಾಗಿ ತಂಡ ಬಹಳಷ್ಟು ಶ್ರಮ ಪಟ್ಟಿರುವುದು ಗಮನ ಸೆಳೆಯುತ್ತದೆ. ಪ್ರೇಕ್ಷಕರ ಗಮನ ಸೆಳೆಯುವಂತಹ ಚಿತ್ರವನ್ನ ನಿರ್ಮಿಸಿರುವ ನಿರ್ಮಾಪಕರ ಸಾಹಸವನ್ನು ಮೆಚ್ಚಬೇಕು.
ಇನ್ನು ನಾಯಕನಾಗಿ ಅಭಿನಯಿಸಿರುವ ರಾಜೀವ್ ಹನು ತಮ್ಮ ಪಾತ್ರಕ್ಕೆ ಜೀವ ತುಂಬಿ ಕೆಲವು ದೃಶ್ಯಗಳು ಮನ ಮುಟ್ಟುವಂತಿದೆ. ಇನ್ನು ನಿರ್ದೇಶನದ ಜೊತೆಗೆ ನಟನೆಯಲ್ಲಿ ಸೈ ಎನ್ನುವಂತೆ ಎರಡು ಶೇಡ್ ಗಳಲ್ಲಿ ಮತ್ತೊಬ್ಬ ನಾಯಕ ನಟ ಫ್ಲೈಯಿಂಗ್ ಕಿಂಗ್ ಮಂಜು ಗಮನ ಸೆಳೆದಿದ್ದಾರೆ. ಇವರಿಬ್ಬರ ಪಾತ್ರಗಳು ಇಡೀ ಚಿತ್ರವನ್ನ ಆವರಿಸಿಕೊಂಡಿದೆ. ಇನ್ನು ನಾಯಕಿಯಾಗಿ ಪಲ್ಲವಿ ಪರ್ವ ಕೂಡ ಗಮನ ಸೆಳೆಯುತ್ತಾರೆ.
ಉಳಿದಂತೆ ಪೊಸಾನಿ ಕೃಷ್ಣ ಮುರುಳಿ , ಪಲ್ಲವಿ ಪರ್ವ , ಕೀರ್ತಿ ಭಂಡಾರಿ , ಬಾಲ ರಾಜವಾಡಿ
ಪಾತ್ರಗಳು ಜೀವ ತುಂಬಿ ಅಭಿನಯಿಸಿದ್ದಾರೆ. ಈ ಬೇಗೂರು ಕಾಲೋನಿ ಚಿತ್ರ ಒಂದು ವರ್ಗಕ್ಕೆ ಸೀಮಿತವಾದ ಕಥೆಯಲ್ಲ , ಇಡೀ ಕುಟುಂಬ ಸಮೇತ ನೋಡುವಂತ ಚಿತ್ರವಾಗಿದ್ದು , ಎಲ್ಲರೂ ಒಮ್ಮೆ ನೋಡಬಹುದು.