“ಬಾಯ್” ಚಿತ್ರ ಇದೇ 17ಕ್ಕೆ ರಾಜ್ಯಾದ್ಯಂತ ಬಿಡುಗಡೆ.
ಚಂದನವನಕ್ಕೆ ಮತ್ತೊಂದು ಯುವಕರ ಬಳಗ ವಿಭಿನ್ನ ಬಗೆಯ ಚಿತ್ರವನ್ನು ನಿರ್ಮಿಸಿ ತೆರೆಗೆ ತರಲು ಸಜ್ಜಾಗಿದ್ದಾರೆ. ನಮ್ಮದು ನಾಡು, ನುಡಿ, ಸಂಸ್ಕೃತಿ, ಕಲೆಗಳ ಬೀಡು. ನಮ್ಮ ಈ ನಾಡಿನಲ್ಲಿ ಹಲವು ಸಂಸ್ಕೃತಿಗಳು , ಸಮುದಾಯಗಳ ಪರಂಪರೆಗಳು ಸಹಬಾಳ್ವೆಯಿಂದ ಸಾಗಿ ಬಂದಿದೆ. ಅದರಲ್ಲಿ ಬಂಜರ ಸಮುದಾಯದ ಸಂಸ್ಕೃತಿ ಕೂಡ ಒಂದು.
ಈ ಸಮುದಾಯದ ಸಂಸ್ಕೃತಿಯ ಜೊತೆಗೆ ಸಂಬಂಧ , ಪ್ರೀತಿ , ಸ್ನೇಹ, ಸೋದರತ್ವ ಬೆಸುಗೆಯೊಂದಿಗೆ ನಿರ್ಮಾಣಗೊಂಡು ತೆರೆಯ ಮೇಲೆ ಬರಲು ಸಜ್ಜಾಗಿರುವಂತಹ ಚಿತ್ರವೇ ಬಾಯ್. ಈ ಚಿತ್ರದ ಟ್ರೇಲರ್ ಹಾಗೂ ಹಾಡು ರಿಲೀಸ್ ಕಾರ್ಯಕ್ರಮ ಬೆಂಗಳೂರಿನ ಕಲಾವಿದರ ಭವನದಲ್ಲಿ ಆಯೋಜಿಸಿದ್ದು, ಯುವ ಖಳ ನಟ ಚಲುವರಾಜ್ ಆಗಮಿಸಿ ಟ್ರೈಲರ್ ಬಿಡುಗಡೆಗೆ ಚಾಲನೆ ನೀಡಿ ಇಡೀ ತಂಡಕ್ಕೆ ಶುಭವನ್ನು ಕೋರಿದರು.
ನಟ, ನಿರ್ದೇಶಕ ಯುವ ಮಾತನಾಡಿ, ಇದು ಮಾಸ್ ಓರಿಯೆಂಟ್ ಸಿನಿಮಾ. ಇದರಲ್ಲಿ ಬಂಜಾರ ಸಮುದಾಯದ ಸಂಪ್ರದಾಯ ತೋರಿಸಿದ್ದೇವೆ. ಸಿನಿಮಾ ಅದ್ಭುತವಾಗಿ ಮೂಡಿ ಬಂದಿದೆ. ಇದು ಫ್ಯಾಮಿಲಿ ಒರಿಯೆಂಟೆಡ್ ಸಿನಿಮಾ. ಇಡೀ ಟೀಂ ಬೆಂಬಲ ಅಂತು ತುಂಬಾ ಚೆನ್ನಾಗಿ ಇತ್ತು.
ಬೆಳಗಾವಿಯ ಹುಡುಗ ನಾನು, ಬಹಳಷ್ಟು ಕನಸು ಹೊತ್ತು ಬೆಂಗಳೂರಿಗೆ ಬಂದೆ. ಗ್ಯಾಂಗ್ ಸ್ಟರ್, ಜೂನಿಯರ್ ಆರ್ಟಿಸ್ಟ್ ಆಗಿ ಕೂಡ ಫಿಲಂ ಇಂಡಸ್ಟ್ರಿಯಲ್ಲಿ ಕೆಲಸ ಮಾಡಿದ್ದೀನಿ. ಒಮ್ಮೆ ನಮ್ಮ ಫೈಟ್ ಮಾಸ್ಟರ್ ಥ್ರಿಲ್ಲರ್ ಮಂಜು ಸರ್ ನನ್ನನ್ನು ನೋಡಿ ನೀನು ಒಳ್ಳೆ ಕಲಾವಿದ ಆಗಬಹುದು ಅಂತ ಹೇಳಿದ್ರು, ಅಲ್ಲಿಂದ ಪ್ರಯತ್ನ ಶುರು ಮಾಡಿದೆ.
ನಟನಾಗಲು ಮುಂದಾದ ನಂತರ ನನ್ನನ್ನು ಯಾರು ಹೇಗೆ ತೋರಿಸುತ್ತಾರೋ ಏನೋ ಎಂಬ ಅನುಮಾನ ಮೂಡಿತು ಹಾಗಾಗಿ ನಾನೇ ನಿರ್ದೇಶನ ಮಾಡುವುದಕ್ಕೂ ಮುಂದಾದೆ. ಬಂಜಾರ ಸಮುದಾಯ ಸಂಸ್ಕೃತಿಯನ್ನು ತೆರೆ ಮೇಲೆ ತರಬೇಕೆಂದು ನಿರ್ದೇಶನಕ್ಕೆ ಇಳಿದೆ. ಸಿನಿಮಾ ರೆಡಿಯಾಗಿದೆ , ಇದೇ ತಿಂಗಳ 17ಕ್ಕೆ ತೆರೆಗೆ ತರುತ್ತಿದ್ದೇವೆ ನಿಮ್ಮೆಲ್ಲರ ಸಹಕಾರ ಪ್ರೀತಿ ಇರಲಿ ಎಂದು ಕೇಳಿಕೊಂಡರು.
ಈ ಸಿನಿಮಾಗೆ ಕಥೆ ಬರೆದ ಸುರೇಶ್ ಮಾತನಾಡಿ, ಈ ಸಿನಿಮಾಗೆ ಕಥೆ ಬರೆಯಲು ಅಪ್ಪು ಸರ್ ಸ್ಪೂರ್ತಿ. ನಾನು ಹೈಗ್ರೌಂಡ್ ಪೊಲೀಸ್ ಠಾಣೆಯಲ್ಲಿ ಕೆಲಸ ಮಾಡುತ್ತಿರಬೇಕಾದರೆ, ಅಲ್ಲಿ ಶಾಲೆಗೆ ಮಕ್ಕಳನ್ನು ಬಿಡಲು ಬರುತ್ತಿದ್ದರು. ಅಲ್ಲಿ ಸಿಕ್ಕಾಗ ಮಾತನಾಡಿಸುತ್ತಿದ್ದೆ. ಅವರು ಕೂಡ ಏನ್ರಿ ಪೊಲೀಸಪ್ಪ ಚೆನ್ನಾಗಿದ್ದೀರಾ ಅಂತ ಮಾತನಾಡಿಸೋರು.
ಇವತ್ತು ಅವರನ್ನ ಮಿಸ್ ಮಾಡಿಕೊಳ್ಳುತ್ತಾ ಇದ್ದೀವಿ. ಅವರಿಗೆ ನಾನು ಹೇಳಿದ್ದೆ, ಸರ್ ನಾನು ನಿಮ್ಗೋಸ್ಕರ ಕಥೆ ಬರಿಬೇಕು. ಅದು ಬಂಜಾರ ಹಾಗೂ ಕನ್ನಡ ಭಾಷೆಯಲ್ಲಿರಬೇಕು ಸರ್ ಎಂದಿದ್ದೆ. ಆಗ ಅವರು ಬರಿಯಪ್ಪ, ನೀನು ಪೋಲಿಸ್ ಆಗಿದ್ದು ಸ್ಟೋರಿ ಬರೆಯೋಕೆ ಬರುತ್ತಾ ಎಂದಿದ್ದರು. ಇದು ಅವರಿಗೋಸ್ಕರ ಬರೆದ ಕಥೆ.
ಅವರು ಇದ್ದಿದ್ದರೆ ಇವತ್ತು, ಇಲ್ಲಿಗೆ ಬರ್ತಾ ಇದ್ದರು ಎಂದು ಪುನೀತ್ ರನ್ನ ನೆನೆಸಿಕೊಂಡು , ಇದೊಂದು ಉತ್ತಮ ಚಿತ್ರವಾಗಿ ಬಂದಿದೆ. ಇದೇ 17ರಂದು ರಾಜ್ಯಾದ್ಯಂತ ಬಿಡುಗಡೆ ಮಾಡುತ್ತಿದ್ದೇವೆ. ಈ ಚಿತ್ರ ಬಂಜಾರ ಭಾಷೆಯಲ್ಲಿ ಕೂಡ ಅತಿ ಶೀಘ್ರದಲ್ಲಿ ಬಿಡುಗಡೆ ಮಾಡುತ್ತೇವೆ ಎಂದು ಹೇಳಿಕೊಂಡರು.
ಇನ್ನು ಚಿತ್ರದ ನಾಯಕಿ ಪೂಜಾ ಬಸವರಾಜ್ ಮಾತನಾಡಿ, ನಾನು ಮೂಲತಃ ಬಿಜಾಪುರದ ಹುಡುಗಿ , ಇದು ನನ್ನ ಮೊದಲ ಚಿತ್ರ ಈ ಹಿಂದೆ ಹಲವಾರು ಚಿತ್ರಗಳಲ್ಲಿ ಸಣ್ಣ ಪುಟ್ಟ ಪಾತ್ರಗಳನ್ನ ಮಾಡಿದ್ದೇನೆ. ನನ್ನದು ವಿದೇಶಿ ಹುಡುಗಿಯ ಪಾತ್ರ. ಬಂಜಾರ ಕಲೆ ಮತ್ತು ಸಂಸ್ಕೃತಿಯ ಅಧ್ಯನಕ್ಕೆ ಬಂದಿರುತ್ತೇನೆ. ಮುಂದೆ ಏನೆಲ್ಲಾ ಆಗುತ್ತೆ ಎಂಬುದನ್ನು ಸಿನಿಮಾದಲ್ಲಿ ಅದ್ಭುತವಾಗಿ ತೋರಿಸಿದ್ದಾರೆ. ನೀವೆಲ್ಲರೂ ಬಂದು ನೋಡಿ ಹರಸಿ ಎಂದು ಕೇಳಿಕೊಂಡರು.
ಇನ್ನು ಹಿರಿಯ ನಟ ಪ್ರಶಾಂತ್, ರಾಮ್, ಸುಧಾ ಸೇರಿದಂತೆ ಹಲವಾರು ಕಲಾವಿದರು ತಮ್ಮ ತಮ್ಮ ಪಾತ್ರದ ಬಗ್ಗೆ ಮಾಹಿತಿಯನ್ನು ಹಂಚಿಕೊಂಡರು. ಈ ಒಂದು ಚಿತ್ರಕ್ಕೆ ಕಥೆ ಬರೆದಿರುವ ಸುರೇಶ್ ಅವರ ಧರ್ಮಪತ್ನಿ ಮಾಲಾಶ್ರೀ ಸುರೇಶ್ ಬಂಡವಾಳ ಹೂಡಿದ್ದಾರೆ. ಇದೇ ತಿಂಗಳ 17ಕ್ಕೆ ಪ್ರೇಕ್ಷಕರ ಮುಂದೆ “ಬಾಯ್” ಅದ್ದೂರಿಯಾಗಿ ಬಿಡುಗಡೆಯಾಗುತ್ತಿದೆ.