ಖಾಕಿಯ ರೋಚಕ ಇನ್ವೆಸ್ಟಿಗೇಷನ್ ಕತೆ “Case of ಕೊಂಡಾಣ” (ಚಿತ್ರ ವಿಮರ್ಶೆ-ರೇಟಿಂಗ್ : 3.5/5)
ರೇಟಿಂಗ್ : 3.5/5
ಚಿತ್ರ : case of ಕೊಂಡಾಣ
ನಿರ್ದೇಶಕ : ದೇವಿಪ್ರಸಾದ್
ನಿರ್ಮಾಪಕ : ದೇವಿಪ್ರಸಾದ್ ಶೆಟ್ಟಿ , ಸಾತ್ವಿಕ್ ಹೆಬ್ಬಾರ್
ಸಂಗೀತ : ಗಗನ್ ಬಡೇರಿಯಾ
ಛಾಯಾಗ್ರಾಹಕ : ವಿಶ್ವ ಜಿತ್
ತಾರಾಗಣ : ವಿಜಯ ರಾಘವೇಂದ್ರ , ಭಾವನ ಮೆನನ್, ಖುಷಿ ರವಿ, ಸುಂದರ್ ರಾಜ್ , ರಂಗಾಯಣ ರಘು , ಅಶ್ವಿನ್ ಹಾಸನ್ , ಪೆಟ್ರೋಲ್ ಪ್ರಸನ್ನ , ಬಾಲರಾಜ್ ವಾಡಿ ಹಾಗೂ ಮುಂತಾದವರು…
ಬೆಂಗಳೂರಿನಂತಹ ಮಹಾನಗರದಲ್ಲಿ ಪ್ರತಿದಿನ ಕಂಡು ಕಂಡರಿಯದಂತೆ ಹಲವಾರು ಕ್ರೈಂ , ಮರ್ಡರ್, ಅನಿರೀಕ್ಷಿತ ದುರ್ಘಟನೆಗಳು ಪುಡಾರಿಗಳಿಂದಲೂ ನಡೆಯುತ್ತದೆ. ಅದೇ ರೀತಿ ಖಾಕಿಯ ಸುಳಿಯಲ್ಲೂ ಕೂಡ ಎದುರಾಗುತ್ತಲೇ ಇರುತ್ತದೆ ಎಂಬುವುದನ್ನು ಬೆಸೆದುಕೊಂಡು. ಪೋಲಿಸ್ ಇಲಾಖೆಗೆ ಸೇರ್ಪಡೆಯಾಗಲು ಕಾಂಚಾನದ ಕೈಚಳಕ , ಮಕ್ಕಳನ್ನ ಕಾಪಾಡಿಕೊಳ್ಳಲು ತಂದೆ ತಾಯಿಯ ಪರದಾಟ , ರೌಡಿಗಳ ಅಟ್ಟಹಾಸ, ಕ್ರೈಂ ಇನ್ವೆಸ್ಟಿಗೇಷನ್ ನ ಚಾಣಾಕ್ಷತನ ಹೀಗೆ ಒಂದಷ್ಟು ವಿಚಾರಗಳೊಂದಿಗೆ ಕುತೂಹಲ ಮೂಡಿಸುವ ನಿಟ್ಟಿನಲ್ಲಿ ಈ ವಾರ ತೆರೆಯ ಮೇಲೆ ಬಂದಿರುವಂತಹ ಚಿತ್ರ “ಕೇಸ್ ಆಫ್ ಕೊಂಡಾಣ”. ಒಂದು ರೌಡಿ ಪಡೆ ಅಟ್ಟಹಾಸದ ಮೂಲಕ ಪೊಲೀಸರಿಗೂ ಜಗದಂತೆ ಓಡಾಡುತ್ತಾರೆ. ಮತ್ತೊಂದೆಡೆ ಸರಣಿ ಕೊಲೆಗಳ ಹಾವಳಿಗೆ ಪೊಲೀಸರ ತತ್ತರ. ಎಸಿಪಿ ಲಕ್ಷ್ಮಿ (ಭಾವನ ಮೆನನ್) ಹಂತಕರ ಹುಡುಕಾಟಕ್ಕೆ ತಂಡ ರಚನೆ ಮಾಡುತ್ತಾಳೆ. ಅದೇ ಸ್ಟೇಷನ್ ಗೆ ನೂತನ ಎಎಸ್ಐ ಆಗಿ ಸೇರ್ಪಡೆಯಾಗುವ ವಿಲ್ಸನ್ (ವಿಜಯ ರಾಘವೇಂದ್ರ). ತಂದೆಯ (ಸುಂದರ ರಾಜ್) ಆಸೆಯಂತೆ ಪೋಲಿಸ್ ಕೆಲಸಕ್ಕೆ ಸೇರುವ ವಿಲ್ಸನ್ ಕೆಲವು ಹಿರಿಯ ಅಧಿಕಾರಿಗಳಿಗೆ ಹಣ ಹೊಂದಿಸಲು ಪರದಾಡುತ್ತಾನೆ.
ಹಿರಿಯ ಪೊಲೀಸ್ ಅಧಿಕಾರಿ (ಬಾಲರಾಜ್ ವಾಡಿ) ಮತ್ತು ಗೆಳೆಯ ಅಧಿಕಾರಿ (ಪೆಟ್ರೋಲ್ ಪ್ರಸನ್ನ). ಅಕ್ಕ ಪಕ್ಕ ಸ್ಟೇಷನ್ ಲಿಮಿಟ್ಸ್ನ ಮತ್ತಷ್ಟು ಪೊಲೀಸ್ ಅಧಿಕಾರಿಗಳು ಎಸಿಪಿ ಲಕ್ಷ್ಮಿಯ ತಂದೆ (ರಂಗಾಯಣ ರಘು) ಕೂಡ ಈ ಸರಣಿ ಕೊಲೆಗಳಕರ ಹುಡುಕಾಟದಲ್ಲಿ ನಿರತರಾಗುತ್ತಾರೆ. ಇದರ ನಡುವೆ ವಿಲ್ಸನ್ ಅನ್ನ ಪ್ರೀತಿಸುವ ಡಾಕ್ಟರ್ ಮಂದಾರ (ಖುಷಿ ರವಿ). ಮನೆಯಲ್ಲಿ ಜಾತಿ ವಿಚಾರವಾಗಿ ಒಪ್ಪದಿದ್ದರೂ ಅವನನ್ನೇ ಮದುವೆಯಾಗಲು ನಿರ್ಧಾರ. ವಿಲ್ಸನ್ ಪರದಾಟಕ್ಕೆ ಹಣ ಒದಗಿಸುವ ಮಂದಾರ. ಬೇರೆ ಊರಿನಿಂದ ಬಂದು ಪಾನಿಪುರಿ ಮಾಡುತ್ತಾ ಜೀವನ ನಡೆಸುವ ಬಡ ಕುಟುಂಬ. ಮುದ್ದಾದ ಮಗನನ್ನು ಅನಾರೋಗ್ಯದಿಂದ ಕಾಪಾಡಿಕೊಳ್ಳಲು ಹಣ ಸೇರಿಸಲು ಪರದಾಡುವ ತಂದೆ.
ಒಂದು ಕಡೆ ಸರಣಿ ಕೊಲೆಗಳ ರೂವಾರಿಯ ಜಾಡು ಹಿಡಿಯುವ ಎಸಿಪಿ ಲಕ್ಷ್ಮಿ.
ಮತ್ತೊಂದೆಡೆ ಹಣವನ್ನು ಕೆಲವು ಅಧಿಕಾರಿಗಳಿಗೆ ಕೊಡಲು ಹೊರಡುವ ವಿಲ್ಸನ್.
ಮಗನ್ನು ಕಾಪಾಡಿಕೊಳ್ಳಲು ಹಣವನ್ನು ಕದಿಯುವ ತಂದೆಯ ಅನಿರೀಕ್ಷಿತ ಸಾವು.
ಈ ಮೂರು ಘಟನೆಗಳು ಒಂದಕ್ಕೊಂದು ಕೊಂಡಿಯಂತೆ ಹಲವು ರೋಚಕ ಘಟನೆಗಳು ಎದುರಾಗುತ್ತಾ, ಪ್ರತಿ ಇನ್ವೆಸ್ಟಿಗೇಷನ್ ಹಂತದಲ್ಲೂ ಕುತೂಹಲ ಮೂಡಿಸುತ್ತಾ ಸಾಗುತ್ತದೆ.
ಕೊಂಡಾಣ ಯಾಕೆ…
ಹಂತಕರು ಏನಾದರೂ…
ವಿಲ್ಸನ್ ಹಣ ಕೊಡ್ತಾನಾ…
ಬಡ ತಂದೆಯ ಸಾವಿಗೆ ಕಾರಣ ಯಾರು…
ಕ್ಲೈಮಾಕ್ಸ್ ನೀಡುವ ಉತ್ತರ ಏನು…
ಈ ಎಲ್ಲಾ ಕುತೂಹಲ ಅಂಶಗಳನ್ನು ನೋಡಬೇಕಾದರೆ ಒಮ್ಮೆ ಈ ಚಿತ್ರವನ್ನು ತೆರೆಯ ಮೇಲೆ ನೋಡಲೇಬೇಕು.
ಇಡೀ ಚಿತ್ರದ ಕೇಂದ್ರ ಬಿಂದು ವಿಜಯ ರಾಘವೇಂದ್ರ ಒಬ್ಬ ಪೊಲೀಸ್ ಇನ್ಸ್ಪೆಕ್ಟರ್ ಆಗಿ ಸೇರಿಕೊಳ್ಳುವವನ ಬದುಕು , ಅವನ ಸುತ್ತ ಇರುವ ಸಂಬಂಧ , ಸ್ನೇಹ , ಪ್ರೀತಿ ಹಾಗೂ ಅಚಾನಕ್ಕಾಗಿ ಅವನ ಬದುಕಿನಲ್ಲಿ ಎದುರಾಗುವ ಒಂದು ದುರಂತ ಘಟನೆ ಅವನ ಜೀವನದ ದಿಕ್ಕನ್ನೇ ಯಾವ ಹಂತಕ್ಕೆ ತೆಗೆದುಕೊಂಡು ಹೋಗುತ್ತದೆ ಎಂಬುದನ್ನು ಬಹಳ ನೈಜ್ಯವಾಗಿ ಪಾತ್ರಕ್ಕೆ ಜೀವ ತುಂಬಿ ನಟಿಸಿದ್ದಾರೆ. ಒಬ್ಬ ವ್ಯಕ್ತಿ ಒಂದಷ್ಟು ಪೊಲೀಸ್ ಗೆ ಚಳ್ಳೆ ಹಣ್ಣ ತಿನಿಸುವ ಕಾರ್ಯವೈಖರಿ ರೋಜಕವಾಗಿದೆ.
ಇನ್ನು ಬಹಳ ಗ್ಯಾಪ್ ನಂತರ ಬೆಳ್ಳಿ ಪರದೆಯಲ್ಲಿ ಕಾಣಿಸಿಕೊಂಡ ಮುದ್ದಾದ ಬೆಡಗಿ ಭಾವನ ಮೆನನ್ ಎಸಿಪಿ ಪಾತ್ರವನ್ನು ಸಮರ್ಥವಾಗಿ ನಿರ್ವಹಿಸಿದ್ದಾರೆ. ಇನ್ನು ನಾಯಕಿಯ ತಂದೆಯಾಗಿ , ಪೋಲಿಸ್ ಇನ್ಸ್ಪೆಕ್ಟರ್ ಪಾತ್ರದಲ್ಲಿ ಕಾಣಿಸಿಕೊಂಡು , ಕೆಲವೊಂದು ದೃಶ್ಯಗಳಲ್ಲಿ ಮನಮುಟ್ಟುವಂತೆ ಅಭಿನಯಿಸಿದ್ದಾರೆ. ಅದೇ ರೀತಿ ನಾಯಕನ ತಂದೆಯಾಗಿ ಸುಂದರಾಜ್ ಕೂಡ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಇನ್ನು ನಾಯಕನ ಪ್ರೇಯಸಿಯಾಗಿ ಡಾಕ್ಟರ್ ಪಾತ್ರದಲ್ಲಿ ಖುಷಿ ರವಿ ಗಮನ ಸೆಳೆಯುವ ರೀತಿ ಅಭಿನಯಿಸಿದ್ದಾರೆ.
ಉಳಿದಂತೆ ಕಾಣಿಸಿಕೊಂಡಿರುವ ಪೊಲೀಸ್ ಪಾತ್ರಧಾರಿಗಳಲ್ಲಿ ಅಶ್ವಿನ್ ಹಾಸನ್ , ಪೆಟ್ರೋಲ್ ಪ್ರಸನ್ನ , ಬಾಲರಾಜ್ ವಾಡಿ ಸೇಲಂತೆ ಎಲ್ಲರೂ ಕೂಡ ತಮ್ಮ ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಇನ್ನು ನಿರ್ದೇಶಕರು ಆಯ್ಕೆ ಮಾಡಿಕೊಂಡಿರುವ ಕಥೆ ವಿಭಿನ್ನವಾಗಿದ್ದು , ಚಿತ್ರಕಥೆ ಇನ್ನಷ್ಟು ಬಿಗಿ ಆಗಬೇಕಿತ್ತು. ಕೆಲವೊಂದು ಸನ್ನಿವೇಶ , ಫೈಟ್ಗಳನ್ನು ಕತ್ತರಿಸಿದರೆ ಹೆಚ್ಚು ಗಮನ ಸಳೆಯುತ್ತಿತ್ತು. ಕುತೂಹಲವನ್ನು ಮೂಡಿಸುವ ರೀತಿಯಲ್ಲಿ ಸಾಗಿರುವುದು ಉತ್ತಮವಾಗಿದೆ.
ಒಂದು ಕ್ರೈಂ ಇನ್ವೆಸ್ಟಿಗೇಷನ್ ಕಥೆಗೆ ಬಂಡವಾಳ ಹೂಡಿರುವ ನಿರ್ಮಾಪಕರ ಧೈರ್ಯ ಕೂಡ ಮೆಚ್ಚಲೇಬೇಕು. ಬಹುತೇಕ ಕತ್ತಲಲ್ಲಿ ಚಿತ್ರೀಕರಣ ಮಾಡಿರುವ ಛಾಯಾಗ್ರಹಕರ ಕೈಚಳಕ ಉತ್ತಮವಾಗಿ ಮೂಡಿ ಬಂದಿದೆ. ಇನ್ನು ಸಂಗೀತ ಹಾಗೂ ಇನ್ನುಳೆ ಸಂಗೀತ ಗಮನ ಸೆಳೆಯುತ್ತದೆ. ಒಟ್ಟಾರೆ ಹೈಪರ್ ಲಿಂಕ್ , ಸಸ್ಪೆನ್ಸ್ , ಥ್ರಿಲ್ಲರ್ , ಮರ್ಡರ್
ಮಿಸ್ಟರಿ ನೋಡುವವರಿಗೆ ಬಹಳ ಬೇಗ ಇಷ್ಟವಾಗುವ ಈ ಚಿತ್ರವನ್ನು ಎಲ್ಲರೂ ಒಮ್ಮೆ ನೋಡುವಂತಿದೆ