ಸುಮಂತ್ ಶೈಲೇಂದ್ರ ಅಭಿನಯದ “ಚೇಸರ್”ಟೀಸರ್ ರೀಲಿಸ್ ಮಾಡಿದ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ.
ಹೊಸಬರ ಹೊಸಪ್ರಯತ್ನಕ್ಕೆ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಸದಾ ಪ್ರೋತ್ಸಾಹ ನೀಡುತ್ತಾ ಬರುತ್ತಿದ್ದಾರೆ. ಇತ್ತೀಚೆಗೆ ಮಾಲತಿ ಶೇಖರ್ ಶಿವಮೊಗ್ಗ ನಿರ್ಮಾಣದ, ಉಪೇಂದ್ರ ಅಭಿನಯದ “ಬುದ್ದಿವಂತ ೨” ಚಿತ್ರದ ಖ್ಯಾತಿಯ ಎಂ ಜಯ್ಯರಾಮಃ ನಿರ್ದೇಶನದ ಹಾಗೂ “ದಿಲ್ ವಾಲ” ಚಿತ್ರದ ಖ್ಯಾತಿಯ ಸುಮಂತ್ ಶೈಲೇಂದ್ರ ನಾಯಕನಾಗಿ ನಟಿಸಿರುವ “ಚೇಸರ್” ಚಿತ್ರದ ಟೀಸರ್ ಅನ್ನು ಧ್ರುವ ಸರ್ಜಾ ಅನಾವರಣ ಮಾಡಿದರು. ನಟರಾದ ಅರವಿಂದ್, ತ್ರಿವಿಕ್ರಮ್ ಹಾಗು ಕರಣ್ ಟೀಸರ್ ಬಿಡುಗಡೆ ಸಮಾರಂಭದಲ್ಲಿ ಉಪಸ್ಥಿತರಿದ್ದರು.
“ಚೇಸರ್” ಚಿತ್ರದ ಟೀಸರ್ ಚೆನ್ನಾಗಿದೆ. ಆಕ್ಷನ್ ಸನ್ನಿವೇಶಗಳಲ್ಲಿ ಸುಮಂತ್ ಶೈಲೇಂದ್ರ ಚೆನ್ನಾಗಿ ಅಭಿನಯಿಸಿದ್ದಾರೆ. ಜಯ್ಯರಾಮಃ ನಿರ್ದೇಶನ ಹಾಗೂ ಇಡೀ ತಂಡದ ಕಾರ್ಯವೈಖರಿ ಟೀಸರ್ ನಲ್ಲಿ ಎದ್ದು ಕಾಣುತ್ತಿದೆ. ನಿರ್ಮಾಪಕರಿಗೆ ಹಾಗೂ ಇಡೀ ತಂಡಕ್ಕೆ ಶುಭವಾಗಲಿ ಎಂದು ಧ್ರುವ ಸರ್ಜಾ ಹಾರೈಸಿದರು.
ನನ್ನ ಸ್ನೇಹಿತನ ಪ್ರೇಮವಿವಾಹಕ್ಕೆ ಸಾಕ್ಷಿ ಹಾಕಲು ಸಬ್ ರಿಜಿಸ್ಟರ್ ಆಫೀಸ್ ಗೆ ಹೋಗಿದಾಗ ಅಲ್ಲಿ ನನಗೆ ಅವರು ಹೇಳಿದ ಕಥೆಯೇ “ಚೇಸರ್”. ಈ ಕಥೆಯನ್ನು ಮೆಚ್ಚಿ ಸಿನಿಮಾ ನಿರ್ಮಾಣ ಮಾಡಿದ ಮಾಲತಿ ಶೇಖರ್ ಅವರಿಗೆ ಹಾಗೂ ಚಿತ್ರ ಉತ್ತಮವಾಗಿ ಬರಲು ಸಹಕಾರ ನೀಡಿದ ಇಡೀ ತಂಡಕ್ಕೆ, ವಿಶೇಷವಾಗಿ ಟೀಸರ್ ಬಿಡುಗಡೆ ಮಾಡಿಕೊಟ್ಟ ಧ್ರುವ ಸರ್ಜಾ ಅವರಿಗೆ ವಿಶೇಷ ಧನ್ಯವಾದ ಎಂದರು ನಿರ್ದೇಶಕ ಎಂ.ಜಯ್ಯರಾಮಃ.
ನಾನು ನಿರ್ಮಾಪಕಿಯಾಗಲು ನನ್ನ ಕುಟುಂಬದ ಸಹಕಾರವೇ ಕಾರಣ ಎಂದು ಮಾತನಾಡಿದ ನಿರ್ಮಾಪಕಿ ಮಾಲತಿ ಶೇಖರ್, ಹತ್ತು ವರ್ಷಗಳ ಹಿಂದೆ ” ಅಂಜನಿ ಪುತ್ರ” ಚಿತ್ರದಲ್ಲಿ ಪುನೀತ್ ರಾಜಕುಮಾರ್ ಅವರ ಚಿಕ್ಕಮ್ಮನ ಪಾತ್ರದಲ್ಲಿ ಅಭಿನಯಿಸಿದ್ದೆ. ಈ ಚಿತ್ರದ ಮೂಲಕ ನಿರ್ಮಾಪಕಿಯಾಗಿದ್ದೇನೆ. ಧ್ರುವ ಸರ್ಜಾ ಅವರು ಟೀಸರ್ ಬಿಡುಗಡೆ ಮಾಡಿಕೊಟ್ಟಿದ್ದು ಬಹಳ ಖುಷಿಯಾಗಿದೆ ಎಂದರು. ಮೂರು ವರ್ಷಗಳ ನಂತರ ನನ್ನ ಅಭಿನಯದ ಚಿತ್ರ ತೆರೆಗೆ ಬರಲು ಅಣಿಯಾಗುತ್ತಿದೆ. “ಚೇಸರ್” ಅಂದ ಕೂಡಲೆ ಬರೀ ಚೇಸಿಂಗ್ ಮಾತ್ರ ಇಲ್ಲ. ನೋಡುಗನಿಗೆ ಬೇಕಾದ ಎಲ್ಲಾ ಅಂಶಗಳು ನಮ್ಮ ಚಿತ್ರದಲ್ಲಿದೆ ಎಂದು ನಾಯಕ ಸುಮಂತ್ ಶೈಲೇಂದ್ರ ತಿಳಿಸಿದರು.
ಕಾರ್ಯಕಾರಿ ನಿರ್ಮಾಪಕ ಕಲ್ಮನೆ ಮಂಜಣ್ಣ, ಛಾಯಾಗ್ರಾಹಕ ಕೆ.ಎಸ್ ಚಂದ್ರಶೇಖರ್ ಹಾಗೂ ಹಿನ್ನಲೆ ಸಂಗೀತ ನೀಡಿರುವ ಹರ್ಷವರ್ಧನ್ ರಾಜ್ “ಚೇಸರ್” ಬಗ್ಗೆ ಮಾತನಾಡಿದರು. ಅರ್ಜುನ್ ಜನ್ಯ ಸಂಗೀತ ಸಂಯೋಜಿಸಿರುವ ಈ ಚಿತ್ರಕ್ಕೆ ಕೆ.ಎಂ.ಪ್ರಕಾಶ್ ಸಂಕಲನ ಹಾಗೂ ರವಿವರ್ಮ ಅವರ ಸಾಹಸ ನಿರ್ದೇಶನವಿದೆ. ಸುಮಂತ್ ಶೈಲೇಂದ್ರ ಅವರಿಗೆ ನಾಯಕಿಯಾಗಿ ರಕ್ಷ ಮೆನನ್ ನಟಿಸಿದ್ದಾರೆ. ರವಿಶಂಕರ್, ರಂಗಾಯಣ ರಘು, ಸಾಧುಕೋಕಿಲ, ಚಿಕ್ಕಣ್ಣ, ಕುರಿ ಪ್ರತಾಪ್, ಸುಚೇಂದ್ರ ಪ್ರಸಾದ್, ಕಡಿಪುಡಿ ಚಂದ್ರು, ಸಂಗೀತ ಮುಂತಾದವರು “ಚೇಸರ್” ಚಿತ್ರದ ತಾರಾಬಳಗದಲ್ಲಿದ್ದಾರೆ.