ಅಂಡಮಾನ್-ನಿಕೋಬಾರ್ ದ್ವೀಪದಲ್ಲಿ ‘ಚೌಕಿದಾರ್’ ಸಿನಿಮಾ ಮೊದಲ ಹಂತದ ಚಿತ್ರೀಕರಣ ಮುಕ್ತಾಯ
ಚೌಕಿದಾರ್ ಸಿನಿಮಾ ತನ್ನ ಕ್ಯಾಚಿ ಟೈಟಲ್ ನಿಂದಲೇ ಗಾಂಧಿನಗರದ ಸಿನಿಮಾಪ್ರೇಮಿಗಳಲ್ಲಿ ನಿರೀಕ್ಷೆ ಹೆಚ್ಚಿಸಿದೆ. ‘ರಥಾವರ’ ಸಿನಿಮಾ ನಿರ್ದೇಶಿಸಿದ್ದ ಚಂದ್ರಶೇಖರ್ ಬಂಡಿಯಪ್ಪ ಸಾರಥ್ಯದ ಈ ಚಿತ್ರದ ಅಂಗಳದಿಂದ ಹೊಸ ಅಪ್ ಡೇಟ್ ಸಿಕ್ಕಿದೆ. ಬಂಡೆ ಮಹಾಕಾಳಿ ಆಶೀರ್ವಾದ ಪಡೆದು ಶೂಟಿಂಗ್ ಅಖಾಡಕ್ಕೆ ಇಳಿದಿದ್ದ ಚಿತ್ರತಂಡವೀಗ 53 ದಿನಗಳ ಕಾಲ ಚಿತ್ರೀಕರಣ ಮುಗಿಸಿದೆ. ನೈಸರ್ಗಿಕ ಸೌಂದರ್ಯಕ್ಕೆ ಖ್ಯಾತಿ ಪಡೆದಿರುವ ಅಂಡಮಾನ್-ನಿಕೋಬಾರ್ ದ್ವೀಪದಲ್ಲಿ ಚೌಕಿದಾರ್ ಸಿನಿಮಾವನ್ನು 10 ದಿನಗಳ ಕಾಲ ಚಿತ್ರೀಕರಣ ನಡೆಸಲಾಗಿದೆ.
ಪ್ಯಾನ್ ಇಂಡಿಯಾ ಮಟ್ಟದಲ್ಲಿ ತಯಾರಾಗುತ್ತಿರುವ ಚೌಕಿದಾರ್ ಸಿನಿಮಾವನ್ನು ಅಷ್ಟೇ ಅದ್ಧೂರಿಯಾಗಿ ಹಾಗೂ ಸೊಗಸಾಗಿ ನಿರ್ಮಿಸಲಾಗುತ್ತಿದೆ. ಅದರಂತೆ ಚಿತ್ರತಂಡ ಅಂಡಮಾನ್-ನಿಕೋಬರ್ ದ್ವೀಪದಲ್ಲಿ ಚಿತ್ರೀಕರಣ ನಡೆಸಿದೆ. ಶಿವಣ್ಣ ನಟನೆಯ ಅಂಡಮಾನ್ ಸಿನಿಮಾದ ಶೂಟಿಂಗ್ ಈ ಜಾಗದಲ್ಲಿ ಆಗಿತ್ತು. ಈ ಚಿತ್ರ ಹೊರತುಪಡಿಸಿ ಮತ್ಯಾವುದೆ ಕನ್ನಡ ಸಿನಿಮಾಗಳ ಶೂಟಿಂಗ್ ನಡೆದಿಲ್ಲ. ಈಗ ಚೌಕಿದಾರ್ ಅಂಡಮಾನ್-ನಿಕೋಬರ್ ದ್ವೀಪದಲ್ಲಿ ಬರೋಬ್ಬರಿ 10 ದಿನಗಳ ಕಾಲ ಹಾಡು ಹಾಗೂ ಚಿತ್ರದ ಕೆಲ ದೃಶ್ಯಗಳನ್ನು ಇಲ್ಲಿ ಸೆರೆ ಹಿಡಿದಿರುವುದು ವಿಶೇಷ. ಒಟ್ಟಾರೆ 53 ದಿನಗಳ ಕಾಲ ಚೌಕಿದಾರ್ ಸಿನಿಮಾದ ಮೊದಲ ಹಂತದ ಚಿತ್ರೀಕರಣ ನಡೆದಿದೆ.
ಅಂಡಮಾನ್-ನಿಕೋಬರ್ ದ್ವೀಪದಲ್ಲಿ ನಡೆದ ಚಿತ್ರೀಕರಣದಲ್ಲಿ ನಿರ್ದೇಶಕ ಚಂದ್ರಶೇಖರ್ ಬಂಡಿಯಪ್ಪ, ನಾಯಕ ಪೃಥ್ವಿ ಅಂಬಾರ್ ನಾಯಕ ಧನ್ಯ ರಾಮ್ ಕುಮಾರ್, ಹಿರಿಯ ಕಲಾವಿದರಾದ ಸಾಯಿಕುಮಾರ್, ನೃತ್ಯ ಸಂಯೋಜಕ ಮುರುಳಿ ಮಾಸ್ಟರ್ ಹಾಗೂ ಸೌತ್ ಇಂಡಿಯಾದ ಕೆಲ ಟೆಕ್ನಿಷಿಯನ್ ಭಾಗಿಯಾಗಿದ್ದರು.
ಪೃಥ್ವಿ ಅಂಬಾರ್ ಇಲ್ಲಿವರೆಗೂ ಪ್ರೀತಿ-ಪ್ರೇಮದಂತಹ ಕಥೆಯಲ್ಲಿ ಅಭಿನಯಿಸಿದ್ದಾರೆ. ಲವರ್ ಬಾಯ್ ಆಗಿಯೇ ಕಾಣಿಸಿಕೊಂಡಿದ್ದಾರೆ. ಆದರೆ, ಡೈರೆಕ್ಟರ್ ಚಂದ್ರಶೇಖರ್ ಬಂಡಿಯಪ್ಪ ಅದನ್ನ ಬದಲಿಸಬೇಕು ಅನ್ನೋ ಯೋಚನೆ ಮಾಡಿದ್ದಾರೆ. ಹಾಗಾಗಿಯೇ ಚೌಕಿದಾರ್ ಚಿತ್ರದಲ್ಲಿ ಪೃಥ್ವಿ ಅಂಬಾರ್ ರಗಡ್ ಲುಕ್ ಅಲ್ಲಿಯೇ ಕಾಣಿಸಿಕೊಂಡಿದ್ದಾರೆ. ವಿಭಿನ್ನ ಕಥಾಹಂದರದಲ್ಲಿ ಅವರು ಆಯ್ಕೆ ಮಾಡಿಕೊಂಡಿದ್ದು, ಹೊಸ ರೂಪದಲ್ಲಿ ಪೃಥ್ವಿ ನಿಮ್ಮ ಮುಂದೆ ಬರಲಿದ್ದಾರೆ.
‘ಚೌಕಿದಾರ್’ ಸಿನಿಮಾವನ್ನು ಕಲ್ಲಹಳ್ಳಿ ಚಂದ್ರಶೇಖರ್ ನಿರ್ಮಾಣ ಮಾಡುತ್ತಿದ್ದಾರೆ. ಸಚಿನ್ ಬಸ್ರೂರು ಸಂಗೀತವಿದ್ರೆ, ವಿ. ನಾಗೇಂದ್ರ ಪ್ರಸಾದ್, ಪ್ರಮೋದ್ ಮರವಂತೆ, ಸಂತೋಷ್ ನಾಯಕ್ ಸಾಹಿತ್ಯ ಬರೆಯುತ್ತಿದ್ದಾರೆ. ‘ಚೌಕಿದಾರ್’ ಬಹುಭಾಷೆಯಲ್ಲಿ ಮೂಡಿ ಬರುತ್ತಿದ್ದು, ಲವರ್ ಬಾಯ್ ಆಗಿದ್ದ ಪೃಥ್ವಿ ಅಂಬಾರ್ ಮಾಸ್ ಲುಕ್ ಕೊಡಲಿದ್ದಾರೆ.