ಅನ್ನ ಹಾಕಿದ ಮನೆ.. ಗೊಬ್ಬರ ಹಾಕಿದ ಹೊಲ… ಯಾವತ್ತೂ ಕೆಡಲ್ಲ… : ದುನಿಯಾ ವಿಜಯ್
ಚಂದನವನದಲ್ಲಿ ತಮ್ಮದೇ ದೊಡ್ಡ ಅಭಿಮಾನಿ ಬಳಗವನ್ನೇ ಹೊಂದಿರುವಂತಹ ನಟ ದುನಿಯಾ ವಿಜಯ್. ಇದೇ ಜನವರಿ 20ರಂದು ತಮ್ಮ 50ನೇ ವರ್ಷದ ಹುಟ್ಟುಹಬ್ಬವನ್ನು ಕುಟುಂಬಸ್ಥರು , ಅಭಿಮಾನಿಗಳ ಜೊತೆ ಆಚರಿಸಿಕೊಳ್ಳುತ್ತಿದ್ದಾರೆ. ತಂದೆ ತಾಯಿಯ ಆದರ್ಶದ ಬದುಕನ್ನು ನೆನಪಿಸಿಕೊಳ್ಳುವ ದುನಿಯಾ ವಿಜಯ್ , ತಮ್ಮ 50 ವರ್ಷದ ಜೀವನದಲ್ಲಿ ಅನ್ನ ಹಾಕಿದ ಮನೆ.. ಗೊಬ್ಬರ ಹಾಕಿದ ಹೊಲ… ಯಾವತ್ತೂ ಕೆಡಲ್ಲ… ಎಂಬುದನ್ನು ಅರಿತುಕೊಂಡಿದ್ದೇನೆ ಎಂದು ಮನದಾಳದ ಮಾತುಗಳನ್ನು ಹಂಚಿಕೊಂಡರು. ಎಷ್ಟೇ ಎತ್ತರಕ್ಕೆ ಬೆಳೆದರು ನಾವು ಬೆಳೆದು ಬಂದ ದಾರಿಯನ್ನ ಮರಿಯಬಾರದು ಎಂದು ನನ್ನ ತಂದೆ ತಾಯಿ ಹೇಳುತ್ತಿದ್ದರು.
ಅಪ್ಪ ಅಮ್ಮನ ಋಣ ಜೀವನ ತೀರಿಸಲು ಆಗದು. ನನ್ನ ಪಾಲಿಗೆ ಅವರೇ ದೇವರು. ಹಾಗಾಗಿ ನನ್ನ ದೇವರುಗಳು ಇರುವ ಪುಣ್ಯ ಭೂಮಿಯಲ್ಲಿ ನನ್ನ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದೇನೆ. ಇದು ನಮ್ಮ ತಾತ ಬಹಳ ಕಷ್ಟಪಟ್ಟು ದುಡಿಮೆ ಮಾಡಿ ಕೊಡಿ ಸಂಪಾದಿಸಿರುವ ಜಾಗವಿದು , ಈ ಸ್ಥಳದಲ್ಲಿ ನನ್ನ ಜನ್ಮದಿನದ ಸಂಭ್ರಮವನ್ನು ಕುಟುಂಬಸ್ಥರು , ಸ್ನೇಹಿತರು , ಅಭಿಮಾನಿಗಳು ಜೊತೆಗೆ ಮಾಧ್ಯಮ ಮಿತ್ರರೊಂದಿಗೆ ಆಚರಿಸಿಕೊಳ್ಳಲು ತೀರ್ಮಾನಿಸಿದ್ದೇನೆ ಎಂದರು.
ತನ್ನದೊಂದು ಪುಟ್ಟ ಪ್ರಪಂಚದಲ್ಲಿ ತಂದೆ ತಾಯಿಯ ಮಡಿಲಲ್ಲಿ ಬೆಳೆದು , ಕಷ್ಟ , ಸುಖ , ನೋವು , ನಲಿವುಗಳನ್ನು ಒಡನಾಡಿಗಳ ಜೊತೆ ಅನುಭವಿಸುತ್ತಾ ಬೆಳೆದು ತನ್ನ ಶ್ರದ್ದೆ , ನಿಷ್ಠೆ , ಸ್ನೇಹ , ವಿಶ್ವಾಸದೊಂದಿಗೆ ಚಿತ್ರರಂಗದಲ್ಲಿ ಒಂದು ಭದ್ರ ನೆಲೆ ಉರಲು ಬಹಳಷ್ಟು ಹರಸಾಹಸ ಪಟ್ಟು ಸಣ್ಣಪುಟ್ಟ ಪಾತ್ರಗಳಲ್ಲಿ ಕಾಣಿಸಿಕೊಂಡರು ಸ್ವತಂತ್ರವಾಗಿ ದುನಿಯಾ ಚಿತ್ರದ ಮೂಲಕ ತಮ್ಮ ಬದುಕಿನ ದಿಕ್ಕನ್ನೇ ಬದಲಿಸಿಕೊಂಡಂತಹ ಪ್ರತಿಭಾನ್ವಿತ ನಟ ಬಿ .ಆರ್. ವಿಜಯ್ ಕುಮಾರ್. ಮುಂದೆ ದುನಿಯಾ ವಿಜಯ್ ಎಂದೇ ಖ್ಯಾತಿ ಪಡೆದು ಚಂಡ , ಜಂಗ್ಲಿ , ಸ್ಲಂ ಬಾಲ , ದೇವ್ರು , ಶಂಕರ್ ಐಪಿಎಸ್ , ಕರಿಚಿರತೆ , ಕಂಠೀರವ , ಜಾನಿ ಮೇರಾ ನಾಮ್ ಪ್ರೀತಿ ಮೇರಾ ಕಾಮ್ , ಜರಾಸಂಧ , ಭೀಮಾ ತೀರದಲ್ಲಿ , ರಜನಿಕಾಂತ , ಜಯಮ್ಮನ ಮಗ , ಆರ್. ಎಕ್ಸ್. ಸೂರಿ , ಕನಕ , ದಕ್ಷ , ದನ ಕಾಯೋನು , ಮಾಸ್ತಿಗುಡಿ ಸೇರಿದಂತೆ ಸಲಗ ಚಿತ್ರದ ಮೂಲಕ ನಟಿಸಿ ನಿರ್ದೇಶಕನಾಗಿಯೂ ಕೂಡ ಗುರುತಿಸಿಕೊಂಡು , ತೆಲುಗು ಚಿತ್ರರಂಗದಲ್ಲೂ ಮಿಂಚಿದಂಥ ಈ ಪ್ರತಿಭೆ ಸದ್ಯ ಭೀಮ ಚಿತ್ರವನ್ನು ನಿರ್ದೇಶಿಸಿ , ನಟಿಸಿದ್ದು, ಚಿತ್ರ ತೆರಿಗೆ ಬರಬೇಕಿದೆ.
ಇನ್ನು ವಿಶೇಷವಾಗಿ ಬಿಡುಗಡೆಗೆ ಸಿದ್ದವಿರುವ ಭೀಮ ಚಿತ್ರದ ಬಗ್ಗೆ ಬಹಳಷ್ಟು ನಿರೀಕ್ಷೆಯನ್ನು ಇಟ್ಟುಕೊಂಡಿದ್ದೇನೆ. ನೈಜ ಘಟನೆಗಳನ್ನು ಆಧಾರವಾಗಿಟ್ಟುಕೊಂಡು ಜನರಿಗೆ ಒಂದು ಸಂದೇಶವನ್ನು ನೀಡುವ ಅಂಶವು ಈ ಚಿತ್ರದಲ್ಲಿ ಒಳಗೊಂಡಿದೆ. ಎಲ್ಲಾ ಅಂದುಕೊಂಡಂತೆ ಆದರೆ ಫೆಬ್ರವರಿ ಅಂತ್ಯದಲ್ಲಿ ತೆರೆಗೆ ತರುವ ಉದ್ದೇಶ ಹೊಂದಿದ್ದೇನೆ.
ಈಗಾಗಲೇ ಬಿಡುಗಡೆಗೊಂಡಿರುವ ಹಾಡುಗಳು ಬಾರಿ ವೈರಲ್ ಆಗಿದ್ದು , ನನ್ನ ಹುಟ್ಟು ಹಬ್ಬದಂದು ಟೀಸರ್ ಬಿಡುಗಡೆ ಮಾಡಿ , ತದನಂತರ ಉಳಿದ ಹಾಡು ಹಾಗೂ ಟ್ರೈಲರ್ ಲಾಂಚ್ ಮಾಡುವ ಮೂಲಕ ಅದ್ದೂರಿಯಾಗಿ “ಭೀಮ” ನನ್ನು ತೆರೆಯ ಮೇಲೆ ತರಲು ನಿರ್ಧರಿಸಿದ್ದೇವೆ. ನಿರ್ದೇಶಕನಾಗಿ ಕೆಲಸ ಮಾಡಿರುವುದು ನನಗೆ ತೃಪ್ತಿ ತಂದಿದೆ.
ನನ್ನ ನಿರ್ಧಾರ , ಆಲೋಚನೆಯನ್ನು ತೆರೆಯ ಮೇಲೆ ತೆರಲು ಸ್ವತಂತ್ರ ಇರುತ್ತದೆ. ನಾನು ನಟನಾಗಿ ಅಭಿನಯಿಸಿದರು , ನಿರ್ದೇಶನದ ಬಗ್ಗೆ ಹೆಚ್ಚು ಪ್ರೀತಿ ಇದ್ದೇ ಇರುತ್ತದೆ. ನನ್ನ ಮುಂದಿನ ಸಿನಿ ಪ್ರಯಾಣಕ್ಕೂ ನಿಮ್ಮೆಲ್ಲರ ಪ್ರೀತಿ ಸಹಕಾರ ಹೀಗೆ ಇರಲಿ ಎನ್ನುತ್ತಾ ನಮ್ಮೊಟ್ಟಿಗೆ ಗೆಳೆಯರಾಗಿ ಕುಳಿತು ಬಹಳ ಆತ್ಮೀಯತೆಯಿಂದ ತಮ್ಮ ಮನದ ಮಾತುಗಳನ್ನು ಹಂಚಿಕೊಂಡರು.