ಚದುರಿದ ಬಣ್ಣದಲ್ಲಿ ಸೇಡು, ಕಾಮ , ಕೊಲೆಯ ಸರಪಳಿ : ಎಲ್ಲಿಗೆ ಪಯಣ ಯಾವುದೋ ದಾರಿ (ಚಿತ್ರವಿಮರ್ಶೆ -ರೇಟಿಂಗ್ :3.5 /5)
ರೇಟಿಂಗ್ :3.5 /5
ಚಿತ್ರ : ಎಲ್ಲಿಗೆ ಪಯಣ ಯಾವುದೋ ದಾರಿ
ನಿರ್ದೇಶಕ : ಕಿರಣ್.ಎಸ್. ಸೂರ್ಯ
ನಿರ್ಮಾಪಕ : ಜತಿನ್ ಪಟೇಲ್
ಸಂಗೀತ : ಪ್ರಣವ್ ರಾವ್
ಛಾಯಾಗ್ರಹಣ : ಸತ್ಯ ರಾಮ್
ತಾರಾಗಣ : ಅಭಿಮನ್ಯು ಕಾಶಿನಾಥ್, ಸ್ಫೂರ್ತಿ ಉಡಿಮನೆ, ವಿಜಯಶ್ರೀ ಕಲ್ಬುರ್ಗಿ, ಬಲರಾಜ್ವಾಡಿ, ಶೋಭನ್, ಪ್ರದೀಪ್, ರಮೇಶ್ ನಾಯಕ್, ರಿನಿ ಹಾಗೂ ಮುಂತಾದವರು …
ಪ್ರತಿಯೊಂದು ನೋವಿನ ಹಿಂದೆ ಕರಾಳ ಮುಖಗಳ ದರ್ಶನ ಇದ್ದೇ ಇರುತ್ತದೆ. ಅಂತದ್ದೇ ಒಬ್ಬ ಚಿತ್ರ ಕಲಾವಿದನ ಕುಂಚದಲ್ಲಿ ಅರಳಿದ ಹೂವಿನ ಸುತ್ತ ಹಾದುಹೋಗುವ ದುಂಬಿಗಳ ರುದ್ರ ನರ್ತನದೊಳಗೆ ಸ್ನೇಹ , ಪ್ರೀತಿ , ಕಾಮ, ದ್ವೇಷ , ಕೊಲೆಗಳ ನಿಗೂಢ ಹಾದಿಯಲ್ಲಿ “ಎಲ್ಲಿಗೆ ಪಯಣ ಯಾವುದೋ ದಾರಿ”… ಎನ್ನುವಂತೆ ಈ ವಾರ ಪ್ರೇಕ್ಷಕರ ಮುಂದೆ ಬಂದಿರುವ ಚಿತ್ರ ಇದಾಗಿದೆ.
ಪಶ್ಚಿಮ ಘಟ್ಟಗಳ ದಟ್ಟ ಅರಣ್ಯ ಪರಿಸರದ ಜೀವನವೇ ಸುಂದರ. ಆದರೆ ಗೋಣಿಕೊಪ್ಪ ಸುತ್ತಮುತ್ತಲಿನ ಮನೆಗಳಲ್ಲಿ ಸ್ತ್ರೀಯರನ್ನು ಅಪರಿಸಿ , ಅತ್ಯಾಚಾರ ಎಸಗುವ ಸೈಕೋ ವ್ಯಕ್ತಿ ಇದ್ದಾನೆ ಎಂಬ ಆತಂಕ ಜನರಲಿ ಕಾಡುತ್ತಿದ್ದು, ಪೊಲೀಸರು ಕೂಡ ಹುಡುಕಾಟ ನಡೆಸುತ್ತಿರುತ್ತಾರೆ.
ಇದೇ ಸಮಯಕ್ಕೆ ಅಮರ್ (ಅಭಿಮನ್ಯು ಕಾಶಿನಾಥ್) ತನ್ನ ಕಾರ್ ನಲ್ಲಿ ಪ್ರೇಯಸಿ ಅಕ್ಷು (ಸ್ಪೂರ್ತಿ ಉಡಿಮನೆ) ಇರುವ ಸ್ಥಳ ವಿರಾಜಪೇಟೆಯಗೆ ಬರುತ್ತಿರುತ್ತಾನೆ. ಮಾರ್ಗ ಮಧ್ಯೆ ಟೀಗಾಗಿ ಇಳಿಯುವ ಅಮರ್ , ಅಂಗಡಿ ಮಾಲಿಕಿನಿಂದ ಸೈಕೋ ವಿಚಾರ ತಿಳಿದು ಯಾರಿಗೂ ಡ್ರಾಪ್ ನೀಡಬಾರದೆಂದು ಎನ್ನುತ್ತಿರುವಾಗಲೇ ಬಸ್ ಸಿಗದ ಕಾರಣ ವ್ಯಕ್ತಿ ಒಬ್ಬನಿಗೆ (ಶೋಭನ್) ಡ್ರಾಪ್ ನೀಡಲು ನಿರ್ಧರಿಸುತ್ತಾನೆ.
ಮುಂದೆ ಒಬ್ಬ ಫೋಟೋಗ್ರಾಫರ್ (ಪ್ರದೀಪ್ ಕುಮಾರ್) ಕೂಡ ಕಾರಿನೊಳಗೆ ಸೇರುತ್ತಾನೆ. ಅದೇ ರೀತಿ ಮುದ್ದಾದ ಸುಂದರ ಯುವತಿ (ವಿಜಯಶ್ರೀ ಕಲ್ಬುರ್ಗಿ) ಕೂಡ ವಿರಾಜಪೇಟೆಗೆ ಡ್ರಾಪ್ ನೀಡಿ ಎನ್ನುತ ಸೇರಿಕೊಳ್ಳುತ್ತಾಳೆ. ಹಾಗೆಯೇ ಮೆಕ್ಯಾನಿಕ್ (ಆಯಾಂಕ್ ವತ್ಸ) ಸಹಾಯ ಮಾಡುವ ನೆಪದಲ್ಲಿ ಸೇರಿಕೊಳ್ಳುತ್ತಾನೆ. ಇದರ ನಡುವೆ ಸೈಕೋ ವಿಚಾರ ಕೂಡ ಚರ್ಚೆ ಆಗುತ್ತಾ ಒಬ್ಬೊಬ್ಬರ ಮೇಲೆ ಅನುಮಾನ ಮಾಡುತ್ತಾ ಹೋಗುತ್ತದೆ.
ಇನ್ನು ಮನೆಯಿಂದ ಹೊರಹೋದ ಮಗಳ ಹುಡುಕಾಟದಲ್ಲಿ ಬಲ ರಾಜ್ವಾಡಿ ಹಾಗೂ ಇನ್ಸ್ಪೆಕ್ಟರ್ ಮುಂದಾಗುತ್ತಾರೆ. ಇದರ ನಡುವೆ ಅಮರ್ ತನ್ನ ಬದುಕಿನ ಫ್ಲಾಶ್ ಬ್ಯಾಕ್ ತೆರೆಯುತ್ತಾ ತಾನೊಬ್ಬ ಚಿತ್ರಕಲಾವಿದ , ಮನ ಸೆಳೆಯುವ ಚಿತ್ರಪಟಗಳ ಜೊತೆಗೆ ಸುಂದರ ಹುಡುಗಿಯ ನಗ್ನ ಚಿತ್ರವನ್ನು ತನ್ನ ಕುಂಚಿದಲ್ಲಿ ಬಿಡಿಸುವ ಅಮರ್ ಸುಂದರ ಯುವತಿ ಅಕ್ಷು ನೋವಿಗೆ ಸ್ಪಂದಿಸುತ್ತಾ ಸ್ನೇಹ , ಪ್ರೀತಿಯ ಕಡೆ ವಾಲುತ್ತದೆ. ಈ ಜಂಜಾಟದ ಬದುಕಿನಿಂದ ಹೊರನಡೆದು ಸುಂದರ ಪರಿಸರದಲ್ಲಿ ಸುಖಭಾಯಿಸುವ ಈ ಜೋಡಿಗಳ ಜೀವನದಲ್ಲಿ ದುರಂತ ಎದುರಾಗಿ ಬದುಕಿನ ದಿಕ್ಕೆ ಬದಲಾಗಿ ಬೇರೆ ದಾರಿ ತೋರುತ್ತದೆ.
ಅಮರ್ ಪಯಣ ಎಲ್ಲಿಗೆ…
ಅಕ್ಷು ಪರಿಸ್ಥಿತಿ ಏನು…
ದುರಂತಕ್ಕೆ ಯಾರು ,ಹೇಗೆ , ಕಾರಣ..?
ಸೈಕೋ ಯಾರು…
ಕ್ಲೈಮಾಕ್ಸ್ ಉತ್ತರ ಏನು…
ಒಂದಷ್ಟು ನಿಗೂಢ ಸತ್ಯದ ಅನಾವರಣ ತಿಳಿದುಕೊಳ್ಳಕ್ಕೆ ಈ ಚಿತ್ರವನ್ನು ನೋಡಲೇಬೇಕು.
ಈ ರೋಚಕ ತಿರುವುಗಳ ಕಥಾನಕವನ್ನು ಆಯ್ಕೆ ಮಾಡಿಕೊಂಡಿರುವ ನಿರ್ದೇಶಕರ ಆಲೋಚನೆ ಗಮನ ಸೆಳೆಯುತ್ತದೆ. ಎಲ್ಲದಕ್ಕೂ ಒಂದು ಕಡಿವಾಣ ಇರಬೇಕು, ಅತಿಯಾದ ಆಲೋಚನೆಯ , ದುರ್ನಡತೆ , ಕಾಮ, ಕ್ರೌರ್ಯಕ್ಕೆ ಪ್ರತಿಫಲ ಇದ್ದೇ ಇರುತ್ತದೆ ಎಂಬುದನ್ನು ಹೇಳುವುದರ ಜೊತೆಗೆ ಹೆಣ್ಣು ಎಂಬುವುದು ಭೋಗದ ವಸ್ತು ಅಲ್ಲ , ಮಾನವೀಯತೆ , ಗೌರವ ನೀಡುವುದು ಅಗತ್ಯ ಎಂಬ ಸತ್ಯಾಂಶವನ್ನು ಬಹಳ ಸೂಕ್ಷ್ಮವಾಗಿ ಕಟ್ಟಿಕೊಡುವ ಪ್ರಯತ್ನ ಮಾಡಿದ್ದಾರೆ.
ಚಿತ್ರದ ಪಯಣ ನಿಧಾನಗತಿಯಲ್ಲಿ ಸಾಗುವುದು ನೋಡಲು ಆಯಾಸವೆನಿಸುತ್ತದೆ. ಆದರೂ ಕುತೂಹಲಕಾರಿ ಯಾಗಿ ತೆಗೆದುಕೊಂಡಿರುವ ರೀತಿ , ಕ್ಲೈಮ್ಯಾಕ್ಸ್ ಅದ್ಭುತವಾಗಿದೆ. ನಿರ್ಮಾಪಕರೂ ಕೂಡ ಎಲ್ಲಿಗೆ ಪಯಣ ಯಾವುದೋ ದಾರಿ.. ನೋಡೋಣ ಎನ್ನುವಂತೆ ಸಾತ್ ನೀಡಿದ್ದಾರೆ. ಛಾಯಾಗ್ರಾಹಕರ ಕೈಚಳಕ ಸೊಗಸಾಗಿ ಮೂಡಿಬಂದಿದೆ. ಅದೇ ರೀತಿ ಸಂಗೀತ ಕೂಡ ಸಂದರ್ಭಕ್ಕೆ ತಕ್ಕಂತೆ ಸಾಗಿದ್ದು , ಕಿಚ್ಚ ಸುದೀಪ್ ಹಾಡಿರುವ ಕಣ್ಣು ನೋಡುತ್ತೆ… ಕಿವಿ ಕೇಳುತ್ತೆ… ಹಾಡು ಗಮನ ಸೆಳೆಯುತ್ತೆ. ತಾಂತ್ರಿಕವಾಗಿ ತಂಡ ಬಳ ಶ್ರಮ ಪಟ್ಟಿರುವುದು ಕಾಣುತ್ತೆ.
ನಾಯಕನಾಗಿ ಅಭಿಮನ್ಯು ಕಾಶಿನಾಥ್ ಬಹಳ ನ್ಯಾಚುರಲ್ ಆಗಿ ತಮ್ಮ ಪಾತ್ರಕ್ಕೆ ಜೀವ ತುಂಬಿದ್ದಾರೆ. ಚಿತ್ರ ಕಲಾವಿದನಾಗಿ , ಪ್ರೇಮಿಯಾಗಿ ಹಾವ ಭಾವದ ಮೂಲಕ ಗಮನ ಸೆಳೆಯುತ್ತಾರೆ. ಕೆಲವೊಂದು ಲುಕ್ ತಂದೆಯನ್ನು ನೆನಪಿಸುತ್ತದೆ. ಕಾಶಿನಾಥ್ ಚಿತ್ರಗಳಲ್ಲಿ ಬಹುತೇಕ ಗಂಡು-ಹೆಣ್ಣು ಸಂಬಂಧದ ಕುರಿತ ವಿಚಾರವೇ ಎಚ್ಚೆತ್ತು , ಈಗ ಅಭಿಮನ್ಯು ಕಾಶಿನಾಥ್ ಈ ಚಿತ್ರದಲ್ಲೂ ಅಪ್ಡೇಟೆಡ್ ವರ್ಷನ್ ನೋಡಿದಂತಿದೆ. ನಾಯಕಿಯಾಗಿ ಸ್ಪೂರ್ತಿ ಉಡಿಮನೆ ಪಾತ್ರಕ್ಕೆ ಜೀವತುಂಬಿ , ಹೆಣ್ಣಿನ ಮನಸ್ಸಿನ ಭಾವನೆ , ತಳಮಳವನ್ನ ನೈಜ್ಯವಾಗಿ ಅಭಿನಯಿಸಿದ್ದಾರೆ.
ಇನ್ನು ಬಲ ರಾಜ್ವಾಡಿ ಪೋಲಿಸ್ ಇನ್ಸ್ಪೆಕ್ಟರ್ ಪಾತ್ರದಲ್ಲಿ ಕಾಣಿಸಿಕೊಂಡು , ಮತ್ತೊಮ್ಮೆ ತಮ್ಮ ನಟನ ಸಾಮರ್ಥ್ಯವನ್ನು ತೆರೆದಿಟ್ಟಿದ್ದಾರೆ. ಅದೇ ರೀತಿ ಯುವ ಪ್ರತಿಭೆಗಳಾದ ವಿಜಯಶ್ರೀ ಕಲ್ಬುರ್ಗಿ, ಶೋಭನ್, ಪ್ರದೀಪ್ ಕುಮಾರ್, ಅಯಾಂಕ್ ತಮ್ಮ ತಮ್ಮ ಪಾತ್ರಗಳನ್ನು ಗಮನ ಸುಳೆಯುವಂತೆ ಅಭಿನಯಿಸಿದ್ದಾರೆ. ಹಾಗೆಯೇ ರಮೇಶ್ ನಾಯಕ್ , ರಿನಿ ಸೇರಿದಂತೆ ಎಲ್ಲರೂ ಚಿತ್ರದ ಓಟಕ್ಕೆ ಉತ್ತಮ ಸಾತ್ ನೀಡಿದ್ದಾರೆ. ಆರಂಭದಿಂದ ಅಂತ್ಯದವರೆಗೂ ಕುತೂಹಲಕಾರಿಯಾಗಿ ಸಾಗುವ ಈ ಚಿತ್ರವು ಒಮ್ಮೆ ನೋಡುವಂತಿದೆ.