ಬದುಕಿನ ಅರಿವಿನ ಪಯಣ… ‘ಎಲ್ಲೋ ಜೋಗಪ್ಪ ನಿನ್ನರಮನೆ’ (ಚಿತ್ರವಿಮರ್ಶೆ-ರೇಟಿಂಗ್ : 3.5 /5)
ರೇಟಿಂಗ್ : 3.5 /5
ಚಿತ್ರ : ಎಲ್ಲೋ ಜೋಗಪ್ಪ ನಿನ್ನರಮನೆ
ನಿರ್ದೇಶಕ : ಹಯವದನ
ನಿರ್ಮಾಪಕರು : ಪವನ್ ಶಿಮಿಕೇರಿ,ಸಿಂಧು ಹಯವದನ
ಸಂಗೀತ : ಶಿವಪ್ರಸಾದ್
ಛಾಯಾಗ್ರಹಣ : ನಟರಾಜು ಮದ್ದಾಲ
ತಾರಾಗಣ : ಅಂಜನ್ ನಾಗೇಂದ್ರ , ವೆನ್ಯಾ ರೈ , ಸಂಜನಾ ದಾಸ್, ಶರತ್ ಲೋಹಿತಾಶ್ವ , ದಾನಪ್ಪ , ದಿನೇಶ್ ಮಂಗಳೂರು, ಸ್ವಾತಿ ಬಿರಾದಾರ್, ಲಕ್ಷ್ಮಿ, ನಾಡಗೌಡ, ರೇಖಾ ರಾವ್, ಇಳಾ ವಿಟ್ಲ ಹಾಗೂ ಮುಂತಾದವರು…
ಜೀವನವೇ ಒಂದು ಪಯಣ. ಸಾಗುವ ಹಾದಿಯಲ್ಲಿ ಎದುರಾಗುವ ಘಟನೆಗಳೇ ನಮಗೆ ಪಾಠವನ್ನು ಕಲಿಸುತ್ತಾ ಹೋಗುತ್ತದೆ. ಬದುಕು ನಡೆಸಲು ಹಣದ ಅವಶ್ಯಕತೆ ಬಹಳನೇ ಮುಖ್ಯ. ಎಲ್ಲರೂ ದುಡ್ಡಿಗೋಸ್ಕರ ಏನೂ ಮಾಡ್ತಿದ್ದೀಯಾ ಅಂತಾ ಕೇಳೋದು ಸರ್ವೇ ಸಾಮಾನ್ಯ. ಆದರೆ ನಿನ್ನ ಖುಷಿಗೋಸ್ಕರ ಏನೂ ಮಾಡ್ತಿದ್ದೀಯಾ ಎಂದು ಯಾರು ಕೇಳಲ್ಲ… ಈ ವಿಚಾರವನ್ನೇ ಇಟ್ಕೊಂಡು ಜೀವನದ ಗುರಿ , ಸ್ನೇಹ , ಪ್ರೀತಿ , ಕಷ್ಟ , ಸುಖ , ನೋವು ನಲಿವಿನ ಸುತ್ತ ಬದುಕಿನ ಪಾಠವನ್ನು ಹೇಳುವ ಕಥಾನಕ ಮೂಲಕ ಈ ವಾರ ತೆರೆಯ ಮೇಲೆ ಬಂದಿರುವಂತಹ ಚಿತ್ರ “ಎಲ್ಲೋ ಜೋಗಪ್ಪ ನಿನ್ನರಮನೆ”.
ಜೀವನದಲ್ಲಿ ತನ್ನಿಷ್ಟದಂತೆ ಬದುಕಬೇಕೆಂದು ಆಸೆ ಪಡುವ ಆದಿ (ಅಂಜನ್ ನಾಗೇಂದ್ರ) ಗೆಳೆಯರೊಟ್ಟಿಗೆ ರೀಲ್ಸ್ ಮಾಡುತ್ತಾ ಕಾಲ ಕಳೆಯುತ್ತಾನೆ. ಆದರೆ ತಂದೆ (ಶರತ್ ಲೋಹಿತಾಶ್ವ ) ಹೋಟೆಲ್ ವ್ಯಾಪಾರದಲ್ಲಿ ಬದುಕನ್ನ ಸುಂದರವಾಗಿ ಕಟ್ಟಿಕೊಂಡು ಮಗನಿಗೂ ಒಂದು ದಾರಿ ತೋರಿಸುವ ತವಕ ಹೊಂದಿರುತ್ತಾರೆ.
ತಂದೆಯ ಬುದ್ಧಿ ಮಾತನ್ನು ವಿರೋಧಿಸುವ ಮಗ ತನ್ನದೇ ದಿಕ್ಕಿನಲ್ಲಿ ಸಾಧನೆ ಮಾಡುವ ಆಸೆ ಇಟ್ಟುಕೊಂಡಿರುತ್ತಾನೆ. ಹಂತ ಹಂತವಾಗಿ ಫ್ಲಾಶ್ ಬ್ಯಾಕ್ ಘಟನೆಗಳು ತೆರೆದುಕೊಳ್ಳುತ್ತಾ ಹೋಗುತ್ತದೆ. ಯಾರಿಗೂ ಹೇಳದೆ ಒಬ್ಬಂಟಿಯಾಗಿ ಮನೆಯಿಂದ ಹೊರಡುವ ಆದಿ ಮಾರ್ಗ ಮಧ್ಯೆ ವಾಹನಗಳ ಮೂಲಕ ಡ್ರಾಪ್ , ಊಟಕ್ಕಾಗಿ ಸಿಕ್ಕ ಜಾಗದಲ್ಲಿ ಕೆಲಸ ಮಾಡುತ್ತಾ ಸಾಗುವ ಆದಿ ಗೆ ಸಂಗ್ಯಾ (ದಾನಪ್ಪ) ಎಂಬ ಉತ್ತರ ಕರ್ನಾಟಕದ ಗೆಳೆಯ ಸಿಗುತ್ತಾನೆ.
ಅವನದು ಹಣದ ಒತ್ತಡದ ಕಥೆ ಜೊತೆಗೆ ತನ್ನ ತಂದೆಯನ್ನು ಹುಡುಕುತ್ತಾ ಹೊರಟಿರುತ್ತಾನೆ, ಅದೇ ರೀತಿ ಪಂಡರಾಪುರದಲ್ಲಿ ದೇವರ ವಿಗ್ರಹ , ಬೊಂಬೆಗಳನ್ನ ಮಾರುವವರೊಟ್ಟಿಗೆ ಸೇರುವ ಆದಿ ಗೆ ಸುಂದರ ಹುಡುಗಿ ಶೀತಲ್ (ವೆನ್ಯಾ ರೈ) ಪರಿಚಯವಾಗಿ ಸ್ನೇಹವಾಗುತ್ತದೆ. ಆಕೆ ಪ್ರೀತಿಸುವ ಹುಡುಗನನ್ನು ಭೇಟಿ ಮಾಡಿಸಲು ಸಾತ್ ನೀಡುತ್ತಾನೆ.
ಮುಂದೆ ಮತ್ತೊಂದು ಸುಂದರ ಹುಡುಗಿ ಸ್ವರ( ಸಂಜನಾ ದಾಸ್) ಸಹಾಯ ಪಡೆಯುವ ಆದಿ ಆಕೆಯ ಜೀಪ್ ನಲ್ಲಿ ಸಾಗುತ್ತಾನೆ. ಮಾರ್ಗ ಮಧ್ಯ ವಿಡಿಯೋಗಳನ್ನು ಮಾಡುತ್ತಾ ಸಾಗುವ ಸ್ವರ youtube ಬ್ಲಾಗರ್, ಇವರಿಬ್ಬರ ಪರಿಚಯ , ಮಾತುಕತೆ ನಡುವೆ ಊಟಕ್ಕೆ ನಿಲ್ಲಿಸುವ ಸ್ಥಳದಲ್ಲಿ ಗರ್ಭಿಣಿ ಮಹಿಳೆಯ ಹೋಟೆಲ್ ಗೆ ಬರುತ್ತಾರೆ.
ಆಕೆಯದು ಒಂದು ನೋವಿನ ಕಥೆ. ಹೀಗೆ ಒಬ್ಬೊಬ್ಬರದು ಒಂದೊಂದು ರೀತಿಯ ಪಯಣದ ಹಾದಿಯಲ್ಲಿ ವಿಚಿತ್ರ ತಿರುವುಗಳು ಎದುರಾಗಿ ಎಲ್ಲವೂ ಒಂದಕ್ಕೊಂದು ಕೊಂಡಿಯಂತೆ ಬೆಸೆದುಕೊಳ್ಳುತ್ತಾ ಆದಿಯ ಬದುಕಿನ ಅರಿವನ್ನ ಎಚ್ಚರಿಸುತ್ತಾ ಹೋಗುತ್ತದೆ. ಆದರೆ ಸಮಯ ಕಾಯಬೇಕಲ್ಲ , ನಾವು ಒಂದು ಬಯಸಿದರೆ ವಿಧಿಯ ಆಟವೇ ಬೇರೆಯಾಗಿರುತ್ತದೆ. ಅದು ಏನು… ಯಾಕೆ… ಹೀಗೆ… ಎಂಬುದನ್ನ ನೀವು ಈ ಚಿತ್ರದಲ್ಲಿ ಪಯಣ ಮಾಡಿದಾಗಲೇ ತಿಳಿಯುತ್ತದೆ.
ಇನ್ನು ನಿರ್ದೇಶಕರು ಆಯ್ಕೆ ಮಾಡಿಕೊಂಡಿರುವ ಕಥಾವಸ್ತು ಬಹಳ ವಿಭಿನ್ನವಾಗಿದೆ. ಬದುಕಿನ ಹಾದಿಯಲ್ಲಿ ಎದುರಾಗುವ ಘಟನೆಗಳು ನಮಗೆ ಪಾಠವನ್ನು ಕಲಿಸುತ್ತಾ ಹೋಗುತ್ತದೆ ಎಂಬ ಅಂಶದ ಜೊತೆಗೆ ಸ್ನೇಹ , ಪ್ರೀತಿ , ಬಾಂಧವ್ಯ , ಸಂಬಂಧಗಳಿಗೆ ನೀಡಬೇಕಾದಂತ ಗಮನ ಎಷ್ಟು ಅಗತ್ಯ ಎಂಬುದನ್ನು ಬಹಳ ಅಚ್ಚುಕಟ್ಟಾಗಿ ತೋರಿಸಿದ್ದಾರೆ.
ತಪ್ಪು ಮಾಡೋದು ಸಹಜ ಅದನ್ನು ತಿದ್ದಿಕೊಂಡು ಬದುಕು ನಡೆಸುವುದು ಸೂಕ್ತ ಎಂಬುದರ ಜೊತೆಗೆ ಅಡಿಯಿಂದ ಮೂಡಿವರೆಗೂ ಪಯಣದ ಹಾದಿ ಗಮನ ಸೆಳೆಯುವಂತಿದೆ. ಆರಂಭದಲ್ಲಿ ಮೂಡುವ ಒಂದಷ್ಟು ಪ್ರಶ್ನೆಗಳಿಗೆ ದ್ವಿತೀಯ ಭಾಗದಲ್ಲಿ ಉತ್ತರ ನೀಡುತ್ತಾ ಸಾಗಿದ್ದು, ಪಯಣದ ಆದಿ ಆಯಾಸ ಎನಿಸುತ್ತದೆ. ಆದರೆ ನಿರ್ದೇಶಕರ ಮೊದಲ ಪ್ರಯತ್ನ ಅಚ್ಚುಕಟ್ಟಾಗಿದೆ.
ಈ ಚಿತ್ರದ ಸಂಗೀತ ಸೊಗಸಾಗಿ ಮೂಡಿಬಂದಿದ್ದು , ಛಾಯಾಗ್ರಾಹಕರ ಕೈಚಳಕ ಅದ್ಭುತವಾಗಿದೆ. ಹಾಗೆಯೇ ಸಂಕಲನ ಸೇರಿದಂತೆ ತಾಂತ್ರಿಕ ವರ್ಗದ ಕೆಲಸ ಅಚ್ಚುಕಟ್ಟಾಗಿ ಮೂಡಿಬಂದಿದೆ. ಇನ್ನು ಚಿತ್ರದ ಕೇಂದ್ರ ಬಿಂದು ನಟ ಅಂಜನ್ ನಾಗೇಂದ್ರ ತನ್ನ ಪಾತ್ರದ ಮೂಲಕ ಜೀವಿಸಿದ್ದು , ಎಲ್ಲರ ಗಮನ ಸೆಳೆಯುವಂತೆ ನಟಿಸಿದ್ದಾರೆ.
ಅದೇ ರೀತಿ ನಟಿಯರಾದ ವೆನ್ಯಾ ರೈ ಪಂಡರಾಪುರದ ಬೆಡಗಿಯಾಗಿ ಪಾತ್ರಕ್ಕೆ ನ್ಯಾಯವನ್ನು ಒದಗಿಸಿದ್ದು, ಲವಲವಿಕೆಯಿಂದ ಮಿಂಚಿದ್ದಾರೆ. ಅದೇ ರೀತಿ ಮತ್ತೊಬ್ಬ ನಟಿ ಸಂಜನಾ ದಾಸ್ ಕೂಡ ತಮಿಳ್ ಬ್ಲಾಗರ್ ಹುಡುಗಿಯಾಗಿ ಒಬ್ಬಂಟಿಯಾಗಿ ಜೀಪ್ ಓಡಿಸುತ್ತಾ ಬದುಕಿನ ಹೊಸ ಅನುಭವಗಳನ್ನು ಅನುಭವಿಸುವ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ.
ಇನ್ನು ನಾಯಕನ ತಂದೆಯಾಗಿ ಶರತ್ ಲೋಹಿತಾಶ್ವ ಹೇಳುವ ಪ್ರತಿಯೊಂದು ಮಾತು ಬದುಕಿನ ಹಾದಿಗೆ ದಾರಿದೀಪವಂತೆ ಕಾಣುತ್ತದೆ. ವಿಶೇಷವಾಗಿ ನಟಿ ಇಳಾ ವಿಟ್ಲ ಪಾತ್ರ ಮನ ಮುಟ್ಟುವಂತಿದೆ. ನಾಯಕನ ಗೆಳೆಯನಾಗಿ ದಾನಪ್ಪ ಸೇರಿದಂತೆ ದಿನೇಶ್ ಮಂಗಳೂರು , ಸ್ವಾತಿ ಬಿರಾದಾರ್ , ಲಕ್ಷ್ಮಿ, ನಾಡಗೌಡ, ರೇಖಾ ರಾವ್ ಸೇರಿದಂತೆ ಎಲ್ಲಾ ಪಾತ್ರಗಳು ಚಿತ್ರದ ಓಟಕ್ಕೆ ಸಾತ್ ನೀಡಿದೆ.ಒಂದು ಅರ್ಥಪೂರ್ಣ ಕೌಟುಂಬಿಕ ಮನೋರಂಜನೆಯ ಚಿತ್ರವಾಗಿದ್ದು , ಎಲ್ಲರೂ ಒಮ್ಮೆ ನೋಡುವಂತಿದೆ.