Cini NewsSandalwood

ಭರ್ಜರಿಯಾಗಿ “ಫಾರೆಸ್ಟ್” ಪ್ರಚಾರ ಆರಂಭ…ಜನವರಿ 24ಕ್ಕೆ ಚಿತ್ರ ಬಿಡುಗಡೆ

ಸ್ಯಾಂಡಲ್ ವುಡ್ ನಲ್ಲಿ ಮತ್ತೊಂದು ಬಹು ನಿರೀಕ್ಷೆಯ ಕುತೂಹಲ ಭರಿತ ಚಿತ್ರ “ಫಾರೆಸ್ಟ್” ತೆರೆ ಮೇಲೆ ಬರಲು ಸನ್ನದ್ಧವಾಗಿದೆ. ಇತ್ತೀಚಿಗೆ ಬಿಡುಗಡೆಯಾದ ಎರಡು ದೊಡ್ಡ ಚಿತ್ರಗಳಾದ ‘ಯು ಐ ‘ ಹಾಗೂ ಮ್ಯಾಕ್ಸ್ ಚಿತ್ರಮಂದಿರಗಳಲ್ಲಿ ಫಾರೆಸ್ಟ್ ಚಿತ್ರದ ಟ್ರೈಲರ್ ರಿಲೀಸ್ ಮಾಡಿದ ನಿರ್ಮಾಪಕರಿಗೆ ಎಲ್ಲೆಡೆ ಉತ್ತಮ ರೆಸ್ಪಾನ್ಸ್ ದೊರಕಿದೆ. ಹಾಗೆಯೆ ರಾಜ್ಯದಾದ್ಯಂತ 360 ಹೋರ್ಡಿಂಗ್ಸ್ ಗಳನ್ನು ಹಾಕಿಸುವ ಮೂಲಕ ಅದ್ದೂರಿ ಪ್ರಚಾರ ಕಾರ್ಯವನ್ನು ನಿರ್ಮಾಪಕ ಎನ್. ಎಂ . ಕಾಂತರಾಜ್ ಆರಂಭಿಸಿದ್ದಾರೆ.

ಇದೇ ತಿಂಗಳು 24ರಂದು ರಾಜ್ಯಾದ್ಯಂತ ಅದ್ದೂರಿಯಾಗಿ “ಫಾರೆಸ್ಟ್” ಚಿತ್ರ ಬಿಡುಗಡೆಯಾಗಲಿದ್ದು , ಇದೊಂದು ಕಾಡಿನಲ್ಲಿ ನಡೆಯುವ ಕುತೂಹಲಕಾರಿ ಚಿತ್ರವಾಗಿದೆಯಂತೆ. ಅಡ್ವೆಂಚರಸ್ ಜೊತೆಗೆ ಕಾಮಿಡಿ ಕಥಾಹಂದರ ಹೊಂದಿರುವ ಈ ಫಾರೆಸ್ಟ್ ಚಿತ್ರವನ್ನು ಅದ್ದೂರಿಯಾಗಿ ನಿರ್ಮಾಣ ಮಾಡಲು ಎಲ್ಲಿಯೂ ಕಾಂಪ್ರಮೈಸ್ ಆಗದೆ ಸಿನಿಮಾಗೆ ಬೇಕಾದ ಎಲ್ಲಾ ಅನುಕೂಲಗಳನ್ನು ಮಾಡಿಕೊಟ್ಟಿದ್ದು , ಅದೇ ರೀತಿ ಈಗ ಪ್ರಚಾರದ ಕಾರ್ಯವನ್ನು ಕೂಡ ಬಿರುಸಿನಿಂದ ಆರಂಭಿಸಿದ್ದಾರೆ ನಿರ್ಮಾಪಕರಾದ ಎನ್. ಎಂ. ಕಾಂತರಾಜ್.

ಸಾಮಾನ್ಯವಾಗಿ ಸ್ಟಾರ್ ಹೀರೋಗಳ ಚಿತ್ರಗಳ ಮೇಲೆ ದೊಡ್ಡ ಮಟ್ಟದ ಪ್ರಚಾರದ ಕಾರ್ಯ ಆರಂಭಿಸುವುದು ಸರ್ವೇ ಸಾಮಾನ್ಯ. ಆದರೆ ನಿರ್ಮಾಪಕ ಕಾಂತರಾಜ್ ಪ್ರಕಾರ ತಮ್ಮ ಚಿತ್ರದ ಕಥೆಯೇ ಸ್ಟಾರ್ ಹಾಗೂ ಅಭಿನಯಿಸಿರುವ ಎಲ್ಲಾ ಕಲಾವಿದರು ಸ್ಟಾರ್ ಕಲಾವಿದರೇ ಎನ್ನುತ್ತಾ ಈ ಚಿತ್ರವನ್ನು ಅದ್ದೂರಿಯಾಗಿ ತೆರೆಯ ಮೇಲೆ ತರುತ್ತಿದ್ದು , ನನ್ನ ಚಿತ್ರವನ್ನು ಪ್ರಾಮಾಣಿಕವಾಗಿ ಪ್ರೇಕ್ಷಕರ ಮುಂದೆ ಇಡುತ್ತೇನೆ ಎಂದಿದ್ದಾರೆ.

ತನ್ನ ಟೈಟಲ್ ಹಾಗೂ ಮೇಕಿಂಗ್‌ನಿಂದಲೇ ಬಹಳಷ್ಟು ಸದ್ದನ್ನ ಮಾಡಿರುವ ಈ ಫಾರೆಸ್ಟ್ ಚಿತ್ರದಲ್ಲಿ ವಿಭಿನ್ನ ಸ್ಟಾರ್‌ ಕಾಸ್ಟ್ ಹಾಗೂ ಕಾನ್ಸೆಪ್ಟ್ ನಿಂದಲೇ ದೊಡ್ಡಮಟ್ಟದ ನಿರೀಕ್ಷೆ ಹಾಗೂ ಕುತೂಹಲಗಳನ್ನು ಹುಟ್ಟುಹಾಕಿದೆ. ಅದೇ ರೀತಿ ಕಲಾವಿದರಾಗಿ ಉಪಾಧ್ಯಕ್ಷ ಖ್ಯಾತಿಯ ಚಿಕ್ಕಣ್ಣ , ಅಖಿರಾ ಖ್ಯಾತಿಯ ಅನೀಶ್ ತೇಜೇಶ್ವರ್ , ಫಸ್ಟ್ ರ‍್ಯಾಂಕ್ ರಾಜು ಖ್ಯಾತಿಯ ಗುರುನಂದನ್ ಹಾಗೂ ಹಿರಿಯ ನಟ ರಂಗಾಯಣ ರಘು ಅವರಂಥ ಸ್ಟಾರ್ ಕಲಾವಿದರುಗಳು ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದು , ಉಳಿದಂತೆ ಶರಣ್ಯ ಶೆಟ್ಟಿ, ಅರ್ಚನಾ ಕೊಟ್ಟಿಗೆ, ಅವಿನಾಶ್, ಪ್ರಕಾಶ್ ತುಮ್ಮಿನಾಡು, ದೀಪಕ್ ರೈ ಪಾಣಂಜೆ, ಸೂರಜ್ ಪಾಪ್ಸ್, ಸುನೀಲ್‌ಕುಮಾರ್ ಉಳಿದ ತಾರಾಬಳಗದಲ್ಲಿದ್ದಾರೆ.

ಇದೊಂದು ಅಡ್ವೆಂಚರಸ್ ಚಿತ್ರವಾಗಿದ್ದು , ಶತಮಾನದ ಅತಿದೊಡ್ಡ ಕಳ್ಳತನವೊಂದು ನಡೆದಿರುತ್ತದೆ, ಅದನ್ನು ಪೊಲೀಸರು ಹುಡುಕೊಂಡು ಹೋಗುವುದೇ ಚಿತ್ರದ ಮುಖ್ಯಕಥಾಹಂದರ. ಬೆಂಗಳೂರು, ಮಡಿಕೇರಿ, ಚಿಕ್ಕಮಗಳೂರು, ಸಂಪಾಜೆ ಫಾರೆಸ್ಟ್ ಹಾಗೂ ಮಲೆ ಮಾದೇಶ್ವರ ಬೆಟ್ಟದ ಸುತ್ತಮುತ್ತ 80ಕ್ಕೂ ಹೆಚ್ಚು ದಿನಗಳ ಕಾಲ ಚಿತ್ರೀಕರಣ ನಡೆಸಲಾಗಿದೆ.

ಈ ಚಿತ್ರಕ್ಕೆ ಚಂದ್ರಮೋಹನ್ ಹಾಗೂ ಸತ್ಯಶೌರ್ಯ ಸಾಗರ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದಿದ್ದು , ಚಂದ್ರಮೋಹನ್ ನಿರ್ದೇಶನ ಮಾಡಿದ್ದಾರೆ. ಇನ್ನು ಹಾಡುಗಳಿಗೆ ಧರ್ಮವಿಶ್ ಸಂಗೀತ ನಿರ್ದೇಶನ , ಆನಂದ್‌ರಾಜಾ ವಿಕ್ರಮ್ ಹಿನ್ನೆಲೆ ಸಂಗೀತ, ರವಿಕುಮಾರ್ ಛಾಯಾಗ್ರಹಣ , ಅರ್ಜುನ್ ಕಿಟ್ಟು ಸಂಕಲನ, ಅಮರ್ ಕಲಾ ನಿರ್ದೇಶನ ಹಾಗೂ ಡಾ. ರವಿವರ್ಮ ಸಾಹಸ ನಿರ್ದೇಶನ ಫಾರೆಸ್ಟ್ ಚಿತ್ರಕ್ಕಿದೆ.

ಎನ್.ಎಂ.ಕೆ. ಸಿನಿಮಾಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿರುವ ಈ ಚಿತ್ರದ ಹಾಡು ಹಾಗೂ ಟ್ರೈಲರ್ ಬಹಳಷ್ಟು ಸದ್ದನ್ನ ಮಾಡಿದ್ದು , ಪ್ರೇಕ್ಷಕರಲ್ಲಿ ಕುತೂಹಲವನ್ನು ಹೆಚ್ಚಿಸಿದೆ. ಈಗ ಪ್ರಚಾರದ ಕಾರ್ಯ ಅದ್ದೂರಿಯಾಗಿ ನಡೆಯುತ್ತಿದ್ದು , ಬಹು ನಿರೀಕ್ಷಿತ ಫಾರೆಸ್ಟ್ ಚಿತ್ರವು ಇದೆ ಜನವರಿ 24ರಂದು ರಾಜ್ಯಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾಗಲಿದೆ.

error: Content is protected !!