Cini NewsMovie ReviewSandalwood

ಚಿನ್ನದ ಆಸೆ… ಆತ್ಮದ ಕಾಟ…ಫಾರೆಸ್ಟ್ ಚಿತ್ರವಿಮರ್ಶೆ ( ರೇಟಿಂಗ್ : 3.5 /5)

ರೇಟಿಂಗ್ : 3.5 /5
ಚಿತ್ರ : ಫಾರೆಸ್ಟ್
ನಿರ್ದೇಶಕ : ಚಂದ್ರ ಮೋಹನ್
ನಿರ್ಮಾಪಕ : ಕಾಂತರಾಜ್
ಸಂಗೀತ : ಧರ್ಮ ವಿಶ್
ಛಾಯಾಗ್ರಹಣ : ವಿ.ರವಿ
ತಾರಾಗಣ : ಚಿಕ್ಕಣ್ಣ , ಅನೀಶ್ ತೇಜೇಶ್ವರ್, ಗುರುನಂದನ್, ರಂಗಾಯಣ ರಘು, ಅರ್ಚನ ಕೊಟ್ಟಿಗೆ , ಶರಣ್ಯ ಶೆಟ್ಟಿ, ಸೂರಜ್ ಪಾಪ್ಸ್ ಹಾಗೂ ಮುಂತಾದವರು…

ಇಡೀ ದೇಶದ ಗಮನವನ್ನೇ ಸೆಳೆದು , ಮೂರು ರಾಜ್ಯಗಳಿಗೆ ಕಂಟಕನಾಗಿ, ಅದರಲ್ಲೂ ಬೆಟ್ಟ ಗುಡ್ಡಗಳ ಪ್ರದೇಶದಲ್ಲಿ ತನ್ನ ಅಟ್ಟಹಾಸಕ್ಕೆ ಹೆಸರಾದ ವ್ಯಕ್ತಿಯೇ ನರಹಂತಕ ವೀರಪ್ಪನ್. ಅವನಿಂದ ಅದೆಷ್ಟೋ ಪ್ರಾಣಿ ಸಂಕುಲ ಹಾಗೂ ಮನುಷ್ಯರು ಬಲಿಯಾಗಿದ್ದಾರೆ ಎಂಬುದೇ ಲೆಕ್ಕಕ್ಕಿಲ್ಲ ಎನ್ನಬಹುದು. ಹಾಗೆಯೇ ಅವನ ಮದ್ದು ಗುಂಡಿನ ವೈವಾಟು , ರಾಜಕೀಯ ನಂಟು, ನಿಗೂಢ ವ್ಯವಹಾರದ ಚಲನವಲನದ ಆರ್ಭಟಕ್ಕೆ ಸೆಡ್ಡು ಹೊಡೆದು ನಿಂತ ಪೊಲೀಸರ ಕಾರ್ಯಚರಣೆಯಲ್ಲಿ ಗುಂಡಿಗೆ ಬಲಿಯಾಗಿದ್ದು ತಿಳಿದೇ ಇದೆ.

ಆದರೆ ಫಾರೆಸ್ಟ್ ಚಿತ್ರ ತಂಡ ಇದಕ್ಕೆ ಪೂರಕ ಎನ್ನುವ ಹಾಗೇ ಎರಡು ದಶಕ ಕಳೆದರೂ ತಮ್ಮದೇ ಶೈಲಿಯ ಚಿತ್ರಕಥೆಗೆ ಪೂರಕವಾಗಿ ಒಂದಷ್ಟು ಬದಲಾವಣೆ ಮೂಲಕ ಬೆಟ್ಟ ಗುಡ್ಡದ ಜನರ ಬದುಕು , ಬವಣೆಯ ನಂಟಿನ ಜೊತೆಗೆ ಹಣ , ಚಿನ್ನದ ಹುಡುಕಾಟಕ್ಕೆ ಹೊರಟವರಿಗೆ ಆತ್ಮದ ಕಾಟ ಎದುರಾಗಿ ಏನೆಲ್ಲಾ ನಡೆಯುತ್ತದೆ ಎಂಬ ವಿಚಾರವನ್ನು ರೋಮಾಂಚನಕಾರಿಯಾಗಿ ಹಾಸ್ಯ ಮಿಶ್ರಣದೊಂದಿಗೆ ವೀಕ್ಷಕರ ಮುಂದೆ ಈ ವಾರ ತಂದಿರುವಂತಹ ಚಿತ್ರವೇ “ಫಾರೆಸ್ಟ್”.

ಬೆಟ್ಟಗುಡ್ಡಗಳ ತಪ್ಪಲಿನಲ್ಲಿರುವ ಬಾಳೆಪಟ್ಟಿ ಗ್ರಾಮದ ಗೋಪಾಲಸ್ವಾಮಿ (ರಂಗಾಯಣ ರಘು) ತಾತ ಮುತ್ತಾತನ ಕಾಲದಿಂದ ನಡೆಸಿಕೊಂಡು ಬಂದ ಮಂತ್ರಶಕ್ತಿಯ ಕೈಚಳಕ , ಜನರ ಕಷ್ಟವೇ ಇವನಿಗೆ ಅಸ್ತ್ರ , ಬದುಕು. ಇನ್ನು ಕುಮಾರ (ಚಿಕ್ಕಣ್ಣ) ಒಂದು ಕಿವಿ ಕೇಳದಿದ್ದರೂ, ಬಡ್ಡಿ ವ್ಯವಹಾರದ ಕಿಲಾಡಿ, ಮನಸೆಲ್ಲಾ ಆಸೆ , ಹುಡುಗಿರನ್ನು ಪಟಾಯಿಸುವುದೇ ಕೆಲಸ. ಯಾವುದಕ್ಕೂ ತಲೆಕೆಡಿಸಿಕೊಳ್ಳದ ಸತೀಶ (ಅನೀಶ್ ತೇಜಸ್ವರ್) , ಗೆಳತಿ ಸಂಧ್ಯಾ (ಶರಣ್ಯ ಶೆಟ್ಟಿ) ಯನ್ನ ಮದುವೆಯಾಗುವುದೇ ಗುರಿ.

ತಾತ ಸೆಲ್ವಂ (ಅವಿನಾಶ) ಕೋಮ ಸ್ಥಿತಿಯ ಬದುಕಿಗೆ ಆಸರೆ ಮೊಮ್ಮಗಳು ಮೀನಾಕ್ಷಿ (ಅರ್ಚನ ಕೊಟ್ಟಿಗೆ). ತನ್ನ ಬದುಕಿನ ಕಷ್ಟಕ್ಕೆ ಜಮೀನು ಮಾರಲು ಅಡ್ಡಿ ಆತಂಕ. ಇವಳ ಪ್ರಿಯಕರ ಸುನಿಲ (ಗುರುನಂದನ್) , ಮದುವೆ ಆಗುವ ಆಸೆ ಇದ್ದರೂ , ಜಮೀನಿನ ವಿಚಾರ ಕೈ ಕೊಡುತ್ತಿರುತ್ತದೆ.

ಮೀನಾಕ್ಷಿ ಆಸ್ತಿ ಮಾರುವ ವಿಚಾರಕ್ಕೆ ಮಂತ್ರವಾದಿ ಗೋಪಾಲ್ ಸ್ವಾಮಿ ಸಹಾಯ ಪಡೆಯುವ ಸಮಯಕ್ಕೆ ಸೆಲ್ವಂ ಮೂಲಕ ಪಾಲ್ಲಿ ಬೆಟ್ಟದಲ್ಲಿರುವ 20 ಕೋಟಿಯ ಚಿನ್ನದ ರಹಸ್ಯ 5 ಮಂದಿಗೂ ತಿಳಿಯುತ್ತದೆ. ಬದುಕು ಬಂಗಾರ ಮಾಡಿಕೊಳ್ಳಲು ಹೊರಟವರಿಗೆ ಕಾಡಿನಲ್ಲಿ ಸಿಗುವ ವಿಚಿತ್ರ ವ್ಯಕ್ತಿ ಬೀರು. ನಂತರ ಒಂದು ಆತ್ಮದ ಮೂಲಕ ಚಿನ್ನದ ಹಿಂದಿನ ರಹಸ್ಯ ತಿಳಿಯುತ್ತದೆ. ಮುಂದೆ ಎದುರಾಗುವ ರೋಚಕ ಘಟನೆಗಳು ಬೇರೆಯದೇ ದಾರಿಯನ್ನ ತೋರುತ್ತದೆ.
ಕಾಡಿನ ಆ ಆತ್ಮ ಯಾರು..?
ಐವರ ಸ್ಥಿತಿ ಗತಿ ಏನು…
ಚಿನ್ನ ಸಿಗುತ್ತಾ ಇಲ್ವಾ…
ಮಂತ್ರ – ತಂತ್ರ ಗೆಲ್ಲುತ್ತಾ…
ಕ್ಲೈಮಾಕ್ಸ್ ಉತ್ತರ ಏನು…
ಇದಕ್ಕೆಲ್ಲ ನೀವು ಈ ಚಿತ್ರ ನೋಡಬೇಕು.

ಇನ್ನು ನಿರ್ದೇಶಕ ಚಂದ್ರ ಮೋಹನ್ ಇಂದಿಗೂ ಇರುವ ಒಂದಷ್ಟು ಪ್ರಶ್ನೆಗಳಿಗೆ ಹುಳ ಬಿಟ್ಟಂತೆ , ಕಾಡಿನ ಬೆಟ್ಟ ಗುಡ್ಡಗಳಲ್ಲಿ ಕೆಲವೊಂದು ಬಚ್ಚಿಟ್ಟಿರುವ ಸಾಧ್ಯತೆ ಎಂಬಂತೆ ಕಥಾವಸ್ತುದೊಂದಿಗೆ ಆಸೆ ಮನುಷ್ಯರೂ ಹಾಗೂ ಪ್ರತಾತ್ಮವನ್ನು ಬಿಡುವುದಿಲ್ಲ ಎಂಬ ಅಂಶವನ್ನು ಹಾಸ್ಯ ಮಿಶ್ರಣದೊಂದಿಗೆ ಗಮನ ಸೆಳೆಯುವ ರೀತಿಯಲ್ಲಿ ತೆರೆಯ ಮೇಲೆ ತಂದಿದ್ದಾರೆ. ಕಥೆ ತಿಳಿದಿರುವ ವಿಚಾರವಾದರೂ ಸಿನಿಮಾಟಿಕ್ ರೂಪಕ್ಕೆ ಏನು ಬೇಕು ಅದನ್ನು ಬದಲಿಸಿಕೊಂಡಿದ್ದು , ಚಿತ್ರಕಥೆ ಇನ್ನಷ್ಟು ಬಿಗಿ ಮಾಡಬಹುದಿತ್ತು.

ಕೆಲವೊಂದು ಸಂಭಾಷಣೆ ನಗಿಸುತ್ತಲೇ ಮನಸ್ಸಿಗೆ ಇಷ್ಟವಾಗುತ್ತದೆ. ಕಾಡಿನೊಳಗೆ ಹೆಚ್ಚು ಗಿರ್ಕಿ ಹೊಡೆದಿದ್ದು , ದ್ವಿತೀಯ ಭಾಗ ಹೆಚ್ಚು ಕುತೂಹಲ ಮೂಡಿಸುತ್ತಾ ಸಾಗುತ್ತದೆ. ಹಿನ್ನೆಲೆ ಸಂಗೀತ , ಗ್ರಾಫಿಕ್ಸ್ ಸಿಜಿ ವರ್ಕ್ , ಕ್ಯಾಮೆರಾ ಕೈಚಳಕ ಸೊಗಸಾಗಿದೆ. ತಾಂತ್ರಿಕವಾಗಿ ತಂಡ ಶ್ರಮ ಪಟ್ಟಿರುವುದು ಕಾಣುತ್ತದೆ. ಇಂಥ ಚಿತ್ರಕ್ಕೆ ಧೈರ್ಯ ಮಾಡಿ ಹಣವನ್ನ ಹಾಕಿರುವ ನಿರ್ಮಾಪಕರ ಸಾಹಸ ಮೆಚ್ಚುವಂತಿದೆ. ಕಲಾವಿದರ ವಿಚಾರವಾಗಿ ಚಿಕ್ಕಣ್ಣ ಹಾಗೂ ರಂಗಾಯಣ ರಘು ಕಾಂಬಿನೇಷನ್ ಅದ್ಭುತವಾಗಿ ಮೂಡಿಬಂದಿದೆ.

ಅನೀಶ್ ಹಾಗೂ ಗುರುನಂದನ್ ತಮ್ಮ ಪಾತ್ರಕ್ಕೆ ಜೀವ ಕೊಟ್ಟು ಗಮನ ಸೆಳೆಯುವ ರೀತಿಯಲ್ಲಿ ಕಾಣಿಸಿಕೊಂಡಿದ್ದಾರೆ. ನಟಿ ಅರ್ಚನಾ ಕೊಟ್ಟಿಗೆ ಕೂಡ ಒಬ್ಬ ಹೀರೋ ರೇಂಜಿಗೆ ಪಾತ್ರದಲ್ಲಿ ಜೀವಿಸಿದ್ದು , ತಮ್ಮ ಪ್ರತಿಭೆಯನ್ನ ಹೊರಹಾಕಿದ್ದಾರೆ. ವಿಶೇಷ ಪಾತ್ರದಲ್ಲಿ ಬರುವ ಶರಣ್ಯ ಶೆಟ್ಟಿ ಕೂಡ ಮಿಂಚಿದ್ದಾರೆ. ಖಳನಾಯಕನಾಗಿ ಕಾಣಿಸಿಕೊಂದಿರುವ ಸೂರಜ್ ಪಾಪ್ಸ್ ಪಾತ್ರ ಇಡೀ ಚಿತ್ರದ ಹೈಲೈಟ್. ಉಳಿದಂತೆ ಪ್ರಕಾಶ್ ತುಮ್ಮಿ ನಾಡು ಹಾಗೂ ದೀಪಕ್ ರೈ ತಮ್ಮ ಪಾತ್ರಗಳಿಗೆ ನ್ಯಾಯವನ್ನು ಒದಗಿಸಿದ್ದಾರೆ. ಒಟ್ಟಾರೆ ಸಸ್ಪೆನ್ಸ್ ಹಾಗೂ ಅಡ್ವೆಂಚರಸ್ ಚಿತ್ರ ಪ್ರೇಮಿಗಳನ್ನ ಸೆಳೆಯುವ ಈ ಚಿತ್ರವನ್ನು ಎಲ್ಲರೂ ಒಮ್ಮೆ ನೋಡುವಂತಿದೆ.

error: Content is protected !!