ಸೆನ್ಸಾರ್ ನತ್ತ ಬಹು ನಿರೀಕ್ಷೆಯ “ಫಾರೆಸ್ಟ್” ಚಿತ್ರ ಸದ್ಯದಲ್ಲೇ ತೆರೆಗೆ
ಅಡ್ವೆಂಚರ್ಸ್ ಕಾಮಿಡಿ ಕಥಾಹಂದರ ಒಳಗೊಂಡಿರುವ, ಶೀರ್ಷಿಕೆ, ತಾರಾಗಣ ಹಾಗೂ ಕನ್ಸೆಪ್ಟ್ ನಿಂದಲೇ ಬಹು ನಿರೀಕ್ಷೆಯಿರುವ “ಫಾರೆಸ್ಟ್” ಚಿತ್ರದ ಪ್ರಥಮಪ್ರತಿ ಸಿದ್ದವಾಗಿದೆ. ಸದ್ಯದಲ್ಲೇ ಪ್ರಾದೇಶಿಕ ಸೆನ್ಸಾರ್ ಮಂಡಳಿ ಚಿತ್ರವನ್ನು ವೀಕ್ಷಿಸಲಿದ್ದು, ಕೆಲವೇ ದಿನಗಳಲ್ಲಿ ಬಹು ನಿರೀಕ್ಷಿತ ಈ ಚಿತ್ರ ತೆರೆಗೆ ಬರಲಿದೆ.ಸಿನಿಮಾ ಬಗ್ಗೆ ಅಪಾರ ಪ್ರೀತಿ ಹೊಂದಿರುವ ಎನ್ ಎಂ ಕಾಂತರಾಜ್ ಅವರು ಎನ್.ಎಂ.ಕೆ. ಸಿನಿಮಾಸ್ ಬ್ಯಾನರ್ ಅಡಿಯಲ್ಲಿ “ಫಾರೆಸ್ಟ್” ಚಿತ್ರವನ್ನು ಯಾವುದೇ ಕೊರತೆ ಬಾರದ ಹಾಗೆ ಅದ್ದೂರಿಯಾಗಿ ನಿರ್ಮಾಣ ಮಾಡಿದ್ದಾರೆ.
‘ಡಬಲ್ ಇಂಜಿನ್’ , ‘ಬ್ರಹ್ಮಚಾರಿ’ ಚಿತ್ರಗಳ ನಿರ್ದೇಶಕ ಚಂದ್ರಮೋಹನ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಕಾಡಿನಲ್ಲೇ ನಡೆಯುವ ಅಡ್ವೆಂಚರಸ್ ಕಾಮಿಡಿ ಕಥೆಯನ್ನು ನಿರ್ದೇಶಕರು ಈ ಚಿತ್ರದ ಮೂಲಕ ವಿಭಿನ್ನವಾಗಿ ಹೇಳಹೊರಟಿದ್ದಾರೆ.ತಮ್ಮ ಅಭಿನಯದ ಮೂಲಕ ಅಭಿಮಾನಿಗಳ ಮನ ಗೆದ್ದಿರುವ ಚಿಕ್ಕಣ್ಣ, ಅನೀಶ್ ತೇಜೇಶ್ವರ್, ಗುರುನಂದನ್ ಹಾಗೂ ರಂಗಾಯಣ ರಘು ಅವರಂಥ ಸ್ಟಾರ್ ಕಲಾವಿದರು ಪ್ರಮುಖ ಪಾತ್ರದಲ್ಲಿ ಅಭಿನಯಿಸಿರುವ ಮಲ್ಟಿ ಸ್ಟಾರರ್ ಚಿತ್ರ ಇದಾಗಿದೆ.
ಹಾಡು ಹಾಗೂ ಟೀಸರ್ ಮೂಲಕ ಈಗಾಗಲೇ ಜನರ ಮನ ಮುಟ್ಟಿರುವ ಈ ಚಿತ್ರಕ್ಕೆ ಸತ್ಯಶೌರ್ಯ ಸಾಗರ್ ಹಾಗೂ ಚಂದ್ರಮೋಹನ್ ಕಥೆ, ಚಿತ್ರಕಥೆ ರಚಿಸಿದ್ದಾರೆ. ಸತ್ಯಶೌರ್ಯ ಸಾಗರ್ ಅವರೆ ಸಂಭಾಷಣೆಯನ್ನೂ ಬರೆದಿದ್ದಾರೆ. ಧರ್ಮವಿಶ್ ಸಂಗೀತ ನಿರ್ದೇಶನ, ಆನಂದ್‌ರಾಜಾ ವಿಕ್ರಮ್ ಅವರ ಹಿನ್ನೆಲೆ ಸಂಗೀತ, ರವಿಕುಮಾರ್ ಅವರ ಛಾಯಾಗ್ರಹಣ, ಅರ್ಜುನ್ ಕಿಟ್ಟು ಅವರ ಸಂಕಲನ, ಅಮರ್ ಅವರ ಕಲಾ ನಿರ್ದೇಶನ ಹಾಗೂ ಡಾ||ರವಿವರ್ಮ ಅವರ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ. ಚಿಕ್ಕಣ್ಣ, ಅನೀಶ್ ತೇಜೇಶ್ವರ್, ಗುರುನಂದನ್, ರಂಗಾಯಣ ರಘು, ಶರಣ್ಯ ಶೆಟ್ಟಿ, ಅರ್ಚನಾ ಕೊಟ್ಟಿಗೆ, ಅವಿನಾಶ್, ಪ್ರಕಾಶ್ ತುಮ್ಮಿನಾಡು, ದೀಪಕ್ ರೈ ಪಾಣಂಜೆ, ಸೂರಜ್ ಪಾಪ್ಸ್, ಸುನೀಲ್‌ಕುಮಾರ್ ಮುಂತಾದ ಹಿರಿಯ ಹಾಗೂ ಕಿರಿಯ ಕಲಾವಿದರು “ಫಾರೆಸ್ಟ್” ಚಿತ್ರದಲ್ಲಿ ಅಭಿನಯಿಸಿದ್ದಾರೆ.
ಬೆಂಗಳೂರು, ಮಡಿಕೇರಿ, ಚಿಕ್ಕಮಗಳೂರು, ಸಂಪಾಜೆ ಫಾರೆಸ್ಟ್ ಹಾಗೂ ಮಲೆ ಮಾದೇಶ್ವರ ಬೆಟ್ಟದ ಸುತ್ತಮುತ್ತ ೮೦ ದಿನಗಳ ಕಾಲ ಈ ಚಿತ್ರದ ಚಿತ್ರೀಕರಣ ನಡೆದಿದೆ. ಬಹುತೇಕ ಚಿತ್ರೀಕರಣ ಕಾಡಿನಲ್ಲೇ ನಡೆದಿರುವುದು ವಿಶೇಷ. ಬಹು ತಾರಾಗಣವುಳ್ಳ ಈ ಚಿತ್ರದ ಕ್ಲೈಮ್ಯಾಕ್ಸ್ ಅದ್ದೂರಿಯಾಗಿ ಮೂಡಿಬಂದಿದ್ದು, ವಿ ಎಫ್ ಎಕ್ಸ್ ಅನ್ನು ನವೀನವಾಗಿ ಬಳಸಿಕೊಳ್ಳಲಾಗಿದೆ.