ಪ್ರೀತಿ ಹಾಗೂ ಕುಸ್ತಿಯ ನಿಟ್ಟುಸಿರು…ಗಜರಾಮ (ಚಿತ್ರವಿಮರ್ಶೆ-ರೇಟಿಂಗ್ : 3.5/5)
ರೇಟಿಂಗ್ : 3.5/5
ಚಿತ್ರ : ಗಜರಾಮ
ನಿರ್ದೇಶಕ : ಸುನೀಲ್ ಕುಮಾರ್
ನಿರ್ಮಾಪಕ : ನರಸಿಂಹಮೂರ್ತಿ. ವಿ
ಸಂಗೀತ : ಮನೋಮೂರ್ತಿ
ಛಾಯಾಗ್ರಹಣ : ಚಂದ್ರಶೇಖರ್. ಕೆ .ಎಸ್
ತಾರಾಗಣ : ರಾಜವರ್ಧನ್, ತಪಸ್ವಿನಿ, ರಾಗಿಣಿ ದ್ವಿವೇದಿ, ದೀಪಕ್, ಕಬೀರ್ ಸಿಂಗ್, ಶರತ್ ಲೋಹಿತಾಶ್ವ , ತುಕಾಲಿ ಸಂತು ಹಾಗೂ ಮುಂತಾದವರು…
ಪ್ರೀತಿ ಮಧುರ… ತ್ಯಾಗ ಅಮರ… ಅನ್ನೋ ವಿಚಾರ ಎಲ್ಲರಿಗೂ ತಿಳಿದೇ ಇದೆ. ಒಮ್ಮೆ ಪ್ರೀತಿ ಹುಟ್ಟಿದರೆ ಮುಗಿಯಿತು, ಅದಕ್ಕಾಗಿ ಪ್ರೇಮಿ ಯಾವ ಹಂತಕ್ಕೆ ಹೋಗುತ್ತಾನೆ, ಆದ್ದರಿಂದ ಆಗುವ ಪರಿಣಾಮಗಳು ಏನು, ಪ್ರೀತಿಗಿರುವ ಶಕ್ತಿ ಎಂತದ್ದು ಎಂದರೆ ಒಂದು ಪಡೆಯಬೇಕಾದರೆ ಮತ್ತೊಂದನ್ನು ತ್ಯಾಗ ಮಾಡಬೇಕಾಗುತ್ತದೆ.
ಇಂತಹ ಅಂಶಗಳನ್ನು ಒಳಗೊಂಡಿರುವ ಪ್ರೀತಿ ಹಾಗೂ ಸಾಧನೆಯ ನಡೆಯುವ ಸಾಗುವ ಕಥಾನಕ ವಾಗಿ ಈ ವಾರ ಪ್ರೇಕ್ಷಕರ ಮುಂದೆ ಬಂದಿರುವಂತಹ ಚಿತ್ರವೇ “ಗಜರಾಮ”. ಹಳ್ಳಿಯಲ್ಲಿ ಬೆಳೆದ ಒಬ್ಬ ಕಟ್ಟುಮಸ್ತಿನ ಯುವಕ ರಾಮ (ರಾಜವರ್ಧನ್). ಬಾಲ್ಯದಿಂದಲೂ ತನ್ನ ಸ್ನೇಹಿತೆ ಅಂಜಲಿ (ತಪಸ್ವಿನಿ ಪೊನ್ನಚ್ಚ) ಮೇಲೆ ಅಪಾರ ಪ್ರೀತಿ.
ಯಾರಾದರೂ ಆಕೆಗೆ ತೊಂದರೆ ಕೊಟ್ಟರೆ ಅವರನ್ನು ಸದಾ ಬಡಿಯಲು ಸಿದ್ದನಾಗುವ ರಾಮ. ಇದರ ನಡುವೆ ಅಂಜಲಿ ವಿದ್ಯಾಭ್ಯಾಸಕ್ಕಾಗಿ ಪಟ್ಟಣ ಸೇರುತ್ತಾಳೆ. ಇದರ ನಡುವೆ ರಾಮನಿಗೆ ಉಸ್ತಾದ್ (ಶರತ್ ಲೋಹಿತಾಶ್ವ) ಸಂಪರ್ಕ ಸಿಕ್ಕಿ ಅವರ ಶಿಷ್ಯನಾಗಿ ಗರಡಿ ಮನೆ ಸೇರಿ ಹಲವು ಪಟ್ಟುಗಳ ತರಬೇತಿ ಪಡೆಯುವ ಮೂಲಕ ಶಿಸ್ತಿನಿಂದ ದೇಹ ಹುರಿಗೊಳಿಸಿ, ಎಲ್ಲಾ ಪೈಲ್ವಾನ್ಗಳನ್ನ ಸದೆಬಡೆದು, ರಾಜ್ಯ ಮಟ್ಟದ ಕುಸ್ತಿ ಪಂದ್ಯಾವಳಿಗೆ ಆಯ್ಕೆಯಾಗುತ್ತಾನೆ.
ಮತ್ತೆ ಊರಿಗೆ ಬರುವ ಅಂಜಲಿ ತನ್ನ ಮದುವೆ ಇನ್ಸ್ಪೆಕ್ಟರ್ (ದೀಪಕ್) ಜೊತೆ ಎಂಬ ವಿಚಾರ ತಿಳಿಸಿ ಹೊರಟು ಹೋಗುತ್ತಾಳೆ. ಇದರಿಂದ ಕಂಗಾಲಾಗುವ ರಾಮ , ಮುಂದೇನು ಮಾಡಬೇಕು ಎಂಬ ಆಲೋಚಸಿ ತನ್ನ ಗೆಳೆಯನ ಮೂಲಕ ಸಿಟಿಯಲ್ಲಿರುವ ಅಂಜಲಿ ಮನೆ ಹುಡುಕುವ ಪ್ರಯತ್ನ ಮಾಡುತ್ತಾನೆ.
ಇದರ ನಡುವೆ ಹೆಣ್ಣು ಮಕ್ಕಳ ಕಳ್ಳಸಾಗಾಣಿಕೆಯ ದಂಧೆಯಲ್ಲಿ ಗುಂಪೊಂದು ಮುಂದಾಗಿರುತ್ತದೆ. ಈ ತಂಡವು ಅಂಜಲಿಯನ್ನು ಕಿಡ್ನಾಪ್ ಮಾಡುವ ಪ್ಲಾನ್ ಮಾಡುತ್ತಾರೆ. ಇದು ಒಂದಕ್ಕೊಂದು ಕೊಂಡಿಯಂತೆ ಬೆಸೆದುಕೊಂಡು ಬೇರೆದೇ ರೂಪ ಪಡೆಯುತ್ತದೆ.
ರಾಮನಿಗೆ ಪ್ರೀತಿ ಸಿಗುತ್ತಾ…
ಯಾರ ಜೊತೆ ಅಂಜಲಿ ಮದುವೆ…ಇನ್ಸ್ಪೆಕ್ಟರ್ ತಿಳಿಯುವ ಸತ್ಯ ಏನು…
ಪೈಲ್ವಾನ್ ಕಥೆ ಏನು…
ಕ್ಲೈಮಾಕ್ಸ್ ಸಿಗುವ ಉತ್ತರ… ಇದಕ್ಕಾಗಿ ನೀವು ಒಮ್ಮೆ ಗಜರಾಜನ ದರ್ಶನ ಮಾಡಲೇಬೇಕು.
ಈ ಕತೆಯನ್ನು ಆಯ್ಕೆ ಮಾಡಿಕೊಂಡಿರುವ ನಿರ್ದೇಶಕರ ಆಲೋಚನೆ ಗಮನ ಸೆಳೆಯುವಂತಿದೆ. ಒಬ್ಬ ಪೈಲ್ವಾನ್ ಕಥೆಯ ಜೊತೆಗೆ ಪ್ರೀತಿ ಹಾಗೂ ಕಳ್ಳಸಾಗಾಣಿಕೆಯ ವಿಚಾರಗಳನ್ನು ಮಾಸ್ ಅಂಶಗಳ ಮೂಲಕ ಅಚ್ಚುಕಟ್ಟಾಗಿ ಹೇಳುವ ಪ್ರಯತ್ನ ಮಾಡಿದ್ದಾರೆ. ಪ್ರೀತಿ ಹಾಗೂ ತ್ಯಾಗದ ಸುತ್ತ ಗರಡಿಯ ಕಸರತ್ತು , ಪ್ರೀತಿಯ ತಾಕತ್ತು , ತ್ಯಾಗದ ನಿಯತ್ತನ್ನು ತೆರೆದಿಟ್ಟಿದ್ದು , ಚಿತ್ರಕಥೆ ಇನ್ನಷ್ಟು ಬಿಗಿ ಮಾಡಬಹುದಿತ್ತು. ಒಂದು ಆಕ್ಷನ್ ಫುಲ್ , ಮಾಸ್ ಚಿತ್ರಕ್ಕೆ ಏನೆಲ್ಲ ಬೇಕು ಅದನ್ನು ಒದಗಿಸಿರುವ ನಿರ್ಮಾಪಕರ ಧೈರ್ಯವನ್ನು ಮೆಚ್ಚಲೇಬೇಕು.
ಸಂಗೀತ , ಛಾಯಾಗ್ರಹಣ , ಸಂಕಲನ , ನೃತ್ಯ ನಿರ್ದೇಶನ ಸೇರಿದಂತೆ ತಾಂತ್ರಿಕ ವರ್ಗ ತಮ್ಮ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಇನ್ನು ನಾಯಕನಾಗಿ ಅಭಿನಯಿಸಿರುವ ರಾಜವರ್ಧನ್ ತಮ್ಮ ಪಾತ್ರಕ್ಕೆ ನ್ಯಾಯವನ್ನು ಒದಗಿಸಿದ್ದು , ಆಕ್ಷನ್ ಸನ್ನಿವೇಶಗಳನ್ನು ಭರ್ಜರಿಯಾಗಿದ್ದು , ಡ್ಯಾನ್ಸ್ ಸ್ಟೆಪ್ ಗೂ ಸೈ ಎಂದಿದ್ದಾರೆ. ಅದೇ ರೀತಿ ನಟಿ ತಪಸ್ವಿನಿ ಮುದ್ದಾಗಿ ಕಾಣುತ್ತಾ ಸಿಕ್ಕ ಅವಕಾಶವನ್ನ ನಿಭಾಯಿಸಿದ್ದಾರೆ.
ವಿಶೇಷ ಹಾಡೊಂದರಲ್ಲಿ ‘ಸಾರಾಯಿ ಶಾಂತಮ್ಮ’ ಹಾಡಿನ ಮೂಲಕ ರಾಗಿಣಿ ದ್ವಿವೇದಿ ಗಮನ ಸೆಳೆಯುತ್ತಾರೆ. ಇನ್ನು ಉಸ್ತಾದ್ ಪಾತ್ರದಲ್ಲಿ ಶರತ್ ಲೋಹಿತಾಶ್ವ, ಪೊಲೀಸ್ ಇನ್ಸ್ಪೆಕ್ಟರ್ ಪಾತ್ರದಲ್ಲಿ ಶಿಷ್ಯ ದೀಪಕ್ , ಖಳನಾಯಕನಾಗಿ ಕಬೀರ್ ದುಹಾನ್ ಸಿಂಗ್ ತಮ್ಮ ತಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಈ ಚಿತ್ರದಲ್ಲಿ ಸ್ನೇಹ , ಪ್ರೀತಿ , ಕುಸ್ತಿ , ತ್ಯಾಗ , ದುಷ್ಟರ ಸಂಹಾರ ಸೇರಿದಂತೆ ಎಲ್ಲಾ ಅಂಶಗಳು ಒಳಗೊಂಡಿದ್ದು , ಆಕ್ಷನ್ ಪ್ರಿಯರಿಗೆ ಬಹುಬೇಗ ಇಷ್ಟವಾಗುವ ಈ ಚಿತ್ರವನ್ನು ಎಲ್ಲರೂ ಒಮ್ಮೆ ನೋಡಬಹುದು.