ಟೈಮ್ ಟ್ರಾವೆಲಿಂಗ್ ನಲ್ಲಿ ಬ್ರೈನ್ ವರ್ಕ್ : ಗಣ (ಚಿತ್ರವಿಮರ್ಶೆ : ರೇಟಿಂಗ್ : 3.5/5)
ರೇಟಿಂಗ್ : 3.5/5
ಚಿತ್ರ : ಗಣ
ನಿರ್ದೇಶಕ : ಹರಿಪ್ರಸಾದ್ ಜಕ್ಕ
ನಿರ್ಮಾಪಕ : ಪಾರ್ಥಸಾರಥಿ
ಸಂಗೀತ : ಅನೂಪ್ ಸೀಳಿನ್
ಛಾಯಾಗ್ರಹಣ : ಜೈ ಆನಂದ್
ತಾರಾಗಣ : ಪ್ರಜ್ವಲ್ ದೇವರಾಜ್, ಯಶ ಶಿವಕುಮಾರ, ವೇದಿಕಾ, ಸಂಪತ್, ರವಿಕಾಳೆ, ಕೃಷಿ ತಪಾಂಡ, ವಿಶಾಲ್ ಹೆಗ್ಡೆ, ರಮೇಶ್ ಭಟ್, ಶಿವು ಕೆ.ಆರ್.ಪೇಟೆ ಹಾಗೂ ಮುಂತಾದವರು…
ನಮ್ಮ ಜೀವನದಲ್ಲಿ ಏನಾದರೂ ಒಂದು ಬದಲಾವಣೆ ಮಾಡಿಕೊಳ್ಳುವ ಚಾನ್ಸ್ ಸಿಕ್ಕರೆ ಅದನ್ನು ಹೇಗೆ ಬಳಸಿಕೊಳ್ಳಬಹುದು ಎಂದು ಊಹಿಸುವುದೇ ಅಸಾಧ್ಯ ಅನಿಸುತ್ತದೆ. ಅಂತದ್ರಲ್ಲಿ ಎರಡು ದಶಕಗಳ ಹಿಂದೆ ಜೀವಿಸಿದವರ ಜೊತೆ ಒಡನಾಟ, ಕಾಲಘಟ್ಟದ ವಿವರ, ಸಂಚಿನ ಸುಳಿವು, ಸಂಬಂಧಗಳ ಮೌಲ್ಯ, ಪ್ರೀತಿಯ ಸೆಳೆತ ಹೀಗೆ ಒಂದಕ್ಕೊಂದು ಕೊಂಡಿಯಂತೆ ಬೆಸೆದುಕೊಂಡು ಎರಡು ಕಾಲಘಟ್ಟಗಳ ಕಥಾನಕವನ್ನು ಬಹಳ ಕುತೂಹಲಕಾರಿಯಾಗಿ ಕಟ್ಟಿಕೊಡುವ ಪ್ರಯತ್ನದ ಫಲವಾಗಿ ಈ ವಾರ ಪರದೆಯ ಮೇಲೆ ಬಂದಿರುವಂತಹ ಚಿತ್ರ “ಗಣ”.
ಒಂದು ಪಾರ್ಕ್ ಬಳಿ ಎರಡು ದೇಹದ ಅಸ್ತಿ ಪಂಜರ ಪತ್ತೆಯಾಗುತ್ತದೆ. ಅದು ಟಿವಿ ಚಾನೆಲ್ ಗೆ ದೊಡ್ಡ ಸುದ್ದಿಯಾಗುತ್ತದೆ. ಆ ಸ್ಥಳಕ್ಕೆ ಬರುವ ಕ್ರೈಂ ರಿಪೋರ್ಟರ್ ಗಣ (ಪ್ರಜ್ವಲ್ ದೇವರಾಜ್) ಲೈವ್ ಪ್ರಸಾರದ ಮೂಲಕ ಇದೊಂದು ಗಂಡು ಹೆಣ್ಣಿನ ಮರ್ಡರ್ ನಡೆದಿದೆ ಎನ್ನುತ್ತಾನೆ. ಅದಕ್ಕೆ ಪೂರಕವಾಗಿ ವಾಹಿನಿಯ ಮುಖ್ಯಸ್ಥ ಜಗಪತಿ(ಸಂಪತ್ ) ಗೆ ವಿವರ ನೀಡುತ್ತಾನೆ.
ಇವನ ಬುದ್ಧಿವಂತಿಕೆ ಕಂಡು ಪೊಲೀಸ್ ಗೂ ಮುನ್ನ ಈ ಕೇಸ್ ಇನ್ವೆಸ್ಟಿಗೇಷನ್ ಮಾಡಲು ತಿಳಿಸುತ್ತಾನೆ. ಗಣ ತನ್ನ ಗೆಳೆಯನೊಂದಿಗೆ ಹಳೆಯ ಮನೆಯಲ್ಲಿ ವಾಸ ಮಾಡುತ್ತಾನೆ. ಇದರ ನಡುವೆ ಮುದ್ದಾದ ಹುಡುಗಿ ಶೃತಿ ಅಂದಕ್ಕೆ (ಯಶ ಶಿವಕುಮಾರ್) ಮನ ಸೋಲುತ್ತಾನೆ. ಒಮ್ಮೆ ಮಳೆ ಆರ್ಭಟಕ್ಕೆ ಸಿಡಿಲು ಹೊಡೆದು ಕರೆಂಟ್ ಹೋಗುತ್ತದೆ. ಆ ಮನೆಯಲ್ಲಿದ್ದ ಲ್ಯಾಂಡ್ ಫೋನ್ ರಿಂಗ್ ಆಗುತ್ತದೆ.
ಕಾಲ್ ರಿಸೀವ್ ಮಾಡಿದಾಗ ಹುಡುಗಿ ಒಬ್ಬಳ ಧ್ವನಿ ಕೇಳಿಸುತ್ತದೆ. ಕರೆಂಟ್ ಹೋದ ವಿಚಾರ ಮಾತನಾಡುತ್ತಲೇ ಒಬ್ಬರಿಗೊಬ್ಬರ ಪರಿಚಯ ಮಾಡಿಕೊಳ್ಳುತ್ತಾರೆ, ಆದರೆ ಆಕೆ ಸುಜಾತ (ವೇದಿಕಾ) ಟೀಚರ್ ಆಗಿದ್ದು ಮಾತನಾಡುತ್ತಿರುವ ಕಾಲಘಟ್ಟ 1993, ಇನ್ನು ಗಣ ಕಾಲಘಟ್ಟ 2022 , ಗೆಳೆಯನ ಮೂಲಕ ಟೆಲಿಫೋನ್ ಲೈನ್ ಕಟ್ಟಾಗಿರುವ ವಿಚಾರ ತಿಳಿದು ಆಶ್ಚರ್ಯ ಪಡುತ್ತಾನೆ.
ಇದರ ಹಿಂದೆ , ಮುಂದೆ ತಿಳಿದುಕೊಳ್ಳುವ ಪ್ರಯತ್ನ ಮಾಡುವಾಗ ಒಬ್ಬ ವ್ಯಕ್ತಿ ಮಗುವನ್ನು ಕೊಲೆ ಮಾಡುವ ಸಂಚು ತಿಳಿಯುತ್ತದೆ. ಒಂದು ಜೋಡಿ ಕೊಲೆ ರಹಸ್ಯ ಹುಡುಕುತ್ತಿರುವಾಗಲೇ ಮತ್ತೊಂದು ಜೋಡಿ ಕೊಲೆ ಆಗಿರುವ ವಿಚಾರ ಗಣ ಗಮನಕ್ಕೆ ಬರುತ್ತದೆ. ಈ ಸತ್ಯಾಂಶದ ಹಿಂದೆ ಒಂದಿಷ್ಟು ರೋಚಕ ತಿರುವುಗಳು ಎದುರಾಗಿ ಗಣ ಸಂಬಂಧಕ್ಕೂ ಬೆಸೆದುಕೊಳ್ಳುತ್ತದೆ. ಈ ಕೊಲೆಗಳ ಹಿಂದಿರುವವರು ಯಾರು, ಕೊಲೆ ಮಾಡುವ ಉದ್ದೇಶವಾದರೂ ಏನು , ಈ ಎರಡು ಕಾಲಘಟ್ಟಕ್ಕೂ ಏನು ಸಾಮ್ಯತೆ , ಗಣ ಹಾಗೂ ಸುಜಾತ ಹಾಗೂ ಏನು ಸಂಬಂಧ , ಕ್ಲೈಮಾಕ್ಸ್ ನೀಡುವ ಉತ್ತರ ಏನು..? ಇದೆಲ್ಲಾದರ ಬಗ್ಗೆ ತಿಳಿದುಕೊಳ್ಳಬೇಕಾದರೆ ಒಮ್ಮೆ ಈ ಚಿತ್ರವನ್ನು ನೋಡಬೇಕು.
ಈ ಚಿತ್ರದ ನಿರ್ದೇಶಕರು ಜಾಣ್ಮೆಯಿಂದ ಈ ಕತೆಯನ್ನು ಆಯ್ಕೆ ಮಾಡಿದಂತಿದೆ. ಇದೊಂದು ಟೈಮ್ ಟ್ರಾವೆಲಿಂಗ್ ಅಂಶವನ್ನು ಬೆಸೆದುಕೊಂಡಿರುವ ಕಥೆಯಾಗಿದ್ದು, ಇಲ್ಲಿ ಎಲ್ಲವನ್ನೂ ಸೂಕ್ಷ್ಮವಾಗಿಯೇ ಗಮನಿಸಬೇಕು. ಎರಡು ಕಾಲಘಟ್ಟದ ಸಂದರ್ಭವನ್ನು ಪ್ರಸ್ತುತಕ್ಕೆ ಸೂಕ್ತವಾಗಿ ಸೇರಿಸಿರುವುದು ವಿಶೇಷ. ಒಂದಂತೂ ಸತ್ಯ ನೋಡುವ ಪ್ರೇಕ್ಷಕರ ಬ್ರೈನ್ಗೆ ಕೆಲಸವನ್ನ ಕೊಟ್ಟಿದ್ದಾರೆ ನಿರ್ದೇಶಕರು.
ಮುಖ್ಯವಾಗಿ ಸೀನ್ ಟು ಸೀನ್ ನೋಡುತ್ತಾ ಹೋದರೆ ಅರ್ಥವಾಗುತ್ತದೆ. ಸ್ವಲ್ಪ ಯಾಮಾರಿದರು ಮುಂದೆ ಏನು ಎಂಬ ಗೊಂದಲ ಮೂಡುತ್ತದೆ. ಆದರೆ ಈ ಕಥೆ ಜೀವಿಸಿಕೊಳ್ಳಲು ಸ್ವಲ್ಪ ಕಷ್ಟ ಎನಿಸುತ್ತದೆ. ಸೈಂಟಿಫಿಕ್ ರೀಸನ್ ನೀಡಿದ್ದರೂ ಇನ್ನಷ್ಟು ಪರಿಣಾಮಕಾರಿಯಾಗಿ ಮಾಡಬಹುದಿತ್ತು. ಆದರೂ ಪ್ರಯತ್ನ ಗಮನ ಸೆಳೆಯುತ್ತದೆ.
ಅಗತ್ಯತೆಯನ್ನು ಒದಗಿಸಿರುವ ನಿರ್ಮಾಪಕರ ಸಹಕಾರವು ಒಪ್ಪುವಂತಿದೆ. ಹಾಡುಗಳು , ಹಿನ್ನೆಲೆ ಸಂಗೀತ , ಛಾಯಾಗ್ರಹಣ , ಸಂಕಲನ ಕೆಲಸಗಳು ಗಮನ ಸೆಳೆಯುವಂತಿದೆ. ಇನ್ನು ನಟ
ಪ್ರಜ್ವಲ್ ದೇವರಾಜ್ ಪಾತ್ರಕ್ಕೆ ಜೀವ ತುಂಬಿ ಗಮನ ಸೆಳೆದಿದ್ದು , ಲವ್ , ಎಮೋಷನ್ , ಹೊಡೆದಾಟದಲ್ಲೂ ಸೈ ಎಂದಿದ್ದಾರೆ. ನಟಿ ಯಶ ಶಿವಕುಮಾರ್ ಮುದ್ದು ಮುದ್ದಾಗಿ ಕಾಣುತ್ತಾ ಸಿಕ್ಕ ಅವಕಾಶವನ್ನು ನಿಭಾಯಿಸಿದ್ದಾರೆ. ನಟಿ ವೇದಿಕಾ ಬಹಳ ಸೊಗಸಾಗಿ ತಮ್ಮ ಪಾತ್ರಕ್ಕೆ ಜೀವ ನೀಡಿದ್ದಾರೆ. ಅದೇ ರೀತಿ ನಟ ವಿಶಾಲ್ ಹೆಗಡೆ ಕೂಡ ಒಬ್ಬ ಫೋಟೋಗ್ರಾಫರ್ ಆಗಿ ಸೊಗಸಾಗಿ ಪಾತ್ರವನ್ನು ನಿರ್ವಹಿಸಿದ್ದಾರೆ.
ಇನ್ನು ಖಳನಾಯಕನಾಗಿ ರವಿ ಕಾಳೆ ಅದ್ಭುತವಾಗಿ ನಟಿಸಿದ್ದು , ಮತ್ತೊಬ್ಬ ನಟ ಸಂಪತ್ ರಾಜ್ ಕೂಡ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಮನೆಯ ಹಿರಿಯ ವ್ಯಕ್ತಿಯಾಗಿ ರಮೇಶ್ ಭಟ್ ಸೇರಿದಂತೆ ಅಭಿನಯಿಸಿರುವ ಶಿವರಾಜ್ ಕೆ.ಆರ್. ಪೇಟೆ , ಕೃಷಿ ತಾಪಂಡ ಹಾಗೂ ಎಲ್ಲಾ ಕಲಾವಿದರು ಚಿತ್ರದ ಓಟಕ್ಕೆ ಉತ್ತಮ ಸಾತ್ ನೀಡಿದ್ದಾರೆ. ಇದೊಂದು ಟೈಮ್ ಟ್ರಾವೆಲಿಂಗ್ ಚಿತ್ರವಾದರೂ ಕುತೂಹಲಕಾರಿಯಾಗಿ ಸಾಗುವ ಈ ಚಿತ್ರವನ್ನು ಒಮ್ಮೆ ನೋಡಬಹುದು.