ಸಹಜ ಕೃಷಿಯ ಜಾಗೃತಿ , ಪ್ರೀತಿಯ ಒದ್ದಾಟದ ಪಯಣ ‘ಗೋಪಿಲೋಲ’ (ಚಿತ್ರವಿಮರ್ಶೆ-ರೇಟಿಂಗ್ : 3/5)
ರೇಟಿಂಗ್ : 3/5
ಚಿತ್ರ : ಗೋಪಿಲೋಲ
ನಿರ್ದೇಶಕ : ಆರ್ .ರವೀಂದ್ರ
ನಿರ್ಮಾಪಕ: ಸನತ್ ಕುಮಾರ್
ಸಂಗೀತ : ಮಿಥುನ್ ಅಶೋಕನ್
ಛಾಯಾಗ್ರಹಣ : ಸೂರ್ಯ ಕಾಂತ್
ತಾರಾಗಣ : ಮಂಜುನಾಥ್, ನಿಮಿಷ. ಕೆ.ಚಂದ್ರ , ಎಸ್. ನಾರಾಯಣ್, ಸಪ್ತಗಿರಿ , ಜೋಸೈಮನ್, ಪದ್ಮಾ ವಾಸಂತಿ, ಸ್ವಾತಿ, ಹನುಮಂತೇ ಗೌಡ, ಕೆಂಪೇಗೌಡ ಹಾಗೂ ಮುಂತಾದವರು…
ಜೀವನದಲ್ಲಿ ಪ್ರತಿಯೊಬ್ಬರಿಗೂ ಆರೋಗ್ಯದ ಬದುಕು ಬಹಳನೇ ಮುಖ್ಯ. ಅದಕ್ಕೆ ಮುಖ್ಯವಾದದ್ದು ನಾವು ತಿನ್ನುವಂತಹ ಆಹಾರ ಪದಾರ್ಥಗಳು. ಕೆಮಿಕಲ್ ಕೃಷಿಯನ್ನು ನಿಲ್ಲಿಸಿ ಸಹಜ ಕೃಷಿಯತ್ತ ಗಮನಹರಿಸಬೇಕೆಂಬ ಕಥಾನಕದೊಂದಿಗೆ ಕೌಟುಂಬಿಕ ಒಡನಾಟ , ಪ್ರೀತಿ , ಮಮಕಾರ, ದ್ವೇಷ , ಸಾಧನೆಯ ಎಳೆ ಬೆಸೆದುಕೊಂಡು ಈ ವಾರ ತೆರೆಯ ಮೇಲೆ ಬಂದಿರುವಂತಹ ಚಿತ್ರ “ಗೋಪಿಲೋಲ”. ಊರ ಮುಖಂಡ ಧರ್ಮೇಗೌಡ (ಎಸ್.ನಾರಾಯಣ್) ಭೂಮಿ ತಾಯಿಯನ್ನ ಕಾಪಾಡಿಕೊಳ್ಳುವುದು ನಮ್ಮ ಧರ್ಮ ಎನ್ನುವ ನಿಲುವಿನೊಂದಿಗೆ ರೈತರನ್ನ ಎಚ್ಚರಿಸುತ್ತಾ ಕೆಮಿಕಲ್ ಬಳಕೆ ನಿಷೇಧಿಸಿ ನೈಸರ್ಗಿಕ ಕೃಷಿಯೇ ಪ್ರಧಾನವಾಗಬೇಕೆಂಬ ಹಾದಿಯಲ್ಲಿ ಮುಂದಾಗುತ್ತಾರೆ.
ಆದರೆ ಧರ್ಮೇಗೌಡನ ಮಗ ಗೋಪಿ(ಮಂಜುನಾಥ ಅರಸು)
ತಂದೆಯ ಮಾತಿಗೆ ಕಿವಿ ಕೊಡದೆ ಅಮ್ಮನ ಪ್ರೀತಿಯ ಮಗನಾಗಿ ತಾನು ಆಡಿದ್ದೆ ಆಟ ಎನ್ನುವಂತೆ ಹುಡುಗಿಯರ ಜೊತೆ ಇವನ ಒಡನಾಟ. ಆಕಸ್ಮಿಕವಾಗಿ ಭೇಟಿಯಾಗುವ ಲೀಲಾ (ನಿಮಿಷ.ಕೆ .ಚಂದ್ರ) ಗೆಳತಿಯ ಮಾತನ್ನು ಲೆಕ್ಕಿಸದೆ ಗೋಪಿಯ ಮೋಹದ ಬಲೆಗೆ ಬಿದ್ದು ಮದುವೆ ಆಗಬೇಕೆಂಬ ನಿಟ್ಟಿನಲ್ಲಿ ದೂರ ಸರಿಯುವ ಗೋಪಿಗೆ ಮದುವೆಯಾಗುವೆ ಎಂಬ ಚಾಲೆಂಜ್ ಮಾಡುತ್ತಾಳೆ.
ಮತ್ತೊಂದೆಡೆ ರೈತರ ಭೂಮಿ ಪಡೆದು ಕೆಮಿಕಲ್ ಕೃಷಿಯೇ ಮೂಲ ಎನ್ನುವರ ಕುತಂತ್ರದ ವಿರುದ್ಧ ಹೋರಾಡುವ ಧರ್ಮೇಗೌಡನಿಗೆ ಮಗನ ಅವಾಂತರವೇ ತಲೆನವಾಗುತ್ತದೆ. ಇದನ್ನು ಸರಿಪಡಿಸಲು ಹೋಗಿ ತನ್ನ ಬದುಕಿನ ಫ್ಲಾಶ್ ಬ್ಯಾಕ್ ತೆರೆದುಕೊಳ್ಳುತ್ತದೆ. ಇದೆಲ್ಲವೂ ಒಂದಕ್ಕೊಂದು ಕೊಂಡಿಯಂತೆ ಬೆಸೆದುಕೊಂಡು ಹೋಗಿ ಆಶ್ಚರ್ಯಕರ ಹಂತಕ್ಕೆ ಬಂದು ನಿಲ್ಲುತ್ತದೆ.
ಗೋಪಿಯ ಗುಣ ಎಂದದ್ದು…
ಲೀಲಾಗೆ ಪ್ರೀತಿ ಸಿಗುತ್ತಾ…
ಸಹಜ ಕೃಷಿ ಏನಾಗುತ್ತೆ…
ಕ್ಲೈಮಾಕ್ಸ್ ಉತ್ತರ ಏನು…
ಇದೆಲ್ಲದಕ್ಕೂ ಉತ್ತರ ಗೋಪಿ ಲೋಲ ಚಿತ್ರ ನೋಡಬೇಕು.
ಈ ಚಿತ್ರದ ನಿರ್ದೇಶಕ ಆಯ್ಕೆ ಮಾಡಿಕೊಂಡಿರುವ ಕಥಾವಸ್ತು ಗಮನ ಸೆಳೆಯುವಂತಿದೆ. ಈ ಸಹಜ ಕೃಷಿಯ ಬಗ್ಗೆ ಹಲವಾರು ಚಿತ್ರಗಳು ಬಂದಿದ್ದು, ಚಿತ್ರಕಥೆಯಲ್ಲಿ ಕೃಷಿಯ ಜೊತೆಗೆ ತಂದೆ ಮಗನ ಸಂಬಂಧ , ಗೆಳತಿಯ ಪ್ರೀತಿ , ತಾಯಿಯ ಮಮಕಾರ, ಸಾಧನೆಯ ಗುರಿ ಹೀಗೆ ಒಂದಷ್ಟು ವಿಚಾರ ಸೆಳೆಯುವಂತಿದ್ದು, ಕ್ಲೈಮಾಕ್ಸ್ ನಲ್ಲಿ ಪ್ರಶ್ನೆಗಳಿಗೆ ಉತ್ತರ ತುರುಕಿದಂತಿದೆ.
ಇನ್ನು ನಿರ್ಮಾಪಕರೇ ಕಥೆ ಬರೆದು ನಿರ್ಮಿಸಿದ್ದು, ಸರಳ ಕೃಷಿಯ ಬಗ್ಗೆ ಜಾಗೃತಿ ಮೂಡಿಸುವ ತವಕ ಕಾಣುದೆ. ಸಂಭಾಷಣೆ, ಸಂಗೀತ , ಛಾಯಾಗ್ರಹಣ, ಸಂಕಲನ ಕೆಲಸ ಉತ್ತಮವಾಗಿದೆ. ನಾಯಕನಾಗಿ ಮಂಜುನಾಥ್ ಅರಸು ತನ್ನ ಪಾತ್ರಕ್ಕೆ ನ್ಯಾಯ ಒದಗಿಸಲು ಬಹಳ ಶ್ರಮ ಪಟ್ಟಿದ್ದು, ಆಕ್ಷನ್ ಸನ್ನಿವೇಶವನ್ನ ಸಮರ್ಥವಾಗಿ ಎದುರಿಸಿದ್ದು , ನಟನೆ , ನೃತ್ಯದ ಕಡೆಗೆ ಹೆಚ್ಚು ಗಮನ ಅಗತ್ಯ ಎನಿಸುತ್ತದೆ. ನಾಯಕಿಯಾಗಿ ಅಭಿನಯಿಸಿರುವ ನಿಮಿಷ. ಕೆ. ಚಂದ್ರ ಪಾತ್ರಕ್ಕೆ ಜೀವ ತುಂಬುವ ಪ್ರಯತ್ನ ಮಾಡಿದ್ದಾರೆ.
ನಾಯಕನ ತಂದೆಯಾಗಿ ಎಸ್. ನಾರಾಯಣ್ ತಮ್ಮ ಪಾತ್ರವನ್ನು ಲೀಲಾಜಾಲವಾಗಿ ನಿರ್ವಹಿಸಿದ್ದು, ಕೆಲವು ಸನ್ನಿವೇಶಗಳು ಹಿರಿಯ ಸ್ಟಾರ್ ನಟನೆಗಳನ್ನ ನೆನಪಿಸುವಂತಿದೆ. ಉಳಿದಂತೆ ಪದ್ಮಾ ವಾಸಂತಿ, ಜೋಸೈಮನ್ , ಸಪ್ತಗಿರಿ , ಜಾಹ್ನವಿ, ನಾಗೇಶ್ ಯಾದವ್, ಪದ್ಮಾ ವಾಸಂತಿ , ಸ್ವಾತಿ, ಹನುಮಂತೇ ಗೌಡ, ಡಿಂಗ್ರಿ ನಾಗರಾಜ್, ಕೆಂಪೇಗೌಡ, ಸಚಿನ್, ರಾಧ ರಾಮಚಂದ್ರ, ರೇಖಾದಾಸ್, ಸತೀಶ್ ಎಲ್ಲಾ ಕಲಾವಿದರು ಉತ್ತಮ ಸಾತ್ ನೀಡಿದ್ದಾರೆ. ನೈಸರ್ಗಿಕ ಕೃಷಿಯ ಬಗ್ಗೆ ಕಥಾಹಂದರವುಳ್ಳ ಈ ಚಿತ್ರದಲ್ಲಿ ಲವ್, ಆಕ್ಷನ್, ಫ್ಯಾಮಿಲಿ ಡ್ರಾಮಾ ಒಳಗೊಂಡಿದ್ದು , ಒಮ್ಮೆ ನೋಡುವಂತಿದೆ.