Cini NewsSandalwood

ಕಡುಬಿ ಜನಾಂಗದ “ಗುಂಮ್ಟಿ” ಚಿತ್ರದ ಲಿರಿಕಲ್ ಹಾಡು ಬಿಡುಗಡೆ.

ಸಮಾಜದಲ್ಲಿ ಗಡಿಭಾಗ , ಕಾಡಂಚಿನ ಜನಾಂಗಗಳ ಜೀವನವು ಹಸ್ತವ್ಯಸ್ತವಾಗಿ ಕಣ್ಮರೆ ಆಗುತ್ತಿರುವುದು ತಿಳಿದಿರುವೆ ವಿಚಾರವೇ. ಆದರೆ ಅಂತಹ ಜನಾಂಗದವರನ್ನು ಹುಡುಕಿ ಅವರ ಬದುಕು ಬವಣೆಯನ್ನ ಚಿತ್ರವಾಗಿಸುವ ಪ್ರಯತ್ನವಾಗಿ ಬಂದಿರುವಂತಹ ಚಿತ್ರವೇ “ಗುಂಮ್ಟಿ”. ಈ ಹಿಂದೆ ಕತ್ತಲೆಕೋಣೆ ಮತ್ತು ಇನಾಮ್ದಾರ್ ಎಂಬ ಎರಡು ಚಿತ್ರಗಳನ್ನು ನಿರ್ದೇಶಿಸಿರುವ, ಮೂಲತ: ಪತ್ರಕರ್ತರೂ ಆಗಿದ್ದ ಸಂದೇಶ್ ಶೆಟ್ಟಿ ಆಜ್ರಿ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ.

ಈ ಚಿತ್ರವು ಉಡುಪಿ ಬಳಿಯ ಮಂದರ್ತಿ ಹತ್ತಿರ ವಾಸವಿರುವ ಕಡುಬಿ ಜನಾಂಗದ ಬದುಕಿನ ಹೋರಾಟದ ಕಥೆಯನ್ನು ಇಟ್ಟುಕೊಂಡು ಗುಂಮ್ಟಿ ಚಿತ್ರದ ಕಥಾಹಂದರ ಹೆಣೆದಿದ್ದಾರೆ. ಈ ಚಿತ್ರದಲ್ಲಿ ಸಂದೇಶ್ ಶೆಟ್ಟಿ ನಾಯಕನಾಗಿ ಅಭಿನೇಯಿಸಿ ನಿರ್ದೇಶನದ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದಾರೆ.

ಯುವ ಪ್ರತಿಭೆ ವೈಷ್ಣವಿ ನಾಡಿಗ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಇನ್ನು ತಸ್ಮೈ ಪ್ರೊಡಕ್ಷನ್ಸ್ ಮತ್ತು ಜ್ಯೋತಿ ಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿ ವಿಕಾಸ್. ಎಸ್. ಶೆಟ್ಟಿ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಇತ್ತೀಚೆಗೆ ಈ ಚಿತ್ರಕ್ಕೆ ಮೆಹಬೂಬ್‌ಸಾಬ್ ಹಾಡಿರುವ ಲಿರಿಕಲ್ ಹಾಡೊಂದರ ಬಿಡುಗಡೆ ಕಾರ್ಯಕ್ರಮ ನಡೆಯಿತು.

ರವಿಕೆಪ್ರಸಂಗ ಖ್ಯಾತಿಯ ಸಂತೋಷ್ ಕೊಡಂಕೇರಿ ‘ಹಾಡುವ ಹಕ್ಕಿ ಹಾಡುತೈತಿ ಮನುಸಾ’… ಎಂಬ ಹಾಡಿನ ಲಿರಿಕಲ್ ವೀಡಿಯೋ ಬಿಡುಗಡೆ ಮಾಡಿದರು. ಇದಕ್ಕೂ ಮುನ್ನ ಕುಡುಬಿ ಜನಾಂಗದವರು ವೇದಿಕೆ ಮೇಲೆ ಬಂದು ತಮ್ಮ ಸಂಸ್ಕೃತಿಯ ಹಾಡನ್ನು ಹಾಡಿದ್ದು ವಿಶೇಷವಾಗಿತ್ತು.

ಗುಮ್ಟಿ ಸಿನಿಮಾದ ಮೂಲಕ ಕುಡುಬಿ ಜನಾಂಗದವರು ಆಚರಿಸಿಕೊಂಡು ಬಂದಿರುವ ಸಂಪ್ರದಾಯಗಳು, ಆಚಾರ- ವಿಚಾರಗಳು, ಅವರ ಬದುಕು ಮತ್ತು ಆಧುನಿಕತೆಯ ನಡುವಿನ ಸಂಘರ್ಷವನ್ನು ನಿರ್ದೇಶಕರು ಹೇಳಿದ್ದಾರೆ.

ಉಡುಪಿ, ಕಾರವಾರ, ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ಮಹಾರಾಷ್ಟ್ರದ ಸೋಲಾಪುರ ಹೀಗೆ ಕರಾವಳಿ – ಮಲೆನಾಡು ಮತ್ತು ಪಶ್ಚಿಮ ಘಟ್ಟದ ಸುತ್ತಮುತ್ತ ಸುಮಾರು 20ಕ್ಕೂ ಹೆಚ್ಚು ದಿನಗಳ ಕಾಲ ಗುಂಮ್ಟಿ ಚಿತ್ರದ ಚಿತ್ರೀಕರಣ ನಡೆಸಲಾಗಿದೆ. ಚಿತ್ರದ ಕುರಿತು ಮಾತನಾಡಿದ ನಿರ್ದೇಶಕ ಸಂದೇಶ್ ಶೆಟ್ಟಿ ಆಜ್ರಿ, ನಿರ್ಮಾಪಕರು ದೊಡ್ಡ ಮಟ್ಟದ ಸಿನಿಮಾ ಮಾಡುವ ಯೋಜನೆಯಲ್ಲಿದ್ದರು. ಅದಕ್ಕೂ ಮುನ್ನ ಸಣ್ಣ ಪ್ರಯೋಗವಾಗಿ ಈ ಸಿನಿಮಾ ಮಾಡಿದ್ದೇನೆ.

ಆ ಭಾಗದ ಸಂಸ್ಕೃತಿ ವಿಚಾರಗಳ ಬಗ್ಗೆ ಚರ್ಚಿಸಿ ಕಥೆ ಮಾಡಿದ್ದೇನೆ. ಕುಡುಬಿ ಜನರು ಶ್ರೀ ಮಲ್ಲಿಕಾರ್ಜುನನ ಆರಾಧಕರು. ಇದು ಕೇವಲ ಸಿನಿಮಾ ಅಲ್ಲ, ಬದುಕು ಬವಣೆ. ನಶಿಸಿ ಹೋಗುತ್ತಿರುವ ಜನಪದ ಕಲೆಯನ್ನು ಉಳಿಸಿಕೊಳ್ಳಲು ಕಾಶಿ ಎಂಬ ಯುವಕನ ಹೋರಾಟವೇ ಈ ಚಿತ್ರ ಎಂದು ಹೇಳಿದರು.

ಈಗಾಗಲೇ ಗುಮ್ಟಿ ಸಿನಿಮಾದ ಚಿತ್ರೀಕರಣ, ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಮುಗಿದಿದ್ದು, ಚಿತ್ರವೀಗ ಸೆನ್ಸಾರ್ ಹಂತದಲ್ಲಿದೆ. ನಿರ್ಮಾಪಕ ವಿಕಾಸ್. ಎಸ್. ಶೆಟ್ಟಿ ಅವರು ಮಾತನಾಡುತ್ತ ಕಡುಬಿ ಸಮುದಾಯದ ಸಂಸ್ಕೃತಿಯನ್ನು ಉಳಿಸಲಿಕ್ಕೆ ನಾಯಕ ಕಾಶಿ, ನಾಯಕಿ ಮಲ್ಲಿ ನಡೆಸುವ ಹೋರಾಟದ ಕಥೆಯನ್ನು ಸಿನಿಮಾ ಮಾಡಿದ್ದೇವೆ ಎಂದು ಹೇಳಿದರು.

ಮೂಲತ: ಸಾಫ್ಟ್ ವೇರ್ ಎಂಜಿನಿಯರ್ ಆದ ನಾಯಕಿ ವೈಷ್ಣವಿ ನಾಡಿಗ್ ನನ್ನ ಮೊದಲ ಚಿತ್ರವೇ ಕಲಾತ್ಮಕ ಆಗಿರುವುದು ಖುಷಿ. ನನಗೆ ಕುಂದಾಪುರ ಅಷ್ಟು ಗೊತ್ತಿಲ್ಲ ಅದನ್ನೆಲ್ಲ ನಿರ್ದೇಶಕರು ಹೇಳಿಕೊಟ್ಟರು. ಕಾಶಿಯ ಜರ್ನಿಯ ಜೊತೆ ನನ್ನ ಪಾತ್ರ ಸಾಗುತ್ತೆ ಎಂದು ಹೇಳಿದರು. ಈ ಚಿತ್ರದ ಉಳಿದ ಪಾತ್ರಗಳಲ್ಲಿ ರಂಜನ್ ಛತ್ರಪತಿ, ಕರಣ್ ಕುಂದರ್, ಯಶ್ ಆಚಾರ್ಯ, ಪ್ರಭಾಕರ ಕುಂದರ್, ರಘು ಪಾಂಡೇಶ್ವರ, ಚೇತನ ನೈಲಾಡಿ, ಚಿತ್ರಕಲಾ, ನೂರ್‌ಅಹ್ಮದ್, ಸ್ವರಾಜ್ ಲಕ್ಷ್ಮಿ ಮತ್ತಿತರರು ಅಭಿನಯಿಸಿದ್ದಾರೆ.

ಗುಮ್ಟಿ ಚಿತ್ರಕ್ಕೆ ಅನೀಶ್ ಡಿಸೋಜಾ ಅವರ ಕ್ಯಾಮರಾ ಕೈಚಳಕವಿದ್ದು , ಹಾಡುಗಳಿಗೆ ಮೋಹನ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಇನ್ನು ಗುಮ್ಟಿ ಸಿನಿಮಾಕ್ಕೆ ಶಿವರಾಜ್ ಮೇಹು ಅವರ ಸಂಕಲನವಿದೆ. ಇನ್ನು ಚಿತ್ರವನ್ನು ಅತಿ ಶೀಘ್ರದಲ್ಲಿ ಬೆಳ್ಳಿ ಪರದೆ ಮೇಲೆ ತರಲು ತಂಡ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆಯಂತೆ.

error: Content is protected !!