ಇಬ್ಬರ ಜೀವನದ ಸಾಮ್ಯತೆ ತಳಮಳ…(ಹೆಜ್ಜಾರು ವಿಮರ್ಶೆ – ರೇಟಿಂಗ್ : 4/5 )
ರೇಟಿಂಗ್ : 4/5
ಚಿತ್ರ : ಹೆಜ್ಜಾರು
ನಿರ್ದೇಶಕ : ಹರ್ಷ ಪ್ರಿಯ
ನಿರ್ಮಾಪಕ : ವಿಮಲ. ಎನ್, ಕೆ. ಎಸ್.ರಾಮ್ ಜೀ.
ಸಂಗೀತ : ಪೂರ್ಣಚಂದ್ರ ತೇಜಸ್ವಿ
ಛಾಯಾಗ್ರಹಣ : ಅಮರ್‌ಗೌಡ
ತಾರಾಗಣ : ಭಗತ್ ಆಳ್ವ , ಶ್ವೇತಾ ಲಿಯೊನಿಲ್ಲಾ , ನವೀನ್ ಕೃಷ್ಣ , ಗೋಪಾಲಕೃಷ್ಣ ದೇಶಪಾಂಡೆ, ಅರುಣಾ ಬಾಲರಾಜ್, ಮುನಿ, ವಿನೋದ್ ಭಾರತಿ ಹಾಗೂ ಮುಂತಾದವರು…
ಜೀವನದಲ್ಲಿ ತುಂಬಾ ಅಪರೂಪದ ಎನ್ನುವಂತಹ ಘಟನೆಗಳು , ಸಂದರ್ಭಗಳು ನಡೆದಿರೋದನ್ನ ಕೇಳಿದ್ದೇವೆ. ಅದರಲ್ಲೂ ಒಬ್ಬರ ಜೀವನದಲ್ಲಿ ನಡೆದಂತಹ ಘಟನೆಗಳು ಮತ್ತೊಬ್ಬರ ಜೀವನದಲ್ಲಿ ನಡೆಯುವಂತಹ ಸಾಮ್ಯತೆ ಕಂಡಾಗ ಆಶ್ಚರ್ಯ ಎನಿಸುವುದಂತು ಸತ್ಯ.
ಇಂತದ್ದೇ ಒಂದಷ್ಟು ವ್ಯಕ್ತಿಗಳ ನಿರ್ದೇಶನವು ಇದೆ. ಅಂತ ಒಂದು ಕಥಾನಕ ಮೂಲಕ ಕುತೂಹಲಕಾರಿಯಾಗಿ ಈ ವಾರ ತೆರೆ ಮೇಲೆ ಬಂದಿರುವಂತಹ ಚಿತ್ರ “ಹೆಜ್ಜಾರು”. 1965 ರಲ್ಲಿ ಊರ ಹೊರಗಿನ ಹೆಜ್ಜಾರು ಮೈಲಿಕಲ್ಲಿನ ಬಳಿ ಅಪಘಾತವೊಂದು ನಡೆಯುತ್ತದೆ. ಪೊಲೀಸ್ ಠಾಣೆಯಿಂದ ತಪ್ಪಿಸಿಕೊಂಡು ಓಡುತ್ತಿದ್ದ ಕಳ್ಳನನ್ನು ಹಿಡಿಯಲು ಮುಂದಾದಾಗ ಇಬ್ಬರು ಪೊಲೀಸರಿಗೆ ಲಾರಿಯೊಂದು ಆಲದ ಮರದ ಸಮೀಪ ಢಿಕ್ಕಿ ಹೊಡೆದು ಮೂವರೂ ಸ್ಥಳದಲ್ಲೇ ಮರಣ ಹೊಂದುತ್ತಾರೆ.
ಅದಾದ ಸುಮಾರು 30 ವರ್ಷಗಳ ನಂತರ ಅದೇ ಸ್ಥಳದಲ್ಲಿ 1995ರಲ್ಲಿ ಅದೇ ರೀತಿ ಕಳ್ಳನನ್ನು ಹಿಡಿಯಲು ಬರುವ ಪೊಲೀಸರು ಹಾಗೂ ಕಳ್ಳ ಮೂರುಜನ ಸತ್ತು ಹೋಗುತ್ತಾರೆ.1965 ರ ಅಪಘಾತದಲ್ಲಿ ಮರಣ ಹೊಂದಿದ್ದ ಪೊಲೀಸ್ ಸತ್ಯಮೂರ್ತಿಯ ಮಗ ರಾಜಾರಾಮ್(ಗೋಪಾಲಕೃಷ್ಣ ದೇಶಪಾಂಡೆ) ಹಾಗೂ 1995ರಲ್ಲಿ ಮರಣ ಹೊಂದಿದ್ದ ಕೃಷ್ಣಮೂರ್ತಿಯ ಮಗ ಭಗತ್ (ಭಗತ್ ಅಳ್ವ). 30 ವರ್ಷಗಳ ಹಿಂದೆ ರಾಜಾರಾಮ್ ಜೀವನದಲ್ಲಿ ಆಗಲೇ ಒಂದೆರಡು ದುರ್ಘಟನೆಗಳು ನಡೆದು ಆತ ಮಾನಸಿಕ ಅಸ್ವಸ್ಥನಂತಾಗಿ ರುತ್ತಾನೆ.
ಒಮ್ಮೆ ತನ್ನ ತಂದೆಯ ಯಂತೆಯೇ ಭಗತ್ ತಂದೆಯೂ ಅಪಘಾತದಲ್ಲಿ ಮರಣ ಹೊಂದಿದ ವಿಷಯ ತಿಳಿದ ರಾಜಾರಾಮ್, ಭಗತ್‌ನನ್ನು ಕಂಡು ಆತನಿಗೆ ಎಚ್ಚರಿಕೆ ನೀಡುತ್ತಾನೆ. ಆದರೆ ಅದನ್ನು ಲೆಕ್ಕಕ್ಕೆ ತೆಗೆದುಕೊಳ್ಳಲ್ಲ , ಅದಾಗಲೇ ರಾಜಾರಾಮ್ ಜೀವನದಲ್ಲಿ ಆತನ ಪ್ರೇಯಸಿಯ ಕೊಲೆ ನಡೆದಿರುತ್ತದೆ. ಆತನ ತಾಯಿಯೂ ಮರಣ ಹೊಂದಿರುತ್ತಾಳೆ.
ಇನ್ನೂ ಭಗತ್ ತಾಯಿ ಸಾವಿತ್ರಿ ನರ್ಸ್ ಕೆಲಸ ಮಾಡುತ್ತಾ ಮಗನ ಜೊತೆ ತನ್ನದೇ ಬದುಕನ್ನ ನಡೆಸುತ್ತಿರುತ್ತಾಳೆ. ಇದರ ನಡುವೆ ಭಗತ್ ತನ್ನ ಗೆಳತಿ ಜಾನಕಿ ( ಶ್ವೇತಾ ಲಿಯೊನಿಲ್ಲಾ )ಯನ್ನ ತನ್ನ ಪ್ರಾಣಕ್ಕಿಂತ ಹೆಚ್ಚು ಪ್ರೀತಿಸುತ್ತಾನೆ. ಆದರೆ ತಂದೆ ತಾಯಿ ಇಲ್ಲದ ಜಾನಕಿ ಭೂಪತಿ ಹಿಡಿತದಲ್ಲಿದ್ದು , ಅವನನ್ನೇ ಮದುವೆ ಆಗುವ ಸಂಕಷ್ಟಕ್ಕೆ ಸಿಲುಕಿರುತ್ತಾಳೆ. ಭೂಪತಿಗೆ ಬೆಂಗಾವಲಾಗಿ ದೇವಿ (ನವೀನ್ ಕೃಷ್ಣ) ಪೊಲೀಸ್ ಇನ್ಸ್ಪೆಕ್ಟರ್ (ಮುನಿ) ಸಪೋರ್ಟ್ ಇರುತ್ತದೆ.
ಒಂದಷ್ಟು ಗೆಳೆಯರ ಬಳಗವನ್ನು ಹೊಂದಿರುವ ಭಗತ್ ಒಂದು ವಿಚಿತ್ರ ಖಾಯಿಲೆಯಿಂದ ಬಳಲುತ್ತಿರುತ್ತಾನೆ. ಅದು ಆತನ ತಾಯಿಗೆ ಮಾತ್ರವೇ ಗೊತ್ತಿರುತ್ತೆ . ಇನ್ನು ಇದರ ನಡುವೆ ಮಗನ ಪ್ರೀತಿ ವಿಚಾರ ತಿಳಿಯುವ ತಾಯಿ ಮದುವೆಯ ಬಗ್ಗೆ ಆಲೋಚನೆ ಮಾಡುತ್ತಾಳೆ. ಭಗತ್ ಕೆಲವರ ಅಟ್ಟಹಾಸಕ್ಕೆ ಮಟ್ಟ ಹಾಕಲು ಗಲಾಟೆ ಮಾಡಿಕೊಂಡಿರುತ್ತಾನೆ. ಹೀಗೇ ಸಾಗುವ ಹಾದಿಯಲ್ಲಿ ರೋಚಕ ತಿರುವುಗಳ ಮೂಲಕ ಕಾಣದ ವ್ಯಕ್ತಿಯಿಂದ ದುರ್ಘಟನೆಗಳು ನಡೆಯುತ್ತಿರುತ್ತದೆ.
ಇನ್ನು ರಾಜಾರಾಮ್ ಸದಾ ಭರತ್ ನನ್ನ ಹಿಂಬಾಲಿಸುತ್ತಾ ತನ್ನ ಜೀವನದಲ್ಲಿ ನಡೆದ ಘಟನೆಗೂ ನಿನ್ನ ಜೀವನದ ಘಟನೆಗೂ ಸಾಮ್ಯತೆ ಇದೆ. ನಾನು ಎಲ್ಲಾ ಕಳೆದುಕೊಂಡೆ ನೀನು ಎಚ್ಚರದಿಂದಿರು ನಿನ್ನ ಪ್ರೇಯಸಿಯೂ ಕೊಲೆಯಾಗುತ್ತಾಳೆ, ಅಲ್ಲದೆ ನಿನ್ನ ತಾಯಿ ಮರಣ ಹೊಂದುತ್ತಾಳೆ, ನಿನ್ನ ಪ್ರೇಯಸಿಯನ್ನು ಉಳಿಸಿಕೋ ಎಂದು ಹೇಳುತ್ತಾನೆ, ಈ ಮಾತು ಭಗತ್ ಹೃದಯದಲ್ಲಿ ಒಳಗೊಳಗೇ ಆತಂಕ ಮನೆಮಾಡಿರುತ್ತದೆ. ಮುಂದೆ ಎಲ್ಲವೂ ನಿಗೂಢವಾಗಿ ಸಾಗಿ ಕೊನೆ ಹಂತಕ್ಕೆ ಬರುತ್ತದೆ.
ಇಬ್ಬರ ಬದುಕಿನ ಸಾಮ್ಯತೆ ಏನು…
ಜಾನಕಿ ಕೊಲೆಯಾಗ್ತಾಳಾ ? ರಾಜಾರಾಮ್ ಪ್ರೇಯಸಿ ಕೊಲೆಗಾರ ಯಾರು…
ಕ್ಲೈಮಾಕ್ಸ್ ಉತ್ತರ ಏನು…
ಇಂಥ ಹಲವಾರು ಪ್ರಶ್ನೆಗಳಿಗೆ ಉತ್ತರ… ಹೆಜ್ಜಾರು ಚಿತ್ರ ನೋಡಿ.
ನಿರ್ದೇಶಕ ಹರ್ಷ ಪ್ರಿಯ ತಮ್ಮ ಪ್ರಥಮ ಪ್ರಯತ್ನದಲ್ಲೇ ಪ್ಯಾರಲಲ್ ಸ್ಟೋರಿಯನ್ನು ಕುತೂಹಲಕಾರಿಯಾಗಿ ತೆರೆ ಮೇಲೆ ತಂದಿದ್ದಾರೆ. ಕಥೆಯಲ್ಲಿ ಇಂಟರ್‌ವಲ್ ಹಾಗೂ ಕ್ಲೈಮಾಕ್ಸ್ ಪ್ರೇಕ್ಷಕರ ಗಮನ ಸೆಳೆಯುತ್ತದೆ. ಎರಡು ಕಾಲಘಟ್ಟಗಳ ಸಾಮ್ಯತೆಗೆ ಹೊಂದುವ ರೀತಿಯಲ್ಲಿ ಚಿತ್ರಕಥೆ ಮಾಡಿಕೊಂಡಿರುವುದು ವಿಶೇಷ. ಭೂಪತಿ , ದೇವಿ , ಪಾತ್ರಗಳನ್ನು ಹೆಚ್ಚು ಬಳಸಿಕೊಳ್ಳಬಹುದಿತ್ತು. ಚಿತ್ರದ ಓಟ ವೇಗ ಮಾಡಬಹುದಿತ್ತು.
ಇದರ ಹೊರತಾಗಿ ಪ್ರೇಕ್ಷಕರನ್ನ ಕಾಡುವಂತೆ ಮಾಡಿದೆ. ಒಂದು ವಿಭಿನ್ನ ಪ್ರಯತ್ನದ ಚಿತ್ರಕ್ಕೆ ನಿರ್ಮಾಪಕರು ಸಾಥ್ ಕೊಟ್ಟಿರುವುದು ಮೆಚ್ಚುವಂತದ್ದು. ಇನ್ನು ವಿಶೇಷವಾಗಿ ಚಿತ್ರದ ಹೈಲೈಟ್ ಎಂದರೆ ಪೂರ್ಣಚಂದ್ರ ತೇಜಸ್ವಿ ಸಂಗೀತ ,ಅಮರ್‌ಗೌಡ ಕ್ಯಾಮರಾ ಕೈಚಳಕ ಉತ್ತಮವಾಗಿ ಮೂಡಿ ಬಂದಿದೆ. ಇನ್ನು ನಾಯಕನಾಗಿ ಬೆಳ್ಳಿ ಪರದೆ ಮೇಲೆ ಭಗತ್ ಆಳ್ವ ಶ್ರಮವಹಿಸಿ ತಮ್ಮ ಪಾತ್ರಕ್ಕೆ ಜೀವ ತುಂಬಿದ್ದಾರೆ.
ಮಗನಾಗಿ ಪ್ರೇಮಿಯಾಗಿ ಲವಲವಿಕೆಯಿಂದ ನಟಿಸುವುದರ ಜೊತೆಗೆ ಆಕ್ಷನ್ ಗೂ ಸೈ ಎಂದಿದ್ದಾರೆ. ನಾಯಕಿಯಾಗಿ ಶ್ವೇತಾ ಲಿಯೊನಿಲ್ಲಾ ತಮಗೆ ಸಿಕ್ಕ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಅನುಭವಿ ನಟ ಗೋಪಾಲಕೃಷ್ಣ ದೇಶಪಾಂಡೆ ಪಾತ್ರ ಚಿತ್ರದ ಮತ್ತೊಂದು ಹೈಲೈಟ್. ಗಂಭೀರವಾಗಿ ಮನಮುಟ್ಟುವಂತೆ ನಟಿಸಿದ್ದಾರೆ. ವಿಲನ್ ಶೇಡ್‌ನಲ್ಲಿ ಕಾಣಿಸಿಕೊಂಡಿರುವ ನಟ ನವೀನ್ ಕೃಷ್ಣ ರಗಡ್ ಲುಕ್ ನಲ್ಲಿ ಗಮನ ಸೆಳೆಯುತ್ತಾರೆ. ನಾಯಕನ ತಾಯಿ ಪಾತ್ರದಲ್ಲಿ ಅರುಣಾ ಬಾಲರಾಜ್ ಕೂಡ ಉತ್ತಮವಾಗಿ ಅಭಿನಯಿಸಿದ್ದಾರೆ. ಉಳಿದಂತೆ ಬರುವ ಎಲ್ಲಾ ಪಾತ್ರಗಳು ಕೂಡ ಚಿತ್ರದ ಓಟಕ್ಕೆ ಉತ್ತಮ ಸಾತ್ ನೀಡಿದ್ದಾರೆ. ಹೊಸತನದ ಕಥೆ ಇಷ್ಟಪಡುವವರಿಗಾಗಿ ಬಂದಿರುವ ಈ ಚಿತ್ರವನ್ನ ಎಲ್ಲರೂ ಒಮ್ಮೆ ನೋಡುವಂತಿದೆ.