ರಾಕ್ಷಸ ಹಾಗೂ ರಕ್ಷಕನ ಸುಳಿಯಲ್ಲಿ ಕಂದಮ್ಮ(ಹಿರಣ್ಯ ಚಿತ್ರವಿಮರ್ಶೆ -ರೇಟಿಂಗ್ : 3.5/5)
ಚಿತ್ರ : ಹಿರಣ್ಯ
ನಿರ್ದೇಶಕ : ಪ್ರವೀಣ್ ಅವ್ಯುಕ್ತ
ನಿರ್ಮಾಪಕರು : ವಿಘ್ನೇಶ್ವರ ಗೌಡ , ವಿಜಯ್ ಗೌಡ
ಸಂಗೀತ : ಜ್ಯೂಡಾ ಸ್ಯಾಂಡಿ
ಛಾಯಾಗ್ರಹಣ : ಯೋಗೇಶ್ವರನ್. ಆರ್.
ತಾರಾಗಣ : ರಾಜವರ್ಧನ್ , ರಿಹಾನಾ ಶೇಖ್ , ದಿವ್ಯಾ ಸುರೇಶ್ , ಹುಲಿ ಕಾರ್ತಿಕ್, ಅರವಿಂದ್ ರಾವ್, ದಿಲೀಪ್ ಶೆಟ್ಟಿ ಹಾಗೂ ಮುಂತಾದವರು…
ಸಾಮಾನ್ಯವಾಗಿ ಪ್ರತಿಯೊಬ್ಬ ಮನುಷ್ಯರ ಮನಸ್ಥಿತಿಯೂ ಸಮಯ , ಸಂದರ್ಭಕ್ಕೆ ತಕ್ಕಂತೆ ಬದಲಾಗುತ್ತಾ ಹೋಗೋದು ಸರ್ವೇ ಸಾಮಾನ್ಯ. ಒಳ್ಳೆಯವನು ಕೆಟ್ಟತನ ತೋರಬಹುದು.. ಕೆಟ್ಟವನು ಒಳ್ಳೆಯವನಾಗಿ ಬದುಕಬಹುದು. ಇಂಥದೇ ಒಂದಷ್ಟು ಘಟನೆಗಳ ಸುತ್ತ ಒಬ್ಬ ಕ್ರೂರ ವ್ಯಕ್ತಿ ರಕ್ತ ಪಾತವೇ ಜೀವನ ಎನ್ನುವವನ ಬದುಕಿನಲ್ಲಿ ರಕ್ತವೇ ಮತ್ತೊಂದು ಜೀವಕ್ಕೆ ಮೂಲ ಎಂಬ ಅಂಶವನ್ನು ಬೆಸೆದುಕೊಂಡು ಸ್ನೇಹ , ಪ್ರೀತಿ , ಸಂಬಂಧ, ಸುಪಾರಿ , ಕಳ್ಳ ಪೋಲಿಸ್ ಆಟದ ಸುಳಿಯಲ್ಲಿ ಭರ್ಜರಿ ಆಕ್ಷನ್ ಮೂಲಕ ಈ ವಾರ ಪ್ರೇಕ್ಷಕರ ಮುಂದೆ ಬಂದಿರುವಂತಹ ಚಿತ್ರವೇ “ಹಿರಣ್ಯ”. ಯಾವುದಕ್ಕೂ ಹೆದರದೆ ಮುಂದೆ ನುಗ್ಗಿ ಹೇಳಿದ್ದ ಕೆಲಸ ಮಾಡಿ ಮುಗಿಸುವ ರಾಣಾ (ರಾಜವರ್ಧನ್) ನ್ನ ಗುರು ಅಪ್ಪಾಜಿ.
ಒಮ್ಮೆ ಸುಪಾರಿ ಪಡೆದರೆ ಮುಗೀತು , ರಾಣಾ ರಕ್ತದೊಕುಳಿ ಆಡುತ್ತಾನೆ. ಒಂದು ಚಿಕ್ಕಮಗುವನ್ನು ಕೊಲ್ಲುವ ರಾಣಾ ನಿಗೆ ಗುರು ಕೆಲಸವನ್ನು ಒಪ್ಪಿಸುತ್ತಾನೆ. ಆದರೆ ರಾಣಾ ಆ ಪುಟ್ಟ ಮಗುವನ್ನು ಕೊಲ್ಲುವುದಕ್ಕೆ ಒಪ್ಪುವುದಿಲ್ಲ, ಅದನ್ನು ಕಿಡ್ನಾಪ್ ಮಾಡಿ ತಂದುಕೊಡುವುದಾಗಿ ಹೇಳುತ್ತಾನೆ. ಶ್ರೀಮಂತ ಕುಟುಂಬದಲ್ಲಿ ಜನಿಸಿದ ಮಗುವನ್ನು ಕಿಡ್ನಾಪ್ ಮಾಡಿಕೊಂಡು ಬರುವಾಗ ಒಂದು ಅಪಘಾತದಲ್ಲಿ ಮತ್ತೊಂದು ತಾಯಿ ಮಗುವಿಗೆ ಜನ್ಮ ನೀಡುವ ಸಂದರ್ಭ ಎದುರಾಗುತ್ತದೆ. ಅದನ್ನು ಗಮನಿಸುವ ರಾಣಾ ನ ಮನಸ್ಥಿತಿ ಬದಲಾವಣೆ ಕಡೆ ವಾಲುತ್ತದೆ. ಆದರೂ ಮಗುವನ್ನ ಗುರುವಿನ ಬಳಿ ತರುತ್ತಾನೆ.
ಮುದ್ದು ಕಂದಮ್ಮನ ಕೊಲ್ಲಲು ಮುಂದಾಗುವ ಗುರು ಹಾಗೂ ಗ್ಯಾಂಗ್ ನಿಂದ ರಾಣಾ ಮಗುವನ್ನ ಕಾಪಾಡಿ ತಾಯಿಗೆ ಮತ್ತೆ ಹಿಂದಿರುಗಿಸಲು ಮುಂದಾಗುತ್ತಾನೆ. ತನ್ನ ಆಲೋಚನೆಯ ದಿಕ್ಕನ್ನೇ ಬದಲಿಸಿಕೊಳ್ಳುವ ರಾಣಾ ತನ್ನ ಗೆಳತಿ ಜೂಲಿ ಸಹಕಾರ ಪಡೆಯುತ್ತಾನೆ. ಇನ್ನು ಆಕ್ಸಿಡೆಂಟ್ ನಲ್ಲಿ ಗಂಡನನ್ನ ಕಳೆದುಕೊಂಡ ಅಭಿನಯ ತನ್ನ ಮಗುವಿಗಾಗಿ ಅಣ್ಣ ಅತ್ತಿಗೆ ನೆರವಿನಿಂದ ಪೊಲೀಸರ ಸಹಾಯ ಕೇಳುತ್ತಾಳೆ. ಟಿವಿ ಮಾಧ್ಯಮದ ಮುಂದೆ ತನ್ನ ನೋವನ್ನ ಹಂಚಿಕೊಳ್ಳುತ್ತಾಳೆ. ಎಷ್ಟು ಬೇಕಾದರೂ ಹಣ ನೀಡಲು ಮುಂದಾಗುವ ಅಭಿನಯ ಮಗು ಕಿಡ್ನಾಪ್ ಮಾಡಿದವರ ಪತ್ತೆಹೆಚ್ಚಲು ಪೊಲೀಸ್ ಇನ್ಸ್ಪೆಕ್ಟರ್ ದಿಲೀಪ್ ಕುಮಾರ್ (ದಿಲೀಪ್ ಶೆಟ್ಟಿ) ಕಾಲೇಜ್ ಗೆಳೆಯ ಮುಂದಾಗುತ್ತಾನೆ. ಒಂದು ಕಡೆ ಸರಿಯಾದ ಸುಳಿವು ಹುಡುಕುತ್ತಾ ಹೋಗುವ ಪೊಲೀಸರು. ಮತ್ತೊಂದೆಡೆ ಮಗು ನೀಡುವ ಹಾದಿಯಲ್ಲಿ ರಾಣಾ ನ ಪ್ರಯತ್ನ ಮಿಸ್ ಆಗುತ್ತದೆ. ಇದೆಲ್ಲದಕ್ಕೂ ಕಾಣದ ಕೈ ಕೆಲಸ ಮಾಡುತ್ತಿರುತ್ತದೆ.
ಮಗು ಕಿಡ್ನಾಪ್ ಗೆ ಕಾರಣ…
ರಾಣಾ ಹುಡುಕುವ ಸತ್ಯ ಏನು…
ತಾಯಿ ಮಗು ಒಂದಾಗ್ತಾರಾ…
ದ್ರೋಹಿ ಯಾರು…
ಇಂಥ ಹಲವು ಪ್ರಶ್ನೆಗಳಿಗೆ ಕ್ಲೈಮ್ಯಾಕ್ಸ್ ಉತ್ತರ ನೀಡುತ್ತದೆ ಅದಕ್ಕೆ ಹಿರಣ್ಯ ಚಿತ್ರ ನೋಡಬೇಕು.
ಈ ಚಿತ್ರದ ನಿರ್ದೇಶಕ ಪ್ರವೀಣ್ ಅವ್ಯುಕ್ತ ಕುತೂಹಲಕಾರಿ ವಿಷಯಗಳದೊಂದಿಗೆ ರಕ್ತ ಜೀವವನ್ನು ತೆಗೆಯಬಹುದು…
ಜೀವವನ್ನು ಉಳಿಸಬಹುದು…
ಎನ್ನುವುದರ ಜೊತೆಗೆ ತಾಯಿ ಮಗುವಿನ ಸಂಬಂಧ , ಮನುಷ್ಯತ್ವದ ಗುಣ ಎಷ್ಟು ಮುಖ್ಯ ಎನ್ನುವುದರ ಜೊತೆಗೆ ಕ್ರೂರ ಮನಸ್ಥಿತಿಯ ವ್ಯಕ್ತಿಗಳ ಆರ್ಭಟ, ಎರಡು ಮುಖಗಳ ಕಳ್ಳಾಟ ಹೀಗೆ ಹಲವು ವ್ಯಕ್ತಿತ್ವಗಳನ್ನು ಹೊರ ಹಾಕುವುದರಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಚಿತ್ರದ ಓಟ ಮತ್ತಷ್ಟು ವೇಗ ಮಾಡಬೇಕಿತ್ತು , ಇದ್ದಲ್ಲಿ ಗಿರಿಕಿ ಹೊಡೆದಂತಿದೆ. ಚಿತ್ರದಲ್ಲಿ ಸಾಕಷ್ಟು ಟ್ವಿಸ್ಟ್ಗಳನ್ನು ಇಟ್ಟಿದ್ದು, ಕುತೂಹಲ ಹೆಚ್ಚಿಸುತ್ತದೆ. ಇನ್ನು ಚಿತ್ರವನ್ನು ಅದ್ದೂರಿಯಾಗಿ ತೆರೆ ಮೇಲೆ ತಂದಿರುವ ನಿರ್ಮಾಪಕರ ಧೈರ್ಯ ಮೆಚ್ಚಲೇಬೇಕು. ಇನ್ನು ಈ ಚಿತ್ರದ ಹೈಲೈಟ್ ಭರ್ಜರಿ ಫೈಟ್ಸ್ , ಅದರಲ್ಲೂ ಸಿಟಿಯಲ್ಲಿ ಕಾರ್ ಚೇಸಿಂಗ್ ದೃಶ್ಯ ಅದ್ಭುತವಾಗಿದೆ. ಅದಕ್ಕೆ ಪೂರಕವಾಗಿ ಛಾಯಾಗ್ರಾಹಕರ ಕೈಚಳಕವೂ ಕೂಡ ಉತ್ತಮವಾಗಿದೆ.
ಇನ್ನು ಸಂಗೀತ , ಹಿನ್ನೆಲೆ ಸಂಗೀತ ಸೊಗಸಾಗಿ ಮೂಡಿ ಬಂದಿದೆ. ತಾಂತ್ರಿಕವಾಗಿ ತಂಡ ಶ್ರಮ ಪಟ್ಟಿರುವುದು ಕಾಣುತ್ತದೆ. ಇನ್ನು ನಾಯಕನಾಗಿ ರಾಜವರ್ಧನ್ ಖದರ್ ಲುಕ್ ಮೂಲಕ ಮಿಂಚಿದ್ದು , ಭರ್ಜರಿ ಮೂಲಕ ಆಕ್ಷನ್ ಮೂಲಕ ಅಬ್ಬರಿಸಿದ್ದಾರೆ. ಒಂದೊಂದು ಫೈಟ್‌ಗಳು ಮೈ ಜುಮ್ ಅನ್ನುವಂತೆ ಮಾಡಿದೆ. ಮಾತಿನ ದಾಟಿಯಲ್ಲಿ ಗತ್ತು ಬೇಕಿತ್ತು ಅನಿಸುತ್ತದೆ. ನಾಯಕ ಹೊಡೆದಾಟದ ದೃಶ್ಯಗಳಲ್ಲಿ ಮಗು ಸಹ ಭಾಗಿಯಾಗಿರುವುದು ಆಶ್ಚರ್ಯ ಅನ್ನಿಸುತ್ತದೆ.
ಬಹಳ ಗಂಭಿರವಾದ ಪಾತ್ರದ ಮೂಲಕ ನ್ಯಾಯ ಸಲ್ಲಿಸಿದ್ದಾರೆ. ನಟಿ ರಿಹಾ ನಾ ಶೇಖ್ ಮಡದಿಯಾಗಿ , ಮಗುವಿನ ತಾಯಿಯ ಪಾತ್ರವನ್ನು ಸಮರ್ಥವಾಗಿ ನಿರ್ವಹಿಸಿದ್ದಾರೆ. ದಿವ್ಯ ಸುರೇಶ್ ರೊಮ್ಯಾಂಟಿಕ್ ದೃಶ್ಯಗಳಲ್ಲಿ ಪಡ್ಡೆ ಹುಡುಗರ ನಿದ್ದೆಗೆಡಸಿ ಬೋಲ್ಡ್ ಪಾತ್ರವನ್ನು ನಿರ್ವಹಿಸಿ , ಹಾಡಿ ಕುಣಿದಿದ್ದಾರೆ. ದಿಲೀಪ್ ಶೆಟ್ಟಿ ನಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿ ಗಮನ ಸೆಳೆಯುತ್ತಾರೆ. ಇನ್ನು ಹುಲಿ ಕಾರ್ತಿಕ್ , ಅರವಿಂದ್ ರಾವ್ ಸೇರಿದಂತೆ ಅಭಿನಯಿಸಿರುವ ಎಲ್ಲಾ ಪಾತ್ರಗಳು ಚಿತ್ರದ ಓಟಕ್ಕೆ ಉತ್ತಮ ಸಾತ್ ನೀಡಿದ್ದಾರೆ. ರಾಕ್ಷಸ ಹಾಗೂ ರಕ್ಷಕನ ನಡುವಿನ ಅಂತರದ ಮನಸ್ಥಿತಿಯ ಜೊತೆ ಜೀವ ಹಾಗೂ ಜೀವನದ ಮೌಲ್ಯ ತೆರೆದಿಟ್ಟಿದೆ. ಈ ಚಿತ್ರ ಆಕ್ಷನ್ ಪ್ರಿಯರಿಗೆ ಬಹಳ ಬೇಗ ಇಷ್ಟವಾಗಲಿದ್ದು , ಎಲ್ಲರೂ ಒಮ್ಮೆ ನೋಡುವ ಚಿತ್ರ ಇದಾಗಿದೆ.