Cini NewsMovie ReviewSandalwood

‘ಅನಾ’ ಹುತಗಳ ಸುಳಿಯಲ್ಲಿ ಪ್ರೇಮಿಗಳ ಕಥೆ ವ್ಯಥೆ : ಇಬ್ಬನಿ ತಬ್ಬಿದ ಇಳೆಯಲಿ ಚಿತ್ರವಿಮರ್ಶೆ (ರೇಟಿಂಗ್ : 3/5)

ರೇಟಿಂಗ್ : 3/5
ಚಿತ್ರ : ಇಬ್ಬನಿ ತಬ್ಬಿದ ಇಳೆಯಲಿ
ನಿರ್ದೇಶಕ : ಚಂದ್ರಜಿತ್ ಬೆಳ್ಳಿಯಪ್ಪ
ನಿರ್ಮಾಪಕ : ರಕ್ಷಿತ್ ಶೆಟ್ಟಿ, ಗುಪ್ತ ಜಿ. ಎಸ್.
ಸಂಗೀತ : ಗಗನ್ ಬಡೇರಿಯಾ
ಛಾಯಾಗ್ರಹಣ : ಶ್ರೀವತ್ಸನ್
ತಾರಾಗಣ : ವಿಹಾನ್ ಗೌಡ, ಅಂಕಿತ ಅಮರ್, ಮಯೂರಿ ನಟರಾಜ್,ಗಿರಿಜಾ ಶೆಟ್ಟರ್, ಸಾಲ್ಮಿನ್ ಷರೀಫ್, ಶಂಕರ್ ಹಾಗೂ ಮುಂತಾದವರು…

ಪ್ರೀತಿಗೆ ಸಾವಿಲ್ಲ… ಪ್ರೀತಿ ಅಮರ… ಅನ್ನೋ ಮಾತಿನಂತೆ ನಿಷ್ಕಲ್ಮಶವಾದ ಸ್ನೇಹ, ಪ್ರೀತಿಗೆ ಅಗ್ನಿ ಪರೀಕ್ಷೆಗಳು ನಿರಂತರ. ಅದನ್ನು ಅನುಭವಿಸಿ , ಎದುರಿಸುವುದೇ ಬದುಕಿನ ನಿಜವಾದ ಪ್ರೇಮ ಪಯಣ ಎನ್ನುವ ಕಥಾನಕದೊಂದಿಗೆ ಪ್ರೀತಿಸುವ ಹೃದಯಗಳು ತಳಮಳ, ಗೆಳೆತನ , ಸ್ನೇಹ , ಸಂಬಂಧ , ಬದುಕಿನ ನೋವು ನಲಿವುಗಳ ಸುಳಿಯಲ್ಲಿ ಸಾಗಿ ಮನಸ್ಸಿಗೆ ಗಾಸಿ ಮಾಡುವ ಎಳೆಯೊಂದಿಗೆ 9 ಅಧ್ಯಾಯಗಳ ರೂಪದಲ್ಲಿ ಈ ವಾರ ತೆರೆಯ ಮೇಲೆ ಬಂದಿರುವಂತಹ ಚಿತ್ರ ಇಬ್ಬನಿ ತಬ್ಬಿದ ಇಳೆಯಲಿ.

ಮನಸು ಒಪ್ಪದಿದ್ದರೂ ಮನೆಯವರ ಒತ್ತಡಕ್ಕೆ ಮಣಿದು ನೇರ ನುಡಿ, ಸುಂದರ ಬೆಡಗಿ ರಾಧಾ (ಮಯೂರಿ) ಯನ್ನ ಮದುವೆಯಾಗಲು ಮುಂದಾಗುವ ಸಿದ್ದಾರ್ಥ್ (ವಿಹಾನ್ ಗೌಡ). ತನ್ನ ಫ್ಲಾಶ್ ಬ್ಯಾಕ್ ನೆನೆದು ಮದುವೆಯಿಂದ ಹಿಂದೆ ಸರಿಯುತ್ತಾನೆ. ಕಾಲೇಜ್ ಲೈಫ್ ನ ಎಂಜಾಯ್ ಮಾಡುತ್ತಾ ನನ್ನ ಗೆಳೆಯರೊಟ್ಟಿಗೆ ಓಡಾಡುವ ಸಿದ್ದಾರ್ಥ ತಾಯಿಯ ಆಸೆಯಂತೆ ಕ್ರಿಕೆಟರ್ ಆಗಲು ತರಬೇತಿ ಕೂಡ ಪಡೆಯುತ್ತಿರುತ್ತಾನೆ.

ಕಾಲೇಜ್ ಫೆಸ್ಟ್ , ಕಲ್ಚರಲ್ಲಿ ಇವೆಂಟ್ ನ ಕಿರಿಕಿರಿಯಲ್ಲಿ ಭೇಟಿಯಾಗುವ ಮುದ್ದಾದ ಬೆಂಗಾಲಿ ಬೆಡಗಿ ಅನಾಹಿತ (ಅಂಕಿತ ಅಮರ್). ಫೋಟೋಗ್ರಾಫಿ , ಕವಿತೆ , ಕವನ ಬರೆಯುವ ಹವ್ಯಾಸ. ಅಸ್ಪಷ್ಟ ಕನ್ನಡದಲ್ಲೂ ಮುದ್ದಾಗಿ ಮಾತನಾಡುವ ಅನಾಹಿತ ನಗು ನೋಟಕ್ಕೆ ಮನಸೋತು ಇಷ್ಟಪಡುವ ಸಿದ್ದಾರ್ಥ. ಆಕೆಯ ಹೆಸರು, ಹಿನ್ನೆಲೆಯನ್ನ ತಿಳಿದುಕೊಳ್ಳಲು ಹರಸಾಸವನ್ನೇ ಮಾಡುತ್ತಾನೆ.

ಒಂದು ಸಂದರ್ಭ ಅವರಿಬ್ಬರೂ ಭೇಟಿಯಾಗಿ ಸ್ನೇಹದ ಮಾತುಕತೆ , ಭವಿಷ್ಯದ ಯೋಜನೆಯ ಚರ್ಚೆ ಮಾಡುತ್ತಾರೆ. ಇದರ ನಡುವೆ ಸಿದ್ದಾರ್ಥ್ ಸೂಕ್ತ ಸಮಯ ನೋಡಿ ತನ್ನ ಪ್ರೀತಿಯ ನಿವೇದನೆಯನ್ನ ತಿಳಿಸುತ್ತಾನೆ. ಜೀವನದಲ್ಲಿ ನೋವನ್ನೇ ಕಂಡಂತಹ ಅನಾಹಿತ ತನ್ನ ತಾಯಿ , ಮನೆ , ಕನಸಿನ ಪ್ರಾಜೆಕ್ಟ್ ಬಗ್ಗೆ ಗಮನ ಹರಿಸುತ್ತಿರುವಾಗಲೇ ಬದುಕಿನಲ್ಲಿ ಕ್ಯಾನ್ಸರ್ ರೋಗಕ್ಕೆ ಗುರಿಯಾಗುತ್ತಾಳೆ. ಮುಂದೆ ಎದುರಾಗುವ ಸಂದರ್ಭವೂ ಮನಸನ್ನ ಕುಗ್ಗಿಸುತ್ತಾ ಕೊನೆಯ ತಿರುವಿನ ಹಂತಕ್ಕೆ ತರುತ್ತದೆ.
ಕ್ಯಾನ್ಸರ್ ನಿಂದ ಬದುಕುತ್ತಾಳಾ… ಇಲ್ವಾ…
ಸಿದ್ದಾರ್ಥ್ ಪ್ರೀತಿ ಯಾರಿಗೆ ಸಿಗುತ್ತೆ…
9 ಅಧ್ಯಾಯಗಳು ಏನು…
ಕ್ಲೈಮಾಕ್ಸ್ ಉತ್ತರ…
ಇದಕ್ಕಾಗಿ ನೀವು ಈ ಚಿತ್ರವನ್ನು ನೋಡಲೇಬೇಕು.

ಈ ಚಿತ್ರದ ನಿರ್ದೇಶಕ ಚಂದ್ರಜಿತ್ ಬಿಳಿಯಪ್ಪ ನಿಷ್ಕಲ್ಮಶವಾದ ಪ್ರೀತಿ ಎಂದೆಂದಿಗೂ ಜೀವಂತ ಎಂಬುದನ್ನು ಬಹಳ ಗಾಢವಾಗಿ ತೆರೆ ಮೇಲೆ ತೆರೆದಿಟ್ಟಿದ್ದಾರೆ. ಕ್ಯಾನ್ಸರ್ ಕಾಯಿಲೆ ಹಿನ್ನೆಲೆಯ ಕಥಾನಕ ಚಿತ್ರಗಳು ಬಂದಿದ್ದು, ಹೊಸದಲ್ಲದಿದ್ದರೂ ಹೇಳಿರುವ ರೀತಿ ವಿಭಿನ್ನವಾಗಿದೆ. ಸೂಕ್ತವಾದ ಪಾತ್ರಧಾರಿಗಳ ಆಯ್ಕೆ , ಸಂಭಾಷಣೆ ಗಮನ ಸೆಳೆಯುತ್ತದೆ. ಚಿತ್ರದ ಓಟ ಕಡಿತಗೊಳಿಸಬೇಕಿತ್ತು , ಹಾಡುಗಳು ಗುನುಗುವಂತಿದ್ದಿದ್ದರೆ ಚೆನ್ನಾಗಿರುತ್ತಿತ್ತು.

ಛಾಯಾಗ್ರಾಹಕರ ಕೈಚಳಕ ಸುಂದರವಾಗಿ ಮೂಡಿ ಬಂದಿದೆ. ಸಂಕಲನ ಸೇರಿದಂತೆ ಒಂದಷ್ಟು ತಾಂತ್ರಿಕ ಕೆಲಸಗಳು ಅದ್ಭುತವಾಗಿದೆ. ನಾಯಕನಾಗಿ ಅಭಿನಯಿಸಿರುವ ವಿಹಾನ್ ಗೌಡ ಪಾತ್ರದಲ್ಲಿ ಜೀವಿಸಿ ನ್ಯಾಯವನ್ನು ಒದಗಿಸಿದ್ದಾರೆ. ಇನ್ನು ನಾಯಕಿಯಾಗಿ ಅಭಿನಯಿಸಿರುವ ಅಂಕಿತ ಅಮರ್ ಇಡೀ ಚಿತ್ರದ ಜೀವಾಳವಾಗಿ , ಎರಡು ಶೇಡ್ ಗಳಲ್ಲಿ ಮನಸನ್ನ ಭಾರ ಮಾಡುವ ಪಾತ್ರದಲ್ಲಿ ಅಮೋಘವಾಗಿ ಅಭಿನಯಿಸಿದ್ದಾರೆ. ಚಿತ್ರೋದ್ಯಮಕ್ಕೆ ಉತ್ತಮ ಪ್ರತಿಭೆ ಸಿಕ್ಕಂತಾಗಿದೆ. ಇನ್ನು ನಟಿ ಮಯೂರಿ ನಟರಾಜ್ ಕೂಡ ಭರವಸೆಯ ಪ್ರತಿಭೆಯಾಗಿ ಸಿಕ್ಕಿ ಅವಕಾಶವನ್ನು ಅಚ್ಚುಕಟ್ಟಾಗಿ ನಿಭಾಯಿಸಿ ಗಮನ ಸೆಳೆದಿದ್ದಾರೆ.

ನಾಯಕಿಯ ತಾಯಿಯಾಗಿ ಗಿರಿಜಾ ಶೆಟ್ಟರ್ ಹಾಗೂ ನಾಯಕನ ತಂದೆಯಾಗಿ ಸಮ್ಮಿನ್ ಶರೀಫ್ ತಮ್ಮ ತಮ್ಮ ಪಾತ್ರಗಳನ್ನು ನಿರ್ವಹಿಸಿದ್ದು , ಉಳಿದಂತೆ ಅಭಿನಯಿಸಿರುವ ಎಲ್ಲಾ ಪಾತ್ರದಾರಿಗಳು ಚಿತ್ರದ ಓಟಕ್ಕೆ ಸಾತ ನೀಡಿದ್ದಾರೆ. ಇನ್ನು ಈ ಚಿತ್ರದ ಕಾಸ್ಟ್ಯೂಮ್ ಡಿಸೈನ್ , ಮೇಕಪ್ ಕೆಲಸ ಕೂಡ ಉತ್ತಮವಾಗಿ ಮೂಡಿಬಂದಿದೆ. ಪ್ರೀತಿಯ ಶಕ್ತಿ ಮನಸ್ಸಿನ ಮೇಲೆ ಯಾವೆಲ್ಲಾ ಪರಿಣಾಮ ಬೀರುತ್ತೆ , ಅದು ಹೇಗೆ ಆವರಿಸಿಕೊಳ್ಳುತ್ತದೆ ಎಂಬುದನ್ನು ನೋಡಬೇಕಾದರೆ ತಾಳ್ಮೆ ಇದ್ದವರು ಸಮಯ ಮಾಡಿಕೊಂಡು ಹೋಗಿ ಈ ಚಿತ್ರವನ್ನು ಒಮ್ಮೆ ವೀಕ್ಷಿಸಬಹುದು.

error: Content is protected !!