“ಇದು ನಮ್ ಶಾಲೆ” ಚಿತ್ರದ ಹಾಡುಗಳು ಬಿಡುಗಡೆ ಮಾಡಿದ ರವಿ.ಡಿ.ಚನ್ನಣ್ಣನವರ್
ಶ್ರೀ ಜೇನುಕಲ್ ಪ್ರೊಡಕ್ಷನ್ ಇವರ ಮೊದಲ ಕಾಣಿಕೆ, “ಇದು ನಮ್ ಶಾಲೆ” ಚಿತ್ರದ ಹಾಡುಗಳ ಬಿಡುಗಡೆ ಸಮಾರಂಭ ಇತ್ತೀಚಿಗೆ ನೆರೆವೇರಿತು. ಚಿತ್ರದಲ್ಲಿ ಎರಡು ಹಾಡುಗಳಿದ್ದು, ಮೊದಲ ಹಾಡನ್ನು ಖ್ಯಾತ ಐ ಪಿ ಎಸ್ ಅಧಿಕಾರಿ ರವಿ ಡಿ ಚನ್ನಣ್ಣವರ್ ಬಿಡುಗಡೆ ಮಾಡಿದರು. ಎರಡನೇ ಗೀತೆಯನ್ನು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಎನ್ ಎಂ ಸುರೇಶ್ ಅನಾವರಣಗೊಳಿಸಿದರು. ಇದೇ ಸಮಯದಲ್ಲಿ ಚಿತ್ರದ ಪೋಸ್ಟರ್ ಸಹ ಬಿಡುಗಡೆಯಾಯಿತು. ಸಾಕಷ್ಟು ಗಣ್ಯರು ಹಾಗೂ ಚಿತ್ರತಂಡದ ಸದಸ್ಯರು ಈ ಸುಂದರ ಸಮಾರಂಭಕ್ಕೆ ಸಾಕ್ಷಿಯಾದರು.
ಇದು ಖಾಸಗಿ ಹಾಗೂ ಸರ್ಕಾರಿ ಶಾಲೆಯ ಸುತ್ತಲಿನ ಕಥೆ ಎಂದು ಮಾತನಾಡಿದ ಐ ಪಿ ಎಸ್ ಅಧಿಕಾರಿ ರವಿ ಡಿ ಚನ್ನಣ್ಣನವರ್, ನಾನು ಕೂಡ ಸರ್ಕಾರಿ ಶಾಲೆಯಲ್ಲೇ ಕಲಿತು ಐ ಪಿ ಎಸ್ ಅಧಿಕಾರಿ ಆಗಿದ್ದೇನೆ. ಸಿನಿಮಾ ಮೂಲಕ ಒಳ್ಳೆಯ ವಿಷಯಗಳನ್ನು ಹೇಳಿದಾಗ ಜನರಿಗೆ ಬೇಗ ತಲಪುತ್ತದೆ. ನನಗೆ ಡಾ||ರಾಜಕುಮಾರ್ ಎಂದರೆ ಪಂಚಪ್ರಾಣ. ಸುದೀಪ್ ಅಭಿನಯದ ಚಿತ್ರಗಳ ಗೆದ್ದೆ ಗೆಲುವೆ ಒಂದು ದಿನ, ಅರಳುವ ಹೂವುಗಳೆ ಹಾಗೂ ಶಿವರಾಜಕುಮಾರ್ ಅವರ ಓಂ ಚಿತ್ರದ ಹೇ ದಿನಕರ ಹಾಡುಗಳು ನನಗೆ ಸ್ಪೂರ್ತಿ.. ಕಾಲೇಜು ದಿನಗಳಲ್ಲಿ ಈ ಹಾಡುಗಳನ್ನು ಕೇಳಿ ಬೆಳೆದವನು ನಾನು ಎಂದು ತಿಳಿಸಿ ಚಿತ್ರತಂಡಕ್ಕೆ ಶುಭ ಕೋರಿದರು.
ಸಿನಿಮಾ, ರಾಜಕೀಯ ಸೇರಿದಂತೆ ಅನೇಕ ವಿಭಾಗಗಳಲ್ಲಿ ಪತ್ರಕರ್ತನಾಗಿ ಕಾರ್ಯ ನಿರ್ವಹಿಸರುವ ನಾನು, “ಬಣ್ಣದಕೊಡೆ” ಚಿತ್ರದ ಮೂಲಕ ನಿರ್ದೇಶಕನಾದೆ, “ಇದು ನಮ್ ಶಾಲೆ” ನನ್ನ ನಿರ್ದೇಶನದ ಮೂರನೇ ಚಿತ್ರ. ಇದೊಂದು ಪ್ರಸ್ತುತ ಶಿಕ್ಷಣ ವ್ಯವಸ್ಥೆಯ ಕುರಿತಾದ ಚಿತ್ರ. ಖಾಸಗಿ ಶಾಲೆ ಹಾಗೂ ಸರ್ಕಾರಿ ಶಾಲೆಗಳ ಬಗ್ಗೆ ತಿಳಿಸಿ ಕೊಡುವ ಚಿತ್ರ. ಚಿತ್ರದ ಚಿತ್ರೀಕರಣ ಮುಕ್ತಾಯವಾಗಿ ಸೆನ್ಸರ್ ಕೂಡಾ ಆಗಿದ್ದು, ಬಿಡುಗಡೆಯ ಹೊಸ್ತಿಲಿನಲ್ಲಿದೆ. ಅರಸೀಕೆರೆ, ಜೇನುಕಲ್, ಗೀಜಿಹಳ್ಳಿ ಹಾಗೂ ಬೆಂಗಳೂರು ಮುಂತಾದ ಕಡೆ ಚಿತ್ರೀಕರಣ ನಡೆದಿದೆ.
ರವಿ ಆಚಾರ್ ನಿರ್ಮಾಣ ಮಾಡಿದ್ದು, ಅರಸೀಕೆರೆ ಉಮೇಶ್ ಅವರ ಸಹಕಾರ ಚಿತ್ರಕ್ಕಿದೆ.
ನಾಗರಾಜ್ ಅದವಾನಿ ಛಾಯಾಗ್ರಾಹಣ, ಹಿತನ್ ಹಾಸನ್ ಸಂಗೀತ ಈ ಸಿನಿಮಾಕ್ಕಿದ್ದು, ಪುಣ್ಯ ಹಾಗೂ ಪೂಜ್ಯ ಅನ್ನುವ ಇಬ್ಬರು ಹೆಣ್ಣು ಮಕ್ಕಳು ಪ್ರಧಾನ ಭೂಮಿಕೆಯಲ್ಲಿ ಇದ್ದಾರೆ. ಶಂಕರ್ ಭಟ್, ಪೂಜಾ ಸುಮನ್, ಈಶ್ವರ್ ದಲ, ಮಲ್ಲಿಕಾರ್ಜುನ್ ತುಮಕೂರು, ಶಿವಲಿಂಗೇಗೌಡ ಮಂಡ್ಯ, ಮುರಳಿಕೃಷ್ಣ, ಬಸವರಾಜ್, ವಾಣಿ ಗೌಡ, ರಾಜು ನಾಯಕ್, ಮಾಸ್ಟರ್ ರಾಮು, ಗಂಗಾ ರವಿ, ಕಲಾ ಉಮೇಶ್ ಮುಂತಾದವರು ತಾರಾಬಳಗದಲ್ಲಿದ್ದಾರೆ. ಈ ಸಿನಿಮಾದಲ್ಲಿ ಅರಸೀಕೆರೆ ಜನಪ್ರಿಯ ಶಾಸಕರಾದ ಶಿವಲಿಂಗೇಗೌಡರು ಇದೇ ಮೊದಲ ಬಾರಿಗೆ ಮುಖ್ಯಮಂತ್ರಿ ಪಾತ್ರದಲ್ಲಿ ಅಭಿನಯಿಸಿದ್ದಾರೆ ಎಂದು ನಿರ್ದೇಶಕ ಕೃಷ್ಣ ಬೆಳ್ತಂಗಡಿ ತಿಳಿಸಿದರು.
ನಿರ್ಮಾಪಕರಾದ ರವಿ ಆಚಾರ್, ಕಾರ್ಯಕಾರಿ ನಿರ್ಮಾಪಕರಾದ ಅರಸೀಕೆರೆ ಉಮೇಶ್ ಹಾಗೂ ಸಂಗೀತ ನಿರ್ದೇಶಕ ಹಿತನ್ ಹಾಸನ್ “ಇದು ನಮ್ ಶಾಲೆ” ಚಿತ್ರದ ಕುರಿತು ಮಾತನಾಡಿದರು.