ಬದುಕಿನ ಪಾಠ ಹೇಳುವ ಕಥಾನಕ ‘ಇಂಟರ್ವಲ್’ (ಚಿತ್ರವಿಮರ್ಶೆ -ರೇಟಿಂಗ್ : 3.5 /5)
ರೇಟಿಂಗ್ : 3.5 /5
ಚಿತ್ರ : ಇಂಟರ್ವಲ್
ನಿರ್ದೇಶಕ : ಭರತವಷ್೯
ನಿರ್ಮಾಣ : ಭರತವಷ್೯ ಪಿಚ್ಚರ್ಸ್
ಸಂಗೀತ : ವಿಕಾಸ್ ವಸಿಷ್ಠ ಛಾಯಾಗ್ರಹಣ:ರಾಜ್ ಕಾಂತ್
ತಾರಾಗಣ : ಶಶಿರಾಜ್, ಪ್ರಜ್ವಲ್ ಕುಮಾರ್ ಗೌಡ, ಸುಕೇಶ್ ಸುಕಿ, ಚರಿತ್ರ ರಾವ್, ಸಹನ ಆರಾಧ್ಯ, ಸಮೀಕ್ಷ, ರಂಗನಾಥ್, ದಾನಂ ಹಾಗೂ ಮುಂತಾದವರು…
ಈ ಜೀವನ ಅಂದುಕೊಂಡಷ್ಟು ಸುಲಭವಲ್ಲ , ಅದರಲ್ಲೂ ಈಗಿನ ಕೆಲವು ಯುವಕ ಯುವತಿಯರ ಮನಸ್ಥಿತಿ , ಆಲೋಚನೆ , ತತ್ಸಾರ ಮನೋಭಾವ ಅವರ ಬದುಕಿನಲ್ಲಿ ಬೇರೆ ದಿಕ್ಕನ್ನ ತೋರಿಸುತ್ತಾ ಹೋಗುತ್ತದೆ. ಇಲ್ಲಿ ಅಂತದ್ದೇ ಮೂವರು ಹಳ್ಳಿ ಹುಡುಗರ ಬದುಕಿನ ಕಥೆಯಾಗಿದ್ದು , ಕೆಟ್ಟು ಪಟ್ಟಣ ಸೇರು ಅನ್ನೋ ಗಾದೆ ಮಾತಿಗೆ ಸೂಕ್ತ ಉತ್ತರ ಏನು ಎಂಬಂತೆ ಹಳ್ಳಿ ಹಾಗೂ ಸಿಟಿ ಜೀವನದ ವ್ಯತ್ಯಾಸದ ನಡುವೆ ಸುಖ , ನೆಮ್ಮದಿ , ಪ್ರೀತಿ , ವಿಶ್ವಾಸದ ನಡುವೆ ಗುರಿ ಕಾಣುವ ಸ್ಥಳ ಯಾವುದು ಎಂಬುದನ್ನು ಬಹಳ ಅರ್ಥಪೂರ್ಣವಾಗಿ ಹೇಳಲು ಪ್ರಯತ್ನದ ಫಲವಾಗಿ ಈ ವಾರ ಪ್ರೇಕ್ಷಕರು ಮುಂದೆ ಬಂದಿರುವಂತಹ ಚಿತ್ರ “ಇಂಟರ್ ವೆಲ್ “.
ಬಾಲ್ಯದಿಂದಲೂ ಆಟ , ತುಂಟಾಟ , ತರ್ಲೆಯಲ್ಲಿ ಕಾಲ ಕಳೆಯುವ ಮೂವರು ಗೆಳೆಯರು ಗಣೇಶ್. ಎಸ್ (ಶಶಿ ರಾಜ್) ಗಣೇಶ್.ಯು (ಪ್ರಜ್ವಲ್ ಕುಮಾರ್) ಗಣೇಶ್. ಟಿ ( ಸುಕೇಶ್ ಸುಕಿ) ಮಾತು ಆರ್ಭಟವಿದ್ದರೂ , ವಿದ್ಯೆಯಲ್ಲಿ ನೈವೇದ್ಯದ ಹಾದಿ ಹಿಡಿಯುತ್ತಾ ತಕ್ಕ ಮಟ್ಟಕ್ಕೆ ಸಾಗಿ ಇಂಜಿನಿಯರಿಂಗ್ ಕಾಲೇಜ್ಗೆ ಸೇರುತ್ತಾರೆ. ಈ ಮೂವರು ಗ್ರಾಮದಲ್ಲಿ ದೊಡ್ಡ ಸಾಧನೆ ಮಾಡಿದಂತೆ , ತಂದೆ-ತಾಯಿಗಳನ್ನು ಯಾಮಾರಿಸುತ್ತಾ ಬದುಕುತ್ತಾರೆ.
ಇದರ ನಡುವೆ ಗಣೇಶ್ .ಎಸ್ (ಶಶಿರಾಜ್) ಗೆ ಊರಿನ ಪಟೇಲರ ಮಗಳು ಸಿರಿ (ಚರಿತ್ರ ರಾವ್) ಳನ್ನ ಪ್ರೀತಿಸುತ್ತಾನೆ. ಜೊತೆಗೆ ಪಟೇಲರ ಚುನಾವಣೆಗೆ ಮೂವರು ಗೆಳೆಯರ ಸಾತ್ ಕೂಡ ಇರುತ್ತದೆ. ಕೆಲಸ ಕಾರ್ಯ ಇಲ್ಲದ ಗೆಳೆಯರು ಹಣ ಸಂಪಾದನೆ ಮಾಡಿ ಉತ್ತಮ ಭವಿಷ್ಯ ಕಾಣಲು ಸಿಟಿ ಸೇರುತ್ತಾರೆ.
ಕೆಲಸಕ್ಕಾಗಿ ಪರದಾಡುತ್ತಾರೆ. ಇದರ ನಡುವೆ ಹೊಸ ಸ್ಟಾರ್ಟ್ಪ್ ಕೆಲಸ ಆರಂಭಿಸಿದ ನಿಶಾ (ಸಹನಾ ಆರಾಧ್ಯ) ಮೂಲಕ ಕೆಲಸ ಗಿಟ್ಟಿಸಿಕೊಳ್ಳುವ ಗಣೇಶ್ . ಎಸ್ , ರೈತರು ಬೆಳೆದ ಆರ್ಗ್ಯಾನಿಕ್ ಬೆಳೆಯನ್ನ ಆಪ್ ಮೂಲಕ ಪ್ರಮೋಷನ್ ಮಾಡಿ ಮಾರಾಟ ಮಾಡುವ ಕೆಲಸಕ್ಕೆ ಮುಂದಾಗುತ್ತಾನೆ . ಇದರ ನಡುವೆ ಆಕೆಯನ್ನ ಇಷ್ಟಪಡುತ್ತಾನೆ. ಒಂದಷ್ಟು ಸಮಸ್ಯೆ ಎದುರಾಗಿ ದೂರದ ಬೆಟ್ಟ ನುಣ್ಣಗೆ ಎನ್ನುವಂತೆ ಪರದಾಡುವ ಗೆಳೆಯರ ಬದುಕು ಮತ್ತೆ ಅತಂತ್ರ ಸ್ಥಿತಿಗೆ ಸಾಗುತ್ತದೆ. ಈ ಗೆಳೆಯರು ಕಂಡುಕೊಳ್ಳುವ ದಾರಿ ಯಾವುದು… ಎದುರಾದ ಸಮಸ್ಯೆ ಏನು… ಕ್ಲೈಮಾಕ್ಸ್ ನಲ್ಲಿ ಹೇಳುವ ಸಂದೇಶ ಏನು.. ಇದೆಲ್ಲದವನ ನೋಡುವುದಕ್ಕೆ ಒಮ್ಮೆ ಈ ಚಿತ್ರ ನೋಡಬೇಕು.
ಯುವ ಪೀಳಿಗೆಯ ಭವಿಷ್ಯದ ಸುತ್ತ ಕಟ್ಟಿಕೊಂಡಿರುವ ಕಥಾನಕ ಬಹಳ ಉತ್ತಮವಾಗಿದೆ. ಹಳ್ಳಿಯಾಗಲಿ , ಸಿಟಿಯಾಗಲಿ ವಿದ್ಯೆ ಎಷ್ಟು ಮುಖ್ಯ , ಆಟ , ತರಲೆ , ಪ್ರೀತಿಯೇ ಜೀವನವಲ್ಲ. ಬದುಕು ರೂಪಿಸಿಕೊಳ್ಳಲು ಹುಡುಕುವ ದಾರಿ ಎಷ್ಟು ಮುಖ್ಯ ಎಂಬುದನ್ನ ಸೂಕ್ಷ್ಮವಾಗಿ ಹೇಳಿದ್ದಾರೆ, ನಿರ್ದೇಶಕರು.
ಆದರೆ ಚಿತ್ರಕಥೆಯ ವೇಗ ಕಡಿತ ಮಾಡಬಹುದಿತ್ತು. ಒಂದು ಉತ್ತಮ ಪ್ರಯತ್ನವಾಗಿ ನಿರ್ಮಾಣವಾಗಿರುವ ಈ ಚಿತ್ರದ ಹೈಲೈಟ್ ಎಂದರೆ ಸಂಭಾಷಣೆ , ಛಾಯಾಗ್ರಹಣ , ಸಂಗೀತ ಗಮನ ಸೆಳೆಯುತ್ತದೆ. ಇನ್ನು ಮೂವರು ಗೆಳೆಯರು ತಮ್ಮ ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸುವ ಮೂಲಕ ಸಿಕ್ಕ ಅವಕಾಶಕ್ಕೆ ಜೀವ ತುಂಬಿದ್ದಾರೆ.
ಅದೇ ರೀತಿ ನಟಿಯರಾಗಿ ಸಹನಾ ಆರಾಧ್ಯ ಹಾಗೂ ಚರಿತ್ರ ರಾವ್ ಮುದ್ದು ಮುದ್ದಾಗಿ ಪಾತ್ರವನ್ನು ನಿರ್ವಹಿಸಿದ್ದಾರೆ. ವಿಶೇಷ ಪಾತ್ರದಲ್ಲಿ ಬರುವ ಸಮೀಕ್ಷಾ ಅದ್ಭುತವಾಗಿ ಪಾತ್ರವನ್ನು ನಿರ್ವಹಿಸಿದ್ದಾರೆ. ಇನ್ನು ಉಳಿದಂತೆ ರಂಗನಾಥ ಶಿವಮೊಗ್ಗ , ದಾನಂ ಶಿವಮೊಗ್ಗ ಸೇರಿದಂತೆ ಎಲ್ಲಾ ಪಾತ್ರಗಳು ಚಿತ್ರದ ಓಟಕ್ಕೆ ಸಾತ್ ನೀಡಿದೆ.ಒಟ್ಟಾರೆ ಜವಾಬ್ದಾರಿಯುತ ಬದುಕು ಎಷ್ಟು ಮುಖ್ಯ ಎಂದು ಹೇಳಿರುವ ಈ ಚಿತ್ರವನ್ನು ಎಲ್ಲರೂ ಒಮ್ಮೆ ನೋಡಬಹುದು.