ವಿಜಯ ರಾಘವೇಂದ್ರ ಅಭಿನಯದ “ಜೋಗ್ 101” ಇದೇ 7ರಂದು ಬಿಡುಗಡೆ
ನಿರ್ಮಾಪಕ & ಕ್ರಿಯೇಟಿವ್ ಡೈರೆಕ್ಟರ್ ರಾಘು ರವರ ಸೆವೆನ್ ಸ್ಟಾರ್ ಪಿಕ್ಚರ್ಸ್ ಅಡಿಯಲ್ಲಿ ಅದ್ದೂರಿಯಾಗಿ ನಿರ್ಮಾಣವಾಗಿರುವ ಹಾಗೂ ವಿಜಯ್ ರಾಘವೇಂದ್ರ ಅಭಿನಯದ, ವಿಜಯ್ ಕನ್ನಡಿಗ ನಿರ್ದೇಶನದ “ಜೋಗ್ 101” ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು ಜನಮನ್ನಣೆ ಪಡೆಯುತ್ತಿದೆ. ವಿಭಿನ್ನ ಕಥಾಹಂದರ ಹೊಂದಿರುವ ಈ ಚಿತ್ರ ಮಾರ್ಚ್ 7ರಂದು ತೆರೆಗೆ ಬರಲಿದೆ. ಈ ಕುರಿತು ಚಿತ್ರತಂಡದ ಸದಸ್ಯರು ಮಾಧ್ಯಮದವರಿಗೆ ಮಾಹಿತಿ ನೀಡಿದರು.
“ಜೋಗ್ 101” ಸಸ್ಪೆನ್ಸ್ ಥ್ರಿಲ್ಲರ್ ಹಾಗೂ ಆಕ್ಷನ್ ಥ್ರಿಲ್ಲರ್ ಚಿತ್ರ ಎಂದು ಮಾತನಾಡಿದ ನಾಯಕ ವಿಜಯ್ ರಾಘವೇಂದ್ರ, ಈ ಚಿತ್ರದಲ್ಲಿ ಲವ್, ಕಾಮಿಡಿ ಹೀಗೆ ಎಲ್ಲಾ ಅಂಶಗಳು ಇದೆ. ಅವಿನಾಶ್ ಆರ್ ಬಾಸೂತ್ಕರ್ ಸಂಗೀತ ನೀಡಿರುವ ಎರಡು ಹಾಡುಗಳು ಈಗಾಗಲೇ ಬಿಡುಗಡೆಯಾಗಿದ್ದು, ಲಕ್ಷಾಂತರ ಜನರ ಮೆಚ್ಚುಗೆಗೆ ಪಾತ್ರವಾಗಿದೆ. ನನ್ನ ಚಿತ್ರಗಳಲ್ಲಿ ಒಂದೆರೆಡು ಹಿಟ್ ಹಾಡುಗಳು ಇರುತ್ತಿದ್ದವು. ಆದರೆ ಇತ್ತೀಚಿನ ನನ್ನ ಸಿನಿಮಾಗಳಲ್ಲಿ ಅಂತಹ ಹಿಟ್ ಹಾಡುಗಳು ಯಾವುದು ಇರಲಿಲ್ಲ.
“ಜೋಗ್ 101” ಚಿತ್ರದ ಹಾಡುಗಳು ಆ ಕೊರತೆಯನ್ನು ದೂರ ಮಾಡಿದೆ. ಈ ಚಿತ್ರದ ಹಾಡುಗಳು ಈಗಾಗಲೇ ಗೆದ್ದಿದೆ. ಇನ್ನು ನಿರ್ಮಾಪಕರ ಹೆಸರು ರಾಘವೇಂದ್ರ, ನಿರ್ದೇಶಕರ ಹೆಸರು ವಿಜಯ್ ಅವರಿಬ್ಬರ ಹೆಸರು ಸೇರಿಸಿದಾಗ ನನ್ನ ಹೆಸರು ವಿಜಯ್ ರಾಘವೇಂದ್ರ. ವಿಕ್ರಮ್ ನನ್ನ ಪಾತ್ರದ ಹೆಸರು. ಸುನೀತ್ ಹಲಗೇರಿ ಅವರ ಛಾಯಾಗ್ರಹಣದಲ್ಲಿ ಜೋಗ್ ನೋಡುವುದೆ ಒಂದು ಖುಷಿ. ಇದೇ ಮಾರ್ಚ್ 7 ನಮ್ಮ ಚಿತ್ರ ಬಿಡುಗಡೆಯಾಗುತ್ತಿದೆ. ನೋಡಿ ಹಾರೈಸಿ ಎಂದರು.
ಈ ಚಿತ್ರದ ಕಥೆ ಬರೆದು ನಿರ್ಮಾಪಕರ ಹತ್ತಿರ ಹೋದಾಗ ಕಥೆ ಮೆಚ್ಚಿಕೊಂಡು ಚಿತ್ರ ನಿರ್ಮಾಣಕ್ಕೆ ಮುಂದಾದರು. ಈ ಚಿತ್ರದ ಕಥೆಗೆ ವಿಜಯ್ ರಾಘವೇಂದ್ರ ಅವರೆ ಸೂಕ್ತ ಎಂದು ಅಂದು ಕೊಂಡಿದ್ದೆವು. ವಿಜಯ್ ರಾಘವೇಂದ್ರ ಅವರು ಕಥೆ ಕೇಳಿ ನಟಿಸಲು ಒಪ್ಪಿಕೊಂಡರು. ಚಿತ್ರ ಇದೇ 7 ನೇ ತಾರೀಖು ಬಿಡುಗಡೆಯಾಗುತ್ತಿದೆ ಎಂದು ನಿರ್ದೇಶಕ ವಿಜಯ್ ಕನ್ನಡಿಗ ತಿಳಿಸಿದರು.
ಇದು ನನ್ನ ನಿರ್ಮಾಣದ ಮೊದಲ ಚಿತ್ರ. ಚಿತ್ರತಂಡದ ಸಹಕಾರದಿಂದ “ಜೋಗ್ 101” ಚೆನ್ನಾಗಿ ಮೂಡಿಬಂದಿದೆ. ಮಾರ್ಚ್ 7 ರಂದು ತೆರೆಗೆ ಬರುತ್ತಿರುವ ನಮ್ಮ ಚಿತ್ರವನ್ನು ಎಲ್ಲರೂ ನೋಡಿ ಯಶಸ್ವಿ ಮಾಡಿ ಎಂದರು ನಿರ್ಮಾಪಕ ರಾಘು.
ದಿಶಾ ನನ್ನ ಪಾತ್ರದ ಹೆಸರು. ಈ ಚಿತ್ರದಲ್ಲಿ ಮುಗ್ದ ಹುಡುಗಿಯ ಪಾತ್ರ ನನ್ನದು ಎಂದರು ನಾಯಕಿ ತೇಜಸ್ವಿನಿ. ಸಂಗೀತ ನಿರ್ದೇಶಕ ಅವಿನಾಶ್ ಆರ್ ಬಾಸೂತ್ಕರ್, ಛಾಯಾಗ್ರಾಹಕ ಸುನೀತ್ ಹಲಗೇರಿ ಹಾಗೂ ನೃತ್ಯ ನಿರ್ದೇಶಕ ಕಲೈ ಸೇರಿದಂತೆ ಚಿತ್ರತಂಡದ ಸದಸ್ಯರು ಚಿತ್ರದ ಕುರಿತು ಮಾಹಿತಿ ನೀಡಿದರು. ಮೋಹನ್ ರಂಗಕಹಳೆ ಸಂಕಲನ ಹಾಗೂ ಥ್ರಿಲ್ಲರ್ ಮಂಜು ಅವರ ಸಾಹಸ ಈ ಚಿತ್ರಕ್ಕಿದೆ.
ವಿಜಯ ರಾಘವೇಂದ್ರ ಅವರಿಗೆ ನಾಯಕಿಯಾಗಿ ತೇಜಸ್ವಿನಿ ಶೇಖರ್ ನಟಿಸಿದ್ದಾರೆ. ಗೋವಿಂದೇ ಗೌಡ, ಕಡಿಪುಡಿ ಚಂದ್ರು, ರಾಜೇಶ್ ನಟರಂಗ, ತಿಲಕ್, ನಿರಂಜನ್ ದೇಶಪಾಂಡೆ, ಶಶಿಧರ್, ಪ್ರಸನ್ನ, ಸುಂದರಶ್ರೀ, ಹರ್ಷಿತಾ ಗೌಡ “ಜೋಗ್ 101” ಚಿತ್ರದ ತಾರಾಬಳಗದಲ್ಲಿದ್ದಾರೆ.