‘ಜೊತೆಯಾಗಿರು’ ಮಿಸ್ ಕಾಲ್ ನಿಂದ ಹುಟ್ಟಿದ ಪ್ರೇಮಕಥೆ
ಕಳೆದ ಏಳೆಂಟು ವರ್ಷಗಳಿಂದ ಚಿತ್ರರಂಗದಲ್ಲಿ ಸಹ, ಸಹಾಯಕ ನಿರ್ದೇಶಕನಾಗಿ ಹಲವು ಚಿತ್ರಗಳಲ್ಲಿ ದುಡಿದಿದ್ದ ಸತೀಶ್ ಕುಮಾರ್ ಅವರು ಜೊತೆಯಾಗಿರು ಎಂಬ ಚಿತ್ರದ ಮೂಲಕ ಈಗ ನಿರ್ದೇಶಕರಾಗಿದ್ದಾರೆ. ಬಿಡುಗಡೆಗೆ ಸಿದ್ದವಾಗಿರುವ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ಅವರೇ ನಿರ್ದೇಶನವನ್ನೂ ಸಹ ಮಾಡಿದ್ದಾರೆ.
2009ರಲ್ಲಿ ನೆಡೆದ ಸತ್ಯ ಘಟನೆಯೊಂದನ್ನು ಆಧರಿಸಿ ಈ ಚಿತ್ರಕ್ಕೆ ಚಿತ್ರಕಥೆ ಹೆಣೆದಿದ್ದಾರೆ. ಆಗಿನ್ನೂ ಕೀಪ್ಯಾಡ್ ಮೊಬೈಲ್ ಇದ್ದಂಥ ಸಮಯ. ಆಗ ಹುಡುಗಿಯ ಮೊಬೈಲ್ ಗೆ ಬರುವ ಒಂದು ಮಿಸ್ ಕಾಲ್ ನಿಂದ ಆರಂಭವಾಗುವ ಪ್ರೇಮಕಥೆ ಮುಂದೆ ಏನೆಲ್ಲ ತಿರುವುಗಳನ್ನು ಪಡೆದುಕೊಳ್ಳುತ್ತದೆ ಎಂಬುದನ್ನು ಈ ಚಿತ್ರದಲ್ಲಿ ಹೇಳಲಾಗಿದೆ. ಚಿತ್ರವನ್ನು ಅದೇ ಕಾಲಘಟ್ಟಕ್ಕೆ ತಕ್ಕಂತೆ ಚಿತ್ರಿಸಲಾಗಿದೆ ಈಗಾಗಲೇ ಚಿತ್ರಕ್ಕೆ ಸೆನ್ಸಾರ್ ಮಂಡಳಿಯಿಂದ U/A ಸರ್ಟಿಫಿಕೇಟ್ ಸಿಕ್ಕಿದೆ,
ರೇಣು ಮೂವೀಸ್ ನಿರ್ಮಾಣದ ಈ ಚಿತ್ರದ ಐದು ಹಾಡುಗಳಿಗೆ ವಿನು ಮನಸು ಅವರ ಸಂಗೀತ ನಿರ್ದೇಶನವಿದೆ. ಸತೀಶ್ ಚಂದ್ರಯ್ಯ ಅವರ ಸಂಕಲನ, ರಾಜ ಶಿವಶಂಕರ್ ಮತ್ತು ಆನಂದ್ ಇಳಯರಾಜ ಅವರ ಛಾಯಾಗ್ರಹಣ, ಕೆ.ಕಲ್ಯಾಣ್ ಮತ್ತು ಮನ್ವರ್ಷಿ ಅವರ ಸಾಹಿತ್ಯವಿದೆ.
ಚಿತ್ರದ ಹಾಡುಗಳನ್ನು ಕಳಸ, ಸಕಲೇಶಪುರ, ಕುಂದಾಪುರದ ಸುತ್ತಮುತ್ತಲಿನ ಸುಂದರ ಸ್ಥಳಗಳಲ್ಲಿ ಚಿತ್ರಿಕರಿಸಲಾಗಿದೆ.
ಚಿತ್ರದಲ್ಲಿ ವೆಂಕಟೇಶ್ ಹೆಗ್ಡೆ ಮತ್ತು ಸುನೀಲ್ ಕಾಂಚನ್ ನಾಯಕರಾಗಿ, ರಶ್ಮಿಗೌಡ, ಮತ್ತು ಪೂಜಾ ಆಚಾರ್ ನಾಯಕಿಯರಾಗಿ ನಟಿಸಿದ್ದಾರೆ. ಉಳಿದ ತಾರಾಗಣದಲ್ಲಿ ಶಂಕರ ನಾರಾಯಣ್, ಸುಧೀರ್, ಸುಧಾ, ಯಶೋಧ, ಅಶ್ವಿನಿ, ಸಂತೋಷ್ , ರಾಜಶೇಖರ್, ಮಂಜು ಮುಂತಾದವರು ನಟಿಸಿದ್ದಾರೆ. ಈ ವರ್ಷದ ಕೊನೆಯಲ್ಲಿ ಚಿತ್ರವನ್ನು ಬಿಡುಗಡೆ ಮಾಡುವ ಯೋಜನೆ ಹಾಕಿಕೊಳ್ಳಲಾಗಿದ್ದು, ನವೆಂಬರ್ ನಲ್ಲಿ ಚಿತ್ರತಂಡ ಆಡಿಯೋ ಮತ್ತು ಟ್ರೈಲರ್ ಬಿಡುಗಡೆ ಮಾಡಲಿದೆ