ಜಸ್ಟ್ ಪಾಸ್ ವಿದ್ಯಾರ್ಥಿಗಳ ಭವಿಷ್ಯದ ಪಯಣ (ಚಿತ್ರವಿಮರ್ಶೆ-ರೇಟಿಂಗ್ : 3.5 /5)
ರೇಟಿಂಗ್ : 3.5 /5
ಚಿತ್ರ : ಜಸ್ಟ್ ಪಾಸ್
ನಿರ್ದೇಶಕ : ಕೆ.ಎಂ.ರಘು
ನಿರ್ಮಾಪಕ : ಕೆ.ವಿ.ಶಶಿಧರ್
ಸಂಗೀತ : ಹರ್ಷವರ್ಧನ್ ರಾಜ್
ಛಾಯಾಗ್ರಹಕ : ಸುಜಯ್ ಕುಮಾರ್
ತಾರಾಗಣ : ಶ್ರೀ, ಪ್ರಣತಿ , ರಂಗಾಯಣ ರಘು , ಸಾಧುಕೋಕಿಲ , ಸುಚೇಂದ್ರ ಪ್ರಸಾದ್, ಪ್ರಕಾಶ್ ತುಮ್ಮಿನಾಡು, ದೀಪಕ್ ರೈ , ಗೋವಿಂದೇಗೌಡ, ದಾನಪ್ಪ ಹಾಗೂ ಮುಂತಾದವರು…
ಕಾಲೇಜ್ ಲೈಫ್ ಈಸ್ ಗೋಲ್ಡನ್ ಲೈಫ್ ಅನ್ನೋ ಮಾತಿದೆ. ಆದರೆ ಜಸ್ಟ್ ಪಾಸ್ ಆದ ವಿದ್ಯಾರ್ಥಿಗಳು ತಮ್ಮ ಭವಿಷ್ಯದ ಬಗ್ಗೆ ಕಂಗಾಲಾಗೋದು ಸರ್ವೇ ಸಾಮಾನ್ಯ. ಅಂತದ್ದೇ ವಿದ್ಯಾರ್ಥಿಗಳ ಬದುಕಿಗೆ ದಾರಿದೀಪವಾಗುವ ಒಂದು ಕಾಲೇಜಿನ ಸುತ್ತ ನಡೆಯುವ ಕಥಾನಕ ಮೂಲಕ ಸ್ನೇಹ , ಪ್ರೀತಿ , ದೇಶಾಭಿಮಾನ , ಗುರು ಶಿಷ್ಯರ ಸಂಬಂಧ , ಶ್ರದ್ಧೆ , ಆಸಕ್ತಿ , ಮಾನವೀಯತೆಯ ಮೌಲ್ಯದ ಸುತ್ತ ಬೆಸೆದುಕೊಂಡು ಈ ವಾರ ತೆರೆಯ ಮೇಲೆ ಬಂದಿರುವಂತಹ ಚಿತ್ರ “ಜಸ್ಟ್ ಪಾಸ್”.
ಇತ್ತೀಚಿಗೆ ವಿದ್ಯಾ ಸಂಸ್ಥೆಗಳ ಡೊನೇಷನ್ ಹಾವಳಿ , ರಾಂಕ್ ಸ್ಟೂಡೆಂಟ್ ಗಳ ಸೆಳೆತವೇ ತುಂಬಿರುವ ಸಮಯದಲ್ಲಿ ಒಂದು ಕಾಲೇಜು ಜಸ್ಟ್ ಪಾಸಾದ ವಿದ್ಯಾರ್ಥಿಗಳಿಗಾಗಿ ಉತ್ತಮ ಭವಿಷ್ಯ ನೀಡುವ ನಿಟ್ಟಿನಲ್ಲಿ ತೆರೆದುಕೊಳ್ಳುವ ಕಾಲೇಜು ಅದರ ಪ್ರಾಂಶುಪಾಲರೇ ದಳವಾಯಿ(ರಂಗಾಯಣ ರಘು) ಒಬ್ಬ ಶಿಸ್ತು ಬದ್ಧ ಪ್ರಾಮಾಣಿಕ ವ್ಯಕ್ತಿ. ಈ ಒಂದು ಕಾಲೇಜಿಗೆ ಜಸ್ಟ್ ಪಾಸಾದ ವಿದ್ಯಾರ್ಥಿಗಳ ದಂಡೆ ಹರಿದು ಬರುತ್ತದೆ. ಅದರಲ್ಲಿ ನಾಯಕ ಅರ್ಜುನ್ (ಶ್ರೀ ) ನಾಯಕಿ ಅಕ್ಷರ(ಪ್ರಣತಿ) ಕೂಡ ಸೇರಿಕೊಳ್ಳುತ್ತಾರೆ.
ಕಾಲೇಜ್ ಹಾಸ್ಟೆಲ್ ನಲ್ಲಿ ವಾಸ , ಊಟ , ಆಟ , ಪಾಠ , ತುಂಟಾಟ , ತರಲೆ ಎಲ್ಲವೂ ಇದ್ದದ್ದೇ. ಇಂತಹ ವಿದ್ಯಾರ್ಥಿಗಳಿಗೆ ಉತ್ತಮ ಭವಿಷ್ಯ ನೀಡಲು ಶಿಕ್ಷಕರ ಪರದಾಟ. ಪ್ರಾಂಶುಪಾಲರು ಕೂಡ ಆಗಾಗ ವಿದ್ಯಾರ್ಥಿಗಳಿಗೆ ಜಾಗೃತಿಯ ಜೊತೆಗೆ ಭವಿಷ್ಯದ ಬೆಳಕಿನ ಕಡೆಗೂ ಗಮನಹರಿಸುವಂತೆ ಹೇಳುತ್ತಿರುತ್ತಾರೆ. ಇದರ ನಡುವೆ ಯುವ ಮನಸುಗಳ ಪ್ರೀತಿಯ ಸೆಳೆತ , ವಿದ್ಯಾರ್ಥಿಗಳ ಎಲ್ಲಾ ಸಮಸ್ಯೆಗೂ ಸ್ಪಂದಿಸುವ ಪ್ರಾಂಶುಪಾಲರು ತಮ್ಮ ಜೀಪನ್ನು ಕೂಡ ನೀಡಿ ಸಹಕರಿಸುತ್ತಾರೆ. ವಿದ್ಯಾರ್ಥಿಗಳ ಬೇಜವಾಬ್ದಾರಿತನಕ್ಕೆ ಹಲವಾರು ಎಡವಟ್ಟುಗಳು ನಡೆಯುತ್ತದೆ.
ಒಮ್ಮೆ ಜೀಪಿನಲ್ಲಿ ಸಿಗುವ ಬ್ರೌನ್ ಶುಗರ್ ಪ್ರಾಂಶುಪಾಲರಿಗೆ ಕಂಟಕವಾಗಿ ಪೊಲೀಸ್ ಸ್ಟೇಷನ್ ಹೋಗುವ ಪರಿಸ್ಥಿತಿ ಎದುರಾಗುತ್ತದೆ. ಒಂದು ಕಡೆ ಕಾಲೇಜ್ ಗೌರವ , ವಿದ್ಯಾರ್ಥಿಗಳ ಭವಿಷ್ಯ , ಪ್ರಾಂಶುಪಾಲರ ಬದುಕು , ಎಲ್ಲವೂ ಅಯೋಮಯವಾಗುತ್ತದೆ. ಈ ಎಲ್ಲಾ ಸಮಸ್ಯೆಗೆ ಪರಿಹಾರ ಸಿಗುತ್ತಾ… ಇಲ್ವಾ… ಎಂಬುದನ್ನು ತಿಳಿಯಬೇಕಾದರೆ ಒಮ್ಮೆ ಜಸ್ಟ್ ಪಾಸ್ ಚಿತ್ರವನ್ನು ನೋಡಬೇಕು.
ನಿರ್ದೇಶಕ ಕೆ.ಎಂ .ರಘು ಆಯ್ಕೆ ಮಾಡಿರುವ ವಿಚಾರ ಅರ್ಥಪೂರ್ಣವಾಗಿದೆ. ಜಸ್ಟ್ ಪಾಸ್ ಆದ ವಿದ್ಯಾರ್ಥಿಗಳ ಬದುಕು , ಭಾವನೆ, ಕಾಲೇಜ್ ಗಳಲ್ಲಿ ಹಿಂದಿರುವ ಲಾಬಿ , ಕುತಂತ್ರಗಳು , ಶ್ರಮಪಟ್ಟರೆ ಏನು ಬೇಕಾದರೂ ಸಾಧಿಸಬಹುದು ಎಂಬ ಅಂಶದ ಜೊತೆಗೆ ತಂದೆ ತಾಯಿಗಳ ಬಗ್ಗೆ ಮಕ್ಕಳಿಗೆ ಇರಬೇಕಾದ ಜವಾಬ್ದಾರಿ ಗಮನ ಸೆಳೆಯುವಂತಿದೆ. ಆದರೆ ಚಿತ್ರಕಥೆಯ ಓಟ ನಿಧಾನಗತಿಯಲ್ಲಿ ಸಾಗುತ್ತದೆ. ಸಂಭಾಷಣೆ ಗಮನ ಸೆಳೆದರು, ಹಾಸ್ಯ ಸನ್ನಿವೇಶಗಳ ಸೆಳೆತ ಹೆಚ್ಚು ಮಾಡಬಹುದಿತ್ತು. ಆದರೂ ವಿದ್ಯಾರ್ಥಿಗಳ ಭವಿಷ್ಯಕ್ಕೆ ಪೂರಕವಾಗುವಂತೆ ಚಿತ್ರ ಮಾಡಿದ್ದಾರೆ ನಿರ್ದೇಶಕರು.
ಇನ್ನು ಚಿತ್ರದ ಸಂಗೀತ ಗಮನ ಸೆಳೆಯುತ್ತದೆ. ಅದೇ ರೀತಿ ಛಾಯಾಗ್ರಾಹಕರ ಕೈ ಚಳಕವು ಸೊಗಸಾಗಿದೆ. ಇನ್ನು ನಾಯಕ ನಟ ಶ್ರೀ ಸಿಕ್ಕ ಅವಕಾಶವನ್ನ ಸಮರ್ಥವಾಗಿ ನಿರ್ವಹಿಸಿದ್ದಾರೆ. ಅದೇ ರೀತಿ ನಾಯಕಿ ಪಾತ್ರ ನಿರ್ವಹಿಸಿರುವ ಪ್ರಣತಿ ಕೂಡ ಬಹಳ ಲವಲವಿಕೆಯಿಂದ ಪಾತ್ರಕ್ಕೆ ಜೀವ ತುಂಬಿದ್ದಾರೆ. ಇನ್ನುಳಿದಂತೆ ವಿದ್ಯಾರ್ಥಿಗಳು ಹಾಗೂ ಲೆಕ್ಚರರ್ ಪಾತ್ರ ಮಾಡಿರುವ ಎಲ್ಲರೂ ಕೂಡ ಚಿತ್ರದ ಓಟಕ್ಕೆ ಉತ್ತಮ ಸಾತ್ ನೀಡಿದ್ದಾರೆ. ವಿಶೇಷವಾಗಿ ಪ್ರಿನ್ಸಿಪಲ್ ಪಾತ್ರ ಮಾಡಿರುವ ರಂಗಾಯಣ ರಘು ಎಂದಿನಂತೆ ತಮ್ಮ ಅದ್ಭುತ ನಟನೆ ಮೂಲಕ ಗಮನ ಸೆಳೆಯುತ್ತಾರೆ. ಸಾಧುಕೋಕಿಲ ಕೂಡ ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಒಟ್ಟಾರೆ ಯಾವುದೇ ಮುಜುಗರವಿಲ್ಲದೆ ಎಲ್ಲರೂ ನೋಡುವಂತ ಚಿತ್ರ ಇದಾಗಿದೆ