ರೇಪಿಸ್ಟ್ ಗಳಿಗೆ ಅನಾಮಿಕನ ಉತ್ತರ…’ಜಸ್ಟಿಸ್’ (ಚಿತ್ರವಿಮರ್ಶೆ- ರೇಟಿಂಗ್ : 3 /5)
ರೇಟಿಂಗ್ : 3 /5
ಚಿತ್ರ : ಜಸ್ಟಿಸ್
ನಿರ್ದೇಶಕ, ಸಂಗೀತ : ಆರೋನ್ ಕಾರ್ತಿಕ್ ವೆಂಕಟೇಶ್
ನಿರ್ಮಾಪಕ : ಅಹಮದ್ ಅಲಿ ಖಾನ್, ಮೊಹಮ್ಮದ್ ಜಾವೇದ್
ಛಾಯಾಗ್ರಹಣ : ಮೈಸೂರ್ ಸ್ವಾಮಿ
ತಾರಾಗಣ : ಸಾಹಿಲ್ ಖಾನ್ , ರಿಯಾ ಭಾಸ್ಕರ್ , ಕಿನಯ ಕಾಪಾಡಿ, ಚೇತನ್ ಕೃಷ್ಣ , ರಿವ್ಯೂ ನವಾಜ್ , ಗಣೇಶ್ ರಾವ್ , ಸುರೇಶ್ ಬಾಬು, ಮನಮೋಹನ್ ರಾಯ್, ಟಿಕ್ ಟಾಕ್ ನಜೀರ್ ಹಾಗೂ ಮುಂತಾದವರು…
ಹೆಣ್ಣನ್ನು ಪೂಜಿಸಿ , ಗೌರವಿಸುವ ನಮ್ಮ ದೇಶದಲ್ಲಿ , ಕೆಲವು ನೀಚ , ದುಷ್ಟ ವ್ಯಕ್ತಿಗಳ ಅಟ್ಟಹಾಸಕ್ಕೆ ಸಾವಿರಾರು ಹೆಣ್ಣುಮಕ್ಕಳ ಭವಿಷ್ಯ ನಾಶವಾಗುತ್ತಿರುವ ಘಟನೆಗಳು ನಡೆಯುತ್ತಲೇ ಇದೆ. ಇದಕ್ಕೆ ಕಡಿವಾಣ ಹಾಕಲು ಸರ್ಕಾರ , ಕಾನೂನು , ಪೊಲೀಸ್ ಇಲಾಖೆಗಳು ಒಂದಷ್ಟು ಕಟ್ಟುನಿಟ್ಟಿನ ಕ್ರಮ ಕೈಗೊಂಡರು ಸಹ , ಅದ್ಯಾವುದನ್ನು ಲೆಕ್ಕಿಸದೆ ಹೆಣ್ಣು ಮಕ್ಕಳನ್ನ ಅಪಹರಸಿ ನಿರಂತರ ಅತ್ಯಾಚಾರ ಮಾಡುತ್ತಲೇ ಬರುತ್ತಿರುವವರಿಗೆ ತಕ್ಕ ಪ್ರತ್ಯುತ್ತರವಾಗಿ , ಜನರನ್ನ ಜಾಗೃತಿಗೊಳಿಸುವ ನಿಟ್ಟಿನಲ್ಲಿ ತಾಂತ್ರಿಕ ಅಂಶಗಳನ್ನು ಬೆಸೆದುಕೊಂಡು ಈ ವಾರ ಪ್ರೇಕ್ಷಕರ ಮುಂದೆ ಬಂದಿರುವಂತಹ ಚಿತ್ರ “ಜಸ್ಟಿಸ್”.
ಹೆಣ್ಣು ಮಗಳು ಮಧ್ಯರಾತ್ರಿ ಒಬ್ಬಂಟಿಯಾಗಿ ಓಡಾಡಿದಾಗ ಮಾತ್ರ ನಮಗೆ ಸ್ವಾತಂತ್ರ ಸಿಕ್ಕಂತೆ ಎಂಬುವುದು ಬರೀ ಕನಸಾಗಿ , ದುಷ್ಟ ವ್ಯಕ್ತಿಗಳ ನೋಟಕ್ಕೆ ಹೆಣ್ಣು ಮಕ್ಕಳು ಬಲಿಯಾಗುತ್ತಿರುತ್ತಾರೆ. ಕಾಮುಕರಂದ ಮಟ್ಟ ಹಾಕಲು ಪೊಲೀಸ್ ಇಲಾಖೆಗೂ ದೊಡ್ಡ ಸವಾಲ್ ಆಗಿರುತ್ತದೆ.
ಇನ್ನು ತಾನಾಯಿತು ತನ್ನ ಕೆಲಸವಾಯಿತು ಎನ್ನುವ ಮಾನ್ವಿತ್ ( ಸರ್ಕಾರ ಸಾಹಿಲ್) ಸಾಫ್ಟ್ವೇರ್ ಉದ್ಯೋಗಿ , ಇನ್ನು ತನ್ನ ಗೆಳೆಯರ ಮಾತಿನಂತೆ ಮುದ್ದಾದ ಹುಡುಗಿ ರಿಯಾ( ರಿಯಾ ಭಾಸ್ಕರ್ ) ಳನ್ನ ಭೇಟಿಯಾಗುವ ಮೂಲಕ ಒಬ್ಬರಿಗೊಬ್ಬರು ಇಷ್ಟಪಟ್ಟು ಮದುವೆಯಾಗಿ ನೆಮ್ಮದಿ ಜೀವನ ಸಾಗಿಸುತ್ತಾರೆ.
ಇನ್ನು ಒಬ್ಬಂಟಿ ಹೆಣ್ಣು ಮಕ್ಕಳನ್ನೇ ಟಾರ್ಗೆಟ್ ಮಾಡುತ್ತಾ ಅತ್ಯಾಚಾರ ಎಸಗುವ ಕ್ರೂರಿಗಳಿಗೆ ತಕ್ಕ ಪಾಠ ಕಲಿಸಲು ಅನಾಮಿಕ ವ್ಯಕ್ತಿ ಒಬ್ಬ ನಿಗೂಢ ಸ್ಥಳದಲ್ಲಿ ತನ್ನದೇ ತಾಂತ್ರಿಕ ಯಂತ್ರೋಪಕರಣದ ಮೂಲಕ ಲೈವ್ ಟೆಲಿಕಾಸ್ಟ್ ಮಾಡುವ ಚಾನೆಲ್ ಒಂದನ್ನು ಸಿದ್ಧಪಡಿಸಿಕೊಂಡು ದುಷ್ಟರ ವಿರುದ್ಧ ಸಮರ ಸಾರಲು ಮುಂದಾಗಿ , ಪಾಪಿಗಳನ್ನು ಹಿಡಿದು ತಂದು ಕ್ರೂರ ಶಿಕ್ಷೆಯನ್ನು ಲೈವ್ ಮೂಲಕ ಪ್ರಸಾರ ಮಾಡಿತ್ತಾ ಪ್ರತಿಯೊಬ್ಬರೂ ನೋಡುವಂತೆ ಮಾಡುತ್ತಾನೆ.
ಇದು ಪೊಲೀಸ್ ಇಲಾಖೆಗೂ ದೊಡ್ಡ ಸವಾಲಾಗಿ ಹಿರಿಯ ಅಧಿಕಾರಿಗಳು ದಕ್ಷ ಪೊಲೀಸ್ ಅಧಿಕಾರಿ ಧರ್ಮ (ಚೇತನ್ ಕೃಷ್ಣ) ನನ್ನ ನೇಮಿಸಲು ಮುಂದಾಗುತ್ತಾರೆ. ಕೀಚಕರನ್ನ ಹಿಡಿಯಲು ಮುಂದಾಗುವ ದಕ್ಷ ಅಧಿಕಾರಿಗೆ ಒಂದಷ್ಟು ಗೊಂದಲ ಎದುರಾಗುತ್ತಾ ಫ್ಲಾಶ್ ಬ್ಯಾಕ್ ಕಥೆ ತೆರೆದುಕೊಳ್ಳುತ್ತದೆ. ಇನ್ನು ನೆಮ್ಮದಿ ಜೀವನ ನಡೆಸುತ್ತಿರುವ ಜೋಡಿಯ ಮಡದಿ ರಿಯಾ ಐಟಿ ಕಂಪನಿಗೆ ಮಹಿಳಾ ಉದ್ಯೋಗಿ.
ಕೆಲಸಕ್ಕಾಗಿ ಕ್ಯಾಬ್ ಮೂಲಕ ನೈಟ್ ಶಿಫ್ಟ್ ಹೋದವಳು ನಾಪತ್ತೆ ಆಗುತ್ತಾಳೆ. ಅದನ್ನು ಬೇಧಿಸುವ ಪೊಲೀಸ್ ಅಧಿಕಾರಿಗೆ ಕಠೋರ ಸತ್ಯ ತಿಳಿಯುತ್ತದೆ. ಇದೆಲ್ಲವೂ ಒಂದಕ್ಕೊಂದು ಕೊಂಡಿಯಂತೆ ಬೆಸೆದುಕೊಂಡು ರೋಚಕ ಘಟ್ಟಕ್ಕೆ ಬಂದು ನಿಲ್ಲುತ್ತದೆ. ಇದೆಲ್ಲದಕ್ಕೂ ಉತ್ತರ ಸಿಗುತ್ತಾ.. ದುಷ್ಟರ ಮಟ್ಟ ಆಗುತ್ತಾ… ಕ್ಲೈಮಾಕ್ಸ್ ನೀಡುವ ಉತ್ತರ ಏನು… ಇದಕ್ಕಾಗಿ ನೀವೆಲ್ಲರೂ ಈ ಚಿತ್ರವನ್ನು ನೋಡಬೇಕು.
ಈ ಚಿತ್ರಕ್ಕೆ ಕಥೆ ,ಚಿತ್ರಕಥೆ , ಸಂಭಾಷಣೆ , ಸಾಹಿತ್ಯ , ಸಂಗೀತ ಹಾಗೂ ನಿರ್ದೇಶನ ಮಾಡಿರುವ ಆರೋನ್ ಕಾರ್ತಿಕ್ ವೆಂಕಟೇಶ್ ಸಮಾಜದಲ್ಲಿ ನಡೆಯುತ್ತಿರುವ ಕೊಲೆ , ಅತ್ಯಾಚಾರದ ಪ್ರಕರಣದ ಬಗ್ಗೆ ಜಾಗೃತಿ ಮೂಡಿಸುವ ಜೊತೆಗೆ ಕಠಿಣ ಶಿಕ್ಷೆ , ನ್ಯಾಯ ಸಮ್ಮತವಾದ ದಾರಿ ಸಿಗಬೇಕೆಂಬ ಸಂದೇಶವನ್ನ ತೆರೆದಿಡುವ ಪ್ರಯತ್ನವನ್ನು ಅಚ್ಚುಕಟ್ಟಾಗಿ ಮಾಡಿದ್ದಾರೆ.
ಇವತ್ತಿನ ತಾಂತ್ರಿಕತೆಯನ್ನು ಹೀಗೂ ಬಳಸಿಕೊಳ್ಳಬಹುದು ಎನ್ನುವಂತೆ ಹಲವು ವಿಭಾಗಗಳಲ್ಲಿ ತಮ್ಮನ್ನ ತೊಡಗಿಸಿಕೊಂಡಿದ್ದು , ಈ ಹಿಂದಿನ ಎಲ್ಲಾ ಚಿತ್ರಗಳಿಂದ ಭಿನ್ನವಾಗಿ ಮಾಡಿದ್ದಾರೆ. ಛಾಯಾಗ್ರಹಣದ ಕೈಚಳಕ ಉತ್ತಮವಾಗಿದ್ದು, ಹಿನ್ನೆಲೆ ಸಂಗೀತ ಗಮನ ಸೆಳೆಯುತ್ತದೆ. ಇನ್ನು ಗೆಳೆಯರು ನಿರ್ಮಾಣದ ಈ ಚಿತ್ರದಲ್ಲಿ ನಾಯಕನಾಗಿ ಅಭಿನಯಿಸಿರುವ ಸಾಹಿಲ್ ಖಾನ್ ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಲು ಶ್ರಮ ಪಟ್ಟಿದ್ದಾರೆ. ನಾಯಕಿಯಾಗಿ ರಿಯಾ ಭಾಸ್ಕರ್ ಮುದ್ದು ಮುದ್ದಾಗಿ ಕಾಣುತ್ತಾ ತನ್ನ ಪಾತ್ರಕ್ಕೆ ಜೀವ ತುಂಬಿದ್ದಾರೆ.
ಇನ್ನು ಪೊಲೀಸ್ ಅಧಿಕಾರಿಯಾಗಿ ಯುವ ನಟ ಚೇತನ್ ಕೃಷ್ಣನ್ ಗಮನ ಸೆಳೆಯುವ ರೀತಿಯಲ್ಲಿ ನಟಿಸಿದ್ದು, ಬಹುತೇಕ ಹೊಸಬರೇ ಅಭಿನಯಿಸಿರುವ ಈ ಚಿತ್ರದಲ್ಲಿ ಹಿರಿಯ ಕಲಾವಿದರಾದ ಗಣೇಶ್ ರಾವ್ ಕೆಸರ್ಕರ್, ಮನಮೋಹನ್ ರಾಯ್ , ಸಾಮ್ರಾಟ್ ಸುರೇಶ್, ರಿವ್ಯೂ ನವಾಜ್ ಸೇರಿದಂತೆ ಹಲವರ ಸಾತ್ ನೀಡಿದ್ದಾರೆ.
ಇದೊಂದು ಸಂದೇಶ ನೀಡುವಂತಹ ಚಿತ್ರವಾಗಿದ್ದು , ಮಹಿಳಾ ಸಬಲೀಕರಣ , ಭದ್ರತೆ ಮತ್ತು ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆಯ ಮೂಲಕ ಹೆಣ್ಣು ಮಕ್ಕಳು ನೆಮ್ಮದಿಯಾಗಿ ಸಮಾಜದಲ್ಲಿ ಬದುಕುವಂತಾಗಬೇಕೆಂಬ ಉದ್ದೇಶವಿರುವ ಈ ಚಿತ್ರವನ್ನು ಪ್ರತಿಯೊಬ್ಬರು ನೋಡುವಂತಿದೆ.