“ಕಾಲಾಪತ್ಥರ್” ಚಿತ್ರದ ಹಾಡು ರೀಲಿಸ್ ಮಾಡಿದ ಅಶ್ವಿನಿ ಪುನೀತ್ ರಾಜಕುಮಾರ್
ಭುವನ್ ಮೂವೀಸ್ ಲಾಂಛನದಲ್ಲಿ ಭುವನ್ ಸುರೇಶ್ ಹಾಗೂ ನಾಗರಾಜ್ ಬಿಲ್ಲಿನಕೋಟೆ ನಿರ್ಮಿಸಿರುವ, ವಿಕ್ಕಿ ವರುಣ್ ನಿರ್ದೇಶಿಸಿ ನಾಯಕನಾಗೂ ನಟಿಸಿರುವ “ಕಾಲಾಪತ್ಥರ್” ಚಿತ್ರದ “ಗೋರುಕನ ಗಾನ” ಎಂಬ ಹಾಡನ್ನು ಅಶ್ವಿನಿ ಪುನೀತ್ ರಾಜಕುಮಾರ್ ಹಾಗೂ ನಟಿ ತಾರಾ ಅನುರಾಧ ಬಿಡುಗಡೆ ಮಾಡಿ ಶುಭ ಕೋರಿದರು.
ಅನೂಪ್ ಸೀಳಿನ್ ಸಂಗೀತ ನೀಡಿರುವ ಈ ಹಾಡನ್ನು ಖ್ಯಾತ ಚಿತ್ರ ಸಾಹಿತಿ ಡಾ||ವಿ.ನಾಗೇಂದ್ರಪ್ರಸಾದ್ ಬರೆದಿದ್ದಾರೆ. “ಸರಿಗಮಪ” ಖ್ಯಾತಿಯ ಶಿವಾನಿ ಹಾಡಿದ್ದಾರೆ. ಹಾಡು ಬಿಡುಗಡೆ ಸಾಮಾರಂಭದಲ್ಲಿ ಚಿತ್ರತಂಡದ ಸದಸ್ಯರು ಹೆಚ್ಚಿನ ಮಾಹಿತಿ ನೀಡಿದರು.
“ಗೋರುಕನ” ಹಾಡು ನಮ್ಮ ಚಿತ್ರದ ಮೊದಲ ಹಾಡು ಎಂದು ಮಾತು ಅರಂಭಿಸಿದ ನಾಯಕ ಹಾಗೂ ನಿರ್ದೇಶಕ ವಿಕ್ಕಿ ವರುಣ್, ಈ ಹಾಡಿನ ಮೂಲಕ ಮಂಗಳಮುಖಿಯರು ನಮ್ಮ ಚಿತ್ರದ ಕಥೆ ಹೇಳುತ್ತಾರೆ. ಇದು ಚಿತ್ರದ ಕಥೆ ಹೇಳುವ ಗೀತೆಯಾಗಿರುವು ದರಿಂದ ಇಂದು ಲಿರಿಕಲ್ ಸಾಂಗ್ ಮಾತ್ರ ರಿಲೀಸ್ ಮಾಡಿದ್ದೇವೆ.
ವಿ.ನಾಗೇಂದ್ರ ಪ್ರಸಾದ್ ಅವರು ಬರೆದಿರುವ ಹಾಡಿಗೆ ಅನೂಪ್ ಸೀಳಿನ್ ಸಂಗೀತ ನೀಡಿದ್ದಾರೆ. ಶಿವಾನಿ ಈ ಹಾಡನ್ನು ಹಾಡುವ ಮೂಲಕ ಕನ್ನಡ ಚಿತ್ರರಂಗಕ್ಕೆ ಗಾಯಕಿಯಾಗಿ ಪಾದಾರ್ಪಣೆ ಮಾಡಿದ್ದಾರೆ. ಹಾಡು ಬಿಡುಗಡೆ ಮಾಡಿಕೊಟ್ಟ ಅಶ್ವಿನಿ ಪುನೀತ್ ರಾಜಕುಮಾರ್ ಹಾಗೂ ತಾರಾ ಅವರಿಗೆ ಧನ್ಯವಾದಗಳು ಎಂದರು.
2.0 ಹೊಸ ವರ್ಷನ್ ನಲ್ಲಿ ಬಿಡುಗಡೆಯಾಗಿರುವ ಮೊದಲ ಹಾಡು ಇದು. ನಾಗೇಂದ್ರ ಪ್ರಸಾದ್ ಅದ್ಭುತವಾಗಿ ಗೀತರಚನೆ ಮಾಡಿದ್ದಾರೆ. ಹದಿನಾರು ವರ್ಷದ ಶಿವಾನಿ ಅವರ ಗಾಯನ ಈ ಹಾಡಿನ ಅಂದವನ್ನು ಮತ್ತಷ್ಟು ಹೆಚ್ಚಿಸಿದೆ ಎಂದರು ಸಂಗೀತ ನಿರ್ದೇಶಕ ಅನೂಪ್ ಸೀಳಿನ್. ದೇಸಿ ಶೈಲಿಯಲ್ಲಿ ಸಂಗೀತ ಸಂಯೋಜಿಸುವುದರಲ್ಲಿ ಅನೂಪ್ ಸೀಳಿನ್ ಸಹ ಪ್ರಮುಖರು.
“ಗೋರುಕನ” ಎಂದರೆ “ಸುವ್ವಿ” ಎಂಬ ಅರ್ಥ ಬರುತ್ತದೆ. ಹೆಚ್ಚಾಗಿ ಸೋಲಿಗರು ಈ ಪದವನ್ನು ಬಳಸುತ್ತಾರೆ ಎಂದು ಗೀತರಚನೆಕಾರ ಡಾ||ವಿ.ನಾಗೇಂದ್ರಪ್ರಸಾದ್ ಮಾಹಿತಿ ನೀಡಿದರು. ತಾವು ಗಂಗಾ ಎಂಬ ಪಾತ್ರ ನಿರ್ವಹಿಸಿರುವುದಾಗಿ ನಾಯಕಿ ಧನ್ಯ ರಾಮಕುಮಾರ್ ತಿಳಿಸಿದರು.
ನಿರ್ದೇಶಕರಾದ ಸಿಂಪಲ್ ಸುನಿ, ಮಹೇಶ್ ಕುಮಾರ್(ಮದಗಜ), ಜಿ.ಟಿ.ಮಾಲ್ ನ ಮಾಲೀಕರಾದ ಆನಂದ್, ಉದ್ಯಮಿ ಜಗದೀಶ್ ಚೌಧರಿ ಮುಂತಾದವರು ಹಾಡು ಬಿಡುಗಡೆ ಸಮಾರಂಭಕ್ಕೆ ಆಗಮಿಸಿ ಚಿತ್ರತಂಡಕ್ಕೆ ಶುಭ ಕೋರಿದರು. ನಿರ್ಮಾಪಕರಾದ ಭುವನ್ ಸುರೇಶ್ ಹಾಗೂ ನಾಗರಾಜ್ ಬಿಲ್ಲನಕೋಟೆ, ಆಗಮಿಸಿದ ಗಣ್ಯರಿಗೆ ಹಾಗೂ ಚಿತ್ರತಂಡಕ್ಕೆ ಧನ್ಯವಾದ ತಿಳಿಸಿದರು.