ರೈತರ ಕಥಾನಕದ “ಕಬಂಧ”ಗೆ ಹಾರರ್ ಟಚ್
ಇತ್ತೀಚೆಗೆ ಬರುತ್ತಿರುವ ಒಂದಷ್ಟು ಚಿತ್ರಗಳು ಪ್ರೇಕ್ಷಕರ ಗಮನ ಸೆಳೆಯುವುದರಲ್ಲಿ ಯಶಸ್ವಿಯಾಗುತ್ತಿದ್ದಾರೆ. ಆ ನಿಟ್ಟಿನಲ್ಲಿ ರೈತರ ಸಮಸ್ಯೆಗಳನ್ನು ಹಿನ್ನೆಲೆಯಾಗಿಟ್ಟುಕೊಂಡು ಹಾರರ್ ಕಾನ್ಸೆಪ್ಟ್ ನಲ್ಲಿ ಹೆಣೆಯಲಾಗಿರುವ ಚಿತ್ರ ಕಬಂಧ. ಇದೀಗ ಈ ಚಿತ್ರ ಬಿಡುಗಡೆಯ ಹಂತ ತಲುಪಿದೆ. ಈ ಚಿತ್ರಕ್ಕೆ ಸತ್ಯನಾಥ್ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ.
ಇತ್ತೀಚಿಗಷ್ಟೇ ಈ ಚಿತ್ರದ ಲಿರಿಕಲ್ ಹಾಡಿನ ಬಿಡುಗಡೆ ಕಾರ್ಯಕ್ರಮ ನಡೆಯಿತು, ಈ ಚಿತ್ರದಲ್ಲಿ ಎರಡು ಕಾಲಘಟ್ಟದಲ್ಲಿ ನಡೆಯುವ ಸೈಕಲಾಜಿಕಲ್ ಹಾರರ್ ಕಥೆಯನ್ನು ಸತ್ಯನಾಥ್ ಅವರು ಹೆಣೆದಿದ್ದಾರೆ, ಕುಂಜರ ಫಿಲಂಸ್ ಬ್ಯಾನರ್‌ಅಡಿ ಪ್ರಸಾದ್ ವಸಿಷ್ಠ ಹಾಗೂ ಒಂದಷ್ಟು ಗೆಳೆಯರು ಸೇರಿ ಈ ಚಿತ್ರವನ್ನು ನಿರ್ಮಿಸಿದ್ದಾರೆ.
ನಿರ್ದೇಶಕ ಸತ್ಯನಾಥ್ ಮಾತನಾಡಿ, ಇದು ಹಾರರ್ ಸಿನಿಮಾ, ಹಾಡುಗಳಿಗೆ ಜಾಗ ಇರಲಿಲ್ಲ, ನಂತರ ಕೆ.ಕಲ್ಯಾಣ್ ಅವರ ಕೈಲಿ ಸಾಹಿತ್ಯ ರಚಿಸಿದ್ದು, ವಾಸುಕಿ ವೈಭವ್ ಹಾಡಿದ್ದಾರೆ. ವ್ಯವಸಾಯದ ಸಮಸ್ಯೆ, ನಮಗೆ ಗೊತ್ತಿಲ್ಲದೆ ಅದು ನಮ್ಮನ್ನು ಕಾಡುತ್ತಿದೆ. ಅದು ಮನೆಯೊಳಗೂ ಬಂದಿದೆ. ಹಾರರ್‌ಗಿಂತ ಭಯಾನಕವಾದ ಸತ್ಯ ಇದಾಗಿದೆ. ಚಿತ್ರವೀಗ ಸೆನ್ಸಾರ್ ಹಂತದಲ್ಲಿದೆ.
ಎರಡು ಕಾಲಘಟ್ಟದಲ್ಲಿ ನಡೆಯುವ ಸೈಕಲಾಜಿಕಲ್ ಹಾರರ್ ಕಥೆಯಿದು. ಮೊದಲು ಕಿಶೋರ್‌ರನ್ನು ಭೇಟಿಮಾಡಿ ಅವರಿಗೆ ಕಥೆ ಹೇಳಿದೆವು. ಅವರು ಒಪ್ಪಿದರು, ಚಿತ್ರದಲ್ಲಿ ಅವರದು ಹನುಮ ಎಂಬ ರೈತನ ಪಾತ್ರ. ತುಮಕೂರು ಮತ್ತು ದೇವರಾಯನದುರ್ಗದ ಸುತ್ತಮುತ್ತ 55 ದಿನಗಳವರೆಗೆ ಚಿತ್ರೀಕರಣ ನಡೆಸಿದೇವೆ ಎಂದರು.
ನಂತರ ನಟ ಕಿಶೋರ್ ಮಾತನಾಡುತ್ತ ನಿಜವಾದ ಹಾರರ್ ನೋಡಿದರೆ ಏನೂ ಅನಿಸಲ್ಲ, ದೆವ್ವಗಳನ್ನು ಬಳಸಿಕೊಂಡು ಒಂದು ಕಥೆಯನ್ನು ಹೇಳುವ ಪ್ರಯತ್ನ. ಮನುಷ್ಯನ ಮೂಲಭೂತ ಅವಶ್ಯಕತೆ ಆಹಾರ. ಅದರ ಬಗ್ಗೆಯೂ ನಾವು ಯೋಚಿಸ್ತಿಲ್ಲ, ಪೆಸ್ಟಿಸೈಡ್ ಎಂಬ ವಿಷ ನಿಧನವಾಗಿ ನಮ್ಮ ದೇಹವನ್ನು ಆವರಿಸಿಕೊಳ್ಳುತ್ತಿದೆ ಎಂದು ಹೇಳಿದರು.
ಇನ್ನು ಚಿತ್ರದ ನಿರ್ಮಾಪಕ ಹಾಗೂ ನಾಯಕ ಪ್ರಸಾದ್ ವಸಿಷ್ಠ ಮಾತನಾಡುತ್ತ ಕುಂಜರ ಫಿಲಂಸ್ ನನ್ನ ಒಂದಷ್ಟು ಗೆಳೆಯರೇ ಸೇರಿ ಹುಟ್ಟು ಹಾಕಿರುವ ಸಂಸ್ಥೆ, ಇದು ನಮ್ಮ ಕನ್ನಡದ ಮಣ್ಣಿನ ಸಿನಿಮಾ, ಎಂಟರ್‌ಟೈನ್ ಮೆಂಟ್ ಜೊತೆಗೆ ಒಂದು ಮೆಸೇಜ್ ಕೂಡ ನಮ್ಮ ಸಿನಿಮಾದಲ್ಲಿದೆ. ಚಿತ್ರದಲ್ಲಿ ನಾನು ನಚಿಕೇತ ಎಂಬ ಜಮೀನ್ದಾರು ಕುಟುಂಬದಿಂದ ಬಂದ ಮುಗ್ಧ ಯುವಕನಾಗಿ ಕಾಣಿಸಿಕೊಂಡಿದೇನೆ. ಆ ಯುವಕನ ಜರ್ನಿಯ ಸುತ್ತಮುತ್ತ ನಡೆಯುವ ಘಟನೆಗಳನ್ನು ಈ ಚಿತ್ರದಲ್ಲಿ ಹೇಳಲಾಗಿದೆ ಎಂದು ಹೇಳಿದರು.
ಚಿತ್ರದ ನಾಯಕಿ ಪ್ರಿಯಾಂಕ ಮಾತನಾಡುತ್ತ ತುಂಬಾ ಬೋಲ್ಡ್ ಕ್ಯಾರೆಕ್ಟರ್ ಇರುವ ಮಹಾಲಕ್ಷ್ಮಿ ಎಂಬ ಯುವತಿಯಾಗಿ ನಾನು ನಟಿಸಿದ್ದೇನೆ. ಜೀವನದಲ್ಲಿ ಏನೇ ಬಂದರೂ ಎದುರಿಸಿ ನಿಲ್ಲುವಂಥ ಪಾತ್ರವದು ಎಂದು ಹೇಳಿದರು. ಆನಂತರ ಚಿತ್ರದ ಮತ್ತೊಬ್ಬ ನಾಯಕಿ ಛಾಯಾಶ್ರೀ ಮಾತನಾಡಿ ನಾನು ಹನುಮನ ಪತ್ನಿ ರುಕ್ಕು ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಮಧ್ಯಮ ವರ್ಗದ ಕುಟುಂಬದ ಮಹಿಳೆಯ ಪಾತ್ರ ಎಂದು ಹೇಳಿದರು.
ಚಿತ್ರದ ಛಾಯಾಗ್ರಾಹಕರಾಗಿ ವಿಷ್ಣುಪ್ರಸಾದ್, ಸಂಗೀತ ನಿರ್ದೇಶಕರಾಗಿ ರಘೋತ್ತಮ ಎನ್.ಎಸ್. ಮತ್ತು ಶ್ರೇಯಸ್ ಬಿ.ರಾವ್ ಕೆಲಸ ಮಾಡಿದ್ದಾರೆ. ಚಿತ್ರದ ಉಳಿದ ಪಾತ್ರಗಳಲ್ಲಿ ಅವಿನಾಶ್, ಯೋಗರಾಜ್ ಭಟ್ರು ,ಶ್ರುತಿ ನಾಯಕ್ ಮುಂತಾದವರು ಅಭಿನಯಿಸಿದ್ದಾರೆ. ಎಲ್ಲಾ ಅಂದುಕೊಂಡಂತೆ ನಡೆಯುತ್ತಿದ್ದು , ಮುಂದಿನ ತಿಂಗಳು ಚಿತ್ರವನ್ನು ತೆರೆಗೆ ತರುವ ಯೋಜನೆಯನ್ನು ತಂಡ ಹಾಕಿಕೊಂಡಿದೆ.