ಸಸ್ಪೆನ್ಸ್ , ಥ್ರಿಲ್ಲರ್ ನಲ್ಲಿ “ಕಾದಾಡಿ” (ಚಿತ್ರವಿಮರ್ಶೆ-ರೇಟಿಂಗ್ : 3.5 /5)
ರೇಟಿಂಗ್ : 3.5 /5
ಚಿತ್ರ : ಕಾದಾಡಿ
ನಿರ್ದೇಶಕ : ಸತೀಶ್ ಮಾಲೆಂಪಾಟಿ
ನಿರ್ಮಾಣ : ಅರುಣಮ್ ಫಿಲಂಸ್
ಸಂಗೀತ : ಭೀಮ್ಸ್
ಛಾಯಾಗ್ರಹಣ: ಸಿ.ವಿಜಯಶ್ರೀ
ತಾರಾಗಣ : ಆದಿತ್ಯ ಶಶಿಕುಮಾರ್ , ಲಾವಣ್ಯ ಸಾಹುಕಾರ , ಚಾಂದಿನಿ ತಮಿಳರಸನ್, ಪೋಸಾನಿ, ರವಿಕಾಳೆ, ಮಾರಿಮುತ್ತು, ಕ್ರೇನ್ ಮನೋಹರ್, ಬ್ಲಾಕ್ ಪಾಂಡಿ , ಮೂರ್ , ಶ್ರವಣ್ ಹಾಗೂ ಮುಂತಾದವರು….
ಜೀವನವೇ ಒಂದು ಹೋರಾಟ. ಅದರಲ್ಲಿ ಎದುರಾಗುವ ಒಂದಷ್ಟು ಘಟನೆಗಳು ಬದುಕಿನಲ್ಲಿ ತಿರುವುಗಳನ್ನ ನೀಡುತ್ತಾ ಹೋಗುತ್ತದೆ. ಅಂತಹದ್ದೇ ಕಥಾವಸ್ತುವಿನ ಮೂಲಕ ಯೂಥ್ ಸಬ್ಜೆಕ್ಟ್ ನಲ್ಲಿ ಕಾಲೇಜ್ , ಲವ್ , ಲೈಫ್, ಸ್ಪೋರ್ಟ್ಸ್, ಮರ್ಡರ್, ಸಸ್ಪೆನ್ಸ್ ಮೂಲಕ ಟೇಕ್ವಾಂಡೋ ಕ್ರೀಡೆಯಲ್ಲಿ ನಡಿಯೋ ಅವಾಂತರದ ಸುತ್ತ ಕುತೂಹಲಕಾರಿಯಾಗಿ ಅಂಶವನ್ನು ಈ ವಾರ ತೆರೆಯ ಮೇಲೆ ತಂದಿರುವಂತಹ ಚಿತ್ರ “ಕಾದಾಡಿ”.
ಭೀಕರವಾಗಿ ಹತ್ಯೆ ಮಾಡಿ ಪೆಟ್ರೋಲ್ ಹಾಗೂ ಸೀಮೆಎಣ್ಣೆ ಸುರಿದು ಹುಡುಗಿ ಒಬ್ಬಳನ್ನ ಸುಟ್ಟಿರುವ ಘಟನೆ ವಿಚಾರವಾಗಿ ಹಂತಕರನ್ನ ಹುಡುಕುವ ಹಾದಿಯಲ್ಲಿ ಇನ್ವೆಸ್ಟಿಗೇಷನ್ ಆರಂಭಿಸುವ ಪೊಲೀಸ್ ಇನ್ಸ್ಪೆಕ್ಟರ್ (ರವಿ ಕಾಳೆ) ಹಾಗೂ ತಂಡ. ಇನ್ನು ಕಥಾನಾಯಕ ಗಣೇಶ (ಆದಿತ್ಯ ಶಶಿಕುಮಾರ್) ಕಾಲೇಜ್ ವಿದ್ಯಾರ್ಥಿಯಾಗಿದ್ದು , ಬೈಕ್ ರೇಸ್ ಚಟದಲಿ ದುಡ್ಡು ಮಾಡುವ ಆಸೆ. ಇದರೊಟ್ಟಿಗೆ ಮಾರ್ಕೆಟ್ ನಲ್ಲಿ ಹೂವಿನ ವ್ಯಾಪಾರದ ಕೆಲಸ. ಆದರೆ ಹೂವಿನಂತ ಹುಡುಗಿಯರಿಗೆ ಇವನ ಮೇಲೆ ಕಣ್ಣು.
ಜೀವನದಲ್ಲಿ ಸಾಧನೆ ಮುಖ್ಯ . ಗುರಿ , ಛಲ ಹೊಂದಿರುವ ನಾಯಕಿ ಜನನ (ಲಾವಣ್ಯ ಸಾಹುಕಾರ) ಟೇಕ್ವಾಂಡೋ ಆಟಗಾತಿ. ಸ್ಟೇಟ್ , ನ್ಯಾಷನಲ್ , ಇಂಟರ್ನ್ಯಾಷನಲ್ ಲೆವೆಲ್ ಗೆ ಹೋಗಿ ಪ್ರಶಸ್ತಿ ಪಡೆಯುವ ಗುರಿ ಇವ್ಳದು. ಗಣ ಹಾಗೂ ಜನನ ಇಬ್ಬರ ಒಡನಾಟ , ಮಾತುಕತೆ, ಪ್ರೀತಿ , ಪ್ರಣಯ ಮದುವೆಯ ಆಲೋಚನೆ ಕಡೆಗೂ ಸಾಗುತ್ತದೆ. ಮತ್ತೊಂದೆಡೆ ಈ ಸ್ಪೋರ್ಟ್ಸ್ ನ ಅಕಾಡೆಮಿ ಆರ್ಗನೈಸರ್ ಮಂತ್ರಿಯ ಸುಪುತ್ರನ ಆಸೆ ಜನನ ಮೇಲಿರುತ್ತದೆ. ಕೋಚ್ ಮೂಲಕ ಡ್ರಗ್ಸ್ ಪಡೆದು ಆಟ ಗೆಲ್ಲುವಂತೆ ಸೂಚನೆ ನೀಡುವ ಅಕಾಡೆಮಿ ರೂವಾರಿ.
ಇದರ ನಡುವೆ ಗಣ ಹಾಗೂ ಜನನ ನಡುವೆ ಬಿರುಕು. ಕ್ರೀಡೆ ಕಡೆ ಹೆಚ್ಚು ಗಮನ ಹರಿಸುತ್ತಾ ಲೀಗ್ ನಲ್ಲಿ ಗೆಲುವು ಸಾಧಿಸುವ ಜನನ. ಈ ಕ್ರೀಡೆಗೆ ಸ್ಪಾನ್ಸರ್ ಆಗಿ ಬರುವ ಪ್ರತಿಜ್ಞ (ಚಾಂದಿನಿ ತಮಿಳರಸನ್ ). ಮುಂದೆ ಎಲ್ಲವೂ ಸರಾಗ ಎನ್ನುವಷ್ಟರಲ್ಲಿ ಒಂದು ಹುಡುಗಿಯ ಭೀಕರ ಹತ್ಯೆ ನಡೆದಿರುತ್ತದೆ. ಈ ರೋಚಕ ತಿರುವು ಕ್ಲೈಮಾಕ್ಸ್ ನಲ್ಲಿ ಬೇರೆ ಉತ್ತರವೇ ನೀಡುತ್ತದೆ.
ಕೊಲೆಯಾಗಿದ್ದು ಯಾರು…
ಪೊಲೀಸ್ ಇನ್ವೆಸ್ಟಿಗೇಷನ್ ಏನು…
ಕೊಲೆ ಮಾಡಿದ್ದು ಯಾಕೆ…
ಕ್ಲೈಮಾನ್ಸ್ ಉತ್ತರ ಏನು…
ಈ ಎಲ್ಲಾ ವಿಚಾರಕ್ಕಾಗಿ ನೀವು ಈ ಕಾದಾಡಿ ಚಿತ್ರ ನೋಡಬೇಕು.
ತಮ್ಮ ಪ್ರಥಮ ನಿರ್ದೇಶನದಲ್ಲಿ ಸತೀಶ್ ಮಾಲೆಂಪಾಟಿ ಆಯ್ಕೆ ಮಾಡಿಕೊಂಡಿರುವ ಕಥಾವಸ್ತು ವಿಭಿನ್ನವಾಗಿದೆ. ಮನುಷ್ಯನಲ್ಲಿರುವ ಆಸೆ , ದ್ವೇಷ , ಹಣದ ವ್ಯಾಮೋಹ , ಕ್ರೌರ್ಯದ ನಡುವೆ ಬದುಕು ನಡೆಸುವುದು ಎಷ್ಟು ಕಷ್ಟ. ಎರಡು ಮುಖಗಳ ವರ್ತನೆ, ನಂಬಿಕೆ ದ್ರೋಹ, ಕಳ್ಳ ಪೋಲಿಸ್ ಆಟದ ನಡುವೆ ಸಸ್ಪೆನ್ಸ್ , ಥ್ರಿಲ್ಲರ್ ದೃಶ್ಯಗಳನ್ನು ಉತ್ತಮವಾಗಿ ಕಟ್ಟಿಕೊಡುವ ಪ್ರಯತ್ನ ಮಾಡಿದ್ದಾರೆ.
ಚಿತ್ರಕಥೆಯಲ್ಲಿ ಇನ್ನಷ್ಟು ಬಿಗಿ ಮಾಡಬೇಕಿತ್ತು. ಕ್ಲೈಮ್ಯಾಕ್ಸ್ ಗೊಂದಲ ಮೂಡಿಸುತ್ತದೆ. ಇನ್ನು ಈ ಚಿತ್ರದ ಹಿನ್ನೆಲೆ ಸಂಗೀತ ಉತ್ತಮವಾಗಿದೆ. ಹಾಗೆಯೇ ಮಹಿಳಾ ಛಾಯಾಗ್ರಹಾಕಿಯ ಕೈ ಚಳಕ ಕೂಡ ಅಚ್ಚುಕಟ್ಟಾಗಿದೆ. ನಾಯಕನಿಗೆ ಆದಿತ್ಯ ಶಶಿಕುಮಾರ್ ಎರಡು ವಿಭಿನ್ನ ಶೇಡ್ ಗಳಲ್ಲಿ ಗಮನ ಸೆಳೆದಿದ್ದಾರೆ. ಆಕ್ಷನ್ ಹಾಗೂ ಡ್ಯಾನ್ಸ್ ನಲ್ಲಿ ಸೈ ಎನ್ನುವಂತೆ ಮಿಂಚಿದ್ದಾರೆ. ಸಿಕ್ಕ ಅವಕಾಶವನ್ನು ಸಮರ್ಥವಾಗಿ ನಿರ್ವಹಿಸಿದ್ದಾರೆ. ಇನ್ನು ನಾಯಕಿಯಾಗಿ ಲಾವಣ್ಯ ಸಾಹುಕಾರ ಭರ್ಜರಿ ಆಕ್ಷನ್ ಮೂಲಕ ಹೆಣ್ಣು ಮಗಳು ಅಂದರೆ ಹೀಗಿರಬೇಕು ಎನ್ನುವಂತೆ ಸ್ಪೋರ್ಟ್ಸ್ ಗರ್ಲ್ ಆಗಿ ಮಿಂಚಿ , ಪಾತ್ರಕ್ಕೂ ನ್ಯಾಯವನ್ನು ಒದಗಿಸಿದ್ದಾರೆ.
ಅದೇ ರೀತಿ ಮತ್ತೊಬ್ಬ ನಟಿ ಚಾಂದಿನಿ ಕೂಡ ಮುದ್ದಾಗಿ ಎಂಟ್ರಿ ಕೊಟ್ಟು ಪಾತ್ರಕ್ಕೆ ಜೀವ ತುಂಬಿದ್ದಾರೆ. ಇನ್ಸ್ಪೆಕ್ಟರ್ ಪಾತ್ರದಲ್ಲಿ ರವಿ ಕಾಳೆ , ಮಿನಿಸ್ಟರ್ ಮಗನಾಗಿ ಶ್ರವಣ್, ಸೇರಿದಂತೆ ಪೋಸಾನಿ, ಮಾರಿಮುತ್ತು, ಕ್ರೇನ್ ಮನೋಹರ್, ಬ್ಲಾಕ್ ಪಾಂಡಿ , ಮೂರ್ ಎಲ್ಲರೂ ಚಿತ್ರದ ಓಟಕ್ಕೆ ಸಾತ್ ನೀಡಿದ್ದಾರೆ. ಒಟ್ಟಾರೆ ಒಂದು ಸಸ್ಪೆನ್ಸ್ , ಥ್ರಿಲ್ಲರ್ , ಮರ್ಡರ್ ಮಿಸ್ಟ್ರಿ ಪ್ರೇಕ್ಷಕರಿಗೆ ಇಷ್ಟವಾಗುವ ಈ ಚಿತ್ರವನ್ನು ಎಲ್ಲರೂ ನೋಡಬಹುದು.