ಭ್ರಮೆ ಹಾಗೂ ವಾಸ್ತವಗಳ ತಲ್ಲಣ…ಕಾಡು ಮಳೆ (ಚಿತ್ರವಿಮರ್ಶೆ -ರೇಟಿಂಗ್ : 3.5/ 5)
ರೇಟಿಂಗ್ : 3.5/ 5
ಚಿತ್ರ : ಕಾಡು ಮಳೆ
ನಿರ್ದೇಶಕ : ಸಮರ್ಥ ಮಂಜುನಾಥ್
ನಿರ್ಮಾಪಕ : ಮಂಜುನಾಥ್
ಸಂಗೀತ : ಮಹಾರಾಜ್
ಛಾಯಾಗ್ರಹಣ : ರಾಜು
ತಾರಾಗಣ : ಸಂಗೀತ ರಾಜಾರಾಮ್, ಅರ್ಥ ಹರ್ಷನ್ , ಕಾರ್ತಿಕ್ ಭಟ್ , ಗಿಲ್ಲಿ ಮಂಜು ಹಾಗೂ ಮುಂತಾದವರು…
ಜಗತ್ತೇ ಒಂದು ವಿಸ್ಮಯ ಎನ್ನಬಹುದು , ಇಲ್ಲಿ ಯಾವಾಗ , ಹೇಗೆ , ಏನಿಲ್ಲ ಹೊಸ ರೂಪ ಪಡೆಯುತ್ತೆ ಅನ್ನೋದನ್ನ ಊಹಿಸಲು ಅಸಾಧ್ಯ. ಕೆಲವೊಂದು ಸ್ಥಳಗಳು ಇಂದಿಗೂ ನಿಗೂಢವಾಗಿದ್ದು, ಅಲ್ಲಿನ ಚಲನವಲನಗಳು ವಿಸ್ಮಯಕಾರಿಯಾಗಿರುವುದು ತಿಳಿದೇ ಇದೆ. ಅಂತದ್ದೇ ಒಂದು ದಟ್ಟ ಅರಣ್ಯ ಪ್ರದೇಶದ ಒಳಗೆ ಸಿಲುಕಿ ಕೊಂಡಾಗ ಆಗುವ ಸಂಚಲನ , ಕಾಣದ ಶಕ್ತಿಯ ವಿಸ್ಮಯದ ಸುಳಿಯಲ್ಲಿ ಎದುರಾಗುವ ರೋಚಕ ಕಥಾನಕ ಮೂಲಕ ಈ ವಾರ ಪ್ರೇಕ್ಷಕರ ಮುಂದೆ ಬಂದಿರುವಂತಹ ಚಿತ್ರ “ಕಾಡು ಮಳೆ”.
ಮೀರಾ ( ಸಂಗೀತ) ತನ್ನ ಪ್ರಾಣಕ್ಕಿಂತ ಹೆಚ್ಚು ಪ್ರೀತಿಸುವ ಹುಡುಗ ಸುಹಸ್ (ಕಾರ್ತಿಕ್ ಭಟ್). ಆದರೆ ತನ್ನ ಪ್ರೊಪೋಸನ್ನು ತಿರಸ್ಕರಿಸಿದಾಗ , ಭ್ರಮ ನಿರಸನಗೊಂಡ ಮೀರಾ, ತಾನಿನ್ನು ಬದುಕಿರಬಾರದೆಂದು ನಿರ್ಧರಿಸುತ್ತಾಳೆ. ಅದೇ ಯೋಚನೆಯಲ್ಲಿ ಆತ್ಮಹತ್ಯೆ ಮಾಡಿಕೊಳ್ಳಲೆಂದು ಕಾರಲ್ಲಿ ಹೊರಟ ಮೀರಾ, ನದಿಯ ಸೇತುವೆ ಮೇಲೆ ನಿಂತು ಅಲ್ಲಿಂದ ಕೆಳಗೆ ಹಾರಲು ಸಿದ್ದಳಾಗುತ್ತಾಳೆ, ಆ ನಂತರ ನಡೆಯುವುದೇ ಭ್ರಮೆ ಮತ್ತು ವಾಸ್ತವಗಳ ಪಯಣ. ತುಂಬಿ ಹರಿಯುತ್ತಿದ್ದ ನದಿಗೆ ಹಾರಿದ ಮೀರಾ, ಆ ನೀರಲ್ಲಿ ತೇಲಿಕೊಂಡು ಒಂದು ವಿಚಿತ್ರವಾದ ಜಾಗಕ್ಕೆ ಬಂದು ತಲುಪುತ್ತಾಳೆ.
ಮೀರಾಗೆ ಅಲ್ಲಿ ಮತ್ತೊಂದು ಪ್ರಪಂಚದ ಪರಿಚಯವಾಗುತ್ತದೆ, ಆ ಕಾಡಲ್ಲಿ ತನ್ನಂತೆಯೇ ಮತ್ತೊಬ್ಬಳು ಇರುವುದು ಕಂಡುಬರುತ್ತದೆ, ಹಾಗೆಯೇ ವಿಚಿತ್ರ ಶಬ್ದಗಳು , ಪ್ರಾಣಿಗಳು ಎದುರಾಗುತ್ತದೆ. ಭಯದಿಂದ ದಾರಿ ಕಾಣದೆ ಸಹಾಯಕ್ಕಾಗಿ ಆರ್ತನಾದ ಮಾಡುತ್ತ ಹುಚ್ಚಿಯಂತೆ ಅಲೆಯುತ್ತಿದ್ದ ಮೀರಾಳಿಗೆ ಅದೇ ಕಾಡಲ್ಲಿ ಮತ್ತೊಬ್ಬ ಪ್ಯಾರನೊರ್ಮಲಿಸ್ಟ್ ಸಂಶೋಧಕ ರಿಚರ್ಡ್ ಥೋಮಸ್( ಅರ್ಥ ಹರ್ಷನ್) ಎದುರಾಗುತ್ತಾನೆ. ಆದರೆ ಮೀರಾಗೆ ಇವನು ವಿಚಿತ್ರ ವರ್ತನೆ ವಿಸ್ಮಯಕಾರಿ ಮನುಷ್ಯ ಎಂಬ ಆತಂಕ ಮೂಡುತ್ತದೆ. ಆದರೆ ಕ್ರಮೇಣ ಈಕೆಯಂತೇ ದಾರಿತಪ್ಪಿ ಬಂದವನು ಎಂದು ತಿಳಿಯುತ್ತದೆ.
ಆ ಕಾಡುಮಳೆ ಏರಿಯಾಗೆ ಯಾರೇ ಬಂದರೂ ತನ್ನಂತೆ ಮತ್ತೊಬ್ಬ ವ್ಯಕ್ತಿ ಅಲ್ಲಿರುವಂತೆ ಅವರಿಗೆ ಭಾಸವಾಗುತ್ತದೆ, ಆ ವ್ಯಕ್ತಿಯನ್ನು ಕೊಲ್ಲದೇ ತಾನು ಅಲ್ಲಿಂದ ಹೊರಬರಲು ಸಾಧ್ಯವಿಲ್ಲ ಅಂತ ಸಲಹೆ ನೀಡುತ್ತಾನೆ. ಇದಕ್ಕೆ ಮಳೆಯೂ ಒಂದು ಶಕ್ತಿಯ ಹಾಗೆ ಬೌಂಡರಿಯಾಗಿ ಆವರಿಸಿಕೊಂಡಿರುವ ವಿಚಾರ ತಿಳಿದು ಆಶ್ಚರ್ಯಗೊಳ್ಳುತ್ತಾರೆ. ಒಂದಕ್ಕೊಂದು ಕೊಂಡಿಯಂತೆ ಬೆಸೆದುಕೊಂಡಿರುವ ಈ ಕಾಡಿನ ರಹಸ್ಯ ಸುಳಿಯಿಂದ ವೀರಾ ಬರುತ್ತಾಳಾ… ಇಲ್ಲವಾ… ಏನದು ವಿಸ್ಮಯ…
ಸಲಹೆ ಕೊಟ್ಟಿದ್ದು ಯಾರು…
ಇಂತಹ ಜಾಗವು ಇದೆಯಾ…
ಇದೆಲ್ಲದಕ್ಕೂ ಉತ್ತರ ನೀವು ಈ ಚಿತ್ರವನ್ನು ನೋಡಬೇಕು.
ಒಂದು ವಿಸ್ಮಯಕಾರಿ ಜಗತ್ತಿನ ಒಳಗೆ ಕರೆದೊಯ್ಯುವ ಆಲೋಚನೆ ಮಾಡಿರುವ ನಿರ್ದೇಶಕರ ಧೈರ್ಯವನ್ನು ಮೆಚ್ಚಲೇಬೇಕು. ಇಲ್ಲಿ ಭ್ರಮೆ ಹಾಗೂ ವಾಸ್ತವದ ನಡುವೆ ನಡೆಯುವ ಸಂಘರ್ಷದ ಕಥೆಯಿದ್ದು, ಆಕಸ್ಮಿಕವಾಗಿ ದಟ್ಟ ಕಾಡೊಳಗೆ ಸಿಕ್ಕಿ ಹಾಕಿಕೊಂಡು ಅಭವಿಸುವ ಮನದ ತಲ್ಲಣ , ಆತಂಕ , ದ್ವಂದ್ವ ವ್ಯಕ್ತಿತ್ವದ ನಿಲುವು, ಮುಂದೇನು ಎಂಬ ಪ್ರಶ್ನೆಯೊಂದಿಗೆ ಸಾಗುವ ಈ ಪಯಣವನ್ನ ಕುತೂಹಲಕಾರಿಯಾಗಿ ತೆಗೆದುಕೊಂಡು ಹೋಗಿದ್ದಾರೆ ನಿರ್ದೇಶಕರು.
ಈ ಚಿತ್ರದ ಮೂಲಕ ಬ್ರೈನ್ ಸ್ಕ್ಯಾಮಿಂಗ್ ಕೆಲಸವನ್ನು ಮಾಡಿದ್ದು , ಚಿತ್ರಕಥೆ ಗೊಂದಲದ ಗೂಡಾಗಿ ಕಾಣುವಂತಿದೆ. ತುಂಬಾ ಆಲೋಚನೆ ಮಾಡದ ಸಾಮಾನ್ಯನಿಗೂ ತಿಳಿಯುವಂತಿದ್ದಿರಬೇಕಿತ್ತು.
ಇನ್ನು ಈ ಚಿತ್ರದಲ್ಲಿ ಹಿನ್ನೆಲೆ ಸಂಗೀತ ಹೈಲೈಟ್ ಆಗಿದ್ದು , ಛಾಯಾಗ್ರಹಕರ ಕೈಚಳಕ ಅದ್ಭುತವಾಗಿ ಮೂಡಿ ಬಂದಿದೆ. ಸಂಕಲನದ ಕೆಲಸವೂ ಕೊಂಚ ಗೊಂದಲ ಸೃಷ್ಟಿಸುವಂತಿದೆ. ತಾಂತ್ರಿಕವಾಗಿ ತಂಡ ಬಹಳ ಶ್ರಮಪಟ್ಟಿರುವುದು ಕಾಣುತ್ತದೆ. ಇನ್ನು ಕಲಾವಿದರ ವಿಚಾರದಲ್ಲಿ ನಟಿ ಸಂಗೀತಾ ರಾಜಾರಾಮ್ ಮೀರಾ ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡಿದಂತೆ ಜೀವ ತುಂಬಿ ಅಭಿನಯಿಸಿದ್ದಾರೆ. ಕಾಡಿನೊಳಗೆ ಸಿಲುಕಿ ಕೊಂಡಾಗ ಏನೆಲ್ಲ ಅನುಭವಿಸುತ್ತಾಳೆ ಹಾಗೂ ತಾನೇ ಪ್ರಶ್ನೆಯಾಗಿ ಭ್ರಮೆ ಹಾಗೂ ವಾಸ್ತವಗಳ ಸುತ್ತ ಸಾಗುವ ಪರಿ ಪ್ರೇಕ್ಷಕರ ಗಮನವನ್ನು ಸೆಳೆಯುವಂತಿದೆ.
ವಿಶೇಷ ಪಾತ್ರದಲ್ಲಿ ಲೆಕ್ಚರರ್ ಆಗಿ ಕಾಣಿಸಿಕೊಳ್ಳುವ ನಟಿ ವಿಜಯಲಕ್ಷ್ಮಿ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಇನ್ನು ನಟ ಅರ್ಥ ಹರ್ಶನ್ ಒಬ್ಬ ಪ್ಯಾರನೊರ್ಮಲಿಸ್ಟ್ ಯಾಗಿ ಕುಡಿತದ ಗುಂಗಿನಲ್ಲೇ ತನ್ನ ಪಾತ್ರವನ್ನು ನಿಭಾಯಿಸಿ ಕೊಂಡು ಹೋಗಿದ್ದಾರೆ. ಉಳಿದಂತೆ ಬರುವ ಪಾತ್ರದಾರಿಗಳು ಚಿತ್ರದ ಓಟಕ್ಕೆ ಸಾತ್ ನೀಡಿದ್ದಾರೆ. ಇದೊಂದು ಕುತೂಹಲಕಾರಿ ಕಥನಕವಾಗಿದ್ದು , ಕಾಡು ಅಂದ್ರೆ ಭ್ರಮೆ, ಮಳೆ ಅಂದ್ರೆ ರಿಯಾಲಿಟಿ ಎಂಬ ವಿಚಾರದೊಂದಿಗೆ ಪ್ರೇಕ್ಷಕರ ಮುಂದೆ ಬಂದಿರುವ ಈ ಚಿತ್ರವನ್ನು ಒಮ್ಮೆ ನೋಡಬಹುದು.