ಕಾಗದ” ಪ್ರೇಮಕಥೆಯ ಟ್ರೇಲರ್ ಸದ್ದು… ಜುಲೈ 5 ರಂದು ತೆರೆಗೆ.
ಬೆಳ್ಳಿ ಪರದೆ ಮೇಲೆ ನವಿರಾದ ಮತ್ತೊಂದು ಹಿಂದೂ ಮುಸ್ಲಿಂ ಪ್ರೇಮಕಥಾನಕ “ಕಾಗದ” ಚಿತ್ರ ಅಬ್ಬರಿಸಲು ಸಜ್ಜಾಗಿದೆ. ತಂದೆ ಮಗನಿಗಾಗಿ ಸಿದ್ಧಪಡಿಸಿದ ಕಥೆ ತೆರೆಯ ಮೇಲೆ ಬರುತ್ತಿದೆ. ಹೌದು ಈ ಹಿಂದೆ ನಟ ವಿನೋದ್ ಪ್ರಭಾಕರ್ ಅಭಿನಯದ “ರಗಡ್” ಸಿನಿಮಾ ನಿರ್ಮಾಪಕರಾದ ಅರುಣ್ ಕುಮಾರ್ ನಿರ್ಮಾಣದ ಎರಡನೇ ಚಿತ್ರ ಇದಾಗಿದ್ದು , ಯುವ ನಿರ್ದೇಶಕ ರಂಜಿತ್ ಸಾರಥ್ಯದಲ್ಲಿ ಯುವ ಪ್ರತಿಭೆಗಳಾದ ಆದಿತ್ಯ ಹಾಗೂ ಅಂಕಿತ ಜಯರಾಂ ನಾಯಕ , ನಾಯಕಿಯಾಗಿ ನಟಿಸಿರುವ ‘ಕಾಗದ’ ಚಿತ್ರದ ಟ್ರೇಲರ್ ಅನ್ನ ಬಿಜೆಪಿ ಮುಖಂಡರಾದ ರಾಘವೇಂದ್ರ ಶೆಟ್ಟಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು. ಇದೇ ಸಂದರ್ಭದಲ್ಲಿ ಚಿತ್ರ ತಂಡದವರ ಸ್ನೇಹಿತರು, ಆತ್ಮೀಯರು ಆಗಮಿಸಿ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿದ್ದರು.
ಇನ್ನು ಪತ್ರಿಕಾಗೋಷ್ಠಿಯಲ್ಲಿ ಇಡೀ ಚಿತ್ರತಂಡ ಭಾಗವಹಿಸಿದ್ದು , ಚಿತ್ರದ ಕುರಿತು ನಿರ್ದೇಶಕ ರಂಜಿತ್ ಮಾತನಾಡುತ್ತಾ ನಾನು ಈ ಹಿಂದೆ ಆಪಲ್ ಕೇಕ್ ಎಂಬ ಚಿತ್ರವನ್ನು ನಿರ್ದೇಶನ ಮಾಡಿದ್ದೆ. ಇದು ನನ್ನ ಎರಡನೇ ಚಿತ್ರ. ನಿರ್ಮಾಪಕರು ಒಂದು ಎಳೆಯನ್ನು ನೀಡಿದರು , ಅದನ್ನ ನಾನು ಸ್ಟೋರಿ ಇಂಪ್ರೊವೈಸ್ ಮಾಡಿ ಒಂದು ಅಚ್ಚುಕಟ್ಟಾದಂತ ಕಥೆಯನ್ನು ಸಿದ್ಧಪಡಿಸಿದೆ. ಇದು 2005ರಲ್ಲಿ ನಡೆಯುವಂತ ಕಾಲಘಟ್ಟದ ಕಥೆಯನ್ನು ಒಳಗೊಂಡಿದೆ. ಯುವಜನತೆಯ ಕೈಯಲ್ಲಿ ಇನ್ನೂ ಮೊಬೈಲ್ ಬಂದಿರದ “ಕಾಗದ” ದಲ್ಲೇ ಪ್ರೀತಿ ವಿನಿಮಯವಾಗುವ ಮುದ್ದಾದ ಪ್ರೇಮ ಸಮಾಗಮವಿದೆ. ಸದಾ ಪರಸ್ಪರ ದ್ವೇಷಿಸುವ ಎರಡು ಹಳ್ಳಿಗಳ ನಡುವೆ ಅರಳಿದ ಪ್ರೇಮಕಥೆ ಕೂಡ ಇದೆ. ಇದರಲ್ಲಿ ಸ್ನೇಹ , ಪ್ರೀತಿ , ದ್ವೇಷ , ಸೌಹಾರ್ದತೆ ಸೇರಿದಂತೆ ಬಹಳಷ್ಟು ವಿಚಾರಗಳನ್ನು ಹೇಳಿದ್ದೇವೆ. ಒಂದು ಸುಂದರ ಪರಿಸರದ ನಡುವೆ ಬೆಸೆದಿರುವ ಈ ಕಾಗದ ಚಿತ್ರದ ಬಗ್ಗೆ ಬಹಳಷ್ಟು ನಿರೀಕ್ಷೇಯನ್ನ ಇಟ್ಟುಕೊಂಡಿದ್ದೇವೆ. ಈಗಾಗಲೇ ಬಿಡುಗಡೆ ಗೊಂಡಿರುವ ಟ್ರೈಲರ್ ಗೆ ಉತ್ತಮ ಪ್ರತಿಕ್ರಿಯೆ ಬರುತ್ತಿದೆ. ಸಂಚಲವನ್ನು ಮೂಡಿಸಿದೆ. ನಿರ್ಮಾಪಕರು , ಕಲಾವಿದರು , ತಂತ್ರಜ್ಞರ ಸಹಕಾರದಿಂದ ಒಂದು ಉತ್ತಮ ಚಿತ್ರ ಮಾಡಿದ್ದೇನೆ. ಚಿತ್ರ ಜುಲೈ 5 ರಂದು ಬಿಡುಗಡೆಯಾಗುತ್ತಿದೆ ಎಲ್ಲರೂ ಬಂದು ಚಿತ್ರಮಂದಿರದಲ್ಲಿ ಈ ಚಿತ್ರವನ್ನು ನೋಡಿ ಎಂದು ಕೇಳಿಕೊಂಡರು.
ಈ ಚಿತ್ರದ ನಿರ್ಮಾಪಕ ಅರುಣ್ ಕುಮಾರ್ ಮಾತನಾಡುತ್ತಾ ನಾನು ಹಿಂದೆ ರಗಡ್ ಚಿತ್ರವನ್ನ ನಿರ್ಮಿಸಿದ್ದೆ. ಚಿತ್ರ ಯಶಸ್ವಿ ನೂರು ದಿನವನ್ನು ಕೂಡ ಪೂರೈಸಿತ್ತು , ಹಾಗೆಯೇ ಮೊದಲ ಸಿನಿಮಾದಲ್ಲೇ ಬಹಳಷ್ಟು ಕಲ್ತಿದ್ದೇನೆ. ಬಹಳಷ್ಟು ಕಳ್ಸಿದ್ದೇನೆ. ಒಬ್ಬ ನಿರ್ಮಾಪಕನ ಜವಾಬ್ದಾರಿ ಜೊತೆಗೆ ಚಿತ್ರ ನಿರ್ಮಾಣದ ಎಲ್ಲಾ ಹಂತದ ಬಗ್ಗೆ ಬಹಳಷ್ಟು ತಿಳಿದುಕೊಂಡು ಈ ಚಿತ್ರವನ್ನು ಮಾಡಿದ್ದೇನೆ. ನನಗೆ ಮೊದಲಿನಿಂದಲೂ ಹಿಂದು ಹಾಗೂ ಮುಸ್ಲಿಂ ಲವ್ ಸ್ಟೋರಿ ಸಿನಿಮಾ ಮಾಡುವ ಆಸೆಯಿತ್ತು. ಬಹಳಷ್ಟು ನಿರ್ದೇಶಕರಿಗೆ ನನ್ನ ಕಥೆಯ ಒಂದು ಎಳೆ ತಿಳಿಸಿದೆ. ಆದರೆ ನನಗೆ ಮನಮುಟ್ಟುವ ಹಾಗೆ ಯಾರು ಕಥೆ ಹೇಳುತ್ತಿರಲಿಲ್ಲ. ನನ್ನನ್ನು ಒಪ್ಪಿಸುವಲ್ಲಿ ರಂಜಿತ್ ಯಶಸ್ವಿಯಾದರು. ನಾವು ಈ ಚಿತ್ರದಲ್ಲಿ ಯಾವುದೇ ಧರ್ಮದ ಭಾವನೆಗಳಿಗ ಧಕ್ಕೆ ತರುವ ಸನ್ನಿವೇಶಗಳನ್ನು ತೋರಿಸಿಲ್ಲ. ಎಲ್ಲಕ್ಕಿಂತ ಮನುಷ್ಯತ್ವ ಮುಖ್ಯ ಎಂಬ ಸಂದೇಶ ತಿಳಿಸಿದ್ದೇವೆ. ನನ್ನ ಮಗ ಆದಿತ್ಯ ಈ ಚಿತ್ರದ ಮೂಲಕ ನಾಯಕನಾಗಿ ಬೆಳ್ಳಿ ಪರದೆಗೆ ಬರಲು ಬಹಳಷ್ಟು ಪೂರ್ವ ತಯಾರಿ ಮಾಡಿಕೊಂಡು, ರಂಗಭೂಮಿ ಕಿರುಚಿತ್ರಗಳಲ್ಲಿ ಗುರುತಿಸಿಕೊಂಡು ಅನುಭವ ಪಡೆಯುತ್ತಾ ಈಗ ಪೂರ್ಣ ಪ್ರಮಾಣದ ನಾಯಕನಾಗಿ ಕಾಗದ ಚಿತ್ರದ ಮೂಲಕ ನಿಮ್ಮ ಪ್ರೀತಿ ಪಡೆಯಲು ಬರುತ್ತಿದ್ದಾನೆ. ಇನ್ನೂ ಈ ಚಿತ್ರಕ್ಕಾಗಿ ಇಡೀ ತಂಡ ಬಹಳಷ್ಟು ಶ್ರಮ ಪಟ್ಟಿದೆ. ನಮ್ಮ ಸಂಸ್ಥೆಯ ಮೂಲಕವೇ ಚಿತ್ರವನ್ನ ರಾಜ್ಯಾದ್ಯಂತ ಅದ್ದೂರಿಯಾಗಿ ಜುಲೈ 5ರಂದು ಬಿಡುಗಡೆ ಮಾಡುತ್ತಿದ್ದೇವೆ ನಿಮ್ಮೆಲ್ಲರ ಪ್ರೋತ್ಸಾಹ ಇರಲಿ ಎಂದರು.
ಇನ್ನು ಯುವ ಪ್ರತಿಭೆ ನಾಯಕ ನಟ ಆದಿತ್ಯ ಮಾತನಾಡುತ್ತಾ ನಮ್ಮ ಮನೆಯ ಕೆಳಗಡೆ ಆಕ್ಟಿಂಗ್ ಸ್ಕೂಲ್ ಇತ್ತು. ಅಲ್ಲಿ ಕಲಿಯಲು ಬರುತ್ತಿದ್ದವರನ್ನು ನೋಡಿ ನನಗೂ ನಟಿಸುವ ಆಸೆಯಾಯಿತು. ನಟನೆ ಕಲಿತು, ಕಿರುಚಿತ್ರ ಹಾಗೂ ನಾಟಕಗಳಲ್ಲಿ ಅಭಿನಯಿಸಿದ್ದೇನೆ. ನನ್ನ ಪ್ರಯತ್ನಕ್ಕೆ ನನ್ನ ತಂದೆ ತುಂಬಾ ಸಪೋರ್ಟ್ ಮಾಡಿದ್ದಾರೆ. ಹಾಗಾಗಿ ನಾನು ಈಗ ಬೆಳ್ಳಿ ಪರದೆಯ ಮೇಲೆ ಕಾಗದ ಚಿತ್ರದ ಮೂಲಕ ನಾಯಕನಾಗಿ ಕಾಣಿಸಿಕೊಂಡಿದ್ದೇನೆ. ನನಗೆ ಇಡೀ ತಂಡ ಬಹಳಷ್ಟು ಹೇಳಿಕೊಟ್ಟಿದೆ. ನಿಮ್ಮೆಲ್ಲರ ಆಶೀರ್ವಾದ ನನ್ನ ಮೇಲೆ ಇರಲಿ ಎಂದು ಕೇಳಿಕೊಂಡರು.
ಇನ್ನು ಬಹಳಷ್ಟು ಕಿರುತೆರೆ ಹಾಗೂ ಬೆಳ್ಳಿ ಪರದೆಯ ಮೇಲೆಬಾಲನಟಿಯಾಗಿ ಅಭಿನಯಿಸಿದಂತ ಅಂಕಿತ ಜಯರಾಂ ಮಾತನಾಡುತ್ತ ಇದು ನನ್ನ ಮೊದಲ ನಾಯಕಿಯಾಗಿ ಅಭಿನಯಿಸುತ್ತಿರುವ ಚಿತ್ರ. ನನ್ನ ಅಪ್ಪನ ಈ ಕಥೆ ಕೇಳಿ ಒಪ್ಪಿಕೊಂಡ ಮೇಲೆ ನಾನು ಈ ತಂಡಕ್ಕೆ ಸೇರಿಕೊಂಡೆ. ಇದೊಂದು ಮುಸ್ಲಿಂ ಹುಡುಗಿಯ ಪಾತ್ರವಾದರೂ ಅದನ್ನು ನಿಭಾಯಿಸುತ್ತೇನೆ ಎಂಬ ಧೈರ್ಯ ಮಾಡಿ ಅವಕಾಶ ನೀಡಿದ ಇಡೀ ತಂಡಕ್ಕೆ ನಾನು ಧನ್ಯವಾದ ತಿಳಿಸುತ್ತೇನೆ. ಇದರಲ್ಲಿ ನನ್ನದು ಬೋಲ್ಡ್ ಆಗಿ ಅಭಿನಯಿಸಿರುವ ಪಾತ್ರ. ಲವ್ , ಎಮೋಷನ್ ಎಲ್ಲವೂ ಒಳಗೊಂಡಿದೆ. ಇದು ಪಿಯುಸಿ ಓದುತ್ತಿರುವ ಪ್ರೇಮಿಗಳ ಕಥೆಯಾಗಿದ್ದು , ನಾನು ಈಗ ಫಸ್ಟ್ ಪಿಯುಸಿ ಓದುತ್ತಿದ್ದೇನೆ. ನನಗೆ ಒಪ್ಪುವಂತ ಪಾತ್ರ ಸಿಕ್ಕಿದೆ, ಛಾಯಾಗ್ರಹಕರು ಬಹಳ ಸೊಗಸಾಗಿ ನನ್ನನ್ನು ತೋರಿಸಿದ್ದಾರೆ. ನಿಮ್ಮೆಲ್ಲರ ಪ್ರೀತಿ ವಿಶ್ವಾಸ ನನ್ನ ಮೇಲೆ ಇರಲಿ ಎಂದು ಕೇಳಿಕೊಂಡರು.
ಹಾಗೆಯೇ ಮುಸ್ಲಿಂ ಪಾತ್ರಧಾರಿಗಳಲ್ಲಿ ಕಾಣಿಸಿಕೊಂಡಿರುವ ಶಿವಮಂಜು , ಗೌತಮ್ ತಮ್ಮ ತಮ್ಮ ಪಾತ್ರದ ಬಗ್ಗೆ ಹೇಳಿದರು.ಈ ಚಿತ್ರದ ವಿಶೇಷ ಪಾತ್ರದಲ್ಲಿ ನೇಹಾ ಪಾಟೀಲ್ ಕಾಣಿಸಿಕೊಂಡಿದ್ದಾರೆ. ಬಲ ರಾಜವಾಡಿ, ನೀನಾಸಂ ಅಶ್ವಥ್, ಮಠ ಕೊಪ್ಪಳ, ಶಿವಮಂಜು ಮುಂತಾದವರು ತಾರಾಬಳಗವಿದೆ.
ಇನ್ನು ಈ ಚಿತ್ರದ ಸಂಗೀತ ನಿರ್ದೇಶಕ ಪ್ರದೀಪ್ ವರ್ಮ ಮಾತನಾಡುತ್ತಾ ಇದೊಂದು ವಿಭಿನ್ನವಾದ ಪ್ರೇಮಕಥೆ. ಈ ಇಡೀ ತಂಡ ಚಿತ್ರೀಕರಣವನ್ನು ಮುಗಿಸಿಕೊಂಡು ಬಂದ ಮೇಲೆ ಸಂಗೀತ ಮಾಡಿದ್ದು, ಅದು ಚಿತ್ರದ ಓಟಕ್ಕೆ ಸಾಹಿತ್ಯ ಹಾಗೂ ಸಂಗೀತ ಪೂರಕವಾಗಿದೆ. ಹಿನ್ನೆಲೆ ಸಂಗೀತ ಕೂಡ ಬಹಳ ಚಾಲೆಂಜಿಂಗ್ ಆಗಿದ್ದು, ಎಲ್ಲರಿಗೂ ಇಷ್ಟವಾಗುವಂತೆ ಮೂಡಿ ಬಂದಿದೆ ಎಂದರು. ಅದೇ ರೀತಿ ಛಾಯಾಗ್ರಹಕ ವೀನಸ್ ನಾಗರಾಜ ಮೂರ್ತಿ ಹಾಗೂ ವರ್ಣಾಲಂಕಾರದ ಬಗ್ಗೆ ಮಣಿ ತಮ್ಮ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು. ಇನ್ನು ಯುವ ಪ್ರತಿಭೆಗಳ ಈ ಕಾಗದ ಚಿತ್ರದ ಟ್ರೇಲರ್ ವೀಕ್ಷಿಸಿದ ಶ್ರೀ ಮುರಳಿ , ಧ್ರುವ ಸರ್ಜಾ, ರಮೇಶ್ ಅರವಿಂದ್, ಅನು ಪ್ರಭಾಕರ್ , ಅನುಶ್ರೀ ಹಾಗೂ ನಿರ್ದೇಶಕ ಎ.ಪಿ.ಅರ್ಜುನ್ ಮೆಚ್ಚುಗೆ ಸೂಚಿಸಿದ್ದಾರೆ. ಈ ಚಿತ್ರದ ಟ್ರೇಲರ್ ಹಾಗೂ ಹಾಡುಗಳು ಜಂಕಾರ್ ಮ್ಯೂಸಿಕ್ ಯೂಟ್ಯೂಬ್ ನಲ್ಲಿ ನೋಡಬಹುದು. ಇನ್ನು ಈ “ಕಾಗದ” ಚಿತ್ರ ಜುಲೈ 5 ರಂದು ರಾಜ್ಯಾದ್ಯಂತ ಅದ್ದೂರಿಯಾಗಿ ಬಿಡುಗಡೆಗೆ ಸಿದ್ಧವಿದೆ.