ಕಡಲ ತಡಿಯಲ್ಲಿ `ಕಲ್ಜಿಗ’ ಚಿತ್ರದ ಟ್ರೈಲರ್ ಬಿಡುಗಡೆ.
ಸುಮನ್ ಸುವರ್ಣ ನಿರ್ದೇಶನದ `ಕಲ್ಜಿಗ’ ಚಿತ್ರವೀಗ ಬಿಡುಗಡೆಗೆ ತಯಾರಾಗಿ ನಿಂತಿದೆ. ಕಡಲ ಕಿನಾರೆಯಲ್ಲಿ ಘಟಿಸುವ ಬೆರಗಿನ ಕಥೆ ಮತ್ತು ಆ ಭಾಗದ ಕಲಾವಿದರೇ ತುಂಬಿರುವ ಈ ಚಿತ್ರದ ಬಗ್ಗೆ ಪ್ರೇಕ್ಷಕರೆಲ್ಲ ಕಾತರರರಾಗಿದ್ದಾರೆ. ಇದೀಗ ಒಂದು ಅರ್ಥವತ್ತಾದ ಕಾರ್ಯಕ್ರಮದ ಮೂಲಕ ಕಲ್ಜಿಗದ ಟ್ರೈಲರ್ ಅನಾವರಣಗೊಂಡಿದೆ. ಎ೨ ಫಿಲಂಸ್ ಯೂಟ್ಯೂಬ್ ಚಾನೆಲ್ ಮೂಲಕ ಬಿಡುಗಡೆಗೊಂಡಿರೋ ಈ ಟ್ರೈಲರ್ ಕಂಡವರೆಲ್ಲ ಅಕ್ಷರಶಃ ಥ್ರಿಲ್ ಆಗಿದ್ದಾರೆ. ಎಲ್ಲ ದಿಕ್ಕುಗಳಿಂದಲೂ ಭರಪೂರ ಪ್ರತಿಕ್ರಿಯೆ ಹರಿದು ಬರಲಾರಂಭಿಸಿದೆ. ಇದರೊಂದಿಗೆ ಕಲ್ಜಿಗ ಕನ್ನಡದ ಬಹುನಿರೀಕ್ಷಿತ ಚಿತ್ರವಾಗಿ ದಾಖಲಾಗಿದೆ.
ಹಿಮಾನಿ ಫಿಲಂಸ್ ಬ್ಯಾನರಿನಲ್ಲಿ ನಿರ್ಮಾಣಗೊಂಡಿರುವ ಚಿತ್ರ ಕಲ್ಜಿಗ. ಮಂಗಳೂರಿನ ಭಾರತ್ ಮಾಲ್ ನಲ್ಲಿರುವ ಭಾರತ್ ಸಿನಿಮಾಸ್ ಥಿಯೇಟರ್ ನಲ್ಲಿ ಈ ಟ್ರೈಲರ್ ಬಿಡುಗಡೆಯ ಇವೆಂಟ್ ನೆರವೇರಿದೆ. ಶಾಸಕ ವೇದವ್ಯಾಸ ಕಾಮತ್, ಮಾಜಿ ಸಚಿವ ರಮಾನಾಥ ರೈ, ಪುತ್ತೂರು ಶಾಸಕ ಅಶೋಕ್ ರೈ, ತುಳು ಚಿತ್ರರಂಗದ ಹಿರಿಯ ತಾರೆ ದೇವದಾಸ್ ಕಾಪಿಕಾಡ್, ರಂಗಕರ್ಮಿ ವಿಜಯಕುಮಾರ್ ಕೊಡಿಯಾಲ್ ಬೈಲ್ ಹಾಗೂ ಚಿತ್ರತಂಡ ಈ ಸಂದರ್ಭದಲ್ಲಿ ಹಾಜರಿತ್ತು. ಇವರೆಲ್ಲರ ಇರುವಿಕೆಯಲ್ಲಿ ಕಲ್ಜಿಗದ ಟ್ರೈಲರ್ ಲಾಂಚ್ ಆಗಿದೆ.
ಇದೇ ವೇದಿಕೆಯಲ್ಲಿ ಮತ್ತೊಂದು ಅರ್ಥಪೂರ್ಣವಾದ ನಡೆಯನ್ನೂ ಚಿತ್ರತಂಡ ಅನುಸರಿಸಿದೆ. ದೈವ ನರ್ತಕರಾದ ಮಾಯಿಲ ಕುತ್ತಾರು, ರಾಘವ ಕುತ್ತಾರು ಮತ್ತು ಜನಪದ ಪಾಡ್ದನ ಗಾಯಕಿ ಕುತ್ತಾರು ತಿಮ್ಮಕ್ಕನವರಿಗೆ ಆತ್ಮೀಯ ಸನ್ಮಾನ ನಡೆಸಲಾಗಿದೆ. ಈ ಕಾರ್ಯಕ್ರಮಕ್ಕೆ ಐನೂರಕ್ಕೂ ಹೆಚ್ಚು ಸಿನಿಮಾ ಪ್ರೇಮಿಗಳು ಬಂದು ನೆರೆದಿದ್ದರು.
ಅವರೆಲ್ಲರೂ ಕಲ್ಜಿಗ ಟ್ರೈಲರ್ ನೋಡಿ ವ್ಯಕ್ತಪಡಿಸಿದ ಪ್ರಾಮಾಣಿಕ ಅಭಿಪ್ರಾಯ ಚಿತ್ರತಂಡಕ್ಕೆ ಮತ್ತಷ್ಟು ಹುರುಪು ತುಂಬಿದೆ. ಇದೀಗ ಎಲ್ಲ ಕೆಲಸ ಕಾರ್ಯಗಳನ್ನು ಮುಗಿಸಿಕೊಂಡಿರುವ ಕಲ್ಜಿಗ ನಿರ್ಣಾಯಕ ಘಟ್ಟ ತಲುಪಿಕೊಂಡಿದೆ. ಸೆಪ್ಟೆಂಬರ್ ೧೩ ರಂದು ಬಿಡುಗಡೆಗೊಳ್ಳಲಿದೆ. ಉಡುಪಿ, ದಕ್ಷಿಣ ಕನ್ನಡ, ಬೆಂಗಳೂರು, ಮೈಸೂರು, ಚಿಕ್ಕಮಗಳೂರು, ಶಿವಮೊಗ್ಗ, ಹಾಸನ, ಮಡಿಕೇರಿ, ಉತ್ತರ ಕರ್ನಾಟಕ ಮುಂತಾದೆಡೆಗಳಲ್ಲಿ ಕಲ್ಜಿಗ ಬಿಡುಗಡೆಗೊಳ್ಳಲಿದೆ. ಮುಂಬಯಿ , ಗಲ್ಫ್ ರಾಷ್ಟ್ರಗಳಲ್ಲಿಯೂ ಕಲ್ಜಿಗದ ಪ್ರಭೆ ಹಬ್ಬಿಕೊಳ್ಳಲಿದೆ.
ತುಳು ಚಿತ್ರರಂಗದಲ್ಲಿ ಕಿಂಗ್ ಆಫ್ ಆಕ್ಷನ್ ಎಂಬ ಬಿರುದಾಂಕಿತರಾಗಿರುವವರು ಅರ್ಜುನ್ ಕಾಪಿಕಾಡ್. ಅವರು ಕಲ್ಜಿಗದ ನಾಯಕನಾಗಿ ನಟಿಸಿದ್ದಾರೆ. ಸುಶ್ಮಿತಾ ಭಟ್ ನಾಯಕಿಯಾಗಿ ಜೊತೆಯಾಗಿದ್ದಾರೆ. ಈಗಾಗಲೇ ಗಿರ್ಗಿಟ್, ಸರ್ಕಸ್, ಗಮ್ಜಾಲ್ ಮುಂತಾದ ಹಲವಾರು ತುಳು ಸಿನಿಮಾಗಳ ನಿರ್ದೇಶನ ವಿಭಾಗದಲ್ಲಿ ಕಾರ್ಯನಿರ್ವಹಿಸಿದ್ದ ಸುಮನ್ ಸುವರ್ಣ ಈ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗಿದ್ದಾರೆ.
ಧರ್ಮದ ದಾರಿಯಲ್ಲಿ ಅಧರ್ಮದ ನೆರಳು ಬಿದ್ದ ನಂತರದಲ್ಲಿ ಘಟಿಸುವ ರೋಚಕ ಕಥನ ಕಲ್ಜಿಗದ ಆಂತರ್ಯದಲ್ಲಿದೆ. ಅಂದಹಾಗೆ, ಎಸ್ ಕೆ ಗ್ರೂಪ್ ಎಂಬ ಮಾರ್ಕೆಟಿಂಗ್ ಸಂಸ್ಥೆಯ ಮಾಲೀಕರಾಗಿರುವ ಶರತ್ ಕುಮಾರ್ ಎ.ಕೆ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಹಂಸಲೇಖ ಸಂಗೀತ, ಸಾಹಿತ್ಯ, ಸಚಿನ್ ಶೆಟ್ಟಿ ಛಾಯಾಗ್ರಹಣ, ಪ್ರಸಾದ್ ಕೆ ಶೆಟ್ಟಿ ಹಿನ್ನೆಲೆ ಸಂಗೀತ, ಯಶ್ವಿನ್ ಕೆ ಶೆಟ್ಟಿಗಾರ್ ಸಂಕಲನ ಈ ಚಿತ್ರಕ್ಕಿದೆ. ಕಾಂತಾರ ಖ್ಯಾತಿಯ ಸನೀಲ್ ಗುರು ಕ್ರಿಯೇಟಿವ್ ಹೆಡ್ ಆಗಿ ಕಾರ್ಯನಿರ್ವಹಿಸಿದ್ದಾರೆ. ಕಾರ್ಯಕಾರಿ ನಿರ್ಮಾಪಕರಾಗಿ ರಾಧಾಕೃಷ್ಣ ಮಾಣಿಲ, ಪ್ರೊಡಕ್ಷನ್ ಮ್ಯಾನೇಜರ್ ಆಗಿ ಸಂದೀಪ್ ಶೆಟ್ಟಿ `ಕಲ್ಜಿಗ’ಕ್ಕೆ ಸಾಥ್ ಕೊಟ್ಟಿದ್ದಾರೆ.